ಈ ಆಪ್ ಇದ್ರೆ ಟ್ರಾಫಿಕ್ ಪೊಲೀಸ್ ಹಿಡಿದರೂ ಚಿಂತೆ ಇಲ್ಲ..!
ಇನ್ನು ಮುಂದೆ ಟ್ರಾಫಿಕ್ ಪೊಲೀಸ್ ದಂಡ ಹಾಕಿದರೆ ನೀವು ಚಿಂತಿಸಬೇಕಾಗಿಲ್ಲ. ನಿಮ್ಮ ಜೇಬಿನಲ್ಲಿ ಹಣವಿಲ್ಲ ಎಂದರೂ ಹತ್ತಿರದ ಎಟಿಎಂ ಹುಡುಕುವ ಅಗತ್ಯವೂ ಇಲ್ಲ. ಇದಕ್ಕಾಗಿಯೇ ಆಪ್ ವೊಂದು ನಿಮ್ಮ ಸಹಾಯಕ್ಕೆ ಧಾವಿಸಿದ್ದು, ಎಲೆಕ್ಟ್ರಿಕ್ ಬಿಲ್, ವಾಟರ್ ಬಿಲ್ ಕಟ್ಟುವ ಮಾದರಿಯಲ್ಲಿ ಟ್ರಾಫಿಕ್ ಪೊಲೀಸ್ ದಂಡವನ್ನು ಈ ಆಪ್ ಮೂಲಕವೇ ಪಾವತಿ ಮಾಡಬಹುದಾಗಿದೆ.

ಓದಿರಿ: ಸ್ಯಾಮ್‌ಸಂಗ್‌ಗೆ ಸೆಡ್ಡು: ಆಪಲ್‌ನಿಂದ ಐಫೋನ್ ಫೋಲ್ಡ್ .!
ಇಂದಿನ ದಿನದಲ್ಲಿ ದೇಶವು ಡಿಜಿಟಲ್ ಕಡೆಗೆ ಹೆಜ್ಜೆ ಹಾಕುತ್ತಿದ್ದು, ಈ ಸಂದರ್ಭದಲ್ಲಿ ಟ್ರಾಫಿಕ್ ಪೊಲೀಸರು ಅಪ್‌ಡೇಟ್ ಆಗಿದ್ದು, ನಿಯಮ ಉಲ್ಲಂಘನೆ ಮಾಡುವವರಿಂದ ದಂಡವನ್ನು ವಸೂಲಿ ಮಾಡಲು ಹೊಸ ಮಾರ್ಗವನ್ನು ಕಂಡುಕೊಂಡಿದ್ದಾರೆ. ಇದಕ್ಕಾಗಿ ಮೊಬಿಕ್ವೀಕ್ ಆಪ್ ನೊಂದಿಗೆ ಮುಂಬೈ ಪೊಲೀಸರು ಒಪ್ಪಂದವನ್ನು ಮಾಡಿಕೊಂಡಿದ್ದು, ಮೊಬಿಕ್ವೀಕ್ ಆಪ್ ಮೂಲಕವೇ ದಂಡ ಪಾವತಿ ಮಾಡುವ ಅವಕಾಶವನ್ನು ಮಾಡಿಕೊಟ್ಟಿದ್ದಾರೆ.

ಮೊಬಿಕ್ವೀಕ್ ಆಪ್:
ಈಗಾಗಲೇ ಮೊಬೈಲ್ ವ್ಯಾಲೆಟ್ ಸೇವೆಯಲ್ಲಿ ಸಾಕಷ್ಟು ಸದ್ದು ಮಾಡುತ್ತಿರುವ ಮೊಬಿಕ್ವೀಕ್ ಆಪ್ ಈ ಬಾರಿ ಹೊಸದೊಂದು ಆಯ್ಕೆಯನ್ನು ತನ್ನ ಬಳಕೆದಾರರಿಗೆ ನೀಡಲು ಮುಂದಾಗಿದೆ. ಟ್ರಾಫಿಕ್ ಪೊಲೀಸರ ದಂಡವನ್ನು ಆಪ್ ಮೂಲಕ ಕಟ್ಟುವ ಅವಕಾಶವನ್ನು ಮಾಡಿಕೊಟ್ಟಿದೆ. ಸದ್ಯಕ್ಕೆ ಇದು ಮುಂಬೈನಲ್ಲಿ ಮಾತ್ರವೇ ಚಾಲ್ತಿಯಲ್ಲಿದ್ದು, ಶೀಘ್ರವೇ ದೇಶದ ವಿವಿದ ರಾಜ್ಯಗಳಲ್ಲೂ ಕಾಣಿಸಿಕೊಳ್ಳಲಿದೆ.

ಮುಂಬೈ ಪೊಲೀಸರು:
ಮುಂಬೈ ಪೊಲೀಸರು ಮೊದಲಿಗೆ ಆಪ್ ಮೂಲಕ ಹಣ ಪಾವತಿ ಮಾಡುವ ಅವಕಾಶವನ್ನು ಮಾಡಿಕೊಟ್ಟಿದ್ದಾರೆ. ಒಮ್ಮೆ ಪೊಲೀಸರು ನೀವು ಚಲನ್ ಪಡೆದು ಅದರ ನಂಬರ್ ಅನ್ನು ಎಂಟ್ರಿ ಮಾಡಿ ಹಣವನ್ನು ಪಾವತಿ ಮಾಡಬಹುದಾಗಿದೆ. ಇದರಿಂದ ಪೊಲೀಸರು ಮತ್ತು ವಾಹನ ಚಾಲಕರಿಬ್ಬರಿಗೂ ಸಹಾಯವಾಗಲಿದೆ.


ಶೀಘ್ರವೇ ಬೆಂಗಳೂರಲ್ಲೂ:
ಈಗಾಗಲೇ ಮುಂಬೈನಲ್ಲಿ ಸೇವೆಯನ್ನು ಆರಂಭಿಸಿರುವ ಮೊಬಿಕ್ವೀಕ್ ಬೆಂಗಳೂರಿನಲ್ಲಿಯೂ ಈ ಸೇವೆಯನ್ನು ನೀಡಲು ಯೋಜನೆಯನ್ನು ರೂಪಿಸುತ್ತಿದೆ ಎನ್ನಲಾಗಿದೆ. ಬೆಂಗಳೂರು ಟ್ರಾಫಿಕ್ ಪೊಲೀಸರು ಸಾಕಷ್ಟು ಅಪ್‌ಡೇಟ್ ಆಗಿರುವ ಹಿನ್ನಲೆಯಲ್ಲಿ ಕೆಲವೇ ದಿನಗಳಲ್ಲಿ ಈ ಯೋಜನೆ ಬೆಂಗಳೂರಿನಲ್ಲಿ ಚಾಲೂ ಆಗಲಿದೆ.


Click it and Unblock the Notifications








