ಅನ್ನಭಾಗ್ಯ ಯೋಜನೆ... ಹಣ ಪಾವತಿಯ ಸ್ಟೇಟಸ್ ಅನ್ನು ಈ ರೀತಿ ಪರಿಶೀಲಿಸಿ!
ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ರೇಷನ್ ಕಾರ್ಡ್(Ration card) ಮೌಲ್ಯ ಜಾಸ್ತಿ ಆದಂತೆ ಆಗಿದೆ. ಯಾಕೆಂದರೆ ಕೆಲವು ಕಡೆ ಅವಿಭಕ್ತ ಕುಟುಂಬ ಇರುವ ಕಾರಣಕ್ಕೆ ಒಂದೇ ರೇಷನ್ ಕಾರ್ಡ್ ಅನ್ನು ಬಳಕೆ ಮಾಡುತ್ತಿದ್ದರು. ಆದರೆ, ಈಗ ಎಲ್ಲರೂ ಸಹ ಹೊಸ ರೇಷನ್ ಕಾರ್ಡ್‌ಗೆ ಅರ್ಜಿ ಸಲ್ಲಿಸುತ್ತಿದ್ದಾರೆ. ಈ ಮೂಲಕ ಸರ್ಕಾರ ಯೋಜನೆಗಳನ್ನು ಪಡೆದುಕೊಳ್ಳಲು ತುದಿಗಾಲಲ್ಲಿ ನಿಂತಿದ್ದಾರೆ.
ಹೌದು, ರೇಷನ್ ಕಾರ್ಡ್ ಕರ್ನಾಟಕ ಸರ್ಕಾರದ(Government of Karnataka) ಪ್ರಮುಖ ಯೋಜನೆಗಳನ್ನು ಪಡೆದುಕೊಳ್ಳಲು ಕಡ್ಡಾಯವಾಗಿದೆ. ಅದರಲ್ಲೂ ಗೃಹಲಕ್ಷ್ಮಿ ಯೋಜನೆಗೆ ಅಗತ್ಯ ದಾಖಲೆಯಾಗಿದೆ. ಇದರೊಂದಿಗೆ ಈಗಾಗಲೇ ಸಾಕಷ್ಟು ಜನರು ಹೊಸ ರೇಷನ್ ಕಾರ್ಡ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಅದರಲ್ಲೂ ಆರೋಗ್ಯ ವಿಚಾರಕ್ಕೆ ಸಂಬಂಧಿಸಿಂತೆ ಅಗತ್ಯ ಇರುವವರಿಗೆ ಶೀಘ್ರದಲ್ಲೇ ಬಿಪಿಎಲ್ ಕಾರ್ಡ್ ವಿತರಣೆ ಮಾಡಲಾಗುವುದು ಎಂದು ಸರ್ಕಾರ ಮಾಹಿತಿ ನೀಡಿದೆ.

ಕರ್ನಾಟಕ ಸರ್ಕಾರವು ಅನ್ನ ಭಾಗ್ಯ ಯೋಜನೆಗಾಗಿ ನೇರ ಲಾಭ ವರ್ಗಾವಣೆ (ಡಿಬಿಟಿ) ಯೋಜನೆಯನ್ನು ಪ್ರಾರಂಭಿಸಿದ್ದು, ಇದು ಬಿಪಿಎಲ್ ಕಾರ್ಡುದಾರರಿಗೆ ಹೆಚ್ಚುವರಿ 5 ಕೆಜಿ ಅಕ್ಕಿಯ ಹಣವನ್ನು ನೀಡುತ್ತಿದೆ. ಅಂದರೆ ಈ ಹಣವನ್ನು ಅವರ ಆಧಾರ್ ಸಂಖ್ಯೆಗಳಿಗೆ (Aadhaar Number) ಲಿಂಕ್ ಮಾಡಿದ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ನೇರವಾಗಿ ವರ್ಗಾವಣೆ ಮಾಡಲಾಗುತ್ತಿದೆ. ಇದರೊಂದಿಗೆ ಗೃಹಲಕ್ಷ್ಮಿ ಯೋಜನೆಗೂ ಸಹ ಸಾಕಷ್ಟು ಜನರು ಅರ್ಜಿ ಸಲ್ಲಿಕೆ ಮಾಡಿದ್ದು, ಇದಕ್ಕೆ ರೇಷನ್ ಕಾರ್ಡ್ ಕಡ್ಡಾಯವಾಗಿದೆ.
ಇನ್ನು ಅನ್ನ ಭಾಗ್ಯ ಯೋಜನೆಯಡಿ(AnnaBhagya Yojana) ಸರ್ಕಾರವು ಪ್ರತಿ ಕೆಜಿಗೆ 34 ರೂ. ದರದಲ್ಲಿ ಜನರಿಗೆ ನಗದು ನೀಡುತ್ತಿದೆ. ಈ ಪ್ರಯೋಜನವು ಬಡತನ ರೇಖೆಗಿಂತ ಕೆಳಗಿರುವ (BPL) ಮತ್ತು ಅಂತ್ಯೋದಯ ಕುಟುಂಬಗಳ ಪ್ರತಿಯೊಬ್ಬ ಸದಸ್ಯರಿಗೂ ಅನ್ವಯ ಆಗಲಿದೆ. ಈ ಅನ್ನಭಾಗ್ಯ ಯೋಜನೆಯಡಿ ಪ್ರತಿ ತಿಂಗಳು ಒಟ್ಟಾರೆ 170 ರೂಪಾಯಿಗಳನ್ನು ಓರ್ವ ವ್ಯಕ್ತಿಗೆ ನೀಡಲಾಗುತ್ತದೆ. ಈ ಹಣ ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಆಗಿದೆಯೇ ಅಥವಾ ಏನಾದರೂ ಸಮಸ್ಯೆಗಳು ಇವೆಯೇ ಎಂಬುದನ್ನು ತಿಳಿಯುವುದು ಅಗತ್ಯವಾಗಿದೆ. ಹಾಗಿದ್ರೆ, ಬನ್ನಿ ಈ ಸರಳ ಹಂತದ ಮೂಲಕ ಸ್ಟೇಟಸ್ ಅನ್ನು ತಿಳಿಯೋಣ.
ಹಂತ 1 : ಮೊದಲು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಆಹಾರ ಇಲಾಖೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬೇಕಿದೆ. ಇದಕ್ಕಾಗಿ ನೀವು https://www.karnataka.gov.in/. ಲಿಂಕ್ ಅನ್ನು ಬಳಕೆ ಮಾಡಿಕೊಳ್ಳಬಹುದು. ನಂತರ 'ಇ-ಸೇವೆಗಳು' ಎಂಬ ಆಯ್ಕೆ ಕಾಣಿಸಿಕೊಳ್ಳುತ್ತದೆ. ಅದರ ಮೇಲೆ ಟ್ಯಾಬ್ ಮಾಡಿ. ಇದಾದ ಬಳಿಕ DBT ಸ್ಟೇಟಸ್ ಎಂಬ ಆಯ್ಕೆ ಕಾಣಿಸಿಕೊಳ್ಳುತ್ತದೆ ಗಮನಿಸಿ.
ಹಂತ 2: ಇದಾದ ನಂತರದಲ್ಲಿ ಅಲ್ಲಿ ಒಂದು ಬಾಕ್ಸ್ ಕಾಣಿಸಿಕೊಳ್ಳಲಿದ್ದು, ಅದರಲ್ಲಿ ಪರಿಶೀಲಿಸಲು ಬಯಸುವ ತಿಂಗಳು ಮತ್ತು ವರ್ಷವನ್ನು ಆಯ್ಕೆಮಾಡಿ. ಜೊತೆಗೆ ನಿಮ್ಮ ಪಡಿತರ ಚೀಟಿ ಸಂಖ್ಯೆಯನ್ನು ಅಲ್ಲಿ ನಮೂದಿಸಿ ಮತ್ತು 'ಮುಂದುವರಿಸಿ' ಎಂಬ ಆಯ್ಕೆ ಮೇಲೆ ಟ್ಯಾಪ್ ಮಾಡಿದರೆ ಸಾಕು. ಅನ್ನ ಭಾಗ್ಯ ಯೋಜನೆಯಡಿ ನಿಮ್ಮ DBT ಹಣ ವರ್ಗಾವಣೆ ಆಗಿದೆಯೇ ಅಥವಾ ಏನಾದರೂ ಸಮಸ್ಯೆ ಇದೆಯೇ ಎಂದು ತೋರಿಸಲಾಗುತ್ತದೆ. ಈ ವೇಳೆ ಕುಂದುಕೊರತೆಗಳು ಇದ್ದರೆ 1800-425-5889 ನಂಬರ್‌ಗೆ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಬಹುದು.
ಈ ನಡುವೆ ರಾಜ್ಯದಲ್ಲಿ ಎರಡು ಮಾದರಿಯ ಬಿಪಿಎಲ್ ಕಾರ್ಡ್ ಜಾರಿಗೆ ಚರ್ಚೆ ನಡೆಯುತ್ತಿದೆ. ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳ ಜಾರಿಯಾದ ನಂತರ ಕಾರ್ಡ್‌ನಲ್ಲಿ ಕೆಲವು ನಿರ್ದಿಷ್ಟ ಬದಲಾವಣೆ ಮಾಡಲು ಸರ್ಕಾರ ಮುಂದಾಗಿದೆ. ಈ ಬಗ್ಗೆ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್ ಮುನಿಯಪ್ಪ ಅವರು ಅಧಿಕೃತವಾಗಿ ಮಾಹಿತಿ ನೀಡಿದ್ದಾರೆ. ರಾಜ್ಯದಲ್ಲಿ 2017ರಿಂದ ಇಲ್ಲಿಯ ವರೆಗೆ ಬಂದಿರುವ ಅರ್ಜಿಗಳನ್ನು ಪರಿಶೀಲಿಸಿ, ಕಾರ್ಡ್ ಹಂಚಿಕೆ ಮಾಡಲಾಗುವುದು. ಈ ವೇಳೆ ಬಡತನ ರೇಖೆಗಿಂತ ಕೆಳಗಿರುವ ಪಡಿತರ ಚೀಟಿಗಳನ್ನು ಎರಡು ಮಾದರಿಯಾಗಿ ವಿಂಗಡಿಸಲಾಗುವುದು ಎಂದಿದ್ದಾರೆ.
ಕಾರ್ಡ್ ಅನ್ನು ವೈದ್ಯಕೀಯ ಹಾಗೂ ಮತ್ತಿತರ ಸರ್ಕಾರಿ ಸೌಲಭ್ಯಗಳನ್ನು ನೀಡಲು ಬಳಕೆ ಮಾಡಲಾಗುತ್ತದೆ. ಹಾಗೂ ಮತ್ತೊಂದು ಕಾರ್ಡ್ ಅನ್ನು ಆಹಾರ ಮತ್ತು ಧವಸ ಧಾನ್ಯಗಳನ್ನು ನೀಡಲು ಬಳಕೆ ಮಾಡಲಾಗುತ್ತದೆ. ಈ ಎರಡೂ ಮಾದರಿಯ ಬಿಪಿಎಲ್ ಕಾರ್ಡ್ ನೀಡುವ ಯೋಜನೆಯನ್ನು ಈಗಾಗಲೇ ಆಂಧ್ರ ಪ್ರದೇಶದಲ್ಲಿ ಬಳಕೆ ಮಾಡಲಾಗುತ್ತಿದ್ದು, ಅದರಂತೆ ಈಗ ಕರ್ನಾಟಕದಲ್ಲೂ ಪ್ರಯೋಗಿಸಲಾಗುತ್ತದೆ ಎಂದು ತಿಳಿಸಿದ್ದಾರೆ.


Click it and Unblock the Notifications








