BPL Ration Card: ಬಿಪಿಎಲ್ ಪಡಿತರ ಕಾರ್ಡ್‌ಗೆ ಅರ್ಜಿ ಸಲ್ಲಿಸುವುದೇಗೆ?, ಇಲ್ಲಿದೆ ಸರಳ ಹಂತ!
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಬಹುಪಾಲು ಮಂದಿ ಬಿಪಿಎಲ್ ಕಾರ್ಡ್ ಮಾಡಿಸಿಕೊಳ್ಳಲು ಕಾತುರದಿಂದ ಕಾಯುತ್ತಿದ್ದಾರೆ. ಅದರಂತೆ ವಿಧಾನಸಭೆ ಚುನಾವಣೆ ಹಿನ್ನೆಲೆ ಪಡಿತರ ಚೀಟಿಗೆ ಅರ್ಜಿ ಸಲ್ಲಿಕೆ ಮಾಡುವುದನ್ನು ತಡೆಹಿಡಿಯಲಾಗಿತ್ತು. ಆದರೆ, ಇನ್ನೇನು ಕೆಲವೇ ದಿನಗಳಲ್ಲಿ ಆಲ್‌ಲೈನ್‌ನಲ್ಲಿ ಅರ್ಜಿ ಸಲ್ಲಿಕೆ ಮಾಡಲು ಅನುವು ಮಾಡಿಕೊಡಲಾಗುತ್ತಿದೆ.
ಹೌದು, ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಪ್ರಮುಖವಾದ ಮನೆಯೊಡತಿಗೆ 2,000ರೂ.ಗಳು ಹಾಗೂ ಬಿಪಿಎಲ್ ಕಾರ್ಡ್ ಇರುವ ಸದಸ್ಯರಿಗೆ ತಲಾ 10 ಕೆಜಿ ಅಕ್ಕಿ ನೀಡುವುದಾಗಿ ತಿಳಿಸಲಾಗಿದ್ದು, ಈ ಕಾರಣಕ್ಕಾಗಿ ಯಾರೆಲ್ಲಾ ಬಿಪಿಎಲ್ ಕಾರ್ಡ್ ಈವರೆಗೂ ಹೊಂದಿಲ್ಲವೋ ಅವರು ಹೊಸ ರೇಷನ್ ಕಾರ್ಡ್ ಪಡೆಯುವ ತವಕದಲ್ಲಿ ಇದ್ದಾರೆ. ಈ ನಡುವೆ ಅತ್ಯಂತ ಸರಳವಾಗಿ ಆನ್‌ಲೈನ್‌ನಲ್ಲಿ ರೇಷನ್ ಕಾರ್ಡ್‌ಗಾಗಿ ಅರ್ಜಿ ಸಲ್ಲಿಕೆ ಮಾಡುವುದು ಹೇಗೆ ಎಂದು ತಿಳಿಯೋಣ ಬನ್ನಿ.

ರಾಜ್ಯದಲ್ಲಿ ಬಡತನ ರೇಖೆಗಿಂತ ಕೆಳಗಿರುವವರು ಉಚಿತ ಆಹಾರ ಧಾನ್ಯಗಳನ್ನು ಪಡೆಯಲು ರೇಷನ್ ಕಾರ್ಡ್ ಕಡ್ಡಾಯ. ಈ ಕಾರ್ಡ್ ಅನ್ನು ಸರ್ಕಾರದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ (Food and Civil Supplies department) ವಿತರಿಸಲಿದ್ದು, ಪ್ರತಿ ವರ್ಷ ಆಗಾಗ್ಗೆ ಕೆಲವು ಸಮಯದ ವರೆಗೆ ಮಾತ್ರ ಹೊಸ ಪಡಿತರ ಚೀಟಿಗಳಿಗಾಗಿ ಅರ್ಜಿ ಆಹ್ವಾನಿಸುತ್ತದೆ.
ಈ ನಡುವೆ ahara.kar.nic.in ಮೂಲಕ ರಾಜ್ಯದ ಜನರು ಹೊಸದಾಗಿ ಎಪಿಎಲ್ ಅಥವಾ ಬಿಪಿಎಲ್ (APL,BPL) ಕಾರ್ಡ್ ಪಡೆದುಕೊಳ್ಳಲು ಅರ್ಜಿ ಸಲ್ಲಿಸಬಹುದಾಗಿದೆ. ಈ ರೇಷನ್ ಕಾರ್ಡ್ ಪಡೆದುಕೊಳ್ಳಲು ವೋಟರ್ ಐಡಿ, ಡ್ರೈವಿಂಗ್ ಲೈಸೆನ್ಸ್, ಆಧಾರ್ ಕಾರ್ಡ್ ನಂತಹ ವಾಸಸ್ಥಳದ ಪುರಾವೆಗಳು, ಕುಟುಂಬದ ಆದಾಯ ಪ್ರಮಾಣ ಪತ್ರ, ಅರ್ಜಿದಾರರ ಇತ್ತೀಚಿನ ಪಾಸ್‌ಪೋರ್ಟ್ ಗಾತ್ರದ ಭಾವಚಿತ್ರ, ಮೊಬೈಲ್ ಸಂಖ್ಯೆ ಅಥವಾ ಇ-ಮೇಲ್ ಐಡಿ, ವಾರ್ಡ್ ಕೌನ್ಸಿಲರ್ ನೀಡಿದ ಸ್ವಯಂ ಘೋಷಣೆ ಮತ್ತು ಪ್ರಮಾಣಪತ್ರಗಳನ್ನು ಹೊಂದಿರಬೇಕು. ಹಾಗಿದ್ರೆ ಬನ್ನಿ ಅರ್ಜಿ ಸಲ್ಲಿಸುವುದು ಹೇಗೆಂದು ತಿಳಿಯೋಣ.
ಹಂತ 1: ರೇಷನ್ ಕಾರ್ಡ್‌ಗಾಗಿ ಅರ್ಜಿ ಸಲ್ಲಿಕೆ ಮಾಡಲು ahara.kar.nic.in ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬೇಕಿದೆ. ಅಲ್ಲಿ ಇ-ಸೇವೆಗಳು ಎಂಬ ಆಯ್ಕೆ ಕಾಣಿಸಿಕೊಳ್ಳುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ ನಂತರ ಇ-ಪಡಿತರ ಚೀಟಿ (E-Ration Card) ಎಂಬ ಆಯ್ಕೆ ಕಾಣಿಸಿಕೊಳ್ಳುತ್ತದೆ. ಈ ವಿಭಾಗದಲ್ಲಿ ಸ್ಕ್ರೋಲ್ ಮಾಡಿದರೆ ನಿಮಗೆ ಹೊಸ ಪಡಿತರ ಚೀಟಿ ಎಂಬ ಆಯ್ಕೆ ಕಾಣಿಸಿಕೊಳ್ಳುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ.

ಹಂತ 2: ಹೊಸ ಪಡಿತರ ಚೀಟಿ ಆಯ್ಕೆಯನ್ನು ಕ್ಲಿಕ್ ಮಾಡಿದ ಮೇಲೆ ನೀವು ಅಗತ್ಯ ಭಾಷೆಯನ್ನು ಆಯ್ಕೆ ಮಾಡಿಕೊಳ್ಳಬಹುದು. ಇದರಲ್ಲಿ ಇಂಗ್ಲಿಷ್ ಹಾಗೂ ಕನ್ನಡ ಇರುತ್ತದೆ. ಈ ಕೆಲಸ ಮಾಡಿದ ನಂತರ ಈ ಪುಟದಲ್ಲೇ ಕಾಣಿಸಿಕೊಳ್ಳುವ ಹೊಸ ಪಡಿತರ ಚೀಟಿ ವಿನಂತಿ (New Ration Card Request) ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ. ಇದರಲ್ಲಿ ಬಿಪಿಎಲ್ ಪಡಿತರ ಚೀಟಿಗಾಗಿ ಪಿಎಚ್‌ಹೆಚ್ ಹಾಗೂ ಎಪಿಎಲ್ ಪಡಿತರ ಚೀಟಿಗಾಗಿ ಆದ್ಯತೆಯಲ್ಲದ ಕುಟುಂಬ ಎನ್‌ಪಿಎಚ್‌ಎಚ್ ಪ್ರಕಾರವನ್ನು ಆಯ್ಕೆ ಮಾಡಿಕೊಳ್ಳಿ.
ಹಂತ 3: ಆದ್ಯತೆಯನ್ನು ಆಯ್ಕೆ ಮಾಡಿದ ನಂತರ ನೀವು ಮೊದಲು ಬಿಪಿಎಲ್ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿದ್ದೀರಾ ಮತ್ತು ಈ ಹೊಸ ಅರ್ಜಿಯೊಂದಿಗೆ ಲಿಂಕ್ ಮಾಡಲು ಬಯಸುತ್ತೀರಾ? ಎಂಬ ಪ್ರಶ್ನೆ ಕಾಣಿಸಿಕೊಳ್ಳುತ್ತದೆ. ಇದರ ಮುಂದೆ ಅಗತ್ಯ ಉತ್ತರವನ್ನು ನೀಡಿ. ಬಳಿಕ ಬಿಪಿಎಲ್ ಕಾರ್ಡ್ ಆನ್‌ಲೈನ್ ಅಪ್ಲಿಕೇಶನ್‌ಗಾಗಿ ಹೊಸ ಪುಟವು ಕೆಳಗೆ ತೋರಿಸುತ್ತದೆ. ಅದನ್ನು ಗಮನಿಸಿ.
ಹಂತ 4: ನಂತರದಲ್ಲಿ ಜಿಲ್ಲೆ, ತಾಲೂಕು, ಸ್ವೀಕೃತಿ ಸಂಖ್ಯೆಯನ್ನು ಆಯ್ಕೆ ಮಾಡಬೇಕಾಗುತ್ತದೆ. ನಂತರ ಕರ್ನಾಟಕ ಬಿಪಿಎಲ್ ಪಡಿತರ ಚೀಟಿ ಹೊಸ ನೋಂದಣಿ ನಮೂನೆಯನ್ನು ಭರ್ತಿ ಮಾಡಲು ಗೋ ಎಂಬ ಆಯ್ಕೆ ಕಾಣಿಸಿಕೊಳ್ಳುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ ನಾವು ಮೊದಲೇ ತಿಳಿಸಿದ ಎಲ್ಲಾ ದಾಖಲೆಗಳನ್ನು ಸ್ಕ್ಯಾನ್ ಮಾಡಿಕೊಂಡು ಅಪ್‌ಲೋಡ್ ಮಾಡಿ. ಇನ್ನು ಈ ಅರ್ಜಿ ಸಲ್ಲಿಕೆ ಉಚಿತವಾಗಿರುತ್ತದೆ. ಆದರೆ, ಪಡಿತರ ಚೀಟಿಗಳನ್ನು ಅಧಿಕಾರಿಗಳಿಂದ ಪಡೆಯುವಾಗ 100ರೂ. ಗಳನ್ನು ನೀಡಬೇಕು.

ಈ ಎಲ್ಲಾ ಪ್ರಕ್ರಿಯೆ ಆದ ಬಳಿಕ ಪಡಿತರ ಚೀಟಿಗಾಗಿ ಸಲ್ಲಿಸಿದ ಎಲ್ಲಾ ದಾಖಲೆಗಳ ಪರಿಶೀಲನೆ ನಡೆಯುತ್ತದೆ. ಇದು ಆದ 15 ದಿನದೊಳಗೆ ಹೊಸ ಪಡಿತರ ಚೀಟಿಗಳನ್ನು ನೀಡಲಾಗುತ್ತದೆ. ಅರ್ಜಿ ಸಲ್ಲಿಕೆ ಮಾಡುವಾಗ ಗಮನಿಸಬೇಕಾದ ಪ್ರಮುಖ ವಿಷಯ ಏನೆಂದರೆ ನೀವು ಅಪ್‌ಲೋಡ್ ಮಾಡುವ ಎಲ್ಲಾ ದಾಖಲೆ ಸರಿ ಇರಬೇಕು. ಒಂದು ದಾಖಲೆ ತಪ್ಪಾಗಿದ್ದರೂ ಸಹ ನಿಮ್ಮ ಅರ್ಜಿ ರಿಜೆಕ್ಟ್ ಆಗುತ್ತದೆ.


Click it and Unblock the Notifications








