ಆಧಾರ್ ಮೂಲಕ ಪ್ಯಾನ್ ಕಾರ್ಡ್‌ನಲ್ಲಿನ ತಪ್ಪಾದ ಹೆಸರನ್ನು ಸರಿಪಡಿಸಲು ಈ ರೀತಿ ಮಾಡಿ
ಆಧಾರ್ ಭಾರತದಲ್ಲಿ ಹೇಗೆ ಎಲ್ಲಾ ವಿಷಯಗಳಲ್ಲೂ ಪ್ರಮುಖ ಪಾತ್ರ ವಹಿಸುತ್ತದೆಯೋ ಅದೇ ರೀತಿ ಪ್ಯಾನ್ ಕಾರ್ಡ್ (Pan Card) ಸಹ ಇಂದು ಸರ್ಕಾರದ ಅಥವಾ ಇತರೆ ಕೆಲಸಗಳಿಗೆ ಅಗತ್ಯವಾದ ದಾಖಲೆಯಾಗಿದೆ. ಈ ನಡುವೆ ನಿಮ್ಮ ಪ್ಯಾನ್ ಕಾರ್ಡ್‌ನಲ್ಲಿನ ಹೆಸರಿನಲ್ಲಿ ಏನಾದರೂ ತಪ್ಪು ಕಂಡುಬಂದರೆ ಚಿಂತೆ ಬೇಡ ಸುಲಭವಾಗಿ ಸರಿಪಡಿಸಿಕೊಳ್ಳಿ.
ಹೌದು, ಸಾಮಾನ್ಯವಾಗಿ ಆಗಾಗ್ಗೆ ಪ್ಯಾನ್ ಕಾರ್ಡ್‌ನಲ್ಲಿ ಏನಾದರೂ ಬದಲಾವಣೆ ಮಾಡುತ್ತಲೇ ಇರುತ್ತಾರೆ. ಅದರಲ್ಲಿ ಹೆಸರು ಬದಲಾಯಿಸುವುದು ಇರಬಹುದು, ಕಾಗುಣಿತ ತಪ್ಪುಗಳು, ಆಧಾರ್ ಕಾರ್ಡ್ ವ್ಯತ್ಯಾಸಗಳು ಮತ್ತು ಮದುವೆಯ ನಂತರದ ಹೆಸರು ಬದಲಾವಣೆಗಳು ಸಾಮಾನ್ಯವಾಗಿವೆ. ಇನ್ಮುಂದೆ ನೀವು ಯಾವುದೇ ಕಚೇರಿಗೆ ಅಲೆಯದೇ ಮನೆಯಲ್ಲೇ ನಿಮ್ಮ ಪ್ಯಾನ್‌ಕಾರ್ಡ್‌ನಲ್ಲಿನ ತಪ್ಪುಗಳನ್ನು ಸರಿ ಮಾಡಿಕೊಳ್ಳಬಹುದು.

ಪ್ಯಾನ್ ಕಾರ್ಡ್ ಭಾರತೀಯ ನಾಗರಿಕರಿಗೆ ಪ್ರಮುಖ ದಾಖಲೆಗಳಲ್ಲಿ ಒಂದಾಗಿದ್ದು, ಕೇವಲ ತೆರಿಗೆ ಉದ್ದೇಶಗಳಿಗಾಗಿ ಮಾತ್ರವಲ್ಲದೆ ಗುರುತಿನ ಪುರಾವೆಯಾಗಿಯೂ ಸಹ ಇದನ್ನು ಬಳಕೆ ಮಾಡಿಕೊಳ್ಳಲಾಗುತ್ತದೆ. ಈ ಕಾರ್ಡ್ ಅನ್ನು ಭಾರತದ ಆದಾಯ ತೆರಿಗೆ ಇಲಾಖೆಯು ಜನರಿಗೆ ನೀಡುತ್ತಿದ್ದು, ವಿಶೇಷವಾದ ಹತ್ತು-ಅಂಕಿಯ ಆಲ್ಫಾನ್ಯೂಮರಿಕ್ ಕೋಡ್ ಅನ್ನು ಹೊಂದಿರಲಿದೆ. ತಡಯಾಕೆ ಬನ್ನಿ ಈ ಪ್ಯಾನ್‌ನಲ್ಲಿ ಕಂಡುಬರುವ ತಪ್ಪು ಮಾಹಿತಿಯನ್ನು ಸರಿ ಮಾಡಿಕೊಳ್ಳಲು ಈ ಸರಳ ಹಂತ ಅನುಸರಿಸಿ.
ಹಂತ 1: ಪ್ಯಾನ್ ಕಾರ್ಡ್‌ನಲ್ಲಿ ಕಂಡು ಬಂದಿರುವ ತಪ್ಪುಗಳನ್ನು ಸರಿಪಡಿಸಲು ಮೊದಲು ನೀವು ನಿಮ್ಮ ಲ್ಯಾಪ್‌ಟಾಪ್ ಅಥವಾ ಇತರೆ ಡಿವೈಸ್ ಮೂಲಕ UTI ಇನ್ಫ್ರಾಸ್ಟ್ರಕ್ಚರ್ ಟೆಕ್ನಾಲಜಿ ಅಂಡ್ ಸರ್ವಿಸಸ್ ಲಿಮಿಟೆಡ್ ಸೈಟ್‌ಗೆ (UTIITSL) ಭೇಟಿ ನೀಡಬೇಕು. ಬಳಿಕ ಅಲ್ಲಿ ಪ್ಯಾನ್ ಕಾರ್ಡ್ ಸೇವೆಗಳು ಎಂಬ ಆಯ್ಕೆ ಕಾಣಿಸಿಕೊಳ್ಳುತ್ತದೆ ಅದರ ಮೇಲೆ ಟ್ಯಾಪ್ ಮಾಡಿ.
ಹಂತ 2 : ಇದಾದ ನಂತರದಲ್ಲಿ ಪ್ಯಾನ್ ಕಾರ್ಡ್‌ನಲ್ಲಿ ಬದಲಾಯಿಸಿ/ತಿದ್ದುಪಡಿ ಮಾಡಿ ಎಂಬ ಆಯ್ಕೆ ಕಾಣಿಸಿಕೊಳ್ಳುತ್ತದೆ ಅದರ ಮೇಲೆ ಕ್ಲಿಕ್ ಮಾಡಿ. ಅಲ್ಲೇ ಡ್ರಾಪ್-ಡೌನ್ ಮೆನುವಿನಲ್ಲಿ ಕಾಣಿಸಿಕೊಳ್ಳುವ ಪ್ಯಾನ್ ಕಾರ್ಡ್ ವಿವರಗಳಲ್ಲಿ ಬದಲಾವಣೆ/ತಿದ್ದುಪಡಿಗಾಗಿ ಅನ್ವಯಿಸು ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ. ಇದೆಲ್ಲಾ ಅದ ಮೇಲೆ ಈ ಪೇಜ್‌ನಲ್ಲಿಯೇ ತಿದ್ದುಪಡಿ ಮಾಡುವ ಪೇಜ್ ಅನ್ನು ತೆರೆದುಕೊಳ್ಳುತ್ತದೆ.
ಹಂತ 3: ಇಷ್ಟೆಲ್ಲಾ ಮಾಡಿದ ಮೇಲೆ ನಿಮಗೆ ಭೌತಿಕ ಹಾಗೂ ಡಿಜಿಟಲ್ ಎಂಬ ಎರಡು ಆಯ್ಕೆ ಕಾಣಿಸಿಕೊಳ್ಳುತ್ತವೆ ಅದರಲ್ಲಿ ನಿಮಗೆ ಯಾವುದು ಬೇಕೋ ಅದನ್ನು ಆಯ್ಕೆ ಮಾಡಿಕೊಳ್ಳಿ. ಅಂದರೆ ನಂತರದಲ್ಲಿ ಡ್ರಾಪ್-ಡೌನ್ ಮೆನುವಿನಿಂದ ಆಧಾರ್-ಆಧಾರಿತ ಇ-ಕೆವೈಸಿ (e-KYC) ಆಯ್ಕೆ ಮೇಲೆ ಕ್ಲಿಕ್ ಮಾಡಿ. ಈ ವಿಭಾಗದಲ್ಲಿ ನಿವಾಸಿಗಳ ವಿವರಗಳನ್ನು ಆಧಾರ್ ಸಂಖ್ಯೆಯನ್ನು ಆಧರಿಸಿ UIDAI ಸರ್ವರ್‌ನಿಂದ ಮಾಹಿತಿ ಪಡೆಯಲಾಗುತ್ತದೆ.
ಹಂತ 4 : ಬಳಿಕ ಆಧಾರ್ ಆಧಾರಿತ ಇ-ಸಹಿ ಬಳಕೆ ಮಾಡಿಕೊಂಡು ಸೈನ್ ಮಾಡಿ. ನಂತರ ನೀವು ಪ್ಯಾನ್ ಕಾರ್ಡ್ ಅನ್ನು ನಮೂದಿಸಿ. ಅಂದರೆ ನಿಮಗೆ ಭೌತಿಕ ಪ್ಯಾನ್ ಕಾರ್ಡ್ ಬೇಕೆ, ಕೇವಲ ನವೀಕರಿಸಿದರೆ ಸಾಕೆ ಅಥವಾ ಎರಡೂ ಬೇಕೆ ಎಂಬ ಆಯ್ಕೆ ಆಯ್ಕೆ ನೀಡಲಾಗುತ್ತದೆ. ಆ ವೇಳೆ ನಿಮಗೆ ಅಗತ್ಯ ಆದುದ್ದನ್ನು ಆಯ್ಕೆ ಮಾಡಿಕೊಳ್ಳಿ. ಇದೆಲ್ಲಾ ಮಾಡಿದ ಮೇಲೆ ಅಲ್ಲೇ ಸಬ್‌ಮಿಟ್ ಬಟನ್ ಕಾಣಿಸಿಕೊಳ್ಳುತ್ತದೆ ಅದರ ಮೇಲೆ ಕ್ಲಿಕ್ ಮಾಡಿ.
ಹಂತ 5: ನಂತರದಲ್ಲಿ ನಿಮ್ಮ ಎಲ್ಲಾ ಅಗತ್ಯ ಮಾಹಿತಿಯೊಂದಿಗೆ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಮತ್ತು ಅಗತ್ಯವಿರುವ ಪಾವತಿಯನ್ನು ಮಾಡಿ. ಇದನ್ನು ಮಾಡಿದ ನಂತರ UIDAI ಸರ್ವರ್‌ನಿಂದ ಆಧಾರ್ ದೃಢೀಕರಣವು ನೈಜ-ಸಮಯದ ಆಧಾರದ ಮೇಲೆ ಕೆಲಸ ಮಾಡುತ್ತದೆ. ಬಳಿಕ ಈ ವೇಳೆ ನೀವು ಮಾಡುವ ಇ ಕೆವೈಸಿ ಪ್ರಕ್ರಿಯೆಯಲ್ಲಿ ಓಟಿಪಿ ಅನ್ನು ನಿಮ್ಮ UIDAI ನೋಂದಾಯಿತ ಮೊಬೈಲ್ ಸಂಖ್ಯೆಗೆ ಕಳುಹಿಸಲಾಗುತ್ತದೆ. ಅಗತ್ಯವಿರುವ ಬಾಕ್ಸ್‌ನಲ್ಲಿ ಓಟಿಪಿಯನ್ನು ಎಂಟ್ರಿ ಮಾಡಿ ಒಪ್ಪಿಗೆಯನ್ನು ಸೂಚಿಸಿ. ಬಳಿಕ UIDAI ಡೇಟಾಬೇಸ್‌ನಿಂದ ನಿಮ್ಮ ವಿಳಾಸವನ್ನು ಪ್ಯಾನ್‌ನಲ್ಲಿ ಭರ್ತಿ ಮಾಡಲಾಗುತ್ತದೆ.

ಹಂತ 6: ಈ ಎಲ್ಲಾ ಪ್ರಕ್ರಿಯೆ ಮುಗಿಸಿದ ನಂತರ ನೀವು ಈಗ ಇ-ಸಹಿ ಗಾಗಿ ಮತ್ತೊಂದು ಓಟಿಪಿಯನ್ನು ಪಡೆಯಬೇಕಿದೆ. ಬಳಿಕ ಈ ಓಟಿಪಿಯನ್ನು ಅನ್ನು ನಮೂದಿಸಿದ ನಂತರ ಆಧಾರ್ ಆಧಾರಿತ ಇ-ಸಹಿ ಮೂಲಕ ಅರ್ಜಿಗೆ ಸಹಿ ಮಾಡಲಾಗುತ್ತದೆ.


Click it and Unblock the Notifications








