ದುಬಾರಿ ಬೆಲೆಯ ಐಫೋನ್‌ಗಳನ್ನು ಸ್ವಚ್ಛ ಮಾಡುವುದು ಹೇಗೆ!? ಇಲ್ಲಿದೆ ಸರಳ ಮಾರ್ಗ!
ಸ್ಮಾರ್ಟ್‌ಫೋನ್‌ಗಳು ಅತ್ಯಂತ ಹೆಚ್ಚು ಕೊಳಕು ಎಂದು ಬಹುಪಾಲು ಮಂದಿಗೆ ಗೊತ್ತಿರುವ ಸಂಗತಿ. ಇದನ್ನು ತಿಳಿದುಕೊಂಡು ಹೌದಾ ಎಂದು ಸುಮ್ಮನೆ ಕೂತರೆ ನಿಮಗೆ ರೋಗಗಳು ಅಂಟಿಕೊಳ್ಳುವುದರಲ್ಲಿ ಯಾವುದೇ ಸಂಶಯ ಇಲ್ಲ. ಅದರಲ್ಲೂ ಐಫೋನ್ ಬಳಕೆದಾರರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು.
ಹೌದು, ಐಫೋನ್ ಗಳು ಅತ್ಯುತ್ತಮ ಕಾರ್ಯಕ್ಷಮತೆ ಇರುವ ಫೋನ್‌ಗಳಾಗಿದ್ದು, ಈ ಫೋನ್‌ಗಳನ್ನು ಕಾಲಕಾಲಕ್ಕೆ ಸ್ವಚ್ಛ ಮಾಡಲು ಬಳಕೆದಾರರು ಮುಂದಾಗುವುದಿಲ್ಲ. ಯಾಕೆಂದರೆ ದುಬಾರಿ ಬೆಲೆ ನೀಡಿ ಖರೀದಿ ಮಾಡಿದ್ದು ಒಂದುಕಡೆಯಾದರೆ, ಏನಾದರೂ ಸಮಸ್ಯೆಯಾಗಿ ಬಿಡುತ್ತದೆ ಎಂಬ ಭಯ. ಜೊತೆಗೆ ಸ್ವಚ್ಛ ಮಾಡದೆ ಇದ್ದರೆ ಏನಾಗುತ್ತದೆ ಎಂಬ ಬೇಜವಾಬ್ದಾರಿ. ಆದರೆ, ನೀವು ಐಫೋನ್ ಅನ್ನು ಸರಳವಾಗಿ ಹಾಗೂ ರಕ್ಷಣಾತ್ಮಕವಾಗಿ ಹೇಗೆ ಸ್ವಚ್ಛ ಮಾಡುವುದು ಎಂಬುದನ್ನು ತಿಳಿಸಿಕೊಟ್ಟಿದ್ದೇವೆ ಓದಿರಿ.

ಯಾಕಾಗಿ ಸ್ವಚ್ಛ ಮಾಡಬೇಕು?: ಮೊಬೈಲ್ ಫೋನ್‌ಗಳು ಬ್ಯಾಕ್ಟೀರಿಯಾದ ಸಂತಾನೋತ್ಪತ್ತಿ ಕೇಂದ್ರವಾಗಿದ್ದು, ಟಾಯ್ಲೆಟ್ ಸೀಟ್‌ಗಿಂತಲೂ ಹೆಚ್ಚು ಕೊಳಕು ಎಂದು ಅಧ್ಯಯನಗಳು ತೋರಿಸಿವೆ. ಹೀಗಾಗಿ ನಿಮ್ಮ ಮೊಬೈಲ್ ಫೋನ್ ಅನ್ನು ನಿಯಮಿತವಾಗಿ ಸ್ವಚ್ಛಗೊಳಿಸುವುದರಿಂದ ಫೋನ್‌ನಿಂದ ನಿಮ್ಮ ಕೈ ಅಥವಾ ಮುಖಕ್ಕೆ ಹಾನಿಕಾರಕ ಬ್ಯಾಕ್ಟೀರಿಯಾವನ್ನು ವರ್ಗಾಯಿಸುವ ಅಪಾಯವನ್ನು ಕಡಿಮೆ ಮಾಡಬಹುದಾಗಿದೆ. ಹಾಗೆಯೇ ನಿಮ್ಮ ಫೋನ್ ಎಷ್ಟೇ ಹಳೆಯದಾದರೂ ಹೊಸದರಂತೆ ಕಾಪಾಡಿಕೊಂಡು ಬರಬಹುದು.
ಮೊದಲು ನಿಮ್ಮ ಐಫೋನ್ ಅನ್ನು ಆಫ್ ಮಾಡಿ: ನಿಮ್ಮ ಐಫೋನ್ ಅನ್ನು ಸ್ವಚ್ಛ ಮಾಡುವ ಮೊದಲು ಫೋನ್ ಅನ್ನು ಸ್ವಿಚ್ ಆಫ್ ಮಾಡಿ. ಯಾಕೆಂದರೆ ನೀರು ಅಥವಾ ಶುಚಿಗೊಳಿಸುವ ಇತರೆ ಯಾವುದೇ ವಸ್ತುಗಳಿಂದ ನಿಮ್ಮ ಐಫೋನ್‌ಗೆ ಹಾನಿ ಸಂಭವಿಸಬಹುದು ಅದರಲ್ಲೂ ಹೆಚ್ಚಾಗಿ ಶಾರ್ಟ್ ಸರ್ಕ್ಯೂಟ್ ಹಾಗೂ ಬ್ಯಾಟರಿಗೆ ಸಮಸ್ಯೆಗಳು ಆಗಬಹುದು.

ಮೈಕ್ರೋಫೈಬರ್ ಬಟ್ಟೆಯನ್ನು ಬಳಸಿ: ಐಫೋನ್ ಆಗಿರಲಿ ಅಥವಾ ಯಾವುದೇ ಡಿವೈಸ್ ಆಗಿರಲಿ ಅದನ್ನು ಸ್ವಚ್ಛ ಮಾಡಲು ಮೈಕ್ರೋಫೈಬರ್ ಬಟ್ಟೆ ಬಳಕೆ ಮಾಡುವುದು ಒಳಿತು. ಈ ಬಟ್ಟೆ ಮೂಲಕ ಐಫೋನ್ ಬಾಡಿ ಹಾಗೂ ಡಿಸ್‌ಪ್ಲೇಗೆ ಯಾವುದೇ ಹಾನಿಯಾಗದಂತೆ ಸ್ವಚ್ಛಮಾಡಲು ಸಹಕಾರಿ. ಜೊತೆಗೆ ಇದು ಫಿಂಗರ್‌ಪ್ರಿಂಟ್‌ಗಳು, ಸಣ್ಣ ಧೂಳಿನ ಕಣವನ್ನು ತೆಗೆದುಹಾಕಲು ಅತ್ಯಂತ ಸಹಾಯಕ.
ಕಠಿಣ ರಾಸಾಯನಿಕ ಬಳಕೆ ಬೇಡ: ಐಫೋನ್ ಕ್ಲೀನ್ ಮಾಡುವಾಗ ಕೆಲವರು ಬ್ಲೀಚ್ ಅಥವಾ ಅಮೋನಿಯದಂತಹ ಕಠಿಣ ರಾಸಾಯನಿಕಗಳನ್ನು ಬಳಕೆ ಮಾಡುತ್ತಾರೆ. ಆದರೆ, ಇದು ತಪ್ಪಾದ ಕ್ರಮವಾಗಿದ್ದು, ಈ ರಾಸಾಯನಿಕಗಳು ಡಿವೈಸ್‌ನ ಲೇಪನ, ಡಿಸ್‌ಪ್ಲೇ ಮತ್ತು ಫೋನ್‌ನ ಒಳಗೆ ಇರುವ ಕೆಲವು ಘಟಕಗಳನ್ನು ಹಾನಿಗೊಳಿಸಬಹುದು. ಹೀಗಾಗಿ ಈ ರೀತಿಯ ಡಿವೈಸ್‌ಗಳಿಗೆ ಅಂತಾನೆ ಇರುವ ಕೆಲವು ವಸ್ತುಗಳನ್ನು ಬಳಕೆ ಮಾಡಿ.
ಟೂತ್ ಬ್ರಷ್ ಬಳಸಿ: ಪ್ರತಿಯೊಬ್ಬರ ಮನೆಯಲ್ಲೂ ಬಳಕೆ ಮಾಡದ ಅದೆಷ್ಟೋ ಟೂತ್ ಬ್ರಷ್ ಇರುತ್ತವೆ. ಇವುಗಳನ್ನು ಬಳಕೆ ಮಾಡಿಕೊಂಡು ನೀವು ಕ್ಯಾಮರಾ ಲೆನ್ಸ್ ಅಥವಾ ಪೋರ್ಟ್‌ಗಳ ಸುತ್ತಲಿನ ಅಂಚುಗಳಂತಹ ಕೈನಿಂದ ತಲುಪಲು ಕಷ್ಟವಾದ ಸ್ಥಳವನ್ನು ಸ್ವಚ್ಛಗೊಳಿಸಬಹುದಾಗಿದೆ. ಇದಕ್ಕೂ ಮೊದಲು ನಿಮ್ಮ ಬ್ರಷ್ ನಯವಾಗಿದೆಯಾ ಎಂದು ಖಚಿತಪಡಿಸಿಕೊಳ್ಳಿ.

ಐಫೋನ್ ಕೇಸ್ ಅನ್ನು ಸ್ವಚ್ಛಗೊಳಿಸಿ: ಅತೀ ಹೆಚ್ಚು ಕೊಳಕು ಇರುವುದು ಫೋನ್‌ನ ಕೇಸ್‌ನಲ್ಲಿ. ನೀವು ಫೋನ್ ಸ್ವಚ್ಛ ಮಾಡದೆ ಇದ್ದರೂ ಪರವಾಗಿಲ್ಲ. ಆದರೆ, ಈ ಕೇಸ್ ಅನ್ನು ಮಾತ್ರ ಕಡ್ಡಾಯವಾಗಿ ಸ್ವಚ್ಛಮಾಡಲೇ ಬೇಕು. ಯಾಕೆಂದರೆ ಇದು ಹೆಚ್ಚು ಧೂಳಿನ ಕಣ ಹಾಗೂ ನಿಮ್ಮ ಬೆವರಿನಿಂದ ಬೇಗನೇ ಕೊಳಕಾಗಿ ಬಿಡುತ್ತದೆ. ಇದನ್ನು ಸ್ವಚ್ಛ ಮಾಡಲು ಮೈಕ್ರೋಫೈಬರ್ ಬಟ್ಟೆ ಅಥವಾ ಮೃದುವಾದ ಬ್ರಷ್ ಅನ್ನು ಬಳಕೆ ಮಾಡಬಹುದು.


Click it and Unblock the Notifications








