Instagram: ಇನ್‌ಸ್ಟಾಗ್ರಾಮ್ ಚಟ ಜಾಸ್ತಿಯಾಗಿದೆಯಾ? ಕಡಿವಾಣಕ್ಕೆ ಇಲ್ಲಿದೆ ಸುಲಭ ಸಲಹೆ! ಆದರೆ..
ಇನ್‌ಸ್ಟಾಗ್ರಾಮ್ (Instagram) ಇಂದು ಇತರೆ ಪ್ಲಾಟ್‌ಫಾರ್ಮ್‌ಗಳಿಗಿಂತ ಹೆಚ್ಚಿನ ಬಳಕೆದಾರರನ್ನು ಪಡೆದಿದೆ. ಅದರಲ್ಲೂ ದೊಡ್ಡ ದೊಡ್ಡ ಪ್ರೊಫೈಲ್ ಹೊಂದಿರುವವರೇ ಈ ಪ್ಲಾಟ್‌ಫಾರ್ಮ್ ಅನ್ನು ಬಳಕೆ ಮಾಡುವುದರಿಂದ ಇದರ ಕೀರ್ತಿ ಮತ್ತಷ್ಟು ಹೆಚ್ಚಿದೆ. ಅದಾಗ್ಯೂ ಇದರ ಬಗ್ಗೆ ಪರ ಹಾಗೂ ವಿರೋಧದ ವಾದಗಳು ಸಮವಾಗಿ ಕೇಳಿಬರುತ್ತವೆ.
ಹೌದು, ಮೆಟಾ ಒಡೆತನದ ಇನ್‌ಸ್ಟಾಗ್ರಾಮ್ ಅನ್ನು ಇಂದು ಯಾರು ತಾನೆ ಬಳಕೆ ಮಾಡುವುದಿಲ್ಲ ಹೇಳಿ. ಅಷ್ಟೇ ಅಲ್ಲದೆ ಕೆಲವೊಂದಷ್ಟು ಜನರು ರೀಲ್ಸ್ ಮೂಲಕ ಜನಪ್ರಿಯತೆ ಪಡೆದುಕೊಂಡು ಹಣವನ್ನೂ ಸಹ ಸಂಪಾದನೆ ಮಾಡುತ್ತಿದ್ದಾರೆ. ಈ ಎಲ್ಲಾ ಬೆಳವಣಿಗೆ ನಡುವೆ ಮೆಟಾ ಇದರಲ್ಲಿ ಕೆಲವೊಂದಷ್ಟು ವಿಶೇಷ ಫೀಚರ್ಸ್ ಅನ್ನೂ ಸಹ ನೀಡುತ್ತಾ ಬರುತ್ತಿದ್ದು, ಈ ಎಲ್ಲಾ ಕಾರಣಕ್ಕಾಗಿ ಸಾಕಷ್ಟು ಜನರು ಇನ್‌ಸ್ಟಾಗ್ರಾಮ್‌ಗೆ ದಾಸರಾಗಿದ್ದಾರೆ. ಹಾಗಿದ್ರೆ, ಈ ಚಟದಿಂದ ಮುಕ್ತಿ ಪಡೆಯಲು ಸ್ವತಃ ಇನ್‌ಸ್ಟಾಗ್ರಾಮ್ ಕೆಲವು ಆಯ್ಕೆಗಳನ್ನೂ ಸಹ ನೀಡಿದೆ. ಹಾಗಿದ್ರೆ, ಏನಿದು ಸಲಹೆ?, ಈ ಇನ್‌ಸ್ಟಾಗ್ರಾಮ್ ಸ್ವೈಪ್ ಚಟದಿಂದ ಹೊರ ಬರುವುದು ಹೇಗೆ ಅನ್ನೋದನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಇನ್‌ಸ್ಟಾಗ್ರಾಮ್ ಚಟ: ಸಾಮಾನ್ಯವಾಗಿ ಇಂದಿನ ದಿನಗಳಲ್ಲಿ ಸಾಕಷ್ಟು ಜನರು ಮೊಬೈಲ್ ಹೇಳಿದಂತೆ ಕೇಳುವ ಮನಸ್ಥಿತಿ ಬೆಳೆಸಿಕೊಂಡಿದ್ದಾರೆ. ಅಂದರೆ ಸ್ಮಾರ್ಟ್‌ಫೋನ್‌ಗೆ ದಾಸರಾಗುವು ಮೂಲಕ ಅದನ್ನು ಅರೆಗಳಿಗೆಯೂ ಬಿಟ್ಟಿರಲಾರದ ಸಂಬಂಧ ಬೆಳೆಸಿಕೊಂಡಿದ್ದಾರೆ. ಆದರೆ, 'ಅತಿಯಾದರೆ ಅಮೃತವೂ ವಿಷ' ಎಂಬಂತೆ ಅತಿಯಾದ ಸ್ಮಾರ್ಟ್‌ಫೋನ್ ಬಳಕೆ ಎಲ್ಲಾ ರೀತಿಯಲ್ಲಿ ಸಮಸ್ಯೆ ನಿರ್ಮಾಣ ಮಾಡುತ್ತದೆ. ಅದರಲ್ಲೂ ಕೆಲವು ಸ್ಮಾರ್ಟ್‌ಫೋನ್ ಬಳಕೆದಾರರು ಹೆಚ್ಚಾಗಿ ಇನ್‌ಸ್ಟಾಗ್ರಾಮ್ ನಲ್ಲಿ ಹೆಚ್ಚು ಸಮಯ ಕಳೆಯುತ್ತಾರೆ.
ಯಾವುದೇ ಆಪ್‌ಗಳು ಸಹ ಬಳಕೆದಾರರಿಗೆ ಪ್ರಯೋಜನ ನೀಡುವ ಫೀಚರ್ಸ್ ಅನ್ನೇ ಹೊಂದಿರುತ್ತವೆ. ಆದರೆ ಕೆಲವರು ಅದನ್ನು ದುರುಪಯೋಗ ಮಾಡಿಕೊಳ್ಳುವುದು ಸಾಮಾನ್ಯವಾದ ಸಂಗತಿ. ಅದರಂತೆ ನೀವು ಏನಾದರೂ ಈ ಇನ್ಸ್ಟಾಗ್ರಾಮ್‌ಗೆ ದಾಸರಾಗಿದ್ದಾರೆ. ಅದನ್ನು ಇನ್‌ಸ್ಟಾಗ್ರಾಮ್ ಮೂಲಕವೇ ಸರಿಪಡಿಸಿಕೊಳ್ಳಲು ಮೆಟಾ ಅವಕಾಶ ನೀಡಿದೆ. ಆದರೆ ಇದಕ್ಕೆ ನಿಮ್ಮ ಮನಸ್ಸು ಸಿದ್ಧವಾಗಬೇಕು ಅಷ್ಟೇ.

ಇನ್‌ಸ್ಟಾಗ್ರಾಮ್ ಹಲವಾರು ವಿಶೇಷ ಫೀಚರ್ಸ್ ಆಯ್ಕೆ ಪಡೆದುಕೊಂಡಿದ್ದು, ಅದರಲ್ಲಿ ನಿಮ್ಮ ದೀರ್ಘ ಸಮಯದ ಇನ್‌ಸ್ಟಾಗ್ರಾಮ್ ಬಳಕೆಗೆ ಕಡಿವಾಣ ಹಾಕುವ ಫೀಚರ್ಸ್ ಸಹ ಇದೆ. ಅಂದೆರ 'ಮುಳ್ಳನ್ನು ಮುಳ್ಳಿಂದಲೇ ತೆಗೆಯಬೇಕು' ಅನ್ನೋ ರೀತಿಯಲ್ಲಿ ಇದು ಕಾರ್ಯನಿರ್ವಹಿಸುತ್ತದೆ. ಇದು ನಿಮಗೆ ಸಂಪರ್ಕ ಕಡಿತಗೊಳಿಸಲು ಸಹಾಯ ಮಾಡುತ್ತದೆ, ಈ ಮೂಲಕ ನಿಮ್ಮ ಜೀವನದ ಇತರ ಅಂಶಗಳ ಮೇಲೆ ಕೇಂದ್ರೀಕರಿಸಲು ಅನುವು ಮಾಡಿಕೊಡುತ್ತದೆ. ಹಾಗಿದ್ರೆ, ಬನ್ನಿ ಅದನ್ನು ಹೇಗೆ ಸಕ್ರಿಯಗೊಳಿಸಿವುದು ಅನ್ನೋದನ್ನು ನೋಡೋಣ.
ಹಂತ 1: ಮೊದಲು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಇನ್‌ಸ್ಟಾಗ್ರಾಮ್ ಆಪ್ ಓಪನ್ ಮಾಡಿ ನಂತರ ಸೆಟ್ಟಿಂಗ್ ವಿಭಾಗಕ್ಕೆ ತಲುಪಿ. ಅಲ್ಲಿ ಗೌಪ್ಯತೆ ಎಂಬ ಆಯ್ಕೆ ಕಾಣಿಸಿಕೊಳ್ಳುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ. ಇದಾದ ನಂತರದಲ್ಲಿ ಟೈಮ್ ಸ್ಪೆಂಟ್ ಎಂಬ ಆಯ್ಕೆ ಕಾಣಿಸಿಕೊಳ್ಳಲಿದ್ದು, ಅದರ ಮೇಲೆ ಕ್ಲಿಕ್ ಮಾಡುವ ಮೂಲಕ ಓಪನ್ ಮಾಡಿ.
ಹಂತ 2: ಇದೆಲ್ಲಾ ಮಾಡಿದ ಮೇಲೆ ನೀವು ಇನ್‌ಸ್ಟಾಗ್ರಾಮ್‌ನಲ್ಲಿ ಕಳೆದ ಸಮಯವನ್ನು ವೀಕ್ಷಣೆ ಮಾಡಬಹುದು. ಅಂದರೆ ಇಲ್ಲಿ, ನೀವು ಕಳೆದ ಸಮಯದ ನಿಮ್ಮ ದೈನಂದಿನ ಸರಾಸರಿಯನ್ನು ನೀವು ನೋಡಬಹುದು. ನಂತರ ಇಲ್ಲೇ ಇರುವ ದೈನಂದಿನ ಮಿತಿ ಎಂಬ ಆಯ್ಕೆ ಮೇಲೆ ಟ್ಯಾಪ್ ಮಾಡಿ.

ಹಂತ 3: ಇದಾದ ನಂತರದಲ್ಲಿ ಇನ್‌ಸ್ಟಾಗ್ರಾಮ್ ಅನ್ನು ಎಷ್ಟು ಸಮಯ ಬಳಕೆ ಮಾಡಬೇಕು ಅನ್ನೋದನ್ನು ಅಲ್ಲಿ ನಿಗದಿ ಮಾಡಿ. ಇಲ್ಲಿ ನಿಗದಿ ಮಾಡಿದ ಸಮಯಕ್ಕಿಂತ ಹೆಚ್ಚಿನ ಸಮಯ ನೀವು ಇನ್‌ಸ್ಟಾಗ್ರಾಮ್ ಬಳಕೆ ಮಾಡಲು ಮುಂದಾದರೆ ನಿಮಗೆ ಈ ಆಪ್ ಸಂದೇಶವೊಂದನ್ನು ನೀಡಿ ನೀವು ಎಚ್ಚೆತ್ತುಕೊಳ್ಳುವಂತೆ ಮಾಡುತ್ತದೆ. ಅಂದರೆ ಇನ್‌ಸ್ಟಾಗ್ರಾಮ್ ಆಪ್ ಕ್ಲೋಸ್ ಮಾಡಲು ನಿಮ್ಮನ್ನು ಕೇಳುತ್ತದೆ.
ಹಂತ 4 : ಇದರೊಂದಿಗೆ ನೀವು ನಿಶ್ಯಬ್ಧ ಮೋಡ್ ಅನ್ನು ಸಹ ಸಕ್ರಿಯಗೊಳಿಸಬಹುದು ಇದರಿಂದ ಇನ್‌ಸ್ಟಾಗ್ರಾಮ್ ರಾತ್ರಿಯ ಸಮಯದಲ್ಲಿ ಅಥವಾ ನೀವು ಕೇಂದ್ರೀಕರಿಸಲು ಬಯಸುವ ಸಮಯದಲ್ಲಿ ನೋಟಿಫಿಕೇಶನ್ ಅನ್ನು ಕಳುಹಿಸುವುದನ್ನು ನಿಲ್ಲಿಸುತ್ತದೆ. ಇದಕ್ಕೂ ಸಹ ನೀವು ಪ್ರಾರಂಭ ಮತ್ತು ಅಂತಿಮ ಸಮಯವನ್ನು ಹೊಂದಿಸಬಹುದು. ಈ ಮೂಲಕ ಉಳಿದ ಸಮಯದಲ್ಲಿ ಯಾವುದೇ ಚಂಚಲತೆ ಇಲ್ಲದೆ ಇತರೆ ಕೆಲಸ ಮಾಡಬಹುದಾಗಿದೆ. ಪ್ರಮುಖ ವಿಷಯ ಏನೆಂದರೆ ಇದೆಲ್ಲವೂ ನಿಮ್ಮ ಮನಸ್ಸಿನ ಹಿಡಿತದ ಮೇಲೆ
ಅದಾಗ್ಯೂ ನೀವು ಬೇರೆ ಮಾರ್ಗದಲ್ಲೂ ಸಹ ನಿಮ್ಮನ್ನು ನೀವು ಕಂಟ್ರೋಲ್ ಮಾಡಿಕೊಳ್ಳಬಹುದು. ಅದುವೇ ಆಂಡ್ರಾಯ್ಡ್‌ನಲ್ಲಿ ಡಿಜಿಟಲ್ ಯೋಗಕ್ಷೇಮ ಅಥವಾ ಐಓಎಸ್‌ನಲ್ಲಿ ಸ್ಕ್ರೀನ್ ಟೈಮ್ ಬಳಕೆ ಮಾಡುವುದು. ಇದರಲ್ಲಿ ಯಾವೆಲ್ಲಾ ಆಪ್‌ಗಳನ್ನು ಎಷ್ಟು ಸಮಯ ಬಳಕೆ ಮಾಡಲಾಗಿದೆ ಎಂಬ ಬಗ್ಗೆ ಮಾಹಿತಿ ಪಡೆದುಕೊಳ್ಳಬಹುದು. ಈ ಮೂಲಕ ನಿಮಗೆ ನೀವೇ ಸಮಯ ನಿಗದಿ ಮಾಡಿಕೊಳ್ಳಬಹುದಾಗಿದೆ.


Click it and Unblock the Notifications








