ನಿಮ್ಮ ಫೋನ್ ಸ್ಟೋರೇಜ್ ಫುಲ್ ಆಗಿದ್ರೆ, ಕೂಡಲೇ ಈ ಕೆಲಸ ಮಾಡಿ!
ಪ್ರಸ್ತುತ ಸ್ಮಾರ್ಟ್‌ಫೋನ್ ಅಗತ್ಯ ಸಾಧನವಾಗಿರೋದ್ರಿಂದ ನಿತ್ಯವು ಬೇರೆ ಬೇರೆ ಸಾಮಾಜಿಕ ಆಪ್‌ಗಳಿಂದ ಅಥವಾ ವಿಡಿಯೋ ಡೌನ್‌ಲೋಡ್ ಮಾಡುವುದರಿಂದ ಫೋನಿನ ಸ್ಟೋರೇಜ್ ಭರ್ತಿ ಆಗುವ ಸಾಧ್ಯತೆ ಅಧಿಕ. ಇತ್ತೀಚಿಗಿನ ನೂತನ ಫೋನ್‌ಗಳು ಹೆಚ್ಚಿನ ಸ್ಟೋರೇಜ್ ಸಾಮರ್ಥ್ಯದ ಒಳಗೊಂಡಿದ್ದರೂ ಸಹ ಕೆಲವೊಮ್ಮೆ ಮೊಬೈಲ್ ಫೋನಿನ ಸ್ಟೋರೇಜ್ ತುಂಬುವ ಸಾಧ್ಯತೆಗಳಿರುತ್ತವೆ.
ಇನ್ನು ಸ್ಮಾರ್ಟ್‌ಫೋನ್ ಫುಲ್ ಆದ್ರೆ, ಹೊಸದಾಗಿ ಫೋಟೋ, ವಿಡಿಯೋ, ಆಡಿಯೋ ಫೈಲ್ ಸೇರಿದಂತೆ ಇತರೆ ಫೈಲ್‌ಗಳಿಗೆ ಜಾಗ ಇಲ್ಲದಾಗುತ್ತದೆ. ಆಗ ಬಳಕೆದಾರರು ಫೋನಿನಲ್ಲಿ ಅನಗತ್ಯ ಇರುವ ಫೋಟೋ, ವಿಡಿಯೋ ಅಥವಾ ಇನ್ಯಾವುದೇ ಫೈಲ್ ಡಿಲೀಟ್ ಮಾಡಬೇಕಾಗುತ್ತದೆ. ಹೀಗೆ ಫೋನ್ ಮೆಮೊರಿ ಭರ್ತಿ ಆಗುವಲ್ಲಿ ವಾಟ್ಸಾಪ್ ಸಹ ಪ್ರಮುಖ ಕಾರಣ ಆಗಿರುತ್ತದೆ.

ಏಕೆಂದರೆ, ವಾಟ್ಸಾಪ್ ಆಪ್ ಅನ್ನು ಹೆಚ್ಚಾಗಿ ಬಳಕೆ ಮಾಡುತ್ತಾರೆ. ಹೀಗಾಗಿ ವಾಟ್ಸಾಪ್ ಗ್ರುಪ್ ಹಾಗೂ ವೈಯಕ್ತಿಕ ಚಾಟ್‌ಗಳಲ್ಲಿ ಬರುವ ವಿಡಿಯೋ, ಫೋಟೋ, ಆಡಿಯೋ ಮತ್ತು ಇತರೆ ಫೈಲ್‌ಗಳ ಡೌನ್‌ಲೋಡ್‌ನಿಂದಾಗಿ ಫೋನ್ ಮೆಮೊರಿ ತುಂಬುತ್ತದೆ. ಹೀಗೆ ನಿಮ್ಮ ಫೋನಿನಲ್ಲಿಯೂ ಆಗುತ್ತಿದ್ದರೆ, ವಾಟ್ಸಾಪ್‌ನಿಂದ ಫೋನ್ ಸ್ಟೋರೇಜ್ ಭರ್ತಿ ಆಗುವುದನ್ನು ತಡೆಯಬಹುದು. ಅದಕ್ಕಾಗಿ ಈ ಮುಂದಿನ ಕ್ರಮ ಅನುಸರಿಸಿ.
ವಾಟ್ಸಾಪ್ ಆಟೋಮ್ಯಾಟಿಕ್ ಡೌನ್‌ಲೋಡ್ ಆಯ್ಕೆ:
ಮೆಟಾ ಮಾಲೀಕತ್ವದ ವಾಟ್ಸಾಪ್ ಜನಪ್ರಿಯ ಚಾಟಿಂಗ್ ಆಪ್ ಎನ್ನುವುದರಲ್ಲಿ ಎರಡು ಮಾತಿಲ್ಲ. ಇನ್ನು ವಾಟ್ಸಾಪ್ ಸಹ ನೂತನ ಆವೃತ್ತಿಗಳಲ್ಲಿ ಹೊಸ ಫೀಚರ್ ಸೇರ್ಪಡೆ ಮಾಡುತ್ತಾ ಸಾಗುತ್ತಿದ್ದು, ವಾಟ್ಸಾಪ್‌ನ ಮೀಡಿಯಾಗಳಿಗೆ ಆಟೋಮ್ಯಾಟಿಕ್ ಡೌನ್‌ಲೋಡ್ ಆಯ್ಕೆ ಸಹ ನೀಡಿದೆ. ಈ ಆಯ್ಕೆಯು ವಾಟ್ಸಾಪ್‌ಗೆ ಬರುವ ಫೋಟೋ, ವಿಡಿಯೋ ಫೈಲ್‌ಗಳನ್ನು ಆಟೋಮ್ಯಾಟಿಕ್ ಆಗಿ ಗ್ಯಾಲರಿಗೆ ಸೇವ್ ಮಾಡುತ್ತದೆ.
ಇನ್ನು ಫೋನ್ ಸ್ಟೋರೇಜ್ ಭರ್ತಿ ಆಗುವುದಕ್ಕೆ ವಾಟ್ಸಾಪ್‌ನ ಈ ಆಟೋಮ್ಯಾಟಿಕ್ ಡೌನ್‌ಲೋಡ್ ಆಯ್ಕೆಯು ಪ್ರಮುಖವಾಗಿದೆ. ಬಳಕೆದಾರರ ವಾಟ್ಸಾಪ್‌ಗೆ ಬರುವ ಫೋಟೋ, ವಿಡಿಯೋಗಳು ನೇರವಾಗಿ ಫೋನ್ ಗ್ಯಾಲರಿಗೆ ಸೇವ್ ಆಗುತ್ತವೆ. ಇದ್ರಿಂದ ಬಹುಬೇಗನೆ ಮೊಬೈಲ್ ಸ್ಥಳಾವಕಾಶ ತುಂಬುತ್ತದೆ. ಈ ಆಯ್ಕೆಯನ್ನು ನಿಷ್ಕ್ರಿಯ ಮಾಡುವ ಮೂಲಕ ಫೋನ್ ಸ್ಟೋರೇಜ್ ಅನಗತ್ಯ ಭರ್ತಿ ತಡೆಯಬಹುದು.
ವಾಟ್ಸಾಪ್‌ನಲ್ಲಿ ಆಟೋಮ್ಯಾಟಿಕ್ ಡೌನ್‌ಲೋಡ್ ಆಯ್ಕೆ ಆಫ್ ಮಾಡಲು ಹೀಗೆ ಮಾಡಿರಿ:
ಹಂತ 1 : ಮೊದಲಿಗೆ ಫೋನಿನಲ್ಲಿ ವಾಟ್ಸಾಪ್ ತೆರೆಯಿರಿ
ಹಂತ : ನಂತರ, ಆಟೋಮ್ಯಾಟಿಕ್ ಡೌನ್‌ಲೋಡ್ ಆಯ್ಕೆ ಅನ್ನು ನಿಷ್ಕ್ರಿಯಗೊಳಿಸಲು ಬಯಸುವ ಯಾವುದೇ ಚಾಟ್ ಅನ್ನು ಕ್ಲಿಕ್ ಮಾಡಿ.
ಹಂತ 3 : ಬಳಿಕ, ಚಾಟ್‌ನ ಹೆಸರ ಅನ್ನು ಕ್ಲಿಕ್ ಮಾಡುವ ಮೂಲಕ ಆ ಚಾಟ್‌ನ ಪ್ರೊಫೈಲ್ ವಿಭಾಗಕ್ಕೆ ಹೋಗಿರಿ.
ಹಂತ 4 : ನಂತರ ಕೆಳಗೆ ಸ್ಕ್ರಾಲ್ ಮಾಡಿರಿ ಹಾಗೂ ಮೀಡಿಯಾ ವಿಜಿಬಲಿಟಿ ಮೇಲೆ ಮತ್ತೊಮ್ಮೆ ಕ್ಲಿಕ್ ಮಾಡಿ.
ಹಂತ 5 : ಆ ಬಳಿಕ ವಾಟ್ಸಾಪ್ ನಲ್ಲಿ ಆಟೋಮ್ಯಾಟಿಕ್ ಡೌನ್‌ಲೋಡ್ ಆಯ್ಕೆ ಅನ್ನು ನಿಷ್ಕ್ರಿಯಗೊಳಿಸಲು ನೋ - No ಆಯ್ಕೆ ಅನ್ನು ಸೆಲೆಕ್ಟ್ ಮಾಡಿ.
ವಾಟ್ಸಾಪ್ ಬಳಕೆದಾರರೇ ಈ ಸಂಗತಿ ಗಮನಿಸಿ:
ವಾಟ್ಸಾಪ್ ಆಪ್‌ನಲ್ಲಿ ಆಟೋಮ್ಯಾಟಿಕ್ ಡೌನ್‌ಲೋಡ್ ಆಯ್ಕೆ ಅನ್ನು ನಿಷ್ಕ್ರಿಯ ಮಾಡಿದ್ದರೆ, ಈ ಅಂಶ ನೀವು ತಿಳಿಯಲೇಬೇಕು. ಯಾವ ಚಾಟ್‌ನಲ್ಲಿ ನೀವು ಈ ಆಯ್ಕೆಯನ್ನು ನಿಷ್ಕ್ರಿಯ ಮಾಡಿರುತ್ತಿರೋ ಆ ಚಾಟ್‌ನಲ್ಲಿ ಫೋಟೋ, ವಿಡಿಯೋಗಳು ಆಟೋ ಡೌನ್‌ಲೋಡ್ ಆಗುವುದಿಲ್ಲ, ಬದಲಿಗೆ ನೀವು ಮ್ಯಾನುವಲ್ ಆಗಿ ಡೌನ್‌ಲೋಡ್ ಮಾಡಬೇಕಿರುತ್ತದೆ.
ಫೋಟೋ ಅಥವಾ ವಿಡಿಯೋ ಅಗತ್ಯ ಇದ್ದಲ್ಲಿ ಸೇವ್ ಮಾಡಿರಿ. ಒಂದು ವೇಳೆ ಅನಗತ್ಯ ಎಂದಾಗಿದ್ದರೆ, ಅವುಗಳನ್ನು ಡಿಲೀಟ್ ಮಾಡುವುದು ಸೂಕ್ತ. ಇದ್ರಿಂದ ಫೋನ್ ಸ್ಟೋರೇಜ್ ಅನಗತ್ಯ ಭರ್ತಿ ಆಗುವುದು ತಪ್ಪುತ್ತದೆ.
ಡೇಟಾ ಉಳಿತಾಯಕ್ಕೂ ಇದು ಪೂರಕ:
ಆಟೋಮ್ಯಾಟಿಕ್ ಡೌನ್‌ಲೋಡ್ ಆಯ್ಕೆ ಅನ್ನು ನಿಷ್ಕ್ರಿಯ ಮಾಡುವುದರಿಂದ ಮೊಬೈಲ್ ಡೇಟಾ ಉಳಿತಾಯಕ್ಕೂ ಅದು ಪೂರಕವಾಗಿದೆ. ಈ ಆಯ್ಕೆ ನಿಷ್ಕ್ರಿಯ ಮಾಡುವುದರಿಂದ ಅನಗತ್ಯ ಫೋಟೋ, ವಿಡಿಯೋ ಡೌನ್‌ಲೋಡ್ ಆಗುವುದಿಲ್ಲ. ಬಳಕೆದಾರರು ಬೇಕಾಗಿರುವ ಫೋಟೋ ಅಥವಾ ವಿಡಿಯೋ ಮಾತ್ರ ಡೌನ್‌ಲೋಡ್ ಮಾಡುತ್ತಾರೆ. ಹೀಗಾಗಿ ಮೊಬೈಲ್ ಡೇಟಾ ಸಹ ಹೆಚ್ಚು ವ್ಯಯವಾಗುವುದಿಲ್ಲ.


Click it and Unblock the Notifications








