ರೈಲಿನಲ್ಲಿ ಸಂಚಾರ ಮಾಡುವಾಗ ಏನಾದರೂ ಸಮಸ್ಯೆ ಆದ್ರೆ ಈ ರೀತಿ ದೂರು ಸಲ್ಲಿಸಿ
ಭಾರತದಲ್ಲಿ ಹಲವಾರು ಜನರು ಸಂಚಾರಕ್ಕೆ ರೈಲನ್ನೇ ಅವಲಂಭಿಸಿರುತ್ತಾರೆ. ಇದು ಕೈಗೆಟುಕುವ ಹಾಗೂ ಅನುಕೂಲಕರ ಮತ್ತು ದೇಶದ ಗ್ರಾಮೀಣ ಭಾಗಗಳಲ್ಲಿ ಉತ್ತಮ ಸಂಪರ್ಕವನ್ನು ಹೊಂದಿದೆ. ರೈಲು ಪ್ರಯಾಣವನ್ನು ಭಾರತೀಯ ರೈಲ್ವೇಸ್ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ (IRCTC) ಇನ್ನಷ್ಟು ಸುಗಮಗೊಳಿಸುವಲ್ಲಿ ಒಂದಲ್ಲಾ ಒಂದು ಹೊಸ ಹೊಸ ಸೇವೆಗಳನ್ನು ನೀಡುತ್ತಲೇ ಬರುತ್ತಿದೆ.
ಹೌದು, ಪ್ರಯಾಣಿಕರು ತಮ್ಮ ಪ್ರಯಾಣದ ಸಮಯದಲ್ಲಿ ಸಮಸ್ಯೆಗಳನ್ನು ಎದುರಿಸುವ ಹಲವಾರು ಸಂದರ್ಭಗಳಿವೆ. ಅಂತಹ ಸಮಯದಲ್ಲಿ ಪರಿಹಾರವನ್ನು ಪಡೆಯಲು ಮತ್ತು ಪ್ರಯಾಣದ ಅನುಭವವನ್ನು ಸುಧಾರಿಸಲು IRCTC ಯಲ್ಲಿ ದೂರನ್ನು ಸಲ್ಲಿಕೆ ಮಾಡಬಹುದು. ಹಾಗಿದ್ರೆ, ರೈಲು ಪ್ರಯಾಣದಲ್ಲಿ ಆಗುವ ಅನಾನುಕೂಲವನ್ನು ಹೇಗೆ ಸರಿಪಡಿಸಿಕೊಳ್ಳಬಹುದು, ದೂರನ್ನು ಹೇಗೆ ದಾಖಲಿಸುವುದು ಎಂಬಿತ್ಯಾದಿ ಮಾಹಿತಿಗಾಗಿ ಈ ಲೇಖನ ಓದಿರಿ.

ರೈಲಿನಲ್ಲಿ ನಿಮಗೆ ಯಾವುದೇ ಸಮಸ್ಯೆ ಉಂಟಾದರೂ ಸಹ ಅದಕ್ಕೆ ಪರಿಹಾರ ಪಡೆದುಕೊಳ್ಳಬಹುದು. ಇದಕ್ಕಾಗಿಯೇ ರೈಲ್ವೇ ಇಲಾಖೆ ಸಿಬ್ಬಂದಿಗಳನ್ನು ನಿಯೋಜನೆ ಮಾಡಿದೆ. ಈ ನಡುವೆ ಪ್ರಯಾಣಿಕರಿಗಾಗಿ ಮೀಸಲಾದ ಆನ್‌ಲೈನ್ ದೂರು ಸೇವೆ ಕಾರ್ಯೋನ್ಮುಖವಾಗಿದ್ದು, ಜನರು ರೈಲು ಪ್ರಯಾಣಕ್ಕೆ ಸಂಬಂಧಿಸಿದ ದೂರುಗಳನ್ನು ಸುಲಭವಾಗಿ ನೋಂದಾಯಿಸಲು ಅನುವು ಮಾಡಿಕೊಡುತ್ತದೆ. ಹಾಗಿದ್ರೆ, ಬನ್ನಿ ಈ ಸರಳ ಹಂತದ ಮೂಲಕ ಹೇಗೆ ದೂರು ದಾಖಲು ಮಾಡುವುದು ಎಂದು ತಿಳಿಯೋಣ.
ದೂರು ಸಲ್ಲಿಸುವ ಮುನ್ನ ಈ ಮಾಹಿತಿ ಗೊತ್ತಿರಲಿ: ರೈಲು ಪ್ರಯಾಣಕ್ಕೂ ಮುನ್ನ ನೀವು ಸಂಚರಿಸುವ ರೈಲಿನ PNR ಸಂಖ್ಯೆ ಹಾಗೂ OTP ಪರಿಶೀಲನೆಗಾಗಿ ಸಕ್ರಿಯ ಮೊಬೈಲ್ ಸಂಖ್ಯೆ ನೀವು ದೂರಿಗೆ ಸಂಬಂಧಿಸಿದ ಯಾವುದಾದರೂ ಫೋಟೋ ಅಥವಾ ವಿಡಿಯೋವನ್ನು ಹೊಂದಿದ್ದರೆ ಆ ವಿಡಿಯೋಗಳನ್ನು ನಿಮ್ಮ ಬಳಿ ಇರಿಸಿಕೊಳ್ಳಬೇಕು. ಮತ್ಯಾಕೆ ತಡ ಈ ಎಲ್ಲಾ ಮಾಹಿತಿ ನಿಮ್ಮ ಬಳಿ ಇದ್ದರೆ ಬನ್ನಿ ದೂರು ಸಲ್ಲಿಸುವುದು ಹೇಗೆಂದು ತಿಳಿಯೋಣ.
ಹಂತ 1: ನಿಮ್ಮ ಕಂಪ್ಯೂಟರ್ ಅಥವಾ ಫೋನ್‌ನಲ್ಲಿ ಯಾವುದೇ ವೆಬ್ ಬ್ರೌಸರ್ ಬಳಸಿ https://railmadad.indianrailways.gov.in/madad/final/home.jsp ಎಂದು ಟೈಪ್ ಮಾಡಿ. ಅಥವಾ ಈ ಲಿಂಕ್ ಬಳಕೆ ಮಾಡಿಕೊಳ್ಳಿ. ಇದಾದ ನಂತರದಲ್ಲಿ ರೈಲುಗಳಿಗೆ ಸಂಬಂಧಿಸಿದ ದೂರನ್ನು ನೋಂದಾಯಿಸಲು, ರೈಲು ದೂರು ಎಂಬ ಆಯ್ಕೆ ಕಾಣಿಸಿಕೊಳ್ಳುತ್ತದೆ ಅದರ ಮೇಲೆ ಕ್ಲಿಕ್ ಮಾಡಿ.
ಹಂತ 2: ನಂತರದಲ್ಲಿ ನಿಮ್ಮ ಫೋನ್ ಸಂಖ್ಯೆಯನ್ನು ನಮೂದಿಸಿ ಮತ್ತು ಓಟಿಪಿ ಪಡೆಯಿರಿ. ಬಳಿಕ ಅದನ್ನು ಅಗತ್ಯ ಜಾಗದಲ್ಲಿ ಎಂಟ್ರಿ ಮಾಡಿ. ಇದೆಲ್ಲಾ ಆದ ನಂತರ PNR ಸಂಖ್ಯೆ ಮತ್ತು ದೂರಿನ ಪ್ರಕಾರವನ್ನು ನಮೂದಿಸಿ. ಯಾಕೆಂದರೆ ದೂರಿನ ಸ್ವರೂಪವನ್ನು ನಿರ್ದಿಷ್ಟಪಡಿಸಲು ನೀವು ಈ ಆಯ್ಕೆಗಳನ್ನು ಆರಿಸಿಕೊಳ್ಳಬೇಕಿದೆ. ಇದರಿಂದಾಗಿ ನಿಮ್ಮ ದೂರು ಹೆಚ್ಚಿನ ಮೌಲ್ಯವನ್ನು ಪಡೆದುಕೊಳ್ಳುತ್ತದೆ.
ಹಂತ 3: ಬಳಿಕ ಇದರಲ್ಲಿ ಉಪ ಪ್ರಕಾರವನ್ನು ಆಯ್ಕೆಮಾಡಿ ಮತ್ತು ಘಟನೆಯ ಡೇಟಾವನ್ನು ಎಂಟ್ರಿ ಮಾಡಿ. ಇದರೊಂದಿಗೆ ನೀವು ಪೋಷಕ ಫೈಲ್ ಅನ್ನು ಅಪ್‌ಲೋಡ್ ಮಾಡಲು ಬಯಸಿದರೆ ಅಂದರೆ ಫೋಟೋ ಅಥವಾ ವೀಡಿಯೊ ಅಪ್‌ಲೋಡ್ ಮಾಡಲು ಬಯಸಿದರೆ ಈ ವಿಭಾಗದಲ್ಲಿ ಅದನ್ನು ಮಾಡಿ. ನಂತರದಲ್ಲಿ ದೂರಿನ ಸಣ್ಣ ವಿವರಣೆಯನ್ನು ಬರೆಯಿರಿ.

ಹಂತ 4: ಈ ಮೇಲಿನ ಪ್ರಕ್ರಿಯೆ ಮುಗಿಸಿದ ನಂತರ ದೂರನ್ನು ನೋಂದಾಯಿಸಲು ಸಲ್ಲಿಸು ಬಟನ್ ಮೇಲೆ ಕ್ಲಿಕ್ ಮಾಡಿ. ಇದಾದ ನಂತರದಲ್ಲಿ ತಕ್ಷಣವೇ ನಿಮ್ಮ ದೂರನ್ನು ಪರಿಶೀಲನೆ ನಡೆಸಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ. ಇದಕ್ಕೂ ಮೊದಲು ನಿಮಗೆ ನಿಮ್ಮ ದೂರಿನ ಸ್ಥಿತಿಯನ್ನು ಟ್ರ್ಯಾಕ್ ಮಾಡಲು ಒಂದು ಸಂಖ್ಯೆಯನ್ನು ನೀಡಲಾಗುತ್ತದೆ. ಆ ಸಂಖ್ಯೆ ಬಳಕೆ ಮಾಡಿಕೊಂಡು ನಿಮ್ಮ ದೂರು ಯಾವ ಹಂತದಲ್ಲಿದೆ ಎಂದು ತಕ್ಷಣ ತಿಳಿದುಕೊಳ್ಳಬಹುದು.


Click it and Unblock the Notifications








