Truecaller: ಟ್ರೂಕಾಲರ್‌ನಿಂದ ನಿಮ್ಮ ಫೋನ್ ಸಂಖ್ಯೆಯನ್ನು ಶಾಶ್ವತವಾಗಿ ಡಿಲೀಟ್ ಮಾಡುವುದು ಹೇಗೆ? ಇಲ್ಲಿದೆ ವಿವರ
ಟ್ರೂಕಾಲರ್ (Truecaller) ಇತ್ತೀಚಿನ ದಿನಗಳಲ್ಲಿ ಬಹುಪಾಲು ಎಲ್ಲರ ಸ್ಮಾರ್ಟ್‌ಫೋನ್‌ನಲ್ಲಿಯೂ ಇದೆ. ಈ ಆಪ್ ಸಾಕಷ್ಟು ಸಂಭವನೀಯ ಆನ್‌ಲೈನ್ ವಂಚನೆಗಳನ್ನು ತಡೆಯಲು ಸಹಕಾರಿಯಾಗಿದ್ದು, ಪರಸ್ಪರ ಸಂವಹನವನ್ನು ಸುಲಭವಾಗಿಸಿದೆ.
ಹೌದು, ಈಗಂತೂ ಟ್ರೂಕಾಲರ್ ಇಲ್ಲದ ಸ್ಮಾರ್ಟ್‌ಫೋನ್ ಅನ್ನು ಗುರುತಿಸುವುದು ಬಹಳ ಕಷ್ಟ. ಅಷ್ಟರ ಮಟ್ಟಿಗೆ ಈ ಆಪ್ ಅನ್ನು ಜನರು ಬಳಕೆ ಮಾಡುತ್ತಾರೆ. ಇದಕ್ಕೆ ನೇರ ಕಾರಣ ಅನಾಮಿಕ ಸಂಖ್ಯೆಯಿಂದ ಬರುವ ಕರೆ ಯಾವುದೆಂದು ಕಂಡುಕೊಳ್ಳಲು. ಆದರೆ, ಅದಾಗ್ಯೂ ಸಹ ಕೆಲವು ಆರೋಪಗಳಿಗೆ ಗುರಿಯಾಗಿದ್ದು, ನಿಮ್ಮೆಲ್ಲರಿಗೂ ತಿಳಿದ ವಿಚಾರವೇ ಹೌದು. ಈ ನಡುವೆ ನಿಮ್ಮ ಮಾಹಿತಿ ಯಾರಿಗೂ ತಿಳಿಯಬಾರದು, ಗೌಪ್ಯತೆ ಕಾಪಾಡಿಕೊಳ್ಳಬೇಕು ಎಂದುಕೊಂಡಿದ್ದರೆ ಟ್ರೂಕಾಲರ್‌ನಿಂದ ನಿಮ್ಮ ಫೋನ್ ಸಂಖ್ಯೆಯನ್ನು ಅಳಿಸಬೇಕಿದೆ. ಹಾಗಿದ್ರೆ ಇದನ್ನು ಮಾಡುವುದು ಹೇಗೆ ಅನ್ನೋ ಮಾಹಿತಿ ಇಲ್ಲಿದೆ ನೋಡಿ.

ಟ್ರೂಕಾಲರ್: ಟ್ರೂಕಾಲರ್ ಸಂಬಂಧ ಈ ಹಿಂದೆ ಕೆಲವು ಆರೋಪಗಳು ಕೇಳಿಬಂದಿದ್ದವು. ಅದರಲ್ಲಿ ಈ ಆಪ್ ಗೌಪ್ಯತೆ ಸಂಬಂಧ ದೊಡ್ಡ ಪ್ರಶ್ನೆ ಹುಟ್ಟುಹಾಕಿತ್ತು. ಟ್ರೂಕಾಲರ್ ಕೇವಲ ಹೆಸರು ಮತ್ತು ಸಂಖ್ಯೆಗಳಿಗಿಂತ ಇನ್ನೂ ಹೆಚ್ಚಿನ ಅನಗತ್ಯ ಮಾಹಿತಿಯನ್ನು ಸಂಗ್ರಹಿಸುತ್ತದೆ ಎಂದು ತಿಳಿದುಬಂದಿತ್ತು.ಅಂದರೆ ನಿಮ್ಮ ಡಿವೈಸ್‌ನ ಜಿಯೋಲೊಕೇಶನ್, ಐಪಿ ವಿಳಾಸ, ಡಿವೈಸ್ ಐಡಿ, ತಯಾರಕರು, ಮಾದರಿ, ಹಾರ್ಡ್‌ವೇರ್ ಸೆಟ್ಟಿಂಗ್, ಸಿಮ್ ಕಾರ್ಡ್ ಮಾಹಿತಿ, ಫೋನ್‌ನಲ್ಲಿ ಇರುವ ಆಪ್‌ಗಳು, ಜಾಹೀರಾತು ಐಡಿ, ವೆಬ್ ಬ್ರೌಸರ್ ಸೇರಿದಂತೆ ಅನೇಕ ಮಾಹಿತಿಯನ್ನು ಇದು ಪಡೆಯುತ್ತಿದೆ ಅನ್ನೋ ಆರೋಪ ಇತ್ತು.
ಅದರಂತೆ ಈ ಆಪ್‌ನಲ್ಲಿ ಸೂಕ್ಷ್ಮ ಮಾಹಿತಿ ಸೋರಿಕೆ ಆಗುತ್ತಿವೆ, ಭದ್ರತಾ ಲೋಪಗಳು, ಡೇಟಾ ಸೋರಿಕೆಗಳು ಸೇರಿದಂತೆ ಅನೇಕ ಸಮಸ್ಯೆಗಳು ಎದುರಾಗುತ್ತಿವೆ ಎಂದು ಕಂಡುಕೊಳ್ಳಲಾಗಿತ್ತು. ಆದರೆ ಈ ಸಂಬಂಧ ತಕ್ಷಣ ಎಚ್ಚೆತ್ತ ಟ್ರೂಕಾಲರ್ ಸಮಸ್ಯೆ ಬಗೆಹರಿಸಲು ಮುಂದಾಯ್ತು. ಅದಾಗ್ಯೂ ಕೆಲವರು ತಮ್ಮ ಮಾಹಿತಿಯನ್ನ ಬೇರೆಯವರಿಗೆ ತಿಳಿಸಲು ಇಷ್ಟಪಡುವುದಿಲ್ಲ. ಅಂತಹವರು ಈ ಹಂತಗಳನ್ನು ಅನುಸರಿಸುವ ಮೂಲಕ ಶಾಶ್ವತವಾಗಿ ಟ್ರೂಕಾಲರ್‌ನಿಂದ ಹೊರಬರಬಹುದು.

ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಿಂದ ಟ್ರೂಕಾಲರ್ ಖಾತೆ ಡಿಲೀಟ್ ಮಾಡುವುದು ಹೇಗೆ?:
ಹಂತ 1 : ನಿಮ್ಮ ಫೋನ್‌ನಲ್ಲಿ ಈಗಾಗಲೇ ಇರುವ ಟ್ರೂಕಾಲರ್ ಆಪ್ ಅನ್ನು ಓಪನ್ ಮಾಡಿ. ನಂತರ ಮೇಲಿನ ಎಡಭಾಗದಲ್ಲಿರುವ ಮೂರು ಚುಕ್ಕೆಗಳ ಮೇಲೆ ಟ್ಯಾಪ್ ಮಾಡಿ. ಇದಾದ ಮೇಲೆ ಸೆಟ್ಟಿಂಗ್ ವಿಭಾಗಕ್ಕೆ ಹೋಗಿ ಅಲ್ಲಿ ಕಾಣುವ ಆಯ್ಕೆಗಳಿಂದ ಗೌಪ್ಯತಾ ಸೆಂಟರ್ ಅನ್ನು ಸರ್ಚ್ ಮಾಡಿದೆ.
ಹಂತ 2: ಇದನ್ನು ಮಾಡಿದ ಮೇಲೆ ಅಲ್ಲಿ ಡೀಆಕ್ಟಿವೇಟ್ ಎಂಬ ಆಯ್ಕೆ ಕಾಣಿಸಿಕೊಳ್ಳುತ್ತವೆ ಅದರಲ್ಲಿ ಪ್ರಮುಖ ಎಚ್ಚರಿಕೆಗಳು ಅಥವಾ ಮೆಸೆಜ್ ಅನ್ನು ಪ್ರದರ್ಶಿಸಲಾಗುತ್ತದೆ. ಅದನ್ನು ಓದಿ ಮತ್ತು ದೃಢೀಕರಿಸಿ.
ಐಫೋನ್‌ನಿಂದ ಟ್ರೂಕಾಲರ್ ಖಾತೆಯನ್ನು ಅಳಿಸುವುದು ಹೇಗೆ?
ಹಂತ 1: ಐಫೋನ್ ಬಳಕೆದಾರರು ಕೊಂಚ ಬೇರೆ ರೀತಿಯಲ್ಲಿ ಈ ಕೆಲಸ ಮಾಡಬೇಕಿದೆ. ಮೊದಲು ಬಳಕೆದಾರರು ಟ್ರೂಕಾಲರ್ ಆಪ್ ಓಪನ್ ಮಾಡಬೇಕಿದೆ. ನಂತರದಲ್ಲಿ ಮೇಲಿನ ಬಲ ಮೂಲೆಯಲ್ಲಿರುವ ಗೇರ್ ಐಕಾನ್ ಮೇಲೆ ಟ್ಯಾಪ್ ಮಾಡಬೇಕಿದೆ.

ಹಂತ 2: ಇದಾದ ಬಳಿಕ ಅಬೌಟ್ ಟ್ರೂಕಾಲರ್ (About Truecaller) ಎಂಬ ಆಯ್ಕೆ ಕಾಣಿಸಿಕೊಳ್ಳುತ್ತದೆ ಅದರ ಮೇಲೆ ಕ್ಲಿಕ್ ಮಾಡಬೇಕು. ನಂತರದಲ್ಲಿ ಕೆಳಗೆ ಸ್ಕ್ರಾಲ್ ಮಾಡಿ ಮತ್ತು ಖಾತೆಯನ್ನು ನಿಷ್ಕ್ರಿಯಗೊಳಿಸಿ ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ. ಈ ವೇಳೆ ನಿಮಗೆ ಎಚ್ಚರಿಕೆಯ ಮೆಸೆಜ್ ಅನ್ನು ತೋರಿಸಲಾಗುತ್ತದೆ. ಅದನ್ನು ಓದಿ ಮತ್ತು ದೃಢೀಕರಿಸಿ.
ಟ್ರೂಕಾಲರ್‌ನಿಂದ ನಿಮ್ಮ ಫೋನ್ ಸಂಖ್ಯೆಯನ್ನು ತೆಗೆದುಹಾಕುವುದು ಹೇಗೆ?
ಹಂತ 1: ಇನ್ನು ಖಾತೆಯಿಂದ ಫೋನ್ ನಂಬರ್ ಅನ್ನು ತೆಗೆದುಹಾಕಲು ಅಧಿಕೃತ ಟ್ರೂಕಾಲರ್ ವೆಬ್‌ಸೈಟ್‌ಗೆ ಹೋಗಬೇಕಿದೆ. ಅಲ್ಲಿ ಟ್ರೂಕಾಲರ್ ಅನ್‌ಲಿಸ್ಟ್ ಫೋನ್ ಸಂಖ್ಯೆ ಪೇಜ್‌ಗೆ ನ್ಯಾವಿಗೇಟ್ ಮಾಡಿ. ನಂತರ ದೇಶದ ಕೋಡ್‌ನೊಂದಿಗೆ ನಿಮ್ಮ ಫೋನ್ ಸಂಖ್ಯೆಯನ್ನು ನಮೂದಿಸಿ.
ಹಂತ 2: ಇದಾದ ಬಳಿಕ ಫೋನ್ ಸಂಖ್ಯೆಯನ್ನು ಯಾಕೆ ತೆಗೆದುಹಾಕಲು ಬಯಸುತ್ತೀರಿ ಎಂಬುದನ್ನು ತಿಳಿಸುವ ಆಯ್ಕೆಯನ್ನು ಕ್ಲಿಕ್ ಮಾಡಿ. ಬಳಿಕ ಕ್ಯಾಪ್ಚಾ ಕೋಡ್ ಅನ್ನು ಎಂಟ್ರಿ ಮಾಡಿ ನೀಡಿರುವ ಆಯ್ಕೆಯಿಂದ 'ಅನ್‌ಲಿಸ್ಟ್' ಅನ್ನು ಟ್ಯಾಪ್ ಮಾಡಿ.
ಈ ಸುಲಭ ಹಂತಗಳನ್ನು ಅನುಸರಿಸುವ ಮೂಲಕ, ನಿಮ್ಮ ಫೋನ್‌ನಿಂದ ಟ್ರೂಕಾಲರ್ ಖಾತೆಯನ್ನು ನಿಷ್ಕ್ರಿಯಗೊಳಿಸಬಹುದು ಮತ್ತು ನಿಮ್ಮ ಫೋನ್ ಸಂಖ್ಯೆಯನ್ನು ಟ್ರೂಕಾಲರ್ ಡೇಟಾಬೇಸ್‌ನಿಂದ ಪಟ್ಟಿ ಮಾಡಲಾಗಿಲ್ಲ ಎಂದು ಖಚಿತಪಡಿಸಿಕೊಳ್ಳಬಹುದು. ಇನ್ಮುಂದೆ ಯಾರಿಗೇ ನೀವು ಕರೆ ಮಾಡಿದ್ರೂ ಕೇವಲ ಫೋನ್ ಸಂಖ್ಯೆ ಮಾತ್ರ ಡಿಸ್‌ಪ್ಲೇ ಆಗಲಿದೆ.


Click it and Unblock the Notifications








