ನಿಮ್ಮ ಹಳೆಯ ಸ್ಮಾರ್ಟ್‌ಫೋನ್ ಮೂಲಕ ಮನೆ ಅಂದ ಹೆಚ್ಚಿಸಿ: ಅದೇಗೆ ಅಂತೀರಾ!?
ಇಂದು ಪ್ರತಿಕ್ಷಣವೂ ಹೊಸ ಹೊಸ ತಂತ್ರಜ್ಞಾನ ಜನರಿಗೆ ಪರಿಚಿತವಾಗುತ್ತಿವೆ. ಅದರಂತೆ ಎಲೆಕ್ಟ್ರಾನಿಕ್ಸ್ ಗ್ಯಾಜೆಟ್ ತಯಾರಿಕಾ ಸಂಸ್ಥೆಗಳು ವಿವಿಧ ರೀತಿಯ ಸ್ಮಾರ್ಟ್‌ಡಿವೈಸ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಾ ಬರುತ್ತಿದ್ದು, ಹೊಸ ಶೈಲಿಯ ಸ್ಮಾರ್ಟ್‌ಡಿವೈಸ್‌ಗಳು ಮಾರುಕಟ್ಟೆಗೆ ಎಂಟ್ರಿ ಕೊಟ್ಟಂತೆ ಹಳೆಯ ಸ್ಮಾರ್ಟ್‌ಡಿವೈಸ್‌ಗಳು ಮನೆಯ ಮೂಲೆ ಸೇರುವುದು ಸಾಮಾನ್ಯ ವಿಷಯ. ಅದರಲ್ಲೂ ಸ್ಮಾರ್ಟ್‌ಫೋನ್ ಅಥವಾ ಟ್ಯಾಬ್ಲೆಟ್ ಹಾಗೂ ಸ್ಮಾರ್ಟ್‌ಟಿವಿ ವಿಚಾರದಲ್ಲಿ ಇದು ಸಾಮಾನ್ಯ ಪ್ರಕ್ರಿಯೆ. ಆದರೆ, ಇನ್ಮುಂದೆ ಈ ರೀತಿಯ ಕೆಲಸ ಮಾಡಬೇಡಿ.

ಹೌದು, ಹೊಸ ಸ್ಮಾರ್ಟ್‌ಫೋನ್‌ಗಳು ಲಾಂಚ್ ಆದರೆ ಸಾಕು ಅದೆಷ್ಟೋ ಬಳಕೆದಾರರು ತಮ್ಮ ಬಳಿ ಇರುವ ಹಳೆಯ ಸ್ಮಾರ್ಟ್ ಡಿವೈಸ್‌ಗಳನ್ನು ಕೈ ಬಿಟ್ಟು ಹೊಸ ಸ್ಮಾರ್ಟ್‌ಫೋನ್ ಅಥವಾ ಸ್ಮಾರ್ಟ್ ಡಿವೈಸ್ ಖರೀದಿ ಮಾಡಲು ಮುಂದಾಗುತ್ತಾರೆ. ಹೊಸ ಸ್ಮಾರ್ಟ್ ಡಿವೈಸ್ ಖರೀದಿ ಮಾಡಿದ ಖುಷಿಯಲ್ಲಿ ಇಲ್ಲಿಯವರೆಗೂ ಬಳಕೆ ಮಾಡಿಕೊಂಡು ಬಂದ ಹಳೆಯ ಡಿವೈಸ್ ಅನ್ನು ಮನೆಯಲ್ಲಿರುವ ಕಬೋರ್ಡ್‌ನಲ್ಲೋ ಅಥವಾ ಇನ್ಯಾವುದೋ ಸ್ಥಳದಲ್ಲಿ ಇಟ್ಟುಬಿಡುತ್ತೇವೆ. ಆದರೆ ಇವುಗಳ ಮೂಲಕ ನಿಮ್ಮ ಮನೆಯ ಅಂದವನ್ನು ಹೆಚ್ಚು ಆಕರ್ಷಕವಾಗಿ ಮಾಡಬಹುದು ಎಂಬುದು ನಿಮಗೆ ಗೊತ್ತಾ!?.
ಡಿಜಿಟಲ್ ಫೋಟೋ ಫ್ರೇಮ್ ಆಗಿ ಬಳಸಬಹುದು
ಸಾಮಾನ್ಯವಾಗಿ ಹಳೆಯ ಫೋನ್‌ಗಳು ಸ್ವಲ್ಪವಾದರೂ ಕೆಲಸ ಮಾಡುತ್ತವೆ ಎಂದಾದರೆ ಅವುಗಳನ್ನು ಡಿಜಿಟಲ್ ಫೋಟೋ ಫ್ರೇಮ್ ಆಗಿ ಬಳಕೆ ಮಾಡಬಹುದು. ಮಾರುಕಟ್ಟೆಯಲ್ಲಿ ಡಿಜಿಟಲ್ ಫೋಟೋ ಫ್ರೇಮ್ ಖರೀದಿ ಮಾಡಬೇಕು ಎಂದರೆ ಹೆಚ್ಚಿನ ಬೆಲೆ ನೀಡಬೇಕು. ಆದರೆ, ಮನೆಯಲ್ಲೇ ಉಪಯೋಗಿಸದೆ ಬಿದ್ದಿರುವ ಸ್ಮಾರ್ಟ್‌ಫೋನ್, ಟ್ಯಾಬ್ ಅಥವಾ ಸ್ಮಾರ್ಟ್‌ಟಿವಿಯನ್ನು ಡಿಜಿಟಲ್ ಫೋಟೋ ಫ್ರೇಮ್ ಆಗಿ ಬಳಕೆ ಮಾಡುವ ಮೂಲಕ ಮನೆಯ ಅಂದವನ್ನು ಹೆಚ್ಚಿಸುವ ಜೊತೆಗೆ ವಿಶೇಷ ಅನುಭವವನ್ನು ಪಡೆದುಕೊಳ್ಳಬಹುದಾಗಿದೆ.
ಇದರಿಂದ ಪ್ರಯೋಜನ ಏನು?
ಡಿಜಿಟಲ್ ಫ್ರೇಮ್ ಅಂದರೆ ಒಂದು ಫ್ರೇಮ್ ನಲ್ಲಿ ಕೇವಲ ಒಂದೇ ಫೋಟೋ ಇರುವುದಿಲ್ಲ. ಬದಲಾಗಿ ನಿಮಗೆ ಇಷ್ಟವಾದ ಹಲವು ಫೋಟೋಗಳನ್ನು ಇರಿಸಬಹುದು. ಇವು ನೀವು ನಿಗದಿ ಪಡಿಸಿದ ಸಮಯಕ್ಕೆ ಆಟೋಮ್ಯಾಟಿಕ್ ಆಗಿ ಬದಲಾಗುತ್ತಾ ಹೋಗುತ್ತವೆ. ಹೀಗಾಗಿ ಒಮ್ಮೆ ಸೆಟ್ ಮಾಡಿಬಿಟ್ಟರೆ ಹಲವಾರು ದಿನಗಳವರೆಗೆ ಅಥವಾ ತಿಂಗಳುಗಳ ಕಾಲ ಹಾಗೆ ಸುಮ್ಮನೆ ಬಿಡಬಹುದು. ಈ ಮೂಲಕ ಹಲವು ಫೋಟೋಗಳಿಗೆ ವಿವಿಧ ಫ್ರೇಮ್ ಖರೀದಿ ಮಾಡುವ ತ್ರಾಸದಾಯಕ ಕೆಲಸ ತಪ್ಪಿದಂತೆ ಆಗುತ್ತದೆ. ಹಾಗೆಯೇ ಹಣವೂ ಉಳಿತಾಯ ಆಗುತ್ತದೆ. ಇನ್ನು ಈ ಡಿಜಿಟಲ್ ಫೋಟೋ ಫ್ರೇಮ್‌ಗಾಗಿ ಈ ಹಂತಗಳನ್ನು ಅನುಸರಿಸಿ.

ಹಂತ 1
ನಿಮ್ಮ ಸ್ಮಾರ್ಟ್‌ಫೋನ್ ಅಥವಾ ಇತರೆ ಸ್ಮಾರ್ಟ್‌ಡಿವೈಸ್‌ಗಳನ್ನು ಡಿಜಿಟಲ್ ಫ್ರೇಮ್ ಆಗಿ ಪರಿವರ್ತಿಸಬೇಕಾದರೆ ಮೊದಲು ಗೂಗಲ್ ಪ್ಲೇ ಸ್ಟೋರ್ ಅಥವಾ ಆಪಲ್ ಆಪ್ ಸ್ಟೋರ್‌ಗೆ ಭೇಟಿ ನೀಡಬೇಕಿದೆ. ಇದರಲ್ಲಿ ಡಿಜಿಟಲ್ ಫ್ರೇಮ್‌ಗೆ ಪರಿವರ್ತಿಸಲು ಅನುವು ಮಾಡಿಕೊಡುವ ಹಲವಾರು ಆಪ್‌ಗಳು ಲಭ್ಯವಿದ್ದು, ನಿಮ್ಮ ಡಿವೈಸ್‌ಗೆ ಯಾವುದು ಸೂಕ್ತ ಅನಿಸುತ್ತದೆಯೋ ಅದನ್ನು ಆಯ್ಕೆ ಮಾಡಿಕೊಳ್ಳಿ, ಉದಾಹರಣೆಗೆ ಆಂಡ್ರಾಯ್ಡ್ ಡಿವೈಸ್ ಬಳಕೆದಾರರು Fotoo-Digital Photo Frame ಆಪ್ ಬಳಕೆ ಮಾಡಹುದಾಗಿದ್ದ, ಐಓಎಸ್ ಬಳಕೆದಾರರು Liveframe ಆಪ್ ಬಳಸಬಹುದು.
ಹಂತ 2
ಇದಾದ ಬಳಿಕ ನೀವು ಕೆಲವು ಮೂಲಭೂತ ಅನುಮತಿಗಳನ್ನು ಆಪ್‌ಗಳಿಗೆ ನೀಡಬೇಕಾಗುತ್ತದೆ. ಈ ಮೂಲಕ ನಿಮ್ಮ ಹಳೆಯ ಡಿವೈಸ್ ಹೊಸ ರೀತಿಯ ಕೆಲಸಕ್ಕೆ ಸಿದ್ಧವಾಗುತ್ತದೆ. ಬಳಿಕ ಹೊಸ ಡಿಸ್‌ಪ್ಲೇ ನಿಮಗೆ ಕಾಣಿಸಿಕೊಳ್ಳಲಿದ್ದು, ಇದು ಪಾಪ್-ಅಪ್ ಆಗುತ್ತದೆ. ಅದರಲ್ಲಿ ಬೇಕಾದ ಕೆಲವು ಫೋಟೋಗಳನ್ನು ನಿಮ್ಮ ಫೋನ್‌ನ ಗ್ಯಾಲರಿಯಿಂದ ಅಥವಾ ಕ್ಲೌಡ್ ಸ್ಟೋರೇಜ್‌ನಿಂದ ಆಯ್ಕೆ ಮಾಡಬಹುದು.

ಹಂತ 3
ಇದಿಷ್ಟೇ ಅಲ್ಲ ಫೋಟೋಗಳನ್ನು ಆಡ್ ಮಾಡಿದ ಬಳಿಕ ಹಿನ್ನೆಲೆ ಸಂಗೀತ ಬೇಕು ಎಂದರೆ ಅದಕ್ಕೂ ಅವಕಾಶ ಇದೆ. ಇದರೊಂದಿಗೆ ಪ್ರತಿ ಫೋಟೋ ಎಷ್ಟು ಸಮಯಕ್ಕೆ ಬದಲಾಗಬೇಕು ಎಂಬ ಆಯ್ಕೆಯನ್ನು ಸೆಟ್ ಮಾಡಬೇಕಿದೆ. ನಂತರ ಓಕೆ ಬಟನ್ ಮೇಲೆ ಕ್ಲಿಕ್ ಮಾಡಿದರೆ ಸಾಕು ನಿಮ್ಮ ಡಿಜಿಟಲ್ ಫ್ರೇಮ್ ರೆಡಿಯಾಗುತ್ತದೆ. ಇದನ್ನು ಅಗತ್ಯ ಇರುವ ಪ್ರದೇಶದಲ್ಲಿ ಇಡಬಹುದು.


Click it and Unblock the Notifications








