ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ತಡೆಯಲು ಈ ಆಪ್ ಮೂಲಕ ದೂರು ಸಲ್ಲಿಸಿ!
ತಂತ್ರಜ್ಞಾನವನ್ನು ಸದುಪಯೋಗಪಡಿಸಿಕೊಂಡರೆ ಸದೃಢ ಸಮಾಜವನ್ನು ನಿರ್ಮಾಣ ಮಾಡಬಹುದು ಎಂಬುದಕ್ಕೆ ಇಂತಹ ಘಟನೆಗಳು ಸಾಕ್ಷಿ. ಯಾಕೆಂದರೆ ಸ್ಟಾಪ್ ಟೊಬ್ಯಾಕೊ ಆಪ್ ಮೂಲಕ ಹೊಗೆ ಬಿಡುವವರ ವಿರುದ್ಧ ಸಮರ ಸಾರಲಾಗುತ್ತಿದೆ. ಈ ಮೊದಲು ಮೂಕ ಪ್ರೇಕ್ಷಕರಂತೆ ಇರುತ್ತಿದ್ದ ಜನರು ಸೈಲೆಂಟ್ ಆಗಿಯೇ ಧೂಮಪಾನಿಗಳಿಗೆ ಹಾಗೂ ಮಾರುವವರಿಗೆ ಪಾಠ ಕಲಿಸುತ್ತಿದ್ದಾರೆ.
ಹೌದು, ಬೆಂಗಳೂರು ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸುವಲ್ಲಿ ಹಾಗೂ ಬಳಕೆ ಮಾಡುವಲ್ಲಿಯೂ ಮುಂಚೂಣಿಯಲ್ಲಿದೆ. ಅಂತೆಯೇ ಸಿಕ್ಕ ಸಿಕ್ಕಲ್ಲಿ ಧೂಮಪಾನ ಮಾಡಲು ಮುಂದಾಗುವವರ ವಿರುದ್ಧ ಹಾಗೂ ಮಾರುವವರ ವಿರುದ್ಧ ಈ ಸ್ಟಾಪ್ ಟೊಬ್ಯಾಕೊ ಆಪ್ ಮೂಲಕ ಕ್ರಮ ತೆಗೆದುಕೊಳ್ಳಲಾಗುತ್ತದೆ. ಈ ಆಪ್ ಅನ್ನು ಕೆಲವು ತಿಂಗಳ ಹಿಂದಷ್ಟೇ ಲಾಂಚ್ ಮಾಡಲಾಗಿದೆ. ಹಾಗಿದ್ರೆ, ಈ ಆಪ್‌ನಿಂದ ಏನೆಲ್ಲಾ ಲಾಭ?, ಇದನ್ನು ಬಳಕೆ ಮಾಡಿಕೊಂಡು ಧೂಮಪಾನಿಗಳ ವಿರುದ್ಧ ದೂರು ಸಲ್ಲಿಸುವುದು ಹೇಗೆ? ಎಂಬುದನ್ನು ವಿವರಿಸಲಾಗಿದೆ ಓದಿರಿ.

ದೂರು ದಾಖಲು ಮಾಡಿದ್ರೆ ಕ್ರಮ ಏನು? : ಈ ಆಪ್ ಮೂಲಕ ಮಕ್ಕಳಿಗೆ ಸಿಗರೇಟ್, ಬೀಡಿ ಹಾಗೂ ಇನ್ನಿತರೆ ಧೂಮಪಾನ ಸಂಬಂಧಿ ವಸ್ತುಗಳನ್ನು ಮಾರಾಟ ಮಾಡುವವರ ವಿರುದ್ಧ ಹಾಗೂ ಧೂಮಪಾನ ನಿಷೇಧ ಫಲಕಗಳನ್ನು ಪ್ರದರ್ಶಿಸದ ಮತ್ತು ಧೂಮಪಾನ ಮಾಡಲು ಜನರಿಗೆ ಅವಕಾಶ ನೀಡುವ ಅಂಗಡಿ ಮಾಲೀಕರಿಗೆ ದಂಡ ವಿಧಿಸಲಾಗುತ್ತಿದೆ. ಇದು ನಿರಂತರವಾದರೆ ಅವರ ಅಂಗಡಿಯನ್ನೇ ಎತ್ತಂಗಡಿ ಮಾಡಲಾಗುತ್ತದೆ.
ಅದರಂತೆ ಬೆಂಗಳೂರಿನ ಗಾಂಧಿನಗರ, ಎಚ್‌ಎಸ್‌ಆರ್ ಲೇಔಟ್ ಮತ್ತು ಬಾಣಸವಾಡಿಯಲ್ಲಿ ಇದುವರೆಗೆ ಗರಿಷ್ಠ ಸಂಖ್ಯೆಯ ದೂರುಗಳು ದಾಖಲಾಗಿದ್ದು, ಬೆಂಗಳೂರು ಹೊರತುಪಡಿಸಿ ಬೆಳಗಾವಿ ಮತ್ತು ದಕ್ಷಿಣ ಕನ್ನಡದಲ್ಲೂ ಪ್ರಕರಣಗಳು ವರದಿಯಾಗಿವೆ. ಆರಂಭದಲ್ಲಿ ಅಂಗಡಿ ಮಾಲೀಕರ ವಿರುದ್ಧ ಕ್ರಮ ಜರುಗಿಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ನಿಷೇಧದ ಸ್ಥಳದಲ್ಲಿ ಹೊಗೆ ಬಿಡುವವರ ವಿರುದ್ಧ ಕ್ರಮ ತೆಗೆದುಕೊಳ್ಳಲು ಅಧಿಕಾರಿಗಳು ಮುಂದಾಗಿದ್ದಾರೆ. ಅಂತೆಯೇ ಈ ಆಪ್ ಬಳಕೆ ಮಾಡುವುದು ಹೇಗೆಂದು ಗಮನಿಸಿ.

ಹಂತ 1:ಮೊದಲು ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ನಲ್ಲಿ ಗೂಗಲ್ ಪ್ಲೇ ಸ್ಟೋರ್‌ಗೆ ಹೋಗಿ ಸ್ಟಾಪ್ ಟೊಬ್ಯಾಕೊ ಆಪ್ ಅನ್ನು ಇನ್‌ಸ್ಟಾಲ್ ಮಾಡಿಕೊಳ್ಳಿ. ನಂತರ ಅದಕ್ಕೆ ಕೆಲವು ಅನುಮತಿಗಳನ್ನು ನೀಡಲಾಗುತ್ತದೆ. ಅದರಲ್ಲಿ ಪ್ರಮುಖವಾಗಿ ಕ್ಯಾಮೆರಾ, ಗ್ಯಾಲರಿ ಹಾಗೂ ಜಿಪಿಎಸ್ ಆಯ್ಕೆಗೆ ಅನುಮತಿ ಕೇಳುತ್ತದೆ. ಇದಕ್ಕೆ ಒಪ್ಪಿಗೆ ನೀಡಿ.
ಹಂತ 2 : ಇದಾದ ಬಳಿಕ ನಿಷೇಧಿತ ಪ್ರದೇಶದಲ್ಲಿ ಧೂಮಪಾನ ಮಾಡುವವರ ಫೋಟೋವನ್ನು ಸೆರೆಹಿಡಿಯಿರಿ. ನಂತರ ಅದನ್ನು ಸ್ಟಾಪ್ ಟೊಬ್ಯಾಕೊ ಆಪ್‌ಗೆ ಡೌನ್‌ಲೋಡ್ ಮಾಡಿ. ಈ ವೇಳೆ ಜಿಪಿಎಸ್ ಸಕ್ರಿಯವಾಗಲು ಅನುಮತಿ ಕೇಳುತ್ತದೆ. ನಂತರ ಫೋಟೋ ಅಪ್‌ಲೋಡ್ ಆಗುತ್ತಿದ್ದಂತೆಯೇ ನಿಯಮ ಉಲ್ಲಂಘನೆಯ ಸ್ಥಳವು ಆಟೋಮ್ಯಾಟಿಕ್ ಆಗಿ ಫೀಡ್ ಆಗುತ್ತದೆ.
ಹಂತ 3 : ನಂತರದಲ್ಲಿ ನೀವು ದೂರು ಸಲ್ಲಿಸಿ ಬಟನ್ ಮೇಲೆ ಕ್ಲಿಕ್ ಮಾಡಿ. ಈ ದೂರು ಆಯಾ ಜಿಲ್ಲೆಯ ತಂಬಾಕು ನಿಯಂತ್ರಣ ವಿಭಾಗಕ್ಕೆ ತಲುಪಲಿದ್ದು, ಸಂಬಂಧಿಸಿದ ಅಧಿಕಾರಿಗಳು ನೀವು ಸಲ್ಲಿಕೆ ಮಾಡಲಾದ ಫೋಟೋ ಹಾಗೂ ಜಿಪಿಎಸ್ ಆಧಾರಿತ ಸ್ಥಳಕ್ಕೆ ಬಂದು ಅಂಗಡಿ ಮಾಲೀಕರ ವಿರುದ್ಧ ಕ್ರಮ ಜರುಗಿಸುತ್ತಾರೆ. ಈ ಪ್ರಕ್ರಿಯೆ ಆರು ದಿನಗಳ ಒಳಗಾಗಿ ನಡೆಯುತ್ತದೆ.

ಯಾವಾಗ ದೂರು ಸಲ್ಲಿಕೆ ಮಾಡಬಹುದು?: ಕೆಲವು ಕಡೆ ಧೂಮಪಾನ ಮಾಡಲು ಅನುಮತಿ ನೀಡಲಾಗಿದೆ. ನೀವು ಅಲ್ಲಿ ಹೋಗಿ ಫೋಟೋ ತೆಗೆದುಕಳುಹಿಸಿದರೆ ಯಾವುದೇ ಪ್ರಯೋಜನ ಇರುವುದಿಲ್ಲ ಹೀಗಾಗಿ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವಾಗ, ಅಪ್ರಾಪ್ತ ವಯಸ್ಕರಿಗೆ ತಂಬಾಕು ಮಾರಾಟ ಮಾಡುವಾಗ, ಶಿಕ್ಷಣ ಸಂಸ್ಥೆಗಳ 100 ಅಡಿ ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ಮಾಡುವಾಗ, ಎಚ್ಚರಿಕೆಯ ಸಂದೇಶಗಳಿಲ್ಲದೆ ಸಿಗರೇಟುಗಳನ್ನು ಮಾರಾಟ ಮಾಡುವಾಗ ನಾಗರೀಕರು ದೂರು ಸಲ್ಲಿಸಬಹುದಾಗಿದೆ.


Click it and Unblock the Notifications








