LokSabha Election 2024: ಮತದಾರರನ್ನು ಸೆಳೆಯಲು ಹಣ, ಗಿಫ್ಟ್ ಏನಾದರೂ ನೀಡಲಾಗುತ್ತಿದೆಯಾ? ಫೋನ್‌ನಲ್ಲೇ ದೂರು ನೀಡಿ
ಲೋಕಸಭಾ ಚುನಾವಣೆಯ (LokSabha Election 2024) ಕಾವು ಭಾರತದಲ್ಲಿ ಜೋರಾಗಿದೆ. ಅದರಲ್ಲೂ ಕರ್ನಾಟಕದಲ್ಲಂತೂ ಇದು ದೊಡ್ಡಮಟ್ಟದ್ದಾಗಿದೆ. ಟಿಕೆಟ್ ಸಿಗದ ಹಿನ್ನೆಲೆ ತನ್ನದೇ ಪಕ್ಷದ ವಿರುದ್ಧ ಸಾಕಷ್ಟು ಆಕಾಂಕ್ಷಿಗಳು ತೀವ್ರ ರೂಪದಲ್ಲಿ ವಾಗ್ದಾಳಿ ನಡೆಸಿ ಪಕ್ಷೇತರರಾಗಿ ಸ್ಪರ್ಧಿಸಲು ಮುಂದಾಗಿದ್ದಾರೆ. ಈ ನಡುವೆ ಕೆಲವು ಕಡೆ ಆಯೋಗ ಕಟ್ಟು ನಿಟ್ಟಿನ ಕ್ರಮಗಳನ್ನು ತೆಗೆದುಕೊಂಡಿದ್ದು, ಮತದಾರರನ್ನು ಸೆಳೆಯಲು ಹಣ, ಎಣ್ಣೆ ಅಥವಾ ಏನನ್ನಾದರೂ ಉಡುಗೊರೆ ನೀಡುವವರ ಮೇಲೆ ಹದ್ದಿನ ಕಣ್ಣಿಟ್ಟಿದೆ.
ಹೌದು, ಚುನಾವಣೆ ಬಂದರೆ ಸಾಕು ಸಾಕಷ್ಟು ಕಡೆ ವಾರಸುದಾರರೇ ಇಲ್ಲದ ಹಣ ಎಲ್ಲೆಲ್ಲಿಂದಲೋ ಪತ್ತೆಯಾಗಿಬಿಡುತ್ತದೆ. ಈ ಮೂಲಕ ಸಾಕಷ್ಟು ಜನರು ಹಣವನ್ನು ಹಂಚಿ ಮತ ಪಡೆದು ಪ್ರಜಾಪ್ರಭುತ್ವದ ಶಿಸ್ತನ್ನು ಹಾಳು ಮಾಡುವ ಕೆಲಸ ಮಾಡುತ್ತಿದ್ದಾರೆ. ಅಂತವರ ವಿರುದ್ಧ ಚುನಾವಣಾ ಆಯೋಗ (Election Commission) ಸಮರ ಸಾರಿದ್ದು, ನಿಮ್ಮ ಸುತ್ತ ಮುತ್ತ ಯಾರಾದರೂ ಈ ಕೃತ್ಯದಲ್ಲಿ ತೊಡಗಿದ್ದರೆ ನಿಮ್ಮ ಫೋನ್ ಮೂಲಕವೇ ಸುಲಭವಾಗಿ ಆಯೋಗಕ್ಕೆ ದೂರು ನೀಡಬಹುದು. ಈ ಮೂಲಕ ಉತ್ತಮ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಸಹಕಾರ ಮಾಡಬಹುದು. ಹಾಗಿದ್ರೆ, ಬನ್ನಿ ಈ ಸಂಬಂಧ ದೂರನ್ನು ಫೋನ್ ಮೂಲಕ ಹೇಗೆ ಸಲ್ಲಿಕೆ ಮಾಡುವುದು ಅನ್ನೋದನ್ನು ತಿಳಿಯೋಣ.

ಲೋಕಸಭೆ ಚುನಾವಣೆ 2024 ಕ್ಕೆ ಎಲ್ಲಾ ತಯಾರಿ ಆಗುತ್ತಿದೆ. ಈ ನಡುವೆ ಚುನಾವಣೆಯನ್ನು ಉತ್ತಮವಾಗಿ ನಡೆಸಲು ಚುನಾವಣಾ ಆಯೋಗ cVIGIL ಆಪ್ ಅನ್ನು ಈಗಾಗಲೇ ಪರಿಚಯಿಸಿರುವುದು ಬಹುಪಾಲು ಜನರಿಗೆ ತಿಳಿದ ವಿಚಾರ. ಈ ಆಪ್ ಬಳಕೆ ಮಾಡಿಕೊಂಡು ಮಾದರಿ ನೀತಿ ಸಂಹಿತೆ ಉಲ್ಲಂಘನೆಗಳನ್ನು ವರದಿ ಮಾಡಬಹುದಾಗಿದೆ. ಅಂದರೆ ನಾಗರಿಕರು ತಾವು ನೋಡಿದ ಯಾವುದೇ ಪ್ರಕರಣಗಳನ್ನು ವರದಿ ಮಾಡಲು ಇದು ಸಹಾಯಕ.
ಲೋಕಸಭೆ ಚುನಾವಣೆ ಏಪ್ರಿಲ್ 19 ರಿಂದ ಏಳು ಹಂತಗಳಲ್ಲಿ ಮತದಾನ ನಡೆಯಲಿದ್ದು, ಜೂನ್ 4 ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ. ಅಲ್ಲಿಯವೆಗೂ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ. ಈ ಸಂಹಿತೆಯನ್ನು ಯಾರಾದರೂ ಉಲ್ಲಂಘನೆ ಮಾಡಿದ್ರೆ cVIGIL ಆಪ್ ಮೂಲಕ ನೀವು ವರದಿ ಮಾಡಬಹುದು. ಈ ಆಪ್ ಅನ್ನು 2018 ರಲ್ಲಿ ಲಾಂಚ್ ಮಾಡಲಾಗಿದ್ದು, ಆಪ್ ಸ್ಟೋರ್ ಮತ್ತು ಪ್ಲೇ ಸ್ಟೋರ್ ಎರಡರಿಂದಲೂ ಇನ್‌ಸ್ಟಾಲ್ ಮಾಡಿಕೊಳ್ಳಬಹುದು. ಹಾಗಿದ್ರೆ, ತಡಯಾಕೆ ಬನ್ನಿ ಕೆಲವು ಸರಳ ಹಂತದ ಮೂಲಕ ದೂರನ್ನು ದಾಖಲು ಮಾಡುವುದು ಹೇಗೆ ಎಂದು ತಿಳಿಯೋಣ.

ಹಂತ 1:ಮೊದಲು ನಿಮ್ಮ ಫೋನ್‌ನಲ್ಲಿ ಈ cVIGIL ಆಪ್ ಅನ್ನು ಇನ್‌ಸ್ಟಾಲ್ ಮಾಡಿಕೊಳ್ಳಿ. ನಂತರ ಲಾಗ್ ಇನ್ ಮಾಡುವ ಮೂಲಕ ಅಥವಾ ಅನಾಮಧೇಯ ಪ್ರೊಫೈಲ್ ಬಳಕೆ ಮಾಡುವ ಮೂಲಕ ಈ ಆಪ್ ಅನ್ನು ಬಳಕೆ ಮಾಡಬಹುದು ಹಾಗೂ ದೂರು ನೀಡಬಹುದು.
ಹಂತ 2: ಆಪ್‌ನಲ್ಲಿ ದೂರನ್ನು ನೋಂದಾಯಿಸಲು ನಿಮ್ಮ ಫೋನ್‌ನ ಕ್ಯಾಮರಾ ಮತ್ತು ಸ್ಟೋರೇಜ್‌ಗೆ ಪ್ರವೇಶವನ್ನು ನೀಡಬೇಕಾಗುತ್ತದೆ. ಪರ್ಯಾಯವಾಗಿ. ಇದು ಇಷ್ಟ ಇಲ್ಲ ಎಂದಾದರೆ ನೀವು cVIGIL ವೆಬ್‌ಸೈಟ್ ಮೂಲಕ ಈ ಕೆಲಸ ಮಾಡಬಹುದು.
ಹಂತ 3: ಇದೆಲ್ಲಾ ಆದ ಮೇಲೆ ಉಲ್ಲಂಘನೆಗಳ ಪಟ್ಟಿಯನ್ನು ಪ್ರದರ್ಶಿಸುತ್ತದೆ. ಅದರಲ್ಲಿ ನೀವು ಹಣ ವಿತರಣೆ, ಉಡುಗೊರೆಗಳು/ಕೂಪನ್‌ಗಳ ವಿತರಣೆ, ಮದ್ಯದ ವಿತರಣೆ, ಅನುಮತಿಯಿಲ್ಲದ ಪೋಸ್ಟರ್‌ಗಳು/ಬ್ಯಾನರ್‌ಗಳು, ಬಂದೂಕುಗಳ ಪ್ರದರ್ಶನ, ಬೆದರಿಕೆ, ವಾಹನಗಳು ಅಥವಾ ಅನುಮತಿಯಿಲ್ಲದೆ ಬೆಂಗಾವಲು.
ಪಾವತಿಸಿದ ಸುದ್ದಿ, ಆಸ್ತಿ ವಿರೂಪ, ಮತದಾನದ ದಿನದಂದು ಮತದಾರರ ಸಾಗಣೆ, ಮತಗಟ್ಟೆಯ 200 ಮೀಟರ್ ವ್ಯಾಪ್ತಿಯಲ್ಲಿ ಪ್ರಚಾರ, ನಿಷೇಧದ ಅವಧಿಯಲ್ಲಿ ಪ್ರಚಾರ, ಧಾರ್ಮಿಕ ಅಥವಾ ಕೋಮು ಭಾಷಣಗಳು/ಮೆಸೆಜ್‌ಗಳು, ಅನುಮತಿ ಅವಧಿ ಮೀರಿ ಸ್ಪೀಕರ್‌ಗಳ ಬಳಕೆ, ಘೋಷಣೆ ಇಲ್ಲದೆ ಪೋಸ್ಟರ್‌ಗಳನ್ನು ಹಾಕುವುದು ಮತ್ತು ಸಾರಿಗೆ ರ್ಯಾಲಿಗಳಿಗಾಗಿ ಸಾರ್ವಜನಿಕರು ಎಂಬ ಆಯ್ಕೆಗಳು ಕಾಣಿಸಿಕೊಳ್ಳುತ್ತವೆ.

ಹಂತ 4: ಈ ವೇಳೆ ನಿಮ್ಮ ಕಣ್ಣಿಗೆ ಕಂಡಿದ್ದನ್ನು ನೀವು ವರದಿ ಮಾಡಲು ಈ ಆಯ್ಕೆಗಳ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ. ಇದರಲ್ಲಿ ಚಿತ್ರಗಳನ್ನು ಅಪ್‌ಲೋಡ್ ಮಾಡಬಹುದು ಜೊತೆಗೆ ಎರಡು ನಿಮಿಷಗಳ ವಿಡಿಯೋವನ್ನೂ ಸಹ ರೆಕಾರ್ಡ್ ಮಾಡಿ ಅಪ್‌ಲೋಡ್ ಮಾಡಬಹುದು. ಇದೆಲ್ಲಾ ಆದ ನಂತರ ಎಲ್ಲಾ ಸಂಬಂಧಿತ ವಿವರಗಳನ್ನು ಭರ್ತಿ ಮಾಡಿ ಮತ್ತು ದೂರನ್ನು ಸಲ್ಲಿಸಿ. ಇಷ್ಟು ಮಾಡಿದ್ರೆ ಸಂಬಂಧಿತ ಅಧಿಕಾರಿಗಳು ಅಂತಹವರಿಗೆ ಸರಿಯಾಗಿ ಬಿಸಿ ಮುಟ್ಟಿಸುತ್ತಾರೆ.


Click it and Unblock the Notifications








