FASTag: ಫಾಸ್ಟ್ಯಾಗ್ ಬಳಕೆದಾರರಿಗೆ ಇಂದೇ ಕೊನೇ ದಿನ.. ಕೂಡಲೇ ಈ ಕೆಲಸ ಮಾಡಿ
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹೊರಡಿಸಿದ ಒಂದು ವಾಹನ, ಒಂದು ಫಾಸ್ಟ್ಯಾಗ್ ಉಪಕ್ರಮದ ಅನುಸರಣೆಗೆ ಇಂದು ಕೊನೇ ದಿನವಾಗಿದೆ. ಇದರಿಂದಾಗಿ ಇಂದೇ ಯಾರೆಲ್ಲಾ ಫಾಸ್ಟ್ಯಾಗ್ (FASTag) ಬಳಕೆ ಮಾಡುತ್ತಾರೋ ಅವರು ಇಂದು ಕಡ್ಡಾಯವಾಗಿ ಕೆವೈಸಿ ಪೂರ್ಣಗೊಳಿಸಬೇಕಿದೆ.
ಹೌದು, ಪೇಟಿಎಂನಲ್ಲಿ ಆದ ಅನಿಶ್ಚಿತ ಬೆಳವಣಿಗೆಗಳಿಂದ ಫಾಸ್ಟ್ಯಾಗ್ ಗ್ರಾಹಕರಿಗೆ ತಲೆನೋವು ಉಂಟಾಗಿದೆ. ಈ ನಡುವೆ ಫಾಸ್ಟ್ಯಾಗ್ ಕೆವೈಸಿ ಅನ್ನು ಪೂರ್ಣಗೊಳಿಸಲು ಫೆಬ್ರವರಿ 29 ಅಂದರೆ ಇಂದು ಕೊನೆಯ ದಿನವಾಗಿದೆ. ಹಿಂದಿನ ಆದೇಶದ ಪ್ರಕಾರ ಇಂದಿನಿಂದ ಕೆವೈಸಿ ಪೂರ್ಣ ಆಗದ ಫಾಸ್ಟ್ಯಾಗ್ ಅನ್ನು ನಿಷ್ಕ್ರಿಯಗೊಳಿಸಲಾಗುತ್ತದೆ. ಹಾಗಿದ್ರೆ, ನೀವು ಇಂದು ಮಾಡಬೇಕಿರುವುದು ಏನು? ಈ ಗಡುವನ್ನು ಏನಾದರೂ ಮುಂದೂಡಬಹುದಾ ಅನ್ನೋ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಫಾಸ್ಟ್ಯಾಗ್ ಕೆವೈಸಿ: ಇಂದು ಫಾಸ್ಟ್ಯಾಗ್ ಕೆವೈಸಿ (FASTag KYC) ನವೀಕರಣಕ್ಕೆ ಕೊನೆಯ ದಿನಾಂಕ ನಿಗದಿಯಾಗಿದ್ದು, ಕೆಲವು ವರದಿ ಪ್ರಕಾರ, ಪೇಟಿಎಂ ಫಾಸ್ಟ್ಯಾಗ್ ಬಳಕೆದಾರರು ಎದುರಿಸುತ್ತಿರುವ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು, ಎನ್‌ಎಚ್‌ಎಐ ಗಡುವನ್ನು ಒಂದು ತಿಂಗಳವರೆಗೆ ವಿಸ್ತರಿಸಬಹುದು ಎಂದೂ ಸಹ ಮಾಹಿತಿ ಇದೆ. ಎನ್‌ಎಚ್‌ಎಐ ಈ ಹಿಂದೆ ಮಾರ್ಚ್ 1 ರಿಂದ 'ಒಂದು ವಾಹನ, ಒಂದು ಫಾಸ್ಟ್ಯಾಗ್' (One vehicle, one FASTag) ಉಪಕ್ರಮವನ್ನು ಜಾರಿಗೆ ತರಲು ಪ್ರಸ್ತಾಪಿಸಿತ್ತು. ಆದರೆ, ಪೇಟಿಎಂನಲ್ಲಿ ಆಗಿರುವ ಬಿಕ್ಕಟ್ಟಿನ ದೃಷ್ಟಿಯಿಂದ ಈ ನಿಯಮ ಜಾರಿಗೆ ತರಲು ಹೆಚ್ಚಿನ ಸಮಯ ನೀಡಬಹುದು ಎಂದೂ ಸಹ ಹೇಳಲಾಗಿದೆ.
ಏನಿದು ಒಂದು ವಾಹನ, ಒಂದು ಫಾಸ್ಟ್ಯಾಗ್? : ಎಲೆಕ್ಟ್ರಾನಿಕ್ ಟೋಲ್ ಸಂಗ್ರಹ ವ್ಯವಸ್ಥೆಯ ದಕ್ಷತೆಯನ್ನು ಹೆಚ್ಚಿಸಲು ಮತ್ತು ಟೋಲ್ ಪ್ಲಾಜಾಗಳಲ್ಲಿ ತಡೆರಹಿತ ಚಲನೆಯನ್ನು ಖಚಿತಪಡಿಸಿಕೊಳ್ಳಲು, 'ಒಂದು ವಾಹನ, ಒಂದು ಫಾಸ್ಟ್‌ಟ್ಯಾಗ್' ಉಪಕ್ರಮವನ್ನು ಪರಿಚಯಿಸಲಾಗಿದೆ. ಇದು ಬಹು ವಾಹನಗಳಿಗೆ ಏಕ ಫಾಸ್ಟ್‌ಟ್ಯಾಗ್ ಅನ್ನು ಬಳಕೆ ಮಾಡುವ ಹಾಗೂ ನಿರ್ದಿಷ್ಟ ವಾಹನಕ್ಕೆ ಬಹು ಫಾಸ್ಟ್ಯಾಗ್ಗಳನ್ನು ಲಿಂಕ್ ಮಾಡುವ ಬಳಕೆದಾರರನ್ನು ತಡೆಯುವ ಗುರಿಯನ್ನು ಹೊಂದಿದೆ.

ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಗ್ರಾಹಕರಿಗೆ ಸೂಚನೆ: ಈ ತಿಂಗಳ ಆರಂಭದಲ್ಲಿ, ಭಾರತೀಯ ರಿಸರ್ವ್ ಬ್ಯಾಂಕ್ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್ (ಪಿಪಿಬಿಎಲ್) ನ ಗ್ರಾಹಕರು ಮತ್ತು ವ್ಯಾಪಾರಿಗಳಿಗೆ ಮಾರ್ಚ್ 15 ರೊಳಗೆ ತಮ್ಮ ಖಾತೆಗಳನ್ನು ಇತರ ಬ್ಯಾಂಕ್‌ಗಳಿಗೆ ವರ್ಗಾಯಿಸಲು ಸಲಹೆ ನೀಡಿತ್ತು. ಜೊತೆಗೆ ಫಾಸ್ಟ್ಯಾಗ್‌ಗೆ ಸಂಬಂಧಿಸಿದಂತೆ, ಲಭ್ಯವಿರುವ ಬ್ಯಾಲೆನ್ಸ್‌ವರೆಗೆ ಟೋಲ್‌ಗಳನ್ನು ಪಾವತಿಸಲು ಬಳಕೆದಾರರು ತಮ್ಮ ಅಸ್ತಿತ್ವದಲ್ಲಿರುವ ಫಾಸ್ಟ್‌ಟ್ಯಾಗ್‌ಗಳನ್ನು ಬಳಸಬಹುದು ಎಂದು ಸಹ ತಿಳಿಸಲಾಗಿತ್ತು. ಆದರೆ ಮಾರ್ಚ್ 15, 2024 ರ ನಂತರ, ಪೇಟಿಎಂ ಪಾವತಿಗಳ ಬ್ಯಾಂಕ್ ನೀಡಿದ ಫಾಸ್ಟ್ಯಾಗ್‌ಗಳಿಗೆ ಯಾವುದೇ ಹೆಚ್ಚಿನ ಹಣ ಅಥವಾ ಟಾಪ್-ಅಪ್‌ಗಳನ್ನು ಅನುಮತಿಸಲಾಗುವುದಿಲ್ಲ ಎಂದೂ ಸಹ ತಿಳಿಸಿದೆ.
ಆನ್‌ಲೈನ್‌ನಲ್ಲಿ ಫಾಸ್ಟ್ಯಾಗ್ ಕೆವೈಸಿ ಮಾಡುವುದು ಹೇಗೆ?
ಹಂತ 1: ಮೊದಲನೆಯದಾಗಿ ನೀವು ಬ್ಯಾಂಕ್‌ನೊಂದಿಗೆ ಲಿಂಕ್ ಆಗಿರುವ ಫಾಸ್ಟ್ಯಾಗ್ ವೆಬ್‌ಸೈಟ್‌ಗೆ ಭೇಟಿ ನೀಡಬೇಕು. ಇದಾದ ನಂತರದಲ್ಲಿ ನಿಮ್ಮ ಅಧಿಕೃತ ಮೊಬೈಲ್ ಸಂಖ್ಯೆ ಮತ್ತು ಓಟಿಪಿ ಬಳಕೆ ಮಾಡಿಕೊಂಡು ಲಾಗಿನ್ ಮಾಡಿ.

ಹಂತ 2: ಇದೆಲ್ಲಾ ಆದ ಮೇಲೆ ಮೈ ಪ್ರೊಫೈಲ್ ಅನ್ನು ಆಯ್ಕೆ ಮಾಡಿ ನಂತರ ಕೆವೈಸಿ ಎಂಬ ಆಯ್ಕೆ ಕಾಣಿಸಿಕೊಳ್ಳುತ್ತದೆ ಅದರ ಮೇಲೆ ಕ್ಲಿಕ್ ಮಾಡಿ. ಇಷ್ಟೆಲ್ಲಾ ಮಾಡಿದ ಮೇಲೆ ಅಗತ್ಯವಿರುವ ಮಾಹಿತಿಯನ್ನು ಭರ್ತಿ ಮಾಡಿ ಮತ್ತು ಸಬ್‌ಮಿಟ್ ಮಾಡಿ. ಇದರಲ್ಲಿ ನೀವು ಕೆವೈಸಿಗೆ ಅಗತ್ಯವಿರುವ ವಾಹನದ ಆರ್‌ಸಿ, ವಿಳಾಸ ಪುರಾವೆ, ಪಾಸ್‌ಪೋರ್ಟ್ ಗಾತ್ರದ ಫೋಟೋ ಮುಂತಾದ ದಾಖಲೆಗಳನ್ನು ಒದಗಿಸಬೇಕು.
ಆನ್‌ಲೈನ್ ಸ್ಟೇಟಸ್ ಚೆಕ್ ಮಾಡುವುದು ಹೇಗೆ?
ಹಂತ 1: ಇದಕ್ಕಾಗಿ ನೀವು fastag.ihmcl.com. ಲಿಂಕ್‌ಗೆ ಭೇಟಿ ನೀಡಬೇಕು. ಇಲ್ಲಿ ಮೊಬೈಲ್ ಸಂಖ್ಯೆ ಮತ್ತು ಓಟಿಪಿ ಯೊಂದಿಗೆ ಲಾಗಿನ್ ಮಾಡಿ. ನಂತರ ಮೈ ಪ್ರೊಫೈಲ್‌ಗೆ ಹೋಗಿ ಮತ್ತು ಕೆವೈಸಿ ಸ್ಟೇಟಸ್ ವಿಭಾಗವನ್ನು ಆಯ್ಕೆಮಾಡಿ. ಇದನ್ನು ಕ್ಲಿಕ್ ಮಾಡಿದ್ರೆ ನಿಮಗೆ ಹೊಸ ವಿಂಡೋ ತೆರೆದುಕೊಳ್ಳುತ್ತದೆ ಅಲ್ಲಿ ಕೆವೈಸಿ ಸ್ಟೇಟಸ್ ತಿಳಿಯುತ್ತದೆ.


Click it and Unblock the Notifications








