ಕರ್ನಾಟಕ ಚುನಾವಣೆ 2023; ವೋಟರ್ ಐಡಿ ಇಲ್ಲದಿದ್ರೆ ಮತದಾನ ಮಾಡಲು ಈ ದಾಖಲೆ ಬಳಸಬಹುದು!
ಕರ್ನಾಟಕ ವಿಧಾನಸಭೆ ಚುನಾವಣೆ 2023ಗೆ ಅಭ್ಯರ್ಥಿಗಳು ಭರ್ಜರಿ ಪ್ರಚಾರದಲ್ಲಿ ತೊಡಗಿದ್ದಾರೆ. ಹಾಗೆಯೇ ಉತ್ತಮ ವ್ಯಕ್ತಿ ಯಾರು ನಮ್ಮ ಕ್ಷೇತ್ರಕ್ಕೆ ಎನ್ನುವ ಚರ್ಚೆಗಳು ಸಹ ಅಲ್ಲಲ್ಲಿ ನಡೆಯುತ್ತಿವೆ. ಈ ನಡುವೆ ಹಲವು ಮಂದಿ ಕಳೆದುಕೊಂಡಿರುವ ಅಥವಾ ಎಲ್ಲೋ ಇಟ್ಟಿರುವ ತಮ್ಮ ವೋಟರ್ ಐಡಿಯನ್ನು ಹುಡುಕುವ ಕಾಯಕದಲ್ಲಿದ್ದಾರೆ. ಆದರೆ, ಈ ವೋಟರ್ ಐಡಿ ಇಲ್ಲದೆಯೂ ನೀವು ಮತದಾನ ಮಾಡಬಹುದು.
ಹೌದು, ಇತ್ತೀಚೆಗೆ ಎಲ್ಲಾ ವಿಭಾಗಗಳಲ್ಲಿ ಆಧಾರ್ ಪ್ರಮುಖ ಪಾತ್ರ ವಹಿಸುತ್ತಿದೆ. ಅಷ್ಟೇ ಯಾಕೆ ಮತದಾನದ ಚೀಟಿಗೂ ಸಹ ಆಧಾರ್ ಅನ್ನು ಲಿಂಕ್ ಮಾಡಲು ಸೂಚಿಸಲಾಗಿದೆ. ಈ ಕಾರಣಕ್ಕೆ ಮತದಾನದ ಚೀಟಿ ಎಲ್ಲಿದೆ ಎಂಬ ಬಗ್ಗೆ ಬಹುಪಾಲು ಮಂದಿ ಗಮನ ಹರಿಸುವುದಿಲ್ಲ. ಅದಾಗ್ಯೂ ನೀವು ನಿಮ್ಮ ವೋಟರ್ ಐಡಿಯನ್ನು ಕಳೆದುಕೊಂಡಿದ್ದರೆ ಅಥವಾ ನಿಮ್ಮ ಬಳಿ ಇಲ್ಲದಿದ್ದರೂ ಮತ ಚಲಾಯಿಸಬಹುದು. ಅದು ಹೇಗೆ ಸಾಧ್ಯ ಅಂತೀರಾ ಇಲ್ಲಿದೆ ನೋಡಿ ಡಿಟೇಲ್ಸ್.

ಈ ದಾಖಲೆ ನಿಮ್ಮಲ್ಲಿ ಇದ್ದರೆ ಸಾಕು: ಭಾರತದ ಚುನಾವಣಾ ಆಯೋಗವು ಮಾನ್ಯವಾದ ಗುರುತಿನ ಪುರಾವೆಗಳಾಗಿ ಗುರುತಿಸಿರುವ ದಾಖಲೆಗಳಲ್ಲಿ ಪಾಸ್‌ಪೋರ್ಟ್, ಡ್ರೈವಿಂಗ್ ಲೈಸೆನ್ಸ್, ಪ್ಯಾನ್ ಕಾರ್ಡ್, ಕೇಂದ್ರ/ರಾಜ್ಯ ಸರ್ಕಾರ/ಪಿಎಸ್‌ಯುಗಳು/ಪಬ್ಲಿಕ್ ಲಿಮಿಟೆಡ್ ಕಂಪನಿಗಳು ನೀಡಿದ ಭಾವಚಿತ್ರಗಳೊಂದಿಗೆ ಸೇವಾ ಗುರುತಿನ ಚೀಟಿಗಳು, ಬ್ಯಾಂಕ್‌ಗಳು/ಪೋಸ್ಟ್ ನೀಡಿದ ಭಾವಚಿತ್ರವಿರುವ ಪಾಸ್‌ಬುಕ್‌ಗಳು ಸೇರಿವೆ.
ಹಾಗೆಯೇ ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಗಳು ನೀಡಿದ ಭಾವಚಿತ್ರವಿರುವ ಗುರುತಿನ ಚೀಟಿಗಳು, ಆಧಾರ್ ಕಾರ್ಡ್, ಎನ್‌ಪಿಆರ್ ಅಡಿಯಲ್ಲಿ ಆರ್‌ಜಿಐ ನೀಡಿದ ಸ್ಮಾರ್ಟ್ ಕಾರ್ಡ್, MNREGA ಜಾಬ್ ಕಾರ್ಡ್ ಮತ್ತು ಕಾರ್ಮಿಕ ಸಚಿವಾಲಯದ ಯೋಜನೆಯಡಿ ನೀಡಲಾದ ಆರೋಗ್ಯ ವಿಮೆ ಸ್ಮಾರ್ಟ್ ಕಾರ್ಡ್ ಅನ್ನು ಬಳಕೆ ಮಾಡಿಕೊಂಡು ನೀವು ನಿಮ್ಮ ಮತದಾನ ಪ್ರಕ್ರಿಯೆ ನಡೆಸಬಹುದು. ಆದರೆ, ನಿಮ್ಮ ಹೆಸರು ಮತದಾನದ ಗುರುತಿನ ಚೀಟಿ ಇರುವ ಪಟ್ಟಿಯಲ್ಲಿ ಕಡ್ಡಾಯವಾಗಿ ಇರಬೇಕು.
ನಿಮ್ಮ ಹೆಸರನ್ನು ಪಟ್ಟಿಯಲ್ಲಿ ಪತ್ತೆ ಮಾಡುವುದು ಹೇಗೆ?: ಭಾರತದ ಚುನಾವಣಾ ಆಯೋಗವು ಈಗಾಗಲೇ ಯಾರೆಲ್ಲಾ ಮತಚಲಾವಣೆ ಮಾಡಬಹುದು ಎಂಬ ಪಟ್ಟಿಯಲ್ಲಿ ಬಿಡುಗಡೆ ಮಾಡಿದೆ. ಇದಕ್ಕಾಗಿ ನೀವು ನಿಮ್ಮ ಸ್ಮಾರ್ಟ್‌ಡಿವೈಸ್ ಬಳಕೆ ಮಾಡಿಕೊಂಡು ಪರಿಶೀಲಿಸಬಹುದು. ಅಂದರೆ ಸ್ಮಾರ್ಟ್‌ಫೋನ್ ಅಥವಾ ಲ್ಯಾಪ್‌ಟಾಪ್‌ನಲ್ಲಿ https://eci.gov.in/ ಎಂದು ಟೈಪ್ ಮಾಡಿದರೆ ಸಾಕು.

ಇದಾದ ಬಳಿಕ ವೋಟರ್ ಲಿಸ್ಟ್‌ನಲ್ಲಿ ನಿಮ್ಮ ಹೆಸರನ್ನು ಸರ್ಚ್ ಮಾಡಿ ಎಂಬ ಆಯ್ಕೆ ಕಾಣಿಸಿಕೊಳ್ಳುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ. ಬಳಿಕ ಮತ್ತೊಂದು ಪುಟ ತೆರೆದುಕೊಳ್ಳಲಿದ್ದು, ಅಲ್ಲಿ ನಿಮ್ಮ ಹೆಸರು, ವಯಸ್ಸಿನ ವಿವರ, ರಾಜ್ಯ ಸೇರಿದಂತೆ ಅಗತ್ಯ ಮಾಹಿತಿಯನ್ನು ಭರ್ತಿ ಮಾಡಿ. ನಂತರ ಕೋಡ್ ಅನ್ನು ಎಂಟ್ರಿ ಮಾಡಿದರೆ ನಿಮ್ಮ ಮಾಹಿತಿ ಅದರಲ್ಲಿ ಕಾಣಿಸಿಕೊಳ್ಳುತ್ತದೆ. ಅದಾಗ್ಯೂ ನೇರವಾಗಿ ಈ ವಿಭಾಗಕ್ಕೆ ತಲುಪಬೇಕು ಎಂದರೆ https://electoralsearch.in/ ಈ ಲಿಂಕ್ ಬಳಕೆ ಮಾಡಬಹುದು.
ನಿಮ್ಮ ಗ್ರಾಮದ ಸಂಫೂರ್ಣ ಮತದಾರರ ವಿವರ ನೋಡಲು ಹೀಗೆ ಮಾಡಿ: ಇನ್ನು ನೀವು ಮತಚಲಾವಣೆ ಮಾಡುವ ಗ್ರಾಮದಲ್ಲಿ ಯಾರೆಲ್ಲಾ ಮತದಾನ ಹಾಕಬಹುದು, ಸಾವಿಗೀಡಾದವರ ಮತದಾನದ ಚೀಟಿ ನಿಷ್ಕ್ರಿಯವಾಗಿದೆಯಾ? ಹೊಸದಾಗಿ ಸೇರ್ಪಡೆಗೊಂಡವರು ಯಾರು? ಎಂಬ ವಿವರ ತಿಳಿದುಕೊಳ್ಳಲು ನೀವು https://ceo.karnataka.gov.in/FinalRoll_2023/ ಲಿಂಕ್ ಅನ್ನು ಬಳಕೆ ಮಾಡಿಕೊಳ್ಳಬಹುದು.
ಇದನ್ನು ಸರ್ಚ್ ಮಾಡಿದ ನಂತರ 2023 ರ ಅಂತಿಮ ಮತದಾರರ ಪಟ್ಟಿ-ವಿಧಾನಸಭೆ ಕ್ಷೇತ್ರಗಳ ಹೆಸರುಗಳ ಪಟ್ಟಿಯನ್ನು ವೀಕ್ಷಿಸಲು ಜಿಲ್ಲೆಯ ಹೆಸರಿನ ಮೇಲೆ ಕ್ಲಿಕ್ ಮಾಡಿ ಎಂಬ ಆಯ್ಕೆ ಕಾಣಿಸಿಕೊಳ್ಳಲಿದ್ದು, ಇದರ ಕೆಳಗೆ ಎಲ್ಲಾ ಜಿಲ್ಲೆಗಳ ಹೆಸರು ಕಾಣಿಸುತ್ತವೆ. ನಂತರ ನಿಮ್ಮ ಜಿಲ್ಲೆ ಹೆಸರಿನ ಮೇಲೆ ಕ್ಲಿಕ್ ಮಾಡಿದರೆ ತಾಲೂಕು ಅಥವಾ ವಿಧಾನಸಭಾ ಕ್ಷೇತ್ರಗಳ ವಿವರ ಕಾಣಿಸುತ್ತದೆ ಅದರ ಮೇಲೆ ಕ್ಲಿಕ್ ಮಾಡಿ.

ನಂತರದಲ್ಲಿ ನೀವು ಮತದಾನ ಮಾಡಬಹುದಾದ ಶಾಲೆಯ ಪಟ್ಟಿಗಳು ಅಲ್ಲಿ ಕಾಣಿಸಿಕೊಳ್ಳುತ್ತವೆ. ಈ ವೇಳೆ ನೀವು ಯಾವ ಶಾಲೆಯಲ್ಲಿ ಮತದಾನ ಮಾಡುತ್ತೀರೋ ಆ ಶಾಲೆಯ ಹೆಸರಿನ ಮುಂದೆ ಇರುವ ಎಮ್‌ಆರ್ ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ. ಬಳಿಕ ನಿಮಗೆ ಕ್ಯಾಪ್ಚಾ ಕೋಡ್ ಕೇಳುತ್ತದೆ. ಇದನ್ನು ಭರ್ತಿ ಮಾಡಿದರೆ ಪಿಡಿಎಫ್ ರೂಪದಲ್ಲಿ ನಿಮ್ಮ ಗ್ರಾಮದ ಸಂಪೂರ್ಣ ಮತದಾರರ ಪಟ್ಟಿಯನ್ನು ನೀವು ವೀಕ್ಷಣೆ ಮಾಡಬಹುದು.


Click it and Unblock the Notifications








