ಗ್ಯಾಲಕ್ಸಿ ನೋಟ್ 10 ಲೈಟ್ ಮತ್ತು ಒನ್‌ಪ್ಲಸ್ 7T: ಖರೀದಿಗೆ ಯಾವುದು ಬೆಸ್ಟ್?
ಸ್ಯಾಮ್‌ಸಂಗ ಸಂಸ್ಥೆಯು ಇತ್ತೀಚಿಗೆ ದೇಶಿಯ ಮಾರುಕಟ್ಟೆಗೆ ಹೊಸದಾಗಿ 'ಗ್ಯಾಲಕ್ಸಿ ನೋಟ್ 10 ಲೈಟ್' ಸ್ಮಾರ್ಟ್‌ಫೋನ್ ಅನ್ನು ಪರಿಚಯಿಸಿದೆ. ಈ ಫೋನ್ ಹಲವು ವಿಶೇಷ ಫೀಚರ್ಸ್‌ಗಳಿಂದ ಗ್ರಾಹಕರನ್ನು ಸೆಳೆದಿದೆ. ಇನ್ನು ಗ್ಯಾಲಕ್ಸಿ ನೋಟ್ 10 ಲೈಟ್ ಫ್ಲ್ಯಾಗ್‌ಶಿಫ್ ಫೋನ್, ಇತ್ತೀಚಿನ 'ಒನ್‌ಪ್ಲಸ್ 7T' ಫೋನಿಗೆ ನೇರ ಪೈಪೋಟಿ ನೀಡಲಿದೆ ಎನ್ನಲಾಗಿದೆ. ಹಾಗಾದರೆ ಗ್ಯಾಲಕ್ಸಿ ನೋಟ್ 10 ಲೈಟ್ ಬೆಸ್ಟ್ ಆಗಿದೆಯಾ?

ಮೊಬೈಲ್ ಮಾರುಕಟ್ಟೆಯಲ್ಲಿ ಫ್ಲ್ಯಾಗ್‌ಶಿಫ್ ಸ್ಮಾರ್ಟ್‌ಫೋನ್‌ಗಳಿಗೆ ಉತ್ತಮ ಬೇಡಿಕೆ ಇದ್ದು, ಪ್ರಮುಖ ಕಂಪನಿಗಳ ನಡುವೆ ಪೈಪೋಟಿ ಇದೆ. ಆದ್ರೆ, ಇತ್ತೀಚಿಗೆ ಫ್ಲ್ಯಾಗ್‌ಶಿಫ್ ರೇಂಜ್‌ನಲ್ಲಿ ಒನ್‌ಪ್ಲಸ್ 7T ಫೋನ್ ಗ್ರಾಹಕರನ್ನು ಹೆಚ್ಚಾಗಿ ಆಕರ್ಷಿಸಿದೆ. ಗ್ಯಾಲಕ್ಸಿ ನೋಟ್ 10 ಲೈಟ್ ಮತ್ತು ಒನ್‌ಪ್ಲಸ್ 7T ಫೋನ್‌ಗಳ ನಡುವೆ ಸಾಕಷ್ಟು ಸಾಮ್ಯತೆ ಇದೆ, ಅದಾಗ್ಯೂ ಕೆಲವು ಕಾರಣಗಳಿಂದ ಭಿನ್ನ ಭಿನ್ನವಾಗಿ ಕಾಣಿಸುತ್ತವೆ. ಫ್ಲ್ಯಾಗ್‌ಶಿಪ್ ಮಾದರಿಯ ಫೋನ್ ಖರೀದಿಸುವುದಾದರೆ ಇವೆರಡರಲ್ಲಿ ಯಾವುದು ಯೋಗ್ಯ?. ಎನ್ನುವುದನ್ನು ಮುಂದೆ ನೋಡೋಣ.

ಡಿಸೈನ್, ರಚನೆ ಮತ್ತು ಡಿಸ್‌ಪ್ಲೇ ಹೇಗಿದೆ
ಗ್ಯಾಲಕ್ಸಿ ನೋಟ್ 10 ಲೈಟ್ ಸ್ಮಾರ್ಟ್‌ಫೋನ್ 1440 x 3040 ಪಿಕ್ಸಲ್ ಸಾಮರ್ಥ್ಯದೊಂದಿಗೆ 6.7 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್ ಹೊಂದಿದ್ದು, ಡಿಸ್‌ಪ್ಲೇಯು ಎಡ್ಜ್ ಡು ಎಡ್ಜ್ ಇನ್‌ಫಿನಿಟಿ O ಡಿಸ್‌ಪ್ಲೇ ಮಾದರಿಯನ್ನು ಒಳಗೊಂಡಿದೆ. ಡಿಸ್‌ಪ್ಲೇಯ ಪ್ರತಿ ಇಂಚಿನ ಪಿಕ್ಸಲ್ ಸಾಂದ್ರತೆಯು 394ppi ಆಗಿದ್ದು, ಡಿಸ್‌ಪ್ಲೇಯಿಂದ ಬಾಹ್ಯ ಬಾಡಿಯ ನಡುವಿನ ಅಂತರವು ಶೇ.88.3%ಆಗಿದೆ. ಇನ್ನು ಡಿಸ್‌ಪ್ಲೇಯ ಅನುಪಾತವು 19:9 ಆಗಿದ್ದು, ಸ್ಕ್ರೀನ್ ರಕ್ಷಣೆಗೆ ಗೊರಿಲ್ಲಾ ಗ್ಲಾಸ್ 6 ಒಳಗೊಂಡಿದೆ.
ಒನ್‌ಪ್ಲಸ್ 7T' ಸ್ಮಾರ್ಟ್‌ಫೋನ್ 2,400 x 1,080 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.55 ಇಂಚಿನ ಫ್ಲ್ಯೂಡ್ AMOLED ಡಿಸ್‌ಪ್ಲೇಯನ್ನು ಒಳಗೊಂಡಿದ್ದು, ಪ್ರಖರತೆ ಉತ್ತಮವಾಗಿದೆ. ಹಾಗೆಯೇ ಡಿಸ್‌ಪ್ಲೇಯ ಅನುಪಾತವು 20:9 ಆಗಿದ್ದು, ಇದರೊಂದಿಗೆ ಡಿಸ್‌ಪ್ಲೇಯ ಪ್ರತಿ ಇಂಚಿನ ಪಿಕ್ಸಲ್ ಸಾಂದ್ರತೆಯು 402 PPI ಆಗಿದೆ. ಡಿಸ್‌ಪ್ಲೇಯ ರಿಫ್ರೇಶ್ ರೇಟ್ 90Hz ಜೊತೆಗೆ 3D ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ಅನ್ನು ಪಡೆದಿದೆ. ಫ್ಯಾಗ್‌ಶಿಫ್ ಮಾದರಿಯಲ್ಲಿ ಅಗತ್ಯ ಡಿಸ್‌ಪ್ಲೇ ಇದಾಗಿದೆ ಎನ್ನಬಹುದು.

ಪ್ರೊಸೆಸರ್ ಸಾಮರ್ಥ್ಯ ಹೇಗಿದೆ
ಗ್ಯಾಲಕ್ಸಿ ನೋಟ್ 10 ಲೈಟ್ ಸ್ಮಾರ್ಟ್‌ಫೋನ್ ಕಂಪನಿಯ Exynos 9810 ಚಿಪ್‌ಸೆಟ್ ಸಾಮರ್ಥ್ಯದ ಪ್ರೊಸೆಸರ್ ಹೊಂದಿದ್ದು, ಅದಕ್ಕೆ ಪೂರಕವಾಗಿ ಒನ್ UI 2.0 ಬೆಂಬಲಿತ ಆಂಡ್ರಾಯ್ಡ್ 10 ಓಎಸ್ ಸಪೋರ್ಟ್ ಇದೆ. ಇನ್ನು ಈ ಫೋನ್ 6GB RAM ಮತ್ತು 8GB RAM ಆಯ್ಕೆಯನ್ನು ಹೊಂದಿದ್ದು, 128GB ಆಂತರಿಕ ಸ್ಟೋರೇಜ್ ಸಾಮರ್ಥ್ಯ ಪಡೆದಿದೆ. ಎಸ್‌ಡಿ ಕಾರ್ಡ್ ಬಳಸಿ ಬಾಹ್ಯ ಮೆಮೊರಿಯನ್ನು 1TB ವರೆಗೂ ವಿಸ್ತರಿಸುವ ಅವಕಾಶ ಸಹ ಇದೆ.
ಒನ್‌ಪ್ಲಸ್ 7T' ಸ್ಮಾರ್ಟ್‌ಫೋನ್ ಆಕ್ಟಾಕೋರ್ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 855 ಪ್ರೊಸೆಸರ್ ಸಾಮರ್ಥ್ಯವನ್ನು ಪಡೆದಿದ್ದು, ಆಂಡ್ರಾಯ್ಡ್ 10 ಆಧಾರಿತ ಆಕ್ಸಿಜನ್ ಓಎಸ್ 10 ಬೆಂಬಲವನ್ನು ಒಳಗೊಂಡಿದೆ. ಅತ್ಯುತ್ತಮ ವೇಗದ ಕಾರ್ಯವೈಖರಿ ಇದ್ದು, ಗೇಮ್ಸ್‌ಗೂ ಬೆಸ್ಟ್ ಎನಿಸಲಿದೆ. ಎರಡು ವೇರಿಯಂಟ್ ಆಯ್ಕೆಗಳನ್ನು ಹೊಂದಿದ್ದು, ಅವುಗಳು 8GB RAM ಮತ್ತು 128GB ಆಂತರಿಕ ಸ್ಟೋರೇಜ್ ಹಾಗೂ 8GB RAM ಮತ್ತು 256GB ಆಂತರಿಕ ಸ್ಟೋರೇಜ್ ಆಗಿದೆ.

ಕ್ಯಾಮೆರಾ ವಿಶೇಷತೆ ಏನು
ಗ್ಯಾಲಕ್ಸಿ ನೋಟ್ 10 ಲೈಟ್ ಸ್ಮಾರ್ಟ್‌ಫೋನ್ ಹಿಂಬದಿಯಲ್ಲಿ ಒಟ್ಟು ಮೂರು ರಿಯರ್ ಕ್ಯಾಮೆರಾ ಸೆಟ್‌ಅಪ್ ಹೊಂದಿದೆ. ಮುಖ್ಯ ಅಲ್ಟ್ರಾ ವೈಲ್ಡ್ ಲೆನ್ಸ್ ಬೆಂಬಲದೊಂದಿಗೆ 12ಎಂಪಿ ಸೆನ್ಸಾರ್ ಹೊಂದಿದೆ. ಇನ್ನು ಸೆಕೆಂಡರಿ ಮತ್ತು ತೃತೀಯ ಕ್ಯಾಮೆರಾಗಳೆರಡು ಸಹ ಕ್ರಮವಾಗಿ 12ಎಂಪಿಯ ಸೆನ್ಸಾರ್ ಸಾಮರ್ಥ್ಯವನ್ನು ಪಡೆದಿವೆ. ಇದರೊಂದಿಗೆ ಸೆಲ್ಫಿಗಾಗಿ 32ಎಂಪಿಯ ಸೆನ್ಸಾರ್ ಕ್ಯಾಮೆರಾವನ್ನು ಒಳಗೊಂಡಿದೆ. OIS ಸೇರಿದಂತೆ ಅತ್ಯುತ್ತಮ ಕ್ಯಾಮೆರಾ ಫೀಚರ್ಸ್‌ಗಳನ್ನು ಪಡೆದಿದೆ.
ಇತ್ತೀಚಿನ ಸ್ಮಾರ್ಟ್ಫೋನ್‌ಗಳಲ್ಲಿ ಸಾಮಾನ್ಯ ಎನಸಿರುವ 48ಎಂಪಿ ಕ್ಯಾಮೆರಾವು 'ಒನ್‌ಪ್ಲಸ್ 7T' ಸ್ಮಾರ್ಟ್‌ಫೋನಿನಲ್ಲಿಯೂ ನೀಡಲಾಗಿದ್ದು, ಅದು ಸೋನಿಯ IMX586 ಸೆನ್ಸಾರ್‌ನಲ್ಲಿದೆ. ಸೆಕೆಂಡರಿ ಕ್ಯಾಮೆರಾವು 12ಎಂಪಿ ಸೆನ್ಸಾರ್ ಟೆಲಿಪೋಟೋ ಲೆನ್ಸ್ ಪಡೆದಿದ್ದು, ತೃತೀಯ ಕ್ಯಾಮೆರಾವು 16ಎಂಪಿಯ ಅಲ್ಟ್ರಾ ವೈಲ್ಡ್ ಆಂಗಲ್ ಲೆನ್ಸ್ ಸಾಮರ್ಥ್ಯದಲ್ಲಿದೆ. ಹಾಗೆಯೇ ಸೆಲ್ಫಿ ಕ್ಯಾಮೆರಾವು 16ಎಂಪಿ ಸಾಮರ್ಥ್ಯದಲ್ಲಿದ್ದು, ಸೋನಿಯ IMX471 ಸೆನ್ಸಾರ್ ಪಡೆದಿದೆ. 4K ವಿಡಿಯೊಗಳನ್ನು ಸಹ ಬೆಂಬಲಿಸುತ್ತದೆ.

ಬ್ಯಾಟರಿ ಲೈಫ್ ಹೇಗಿದೆ
ಗ್ಯಾಲಕ್ಸಿ ನೋಟ್ 10 ಲೈಟ್ ಸ್ಮಾರ್ಟ್‌ಫೋನ್ 4,500mAh ಬ್ಯಾಟರಿ ಸಾಮರ್ಥ್ಯವನ್ನು ಪಡೆದಿದ್ದು, ಇದರೊಂದಿಗೆ ಫಾಸ್ಟ್ ಚಾರ್ಜಿಂಗ್ ಬೆಂಬಲವನ್ನು ಸಹ ಹೊಂದಿದೆ. ಹಾಗೆಯೇ ಗ್ಯಾಲಾಕ್ಸಿ ನೋಟ್ ಸರಣಿ ಫೋನ್‌ಗಳಂತೆ ಈ ಫೋನಿಗೂ S ಪೆನ್ ಸೌಲಭ್ಯವನ್ನು ನೀಡಲಾಗಿದ್ದು, ಈ ಎಸ್ ಪೆನ್ ಬ್ಲೂಟೂತ್ ಕನೆಕ್ಟಿವಿಟಿ ಆಯ್ಕೆಯನ್ನು ಪಡೆದುಕೊಂಡಿದೆ. ಸುಲಭವಾಗಿ ಮ್ಯೂಸಿಕ್, ವಿಡಿಯೊ, ಕ್ಯಾಮೆರಾ ನಿಯಂತ್ರಿಸಬಹುದಾಗಿದೆ. ಈ ಪೆನ್ ಆಯ್ಕೆ ಬಳಸಿ ನ್ಯಾವಿಗೇಶನ್ ಸಹ ಮ್ಯಾನೇಜ್ ಮಾಡಬಹುದು.
'ಒನ್‌ಪ್ಲಸ್ 7T' ಸ್ಮಾರ್ಟ್‌ಫೋನ್ 3,800mAh ಸಾಮರ್ಥ್ಯದ ಬ್ಯಾಟರಿ ಬಾಳಿಕೆ ಹೊಂದಿದ್ದು, ಇದರೊಂದಿಗೆ ವ್ರಾಪ್ ಚಾರ್ಜ್ 30T ಫಾಸ್ಟ್ ಚಾರ್ಜಿಂಗ್ ತಂತ್ರಜ್ಞಾನದ ಸೌಲಭ್ಯವನ್ನು ಒಳಗೊಂಡಿದೆ. ಈ ಚಾರ್ಜರ್ ನೆರವಿನಿಂದ ಕೇವಲ 30 ನಿಮಿಷದಲ್ಲಿ ಸ್ಮಾರ್ಟ್‌ಫೋನ್ 0 ಯಿಂದ 70 ಪರ್ಸೆಂಟ್ ವರೆಗೂ ಚಾರ್ಜ್ ಪಡೆದುಕೊಳ್ಳುತ್ತದೆ. 'ಒನ್‌ಪ್ಲಸ್ 7T' ಇನ್ನಷ್ಟು ಬ್ಯಾಟರಿ ಲೈಫ್ ಪಡೆದುಕೊಂಡಿರಬೇಕಿತ್ತು ಎಂದೆನಿಸುತ್ತದೆ.

ಬೆಲೆ ಎಷ್ಟು ಮತ್ತು ಲಭ್ಯತೆ
ದೇಶಿಯ ಮಾರುಕಟ್ಟೆಗೆ ಲಗ್ಗೆ ಇಟ್ಟಿರುವ ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 10 ಲೈಟ್ ಸ್ಮಾರ್ಟ್‌ಫೋನಿನ ಆರಂಭಿಕ 6GB RAM ವೇರಿಯಂಟ್ ಬೆಲೆಯು 38,999ರೂ.ಆಗಿದೆ. ಹಾಗೆಯೇ 8GB RAM ವೇರಿಯಂಟ್ ಬೆಲೆಯು 40,999ರೂ.ಗಳಾಗಿದೆ. ಇನ್ನು ಈ ಫೋನ್ ಆರೋ ಗ್ಲೋ, ಆರೋ ಬ್ಲ್ಯಾಕ್ ಮತ್ತು ಆರೋ ರೆಡ್ ಬಣ್ಣಗಳ ಆಯ್ಕೆ ಲಭ್ಯ ಇದ್ದು, ಇದೇ ಫೆಬ್ರುವರಿ 3 ರಂದು ಮಾರಾಟ ಆರಂಭಿಸಲಿದೆ.
'ಒನ್‌ಪ್ಲಸ್ 7T' ಸ್ಮಾರ್ಟ್‌ಫೋನ್ 8GB RAM ಮತ್ತು 128GB ವೇರಿಯಂಟ್ ಬೆಲೆಯು 34,999ರೂ.ಗಳಾಗಿದ್ದು, ಹಾಗೆಯೇ 8GB RAM ಮತ್ತು 256GB ವೇರಿಯಂಟ್ ಬೆಲೆಯು 37,999ರೂ.ಗಳಾಗಿದೆ. ಇನ್ನು ಈ ಸ್ಮಾರ್ಟ್‌ಫೋನ್ ಸಿಲ್ವರ್ ಮತ್ತು ಬ್ಲೂ ಬಣ್ಣಗಳ ಆಯ್ಕೆ ಹೊಂದಿದೆ.

ಕೊನೆಯ ಮಾತು
ಸದ್ಯ ಫ್ಲ್ಯಾಗ್‌ಶಿಫ್ ರೇಂಜ್‌ನಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 10 ಲೈಟ್ ಮತ್ತು ಒನ್‌ಪ್ಲಸ್ 7T ಫೋನ್‌ಗಳೆರಡು ಗಮನ ಸೆಳೆಯುವ ಫೀಚರ್ಸ್‌ಗಳನ್ನು ಹೊಂದಿವೆ. ಆದರೆ ಒನ್‌ಪ್ಲಸ್ 7T ಫೋನ್ ಡಿಸ್‌ಪ್ಲೇ, RAM ಮತ್ತು ಕ್ಯಾಮೆರಾ ಆಯ್ಕೆಗಳಿಂದ ಅಟ್ರ್ಯಾಕ್ಟ್ ಮಾಡಲಿದೆ. ಹಾಗೆಯೇ ಬೆಲೆಯು ಗ್ಯಾಲಕ್ಸಿ ನೋಟ್ 10 ಲೈಟ್‌ಗಿಂತ ಕಡಿಮೆ. ಇನ್ನು ಗ್ಯಾಲಕ್ಸಿ ನೋಟ್ 10 ಲೈಟ್ ಫೋನಿಗೆ ಅಧಿಕ ಬ್ಯಾಟರಿ, ಕ್ಯಾಮೆರಾ, ಬಿಗ್ ಡಿಸ್‌ಪ್ಲೇ ಪ್ಲಸ್ ಪಾಯಿಂಟ್‌ಗಳು ಹೈಲೈಟ್ ಆಗಿ ಕಾಣಿಸುತ್ತವೆ. ಇರುವುದರಲ್ಲಿಯೇ ಕಡಿಮೆ ಬೆಲೆಗೆ ಫ್ಲ್ಯಾಗ್‌ಶಿಪ್ ಫೋನ್ ಖರೀದಿಸಲು ಒನ್‌ಪ್ಲಸ್ 7T ಉತ್ತಮ ಅನಿಸುತ್ತದೆ. ಅಧಿಕ ಬ್ಯಾಟರಿ ಲೈಫ್, ಸ್ಯಾಮಸಂಗ್‌ನ S ಪೆನ್ ಸೌಲಭ್ಯ ಬೇಕು ಎನ್ನುವವರಿಗೆ ಗ್ಯಾಲಕ್ಸಿ ನೋಟ್ 10 ಲೈಟ್ ಬೆಸ್ಟ್ ಅನಿಸಲಿದೆ.


Click it and Unblock the Notifications








