ಐಟೆಲ್ A70 ವಿಮರ್ಶೆ: ಅಗ್ಗದ ಬೆಲೆಯಲ್ಲಿ ಜಬರ್ದಸ್ತ್ ಸ್ಮಾರ್ಟ್‌ಫೋನ್!
ಐಟೆಲ್ ಮೊಬೈಲ್ ಸಂಸ್ಥೆಯು ತನ್ನ A ಸರಣಿಯಲ್ಲಿ ಇತ್ತೀಚಿಗೆ ನೂತನವಾಗಿ ಬಿಡುಗಡೆ ಮಾಡಿರುವ ಐಟೆಲ್ A70 ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಸಖತ್ ಸದ್ದು ಮಾಡಿದೆ. ಅಗ್ಗದ ಪ್ರೈಸ್ ಟ್ಯಾಗ್ ಹೊಂದಿರುವ ಐಟೆಲ್ A70 ಫೋನ್ ಅಧಿಕ ಸ್ಟೋರೇಜ್ ಹಾಗೂ ಇತರೆ ಕೆಲವು ಆಕರ್ಷಕ ಫೀಚರ್ಸ್‌ಗಳನ್ನು ಒಳಗೊಂಡಿದ್ದು, ತನ್ನ ವರ್ಗದಲ್ಲೇ ಇತರೆ ಬ್ರ್ಯಾಂಡ್ ಫೋನ್‌ಗಳಿಗೆ ಸ್ಪರ್ಧೆ ನೀಡುವಂತಿದೆ.
ಐಟೆಲ್ ಕಂಪನಿಯ ಹೊಸ ಐಟೆಲ್ A70 ಮೊಬೈಲ್ ಕೆಲವು ಅಪ್‌ಡೇಟ್ ಆಯ್ಕೆಗಳನ್ನು ಒಳಗೊಂಡಿದೆ. ಮುಖ್ಯವಾಗಿ ವಿಶಾಲ ಡಿಸ್‌ಪ್ಲೇ ರಚನೆ, ಸ್ಟೈಲಿಶ್ ವಿನ್ಯಾಸ, ಅಧಿಕ RAM ಹಾಗೂ ಬಿಗ್ ಬ್ಯಾಟರಿ ಸಾಮರ್ಥ್ಯ ಸೇರಿದಂತೆ ಇತರೆ ಕೆಲವು ಅಂಶಗಳು ಗ್ರಾಹಕರನ್ನು ಈ ಫೋನಿನತ್ತ ನೋಡುವಂತೆ ಮಾಡಿವೆ. ಹಾಗಾದರೆ ಐಟೆಲ್ A70 ಫೋನಿನ ಫೀಚರ್ಸ್ ಹೇಗಿವೆ? ಈ ಫೋನಿನ ಕಾರ್ಯವೈಖರಿ ಹೇಗಿದೆ? ಎನ್ನುವ ಬಗ್ಗೆ ಇಲ್ಲಿದೆ ಮಾಹಿತಿ.

ವಿಶಾಲ ಡಿಸ್‌ಪ್ಲೇ ರಚನೆ
ಐಟೆಲ್ A70 ಮೊಬೈಲ್ 6.6 ಇಂಚಿನ ಹೆಚ್+ ಡಿಸ್‌ಪ್ಲೇ ಅನ್ನು ಪಡೆದಿದ್ದು, ಇದು 1,612 x 720 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದಿದೆ. ಅಗ್ಗದ ಬೆಲೆಯ ವರ್ಗದಲ್ಲೇ ಉತ್ತಮ ಡಿಸ್‌ಪ್ಲೇ ನೀಡುವ ಪ್ರಯತ್ನ ಮಾಡಿದ್ದಾರೆ ಎಂದು ಹೇಳಬಹುದು. ಅಲ್ಲದೇ ಈ ಡಿಸ್‌ಪ್ಲೇಯು 120Hz ವರೆಗಿನ ರಿಫ್ರೆಶ್ ರೇಟ್ ಸಪೋರ್ಟ್ ಒಳಗೊಂಡಿದ್ದು, 500 ನಿಟ್ಸ್‌ನ ಬ್ರೈಟ್‌ನೆಸ್ ಲೆವೆಲ್ ಅನ್ನು ಹೊಂದಿದೆ.
ಕಡಿಮೆ ಬೆಜಲ್ ರಚನೆ ಅನ್ನು ಹೊಂದಿರುವ ಈ ಡಿಸ್‌ಪ್ಲೇಯು ಆಪಲ್‌ನ ಡೈನಾಮಿಕ್ ಐಲ್ಯಾಂಡ್‌ನಂತೆ ಹೋಲುವ ಡೈನಾಮಿಕ್ ಬಾರ್ ಫೀಚರ್ಸ್ ಸೌಲಭ್ಯ ಪಡೆದುಕೊಂಡಿದೆ. ಬಿಸಿಲಿನಲ್ಲೂ ಡಿಸ್‌ಪ್ಲೇಯು ಉತ್ತಮವಾಗಿ ಕಾಣಿಸಿತು. ಆದರೆ ಪೂರ್ಣ ಹೆಚ್‌ಡಿ ಮಾದರಿಯ ವಿಡಿಯೋ ಸಪೋರ್ಟ್ ತೃಪ್ತಿದಾಯಕ ಇಲ್ಲ.

ಪ್ರೊಸೆಸರ್ ಕಾರ್ಯವೈಖರಿ ಹೇಗೆ
ಈ ಸ್ಮಾರ್ಟ್‌ಫೋನ್ ಆಕ್ಟಾ-ಕೋರ್ Unisoc T603 ಚಿಪ್‌ಸೆಟ್ ಪ್ರೊಸೆಸರ್ ಸೌಲಭ್ಯದಲ್ಲಿ ಕೆಲಸ ನಿರ್ವಹಿಸಲಿದೆ. ಇನ್ನು ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 13 ಗೋ ಆವೃತ್ತಿ ಆಧಾರಿತ ಐಟೆಲ್‌ಓಎಸ್ 13 ಸಪೋರ್ಟ್ ಕೂಡಾ ಇದೆ. ತನ್ನ ವರ್ಗದಲ್ಲೇ ಈ ಫೋನ್ 4GB RAM ಮತ್ತು 256GB ಆಂತರೀಕ ಸ್ಟೋರೇಜ್ ಆಯ್ಕೆ ಪಡೆದಿರುವುದು ಪ್ರಮುಖ ಹೈಲೈಟ್ ಅಂಶವಾಗಿ ಕಾಣಿಸಿದೆ.
ಈ ಪ್ರೊಸೆಸರ್ ದೈನಂದಿನ ಅಗತ್ಯ ಕಾರ್ಯಗಳನ್ನು ನಿರ್ವಹಿಸುವಲ್ಲಿ ಸಮಸ್ಯೆ ಎಂದು ಕಂಡು ಬಂದಿಲ್ಲ. ಇದರ ಸ್ಕ್ರೋಲಿಂಗ್ ಅನುಭವ ಉತ್ತಮವಾಗಿದೆ. ಆದರೆ ಅಧಿಕ ವೇಗದ ಮೊಬೈಲ್ ಗೇಮ್‌ಗಳನ್ನು ಆಡಲು ಈ ಫೋನ್ ಪೂರಕ ಎನಿಸುವುದಿಲ್ಲ. ಮೆಮೊರಿ ಕಾರ್ಡ್ ಮೂಲಕ 2TB ವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಬಹುದಾಗಿದೆ. ಒಟ್ಟಾರೇ, ತನ್ನ ವರ್ಗದಲ್ಲೇ ಇದು ಉತ್ತಮ ಎನ್ನಬಹುದು.

ಕ್ಯಾಮೆರಾ ಹೇಗಿದೆ
ಐಟೆಲ್ A70 ಮೊಬೈಲ್ ಹಿಂಬದಿಯಲ್ಲಿ ಡ್ಯುಯಲ್ ರಿಯರ್ ಕ್ಯಾಮೆರಾ ರಚನೆ ಅನ್ನು ಪಡೆದುಕೊಂಡಿದೆ. ಪ್ರಾಥಮಿಕ ಕ್ಯಾಮೆರಾವು 13 ಮೆಗಾ ಪಿಕ್ಸಲ್ ಸೆನ್ಸಾರ್ ಸೌಲಭ್ಯ ಪಡೆದಿದ್ದು, ಹಗಲಿನ ಸಮಯದಲ್ಲಿ ಹೊರಾಂಗಣದಲ್ಲಿ ಉತ್ತಮ ಫೋಟೋ ನಿರೀಕ್ಷಿಸಬಹುದು. ಈ ವರ್ಗದಲ್ಲಿ ಹಿಂಬದಿಯ ಪ್ರಾಥಮಿಕ ಕ್ಯಾಮೆರಾ ಓಕೆ ಆಗಿದೆ. ಇನ್ನು ಇದರ ಸೆಕೆಂಡರಿ ಕ್ಯಾಮೆರಾವು 0.08 ಮೆಗಾ ಪಿಕ್ಸಲ್ ಆಗಿದ್ದು, ಇದು ಜಸ್ಟ್ ಬೇಸಿಕ್ ಕ್ಯಾಮೆರಾ ಆಗಿದೆ.
ಅಗ್ಗದ ದರದಲ್ಲಿ ಡ್ಯುಯಲ್ ಕ್ಯಾಮೆರಾ ನೀಡುವ ಪ್ರಯತ್ನ ಮಾಡಿದ್ದು, ಹೀಗಾಗಿ ಎರಡನೇ ಕ್ಯಾಮೆರಾ 0.08 ಮೆಗಾ ಪಿಕ್ಸಲ್ ಆಗಿದೆ. ಈ ಫೋನಿನ ಮುಂಭಾಗದಲ್ಲಿ 8 ಮೆಗಾ ಪಿಕ್ಸಲ್ ಕ್ಯಾಮೆರಾ ನೀಡಲಾಗಿದ್ದು, ಇದು ಇತರೆ ಸ್ಪರ್ಧಾತ್ಮಕ ಬ್ರ್ಯಾಂಡ್‌ಗಳಿಗೆ ಹೋಲಿಸಿದರೆ ಉತ್ತಮ ಆಗಿದೆ. ಬೆಳಕಿನಲ್ಲಿ ಉತ್ತಮ ಸೆಲ್ಫಿ ಫೋಟೊ ಸೆರೆಹಿಡಿಯಬಹುದು.
ಬಿಗ್ ಬ್ಯಾಟರಿ ಬ್ಯಾಕ್‌ಅಪ್ ಸೌಲಭ್ಯ
ಐಟೆಲ್ A70 ಮೊಬೈಲ್ ಬ್ಯಾಟರಿ ವಿಭಾಗದಲ್ಲಿ ಗ್ರಾಹಕರಿಗೆ ತೃಪ್ತಿ ನೀಡುವ ಪ್ರಯತ್ನ ಮಾಡಿದ್ದು, ಈ ನಿಟ್ಟಿನಲ್ಲಿ 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಒದಗಿಸಿದೆ. ಇದಕ್ಕೆ ಪೂರಕವಾಗಿ 10W ಸಾಮರ್ಥ್ಯ ಫಾಸ್ಟ್ ಚಾರ್ಜಿಂಗ್ ಆಯ್ಕೆ ನೀಡಿದೆ. ಇದು ತನ್ನ ವಿಭಾಗದಲ್ಲಿ ಸ್ಪರ್ಧಾತ್ಮಕ ಬ್ಯಾಟರಿ ಸೌಲಭ್ಯ ಆಗಿದ್ದು, ಪೂರ್ಣ ಚಾರ್ಜ್‌ನಲ್ಲಿ ಒಂದು ದಿನ ಆರಾಮವಾಗಿ ಫೋನ್ ಬಳಕೆ ಮಾಡಬಹುದಾಗಿದೆ.
ಇದರ ಜೊತೆಗೆ ಐಟೆಲ್ ಈ ಮೊಬೈಲ್ ಸೈಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಸೌಲಭ್ಯ ಹೊಂದಿರುವುದು ಪ್ರಮುಖ ಫೀಚರ್ಸ್‌ಗಳಲ್ಲಿ ಇದು ಸಹ ಒಂದು. ಉಳಿದಂತೆ ಈ ಮೊಬೈಲ್ ಇತ್ತೀಚಿಗಿನ ಅಗತ್ಯ ಕನೆಕ್ಟಿವಿಟಿ ಆಯ್ಕೆಗಳನ್ನು ಕೂಡಾ ಪಡೆದುಕೊಂಡಿದೆ. ಇನ್ನು ಈ ಫೋನ್ ಇದು ಬ್ಲೂ, ಗೋಲ್ಡ್, ಫೀಲ್ಡ್ ಗ್ರೀನ್ ಮತ್ತು ಸ್ಟೈಲಿಶ್ ಬ್ಲ್ಯಾಕ್ ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ಲಭ್ಯ.
ಕೊನೆಯ ಮಾತು
ಮೊಬೈಲ್ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿರುವಐಟೆಲ್ A70 ಫೋನ್ ಅಗ್ಗದ ದರದಲ್ಲಿ ಪ್ರಬಲ ಪೈಪೋಟಿ ನೀಡುವ ಸ್ಮಾರ್ಟ್‌ಫೋನ್ ಆಗಿ ಕಾಣಿಸಿಕೊಂಡಿದೆ. ಈ ಫೋನಿನ ಅಧಿಕ RAM ಹಾಗೂ 256GB ಸ್ಟೋರೇಜ್ ಆಯ್ಕೆ ಜೊತೆಗೆ ಬಿಗ್ ಬ್ಯಾಟರಿ, ಆಕರ್ಷಕ ಕ್ಯಾಮೆರಾ ಆಯ್ಕೆಗಳು ಇದಕ್ಕೆ ಪುಷ್ಠಿ ನೀಡುವಂತಿವೆ. ಅದಾಗ್ಯೂ, ಪ್ರೊಸೆಸರ್ ವಿಭಾಗದಲ್ಲಿ ಸ್ನ್ಯಾಪ್‌ಡ್ರಾಗನ್ ಪ್ರೊಸೆಸರ್ ಒದಗಿಸಿದ್ದರೆ, ಇನ್ನಷ್ಟು ಬಲ ನೀಡಿದಂತೆ ಆಗುತ್ತಿತ್ತು. ಉಳಿದಂತೆ ಅಗ್ಗದ ಬೆಲೆಗೆ ಉತ್ತಮ ಫೋನ್ ಇದಾಗಿದೆ.


Click it and Unblock the Notifications








