Vivo X300 ಸರಣಿ ಸ್ಮಾರ್ಟ್‌ಫೋನ್‌ಗಳು ಬಿಡುಗಡೆ: ಕ್ಯಾಮೆರಾ ಪ್ರಿಯರು ನೋಡಲೇಬೇಕು!
ಮೊಬೈಲ್ ಮಾರುಕಟ್ಟೆಯು ಬಹುದಿನಗಳಿಂದ ಎದುರುನೋಡುತ್ತಿದ್ದ Vivo ಕಂಪೆನಿಯ ಬಹುನಿರೀಕ್ಷಿತ X300 ಸರಣಿಯು ಪರಿಚಯಗೊಂಡಿದೆ. Vivo X300 ಸರಣಿಯಲ್ಲಿ Vivo X300 ಮತ್ತು Vivo X300 Pro ಎಂಬ ಎರಡು ಫ್ಲಾಗ್‌ಶಿಪ್ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಲಾಗಿದ್ದು, ಈ ಎರಡೂ ಸ್ಮಾರ್ಟ್‌ಫೋನ್‌ಗಳು ಮೊಬೈಲ್ ತಂತ್ರಜ್ಞಾನದ ಜಗತ್ತಿನಲ್ಲಿ ಹೊಸ ಸಂಚಲನ ಮೂಡಿಸುವಂತಹ ಕ್ಯಾಮೆರಾ, ಕಾರ್ಯಕ್ಷಮತೆ ಮತ್ತು ವಿನ್ಯಾಸವನ್ನು ಹೊತ್ತು ಬಂದಿವೆ. ಹಾಗಾದರೆ, ಹೊಸ Vivo X300 ಮತ್ತು Vivo X300 Pro ಫೋನ್‌ಗಳು ಹೇಗಿವೆ?, ಬೆಲೆ ಎಷ್ಟು ಎಂಬುದನ್ನು ನೋಡೋಣ ಬನ್ನಿ.
Vivo X300 ಸರಣಿ ಬಿಡುಗಡೆಯಾಗುವ ಮುನ್ನವೇ ಮೊಬೈಲ್ ಪ್ರಿಯರು ಎದುರುನೋಡುತ್ತಿದ್ದ ಒಂದು ವೈಶಿಷ್ಟ್ಯವೆಂದರೆ ಅದರ ಅಸಾಧಾರಣ ಕ್ಯಾಮೆರಾ ತಂತ್ರಜ್ಞಾನ. ಪ್ರಸಿದ್ಧ Zeiss ಸಹಯೋಗದೊಂದಿಗೆ ಇಂಜಿನಿಯರಿಂಗ್ ಮಾಡಲಾದ ಕ್ಯಾಮೆರಾಗಳೊಂದಿಗೆ Vivo X300 ಸರಣಿಯು ಮೊಬೈಲ್ ಛಾಯಾಗ್ರಹಣವನ್ನು ಒಂದು ಹೊಸ ಮಟ್ಟಕ್ಕೆ ಕೊಂಡೊಯ್ಯಲಿವೆ ಎಂದು ಹೇಳಲಾಗಿತ್ತು. ಅದರಂತೆಯೇ, ಈ ಎರಡೂ ಸ್ಮಾರ್ಟ್‌ಫೋನ್‌ಗಳು ಅಸಾಧಾರಣ ಕ್ಯಾಮೆರಾ ವ್ಯವಸ್ಥೆಯನ್ನು ಒಳಗೊಂಡಿವೆ. ಅದರಲ್ಲೂ X300 Pro ಮಾದರಿಯಲ್ಲಿ 200 ಮೆಗಾಪಿಕ್ಸೆಲ್‌ನ ಪೆರಿಸ್ಕೋಪ್ ಟೆಲಿಫೋಟೋ ಶೂಟರ್ ಇದೆ.
ಕ್ಯಾಮೆರಾ ವಿಭಾಗದಲ್ಲಿ, Vivo X300 Pro ಫೋನ್ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಹೊಂದಿರುವ 50-ಮೆಗಾಪಿಕ್ಸೆಲ್ ಸೋನಿ LYT-828 ಮುಖ್ಯ ಸಂವೇದಕ, 50-ಮೆಗಾಪಿಕ್ಸೆಲ್ Samsung JN1 ಅಲ್ಟ್ರಾವೈಡ್ ಶೂಟರ್ ಮತ್ತು OIS ಹೊಂದಿರುವ 200-ಮೆಗಾಪಿಕ್ಸೆಲ್ ಪೆರಿಸ್ಕೋಪ್ ಟೆಲಿಫೋಟೋ ಶೂಟರ್ ಅನ್ನು ಹೊಂದಿದೆ. ಪೆರಿಸ್ಕೋಪ್ ಸೆನ್ಸಾರ್ ಸಹಾಯದಿಂದ ದೂರದ ವಸ್ತುಗಳನ್ನು ಅತಿ ಸ್ಪಷ್ಟವಾಗಿ ಸೆರೆ ಹಿಡಿಯಬಹುದಾದರೂ, ಇದು Zeiss ನ 2.35× ಟೆಲಿಫೋಟೋ ಟೆಲಿಕನ್ವರ್ಟರ್ ಐಚ್ಛಿಕ ಪರಿಕರವನ್ನು ಸಹ ಬೆಂಬಲಿಸುವದರಿಂದ, ಇದರ ವ್ಯಾಪ್ತಿ ಮತ್ತಷ್ಟು ಹೆಚ್ಚಾಗುತ್ತದೆ.
ಇನ್ನು ಮೂಲಕ Vivo X300 ಮಾದರಿಯು 200-ಮೆಗಾಪಿಕ್ಸೆಲ್ Samsung HPB ಪ್ರಾಥಮಿಕ OIS-ಬೆಂಬಲಿತ ಸಂವೇದಕ, ಅಲ್ಟ್ರಾವೈಡ್ ಲೆನ್ಸ್ ಹೊಂದಿರುವ 50-ಮೆಗಾಪಿಕ್ಸೆಲ್ Samsung JN1 ಸಂವೇದಕ ಮತ್ತು 50-ಮೆಗಾಪಿಕ್ಸೆಲ್ LYT-602 ಪೆರಿಸ್ಕೋಪ್ ಟೆಲಿಫೋಟೋ ಕ್ಯಾಮೆರಾದೊಂದಿಗೆ ಬರುತ್ತದೆ. ಈ ಎರಡೂ ಫೋನ್‌ಗಳು V3+ ಮತ್ತು Vs1 ನಂತಹ ವಿಶೇಷ ಇಮೇಜಿಂಗ್ ಚಿಪ್‌ಗಳನ್ನು ಒಳಗೊಂಡಿದ್ದು, ಇದು ಫೋಟೋಗಳನ್ನು ಸೆರೆ ಹಿಡಿಯುವ ಮುಂಚೆ ಮತ್ತು ನಂತರದ ಪ್ರಕ್ರಿಯೆಯನ್ನು ಸುಧಾರಿಸಿ, ಉತ್ತಮ ಗುಣಮಟ್ಟದ ಚಿತ್ರಗಳನ್ನು ಒದಗಿಸುತ್ತದೆ ಎಂದು ಹೇಳಲಾಗಿದೆ.
ಇದರ ಜೊತೆಗೆ, ಎರಡೂ ಫೋನ್‌ಗಳು 50-ಮೆಗಾಪಿಕ್ಸೆಲ್‌ನ ಶಕ್ತಿಯುತ ಸೆಲ್ಫಿ ಕ್ಯಾಮೆರಾಗಳನ್ನು ಹೊಂದಿವೆ. ಈ ಎರಡೂ ಫೋನ್‌ಗಳು V3+ ಮತ್ತು Vs1 ನಂತಹ ವಿಶೇಷ ಇಮೇಜಿಂಗ್ ಚಿಪ್‌ಗಳನ್ನು ಒಳಗೊಂಡಿರುವರಿಂದ ಹಾಗೂ Zeiss ನ 2.35× ಟೆಲಿಫೋಟೋ ಟೆಲಿಕನ್ವರ್ಟರ್ ಬೆಂಬಲದ ಜೊತೆಗೆ ಮೊಬೈಲ್ ಫೋಟೋಗ್ರಫಿಯು ಮತ್ತೊಂದು ಹಂತಕ್ಕೆ ತಲುಪಬಹುದು. ಆದರೆ, ನೈಜ ಪ್ರಪಂಚದಲ್ಲಿ ಇದರ ಗುಣಮಟ್ಟವನ್ನು ಇನ್ನೂ ಪರೀಕ್ಷಿಸಬೇಕಾಗುತ್ತದೆ. ಹಾಗಾಗಿ, ಮುಂಬರುವ ದಿನಗಳಲ್ಲಿ, ಸಾಧನಗಳು ದೊರೆತಾಗ ಈ ಕುರಿತಂತೆ ನಾನು ಹೆಚ್ಚು ಮಾಹಿತಿಯನ್ನು ಒದಗಿಸಲಿದ್ದೇನೆ.

ಕಾರ್ಯಕ್ಷಮತೆ ವಿಭಾಗದಲ್ಲಿ, ಈ ಎರಡೂ Vivo X300 ಮತ್ತು Vivo X300 Pro ಫೋನ್‌ಗಳು MediaTek ಪರಿಚಯಿಸಿರುವ ಹೊಸ ಮತ್ತು ಶಕ್ತಿಶಾಲಿ Dimensity 9500 SoC ಪ್ರೊಸೆಸರ್ ಹೊಂದಿವೆ. ಸಾಫ್ಟ್‌ವೇರ್ ವಿಷಯದಲ್ಲಿ, ಇವುಗಳು Android 16-ಆಧಾರಿತ OriginOS 6 ನೊಂದಿಗೆ ಕಾರ್ಯನಿರ್ವಹಿಸುತ್ತವೆ. ಬ್ಯಾಟರಿ ವಿಭಾಗದಲ್ಲಿ, Vivo X300 Pro ಫೋನ್ 90W ವೈರ್ಡ್ ಮತ್ತು 40W ವೈರ್‌ಲೆಸ್ ಚಾರ್ಜಿಂಗ್ ಬೆಂಬಲದೊಂದಿಗೆ 6,510mAh ಬ್ಯಾಟರಿಯನ್ನು ಹೊಂದಿದ್ದರೆ, ಮೂಲ Vivo X300 ಮಾದರಿಯಲ್ಲಿ 6,040mAh ಬ್ಯಾಟರಿ ಇದೆ.
ಡಿಸ್‌ಪ್ಲೇ ವಿಬಾಗದಲ್ಲಿ, Vivo X300 Pro ಫೋನ್ ದೊಡ್ಡದಾದ 6.78-ಇಂಚಿನ 1.5K BOE Q10+ LTPO OLED ಡಿಸ್ಪ್ಲೇಯನ್ನು ಹೊಂದಿದೆ. ಆದರೆ ಮೂಲ Vivo X300 ಮಾದರಿಯು 6.31-ಇಂಚಿನ ಡಿಸ್ಪ್ಲೇಯೊಂದಿಗೆ ಬರುತ್ತದೆ. ಇವೆರಡೂ 120Hz ರಿಫ್ರೆಶ್ ರೇಟ್ ಅನ್ನು ಬೆಂಬಲಿಸುತ್ತವೆ, ಇದು ಸ್ಕ್ರಾಲಿಂಗ್ ಮತ್ತು ಅನಿಮೇಷನ್‌ಗಳನ್ನು ಅತ್ಯಂತ ನಯವಾಗಿರುವುದನ್ನು ಖಚಿತಪಡಿಸುತ್ತದೆ. ಜೊತೆಗೆ ಈ ಎರಡೂ ಸಾಧನಗಳು ಶೀಘ್ರ ಪ್ರತಿಕ್ರಿಯೆ ನೀಡುವ ಅಲ್ಟ್ರಾಸಾನಿಕ್ ಇನ್-ಸ್ಕ್ರೀನ್ ಫಿಂಗರ್‌ಪ್ರಿಂಟ್ ಸೆನ್ಸಾರ್ ಮತ್ತು ಧೂಳು ಮತ್ತು ನೀರಿನಿಂದ ರಕ್ಷಣೆಗಾಗಿ IP68 ರೇಟಿಂಗ್ ಅನ್ನು ಹೊಂದಿವೆ.
Vivo X300 ಸರಣಿ: ಬೆಲೆ ಮತ್ತು ಲಭ್ಯತೆ
Vivo X300 ಸರಣಿಯು ಸದ್ಯಕ್ಕೆ ಚೀನಾದಲ್ಲಿ ಮಾತ್ರ ಬಿಡುಗಡೆಯಾಗಿದೆ. ಅಲ್ಲಿ, Vivo X300 ಬೆಲೆ 12GB + 256GB ಆಯ್ಕೆಗೆ CNY 4,399 (ಸರಿಸುಮಾರು ರೂ. 54,700) ರಿಂದ ಪ್ರಾರಂಭವಾಗುತ್ತದೆ. ಇನ್ನು ಪ್ರೊ ಮಾದರಿಯಾಗಿರುವ ವಿವೋ X300 ಪ್ರೊ ಬೆಲೆ ಚೀನಾದಲ್ಲಿ 12GB + 256GB ಗೆ CNY 5,299 (ಸರಿಸುಮಾರು ರೂ. 65,900) ರಿಂದ ಪ್ರಾರಂಭವಾಗುತ್ತದೆ. 1TB ವರೆಗೆ ಶೇಖರಣಾ ಆಯ್ಕೆಗಳು ಮತ್ತು ವೈವಿಧ್ಯಮಯ ಆಕರ್ಷಕ ಬಣ್ಣಗಳಲ್ಲಿ ಈ ಫೋನ್‌ಗಳು ಲಭ್ಯವಿವೆ. ಆದರೆ, ಭಾರತದಲ್ಲಿ ಈ ಪೋನ್‌ಗಳು ಯಾವಾಗ ಬಿಡುಗಗಡೆಯಾಗಲಿವೆ ಎಂಬ ಬಗ್ಗೆ ನಮಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.
ಒಟ್ಟಾರೆಯಾಗಿ, ಹೊಸ Vivo X300 ಸರಣಿಯು ಮೊಬೈಲ್ ತಂತ್ರಜ್ಞಾನದ ಗಡಿಗಳನ್ನು ವಿಸ್ತರಿಸಲು ಹೊರಟಿದೆ ಎನ್ನಬಹುದು. ಈ ಸರಣಿಯಲ್ಲಿ ಪರಿಚಯಿಸಲಾಗಿರುವ ಪ್ರಬಲ ಕ್ಯಾಮೆರಾ ಮತ್ತು ಕಾರ್ಯಕ್ಷಮತೆಯಿಂದಾಗಿ ತಂತ್ರಜ್ಞಾನ ಪ್ರಿಯರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಭಾರತದಲ್ಲಿ ಇದರ ಬಿಡುಗಡೆ ದಿನಾಂಕ ಮತ್ತು ಬೆಲೆಗಳ ಬಗ್ಗೆ ಹೆಚ್ಚಿನ ಮಾಹಿತಿ ಶೀಘ್ರದಲ್ಲೇ ನಿರೀಕ್ಷಿಸಬಹುದು. ಈ ಕುರಿತು ಮುಂದಿನ ದಿನಗಳಲ್ಲಿ ನಾನು ಮತ್ತಷ್ಟು ಮಾಹಿತಿಯನ್ನು ಒದಗಿಸುತ್ತೇನೆ. ಅಲ್ಲಿಯವರೆಗೂ ಕನ್ನಡ ಗಿಜ್‌ಬಾಟ್‌ನಲ್ಲಿ ಯಾವಾಗಲೂ ಲೈವ್ ಆಗಿರಿ.
ಮೂಲ ಮಾಹಿತಿ: gadgets360


Click it and Unblock the Notifications








