ಟೆಲಿಗ್ರಾಮ್ ಮೂಲಕ ಮಹಾ ವಂಚನೆ: ಬಳಕೆದಾರರೇ ಎಚ್ಚರ!
ಪ್ರಮುಖ ಮೆಸೆಜಿಂಗ್ ಆಪ್‌ಗಳು ಬಳಕೆದಾರರಿಗೆ ವಿವಿಧ ಸೇವೆ ನೀಡುತ್ತಿವೆ. ಅದರಂತೆ ಟೆಲಿಗ್ರಾಂ ಬಳಕೆ ಮಾಡಿಕೊಂಡು ಇಲ್ಲೋರ್ವ ವ್ಯಕ್ತಿಗೆ ಮೋಸ ಮಾಡಲಾಗಿದ್ದು, ಈ ಮೂಲಕ ಲಕ್ಷಾಂತರ ಹಣ ಕಳೆದುಕೊಂಡಿದ್ದಾರೆ. ಈ ರೀತಿಯ ಘಟನೆಗಳು ಪದೇ ಪದೇ ನಡೆಯುತ್ತಿದ್ದರೂ ಸಹ ಮೋಸ ಹೋಗುತ್ತಿರುವವರು ಎಚ್ಚೆತ್ತುಕೊಳ್ಳದೆ ಇರುವುದು ದುರಂತದ ವಿಷಯ.
ಹೌದು, ಟೆಲಿಗ್ರಾಮ್ ವಿಶೇಷವಾದ ಆಪ್ ಆಗಿದ್ದು, ಇದರಲ್ಲಿ ದೊಡ್ಡ ಗಾತ್ರದ ಫೈಲ್‌ಗಳನ್ನು ಸೆಂಡ್ ಮಾಡಲು ಹಾಗೂ ಹೆಚ್ಚಿನ ಸಂಖ್ಯೆಯ ಸದಸ್ಯರು ಇರುವ ಗ್ರೂಪ್ ರಚನೆ ಮಾಡಲು ಬಹಳ ಅನುಕೂಲ. ಜೊತೆಗೆ ಬಹಳಷ್ಟು ಮಂದಿ ಇಲ್ಲಿರುವ ಯಾವುದೇ ಮಾಹಿತಿಯನ್ನು ಸುಲಭವಾಗಿ ನಂಬಿಬಿಡುತ್ತಾರೆ. ಇದನ್ನೇ ಅಸ್ತ್ರವಾಗಿಸಿಕೊಂಡಿರುವ ಸ್ಕ್ಯಾಮರ್‌ಗಳು ಮುಗ್ಧ ಜನರಿಗೆ ಮೋಸ ಮಾಡಿಕೊಂಡೇ ಜೀವನ ನಡೆಸುತ್ತಿದ್ದಾರೆ. ಇದಕ್ಕೆ ನಿದರ್ಶನ ಎಂಬಂತೆ ಇಲ್ಲೊಂದು ಘಟನೆ ಜರುಗಿದೆ.

ಏನಿದು ಘಟನೆ?: ಈ ಸಂಬಂಧ ದಿ ಫ್ರೀ ಪ್ರೆಸ್ ಜರ್ನಲ್ ವರದಿ ಪ್ರಸಾರ ಮಾಡಿದೆ. ಪುಣೆಯ ವಾಘೋಲಿ ಮೂಲದ 45 ವರ್ಷದ ನೀಲೇಶ್ ಮೋಹನ್ ಲಾಲ್ ಬಂಗ್ರೆಚಾ ಎಂಬುವರು ಟೆಲಿಗ್ರಾಂ ಮೂಲಕ ಕೆಲಸದ ಸಂಬಂಧ ಒಂದು ಮಾಹಿತಿ ಪಡೆದುಕೊಂಡಿದ್ದಾರೆ. ಅದರಲ್ಲಿ ಅರೆಕಾಲಿಕ ಹುದ್ದೆ ನೀಡುವುದಾಗಿ ಉಲ್ಲೇಖ ಮಾಡಲಾಗಿತ್ತು. ಈ ಮೆಸೆಜ್ ಅನ್ನು ನಂಬಿದ ಇವರಿಗೆ ಸ್ಕ್ಯಾಮರ್‌ಗಳು ಮೂರು ನಾಮ ಹಾಕಿದ್ದಾರೆ.
ಮೋಸ ಮಾಡಿದ್ದು ಹೇಗೆ?: ಸ್ಕ್ಯಾಮರ್‌ಗಳಿಗೆ ಮೋಸ ಮಾಡಲು ಇಂತಹುದೇ ಪ್ಲಾಟ್‌ಫಾರ್ಮ್ ಬೇಕು ಎಂಬ ಅಗತ್ಯ ಇಲ್ಲ. ಜನರು ಎಲ್ಲಿ ಹೆಚ್ಚು ಸಕ್ರಿಯವಾಗಿ ಇರುತ್ತಾರೋ ಆ ಆಪ್‌ಗಳನ್ನು ಬಳಕೆ ಮಾಡಿಕೊಂಡು ತನ್ನ ಕೆಲಸ ಈಡೇರಿಸಿಕೊಳ್ಳುತ್ತಾರೆ. ಅದರಂತೆ ದೆಹಲಿಯ ಪಂಜಾಬಿ ಬಾಗ್‌ನಿಂದ ಆರೋಪಿಗಳಾದ ರಿಯಾ ಶುಕ್ಲಾ, ಪ್ರಾಂಜಲ್ ಸಿಂಘಾಲ್, ಮಾನ್ವಿ ಗೋಯಲ್ ಮತ್ತು ಆವಂತಿಕಾ ಗುಲೇರಿಯಾ ಅವರನ್ನು ಟೆಲಿಗ್ರಾಮ್‌ನಲ್ಲಿ ಸಂಪರ್ಕಿಸಿದ್ದಾರೆ.
ಈ ಆರೋಪಿಗಳು ಬಂಗ್ರೆಚಾ ಅವರಿಗೆ ಉದ್ಯೋಗ ನೀಡುವ ಆಸೆ ತೋರಿಸಿ ನೋಂದಣಿ ಶುಲ್ಕವನ್ನು ಪಾವತಿಸಲು ಮತ್ತು ಲಿಂಕ್‌ಗಳ ಮೇಲೆ ಕ್ಲಿಕ್ ಮಾಡುವಂತಹ ಸರಳ ಟಾಸ್ಕ್‌ಗಳನ್ನು ಪೂರ್ಣಗೊಳಿಸಲು ಕೇಳಿಕೊಂಡಿದ್ದಾರೆ. ಈ ವೇಳೆ ಅವರ ಮಾತನ್ನು ನಂಬಿದ ಬಂಗ್ರೆಚಾ ಫಾರ್ಮ್‌ಗಳನ್ನು ಭರ್ತಿ ಮಾಡುವುದರ ಜೊತೆಗೆ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಲು ಮುಂದಾಗಿದ್ದಾರೆ.

ಇದಾದ ಬಳಿಕ ಅವರು ಆನ್‌ಲೈನ್ ಟಾಸ್ಕ್ಗೆ ಪಾವತಿಸುವುದಾಗಿ ಮತ್ತು ಪೂರ್ಣಗೊಂಡ ನಂತರ ಬೋನಸ್ ನೀಡುವುದಾಗಿ ಭರವಸೆ ನೀಡಿದ್ದಾರೆ. ಅಷ್ಟೇ ಅಲ್ಲದೆ ಪಾವತಿ ಮಾಡಲಾದ ನೋಂದಣಿ ಶುಲ್ಕವನ್ನು ಮರುಪಾವತಿ ಮಾಡಲಾಗುತ್ತದೆ ಎಂದೂ ಸಹ ಹೇಳಿದ್ದಾರೆ. ಆದರೆ, ಬಂಗ್ರೆಚಾ ತಮ್ಮ ಹಣವನ್ನು ಹಿಂಪಡೆಯಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ.ಆದರೆ, ಅಷ್ಟರಲ್ಲಾಗಲೇ ಎಲ್ಲಾ ರೀತಿಯ ಬ್ಯಾಂಕ್ ವಿವರ ಹಾಗೂ ಇನ್ನಿತರೆ ಮಾಹಿತಿಯನ್ನು ಆ ಫಾರ್ಮ್‌ನಲ್ಲಿ ಭರ್ತಿ ಮಾಡಿದ್ದ ಪರಿಣಾಮ ಒಟ್ಟು 8.56 ಲಕ್ಷ ರೂ.ಗಳು ಅವರ ಖಾತೆಯಿಂದ ಮಂಗಮಾಯವಾಗಿದೆ.
ದುರಂತ ಎಂದರೆ ಇದೇ ರೀತಿಯ ಪ್ರಕರಣ ಪುಣೆಯಲ್ಲಿ ಜರುಗಿದ್ದು, ಅವರು 7.5 ಲಕ್ಷ ರೂ. ಹಣ ಕಳೆದುಕೊಂಡಿದ್ದಾರೆ. ಇವೆರಡೂ ಪ್ರಕರಣವನ್ನು ಪೊಲೀಸರು ತನಿಖೆ ನಡೆಸುತ್ತಿದ್ದು, ಇಂತಹ ವಂಚನೆಗಳ ಬಗ್ಗೆ ಎಚ್ಚರವಹಿಸುವಂತೆ ನಾಗರೀಕರಿಗೆ ಎಚ್ಚರಿಕೆ ನೀಡಿದ್ದಾರೆ. ಹಾಗಿದ್ರೆ, ಈ ರೀತಿಯ ಆನ್‌ಲೈನ್ ಟಾಸ್ಕ್ ಸ್ಕ್ಯಾಮ್ ಹೇಗೆಲ್ಲಾ ನಡೆಯುತ್ತದೆ. ಇದರಿಂದ ಜನರು ಹೇಗೆ ಸುಲಭವಾಗಿ ಮರುಳಾಗುತ್ತಾರೆ ಎನ್ನುವುದನ್ನು ನೋಡೋಣ ಬನ್ನಿ.
ಆನ್‌ಲೈನ್ ಟಾಸ್ಕ್ ಸ್ಕ್ಯಾಮ್ ಹೇಗೆ ಜರುಗುತ್ತದೆ?: ಸೈಬರ್ ಅಪರಾಧಿಗಳು ಆನ್‌ಲೈನ್ ಆನ್‌ಲೈನ್ ಟಾಸ್ಕ ಮಾಡಲು ಮೆಸೆಜಿಂಗ್ ಆಪ್‌ಗಳನ್ನೇ ಹೆಚ್ಚಾಗಿ ಬಳಕೆ ಮಾಡುತ್ತಾರೆ. ಪ್ರಮುಖವಾಗಿ ಸೈಬರ್ ಅಪರಾಧಿಗಳು ಟೆಲಿಗ್ರಾಮ್ ಅಥವಾ ಇತರ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಜನರಿಗೆ ಸಂದೇಶಗಳನ್ನು ಕಳುಹಿಸುತ್ತಾರೆ. ಅದರಲ್ಲಿ ವಿಡಿಯೋಗಳನ್ನು ವೀಕ್ಷಿಸುವುದು, ವಿಮರ್ಶೆಗಳನ್ನು ಬರೆಯುವುದು ಅಥವಾ ಗೂಗಲ್ ನಲ್ಲಿ ರೇಟಿಂಗ್‌ಗಳನ್ನು ನೀಡುವ ಕೆಲಸ ಇದಾಗಿರುತ್ತದೆ.
ಇದನ್ನೆಲ್ಲಾ ನಂಬಿ ಮುನ್ನಡೆಯುವ ಅಮಾಯಕರಿಗೆ ಸ್ಕ್ಯಾಮರ್‌ಗಳು ಮುಂದಿನ ಟಾಸ್ಕ್‌ಗಾಗಿ ಠೇವಣಿಗಳನ್ನು ಪಾವತಿಸಲು ಕೇಳುತ್ತಾರೆ. ಹೆಚ್ಚು ಹಣ ಕೊಟ್ಟರೆ ಹೆಚ್ಚು ಟಾಸ್ಕ್ ಗಳು ಸಿಗುತ್ತವೆ ಮತ್ತು ಹೆಚ್ಚು ಹಣ ಗಳಿಸಬಹುದು ಎನ್ನುತ್ತಾರೆ. ಹಣವನ್ನು ಪಾವತಿಸಲು ಜನರನ್ನು ಮನವೊಲಿಸಲು ಸ್ಕ್ಯಾಮರ್‌ಗಳು ವಿವಿಧ ತಂತ್ರಗಳನ್ನು ಬಳಸುತ್ತಾರೆ. ಅದರಲ್ಲಿ ನಕಲಿ ಪ್ರಶಂಸನಾಪತ್ರಗಳು ಅಥವಾ ಇತರ ಜನರ ಗಳಿಕೆಯ ಸ್ಕ್ರೀನ್‌ಶಾಟ್‌ಗಳನ್ನು ತೋರಿಸುವುದು ಹಾಗೂ ಅವರು ಪಾವತಿಸದಿದ್ದರೆ ಅವರ ಖಾತೆಗಳನ್ನು ನಿರ್ಬಂಧಿಸುವುದಾಗಿ ಬೆದರಿಕೆ ಹಾಕುತ್ತಾರೆ.

ಈ ರೀತಿಯ ವಂಚನೆಗಳಿಂದ ಸುರಕ್ಷಿತವಾಗಿರಲು ಈ ಕ್ರಮ ಅನುಸರಿಸಿ: ನೀವು ಈ ರೀತಿಯ ಅವಕಾಶವನ್ನು ನೀಡುವ ಸಂದೇಶವನ್ನು ಏನಾದರೂ ಸ್ವೀಕಾರ ಮಾಡಿದರೆ ಮೊದಲು ಜಾಗರೂಕರಾಗಿರಬೇಕು. ಅದರಲ್ಲೂ ಈ ರೀತಿಯ ಮೆಸೆಜ್ ಅನ್ನು ಸ್ವೀಕಾರ ಮಾಡಿದಾಗ ಆ ಸಂಬಂಧ ಆನ್‌ಲೈನ್ ಮೂಲಕ ಕೆಲವು ಮಾಹಿತಿಯನ್ನು ಪಡೆದುಕೊಳ್ಳಿ. ಜೊತೆಗೆ ಯಾವುದೇ ಕೆಲಸವಾದರೂ ಸರಿ ಹಣವನ್ನು ಮುಂಗಡವಾಗಿ ಪಾವತಿಸಲು ನಿಮ್ಮನ್ನು ಕೇಳುವುದು ಅಥವಾ ಅವಾಸ್ತವಿಕ ಆದಾಯದ ಬರವಸೆ ನೀಡುವುದು ಖಂಡಿತಾ ಮೋಸ ಎಂದು ಭಾವಿಸಿ.


Click it and Unblock the Notifications








