ನಮ್ಮ ದೇಶದ ಹೆಸರು ಬದಲಾಗುತ್ತಿದೆಯೇ?, ಹೀಗಾದ್ರೆ ಟೆಕ್ ವಲಯದಲ್ಲಿ ಆಗುವ ಬಿಕ್ಕಟ್ಟೇನು?
ಭಾರತ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರವಾದರೂ ಸಹ ಇತ್ತೀಚಿನ ದಿನಗಳಲ್ಲಿ ಇಲ್ಲಿ ಆಗುತ್ತಿರುವ ಬೆಳವಣಿಗೆಗಳು ಮುಂದುವರಿದ ರಾಷ್ಟ್ರಗಳೇ ಈ ಕಡೆ ತಿರುಗಿ ನೋಡುವಂತೆ ಮಾಡಲಾಗಿದೆ. ಈ ಮೂಲಕ ಭಾರತದ ಎಲ್ಲಾ ವಲಯದಲ್ಲೂ ಒಂದು ಹೆಜ್ಜೆ ಮುಂದೆ ಇದ್ದು, ಈ ನಡುವೆ ಭಾರತದ ಹೆಸರನ್ನು ಬದಲು ಮಾಡಲಾಗುತ್ತಿದೆಯಾ ಎಂಬ ಚರ್ಚೆ ನಡೆಯುತ್ತಿದೆ.
ಹೌದು,'ಇಂಡಿಯಾ' ವನ್ನು 'ಭಾರತ್'ಎಂದು ಬದಲಾಯಿಸಲು ಭಾರತ ಸರ್ಕಾರವು ಮುಂದಾಗಿದೆ. ಆದರೆ ಭಾರತಕ್ಕೆ ಈ ಹೆಸರು ಏನಾದರೂ ಅಧಿಕೃತ ಆದರೆ ತಮ್ಮ ಹೆಸರಿನಲ್ಲಿ.IN ಅನ್ನು ಬಳಕೆ ಮಾಡುವ ವೆಬ್‌ಸೈಟ್‌ಗಳಿಗೆ ಗುರುತಿನ ಬಿಕ್ಕಟ್ಟು ಎದುರಾಗಲಿದೆ. ಅಷ್ಟೇ ಅಲ್ಲದೆ ಹಲವಾರು ಹೊಸ ಬೆಳವಣಿಗೆಗಳು ಈ ಮೂಲಕ ಕಂಡುಬರುತ್ತವೆ. ಹಾಗಿದ್ರೆ, ಭಾರತದ ಹೆಸರು ಬದಲಾಗುತ್ತದೆಯೇ?, ಬದಲಾದರೆ ಆಗುವ ಸಮಸ್ಯೆಗಳು ಏನು? ಎಂಬ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಇಂಡಿಯಾಗೆ ಭಾರತ್ ಎಂದು ಮರುನಾಮಕರಣ?: ಸೆಪ್ಟೆಂಬರ್ 9 ರಂದು ನಿಗದಿಯಾಗಿರುವ G20 ಔತಣಕೂಟದ ಆಮಂತ್ರಣದ ಪ್ರಸಾರದ ನಂತರ ಊಹಾಪೋಹಗಳು ಹರಿದಾಡುತ್ತಿವೆ. ಈ ವೇಳೆ ಜನರ ಗಮನ ಸೆಳೆದದ್ದು ಪ್ರೆಸಿಡೆಂಟ್ ಆಫ್ ಬಾರತ್ (President of Bharat) ಎಂಬ ಅಕ್ಷರ ನೋಡಿ. ಸಾಮಾನ್ಯವಾಗಿ ಈವರೆಗೂ ಪ್ರೆಸಿಡೆಂಟ್ ಆಫ್ ಇಂಡಿಯಾ(President of India) ಎಂದು ಕರೆಯಲಾಗುತ್ತಿತ್ತು. ಆದರೆ, ಇದೇ ಮೊದಲ ಬಾರಿಗೆ ಈ ರೀತಿ ಉಲ್ಲೇಖ ಮಾಡಲಾಗಿದ್ದು, ಇದು ದೇಶವೇ ಚರ್ಚೆಯಲ್ಲಿ ಮುಳುಗುವಂತೆ ಮಾಡಿದೆ.
ಈ ನಡುವೆ ಸಂಸತ್ತಿನ ವಿಶೇಷ ಅಧಿವೇಶನ ಸಹ ಹತ್ತಿರದಲ್ಲಿದೆ. ಪರಿಣಾಮ ದೇಶದ ಜನರು ಈ ಬಗ್ಗೆ ಒಂದಕ್ಕೊಂದು ಮಾಹಿತಿಯನ್ನು ಜೋಡಣೆ ಮಾಡಿಕೊಂಡು ತಮಗೆ ಇಷ್ಟ ಬಂದ ಹಾಗೆ ಚರ್ಚೆ ಮಾಡುತ್ತಾ ಬರುತ್ತಿದ್ದಾರೆ. ಅಂದರೆ ಮುಂಬರುವ ಸಂಸತ್ತಿನ ಅಧಿವೇಶನದಲ್ಲಿ ಸರ್ಕಾರವು 'ಇಂಡಿಯಾ' ವನ್ನು 'ಭಾರತ್'ಎಂದು ಬದಲಾಯಿಸುವ ನಿರ್ಣಯವನ್ನು ತರುತ್ತದೆ ಎಂದು ಹೇಳುತ್ತಿದ್ದಾರೆ. ಈ ರೀತಿ ಏನಾದರೂ ಆದರೆ .IN ಡೊಮೇನ್‌ಗಳನ್ನು ಬಳಕೆ ಮಾಡುವ ವೆಬ್‌ಸೈಟ್‌ಗಳಿಗೆ ದೊಡ್ಡ ಬಿಕ್ಕಟ್ಟು ಎದುರಾಗಲಿದೆ.
ನಾವು ಈಗ .IN ಬಗ್ಗೆ ಮಾತನಾಡುವ ಮುನ್ನ ಇಂಡಿಯಾ ಮತ್ತು ಭಾರತ್ ಬಗ್ಗೆ ತಿಳಿದುಕೊಂಡರೆ ಉತ್ತಮ. ಭಾರತೀಯ ಸಂವಿಧಾನವು ಇಂಡಿಯಾ ಮತ್ತು ಭಾರತ್ ಎಂದು ಎರಡೂ ರೀತಿಯಲ್ಲೂ ಕರೆಯಲಾಗುತ್ತದೆ. ಆದರೆ, ಇದು ಭಾಷೆಯಲ್ಲಿ ಮಾತ್ರ ಕೆಲವು ಗೊಂದಲ ಉಂಟು ಮಾಡುತ್ತದೆ. ಅಂದರೆ ಇಂಗ್ಲಿಷ್‌ನಲ್ಲಿ ಇಂಡಿಯಾ ಎಂದು ಕರೆಯಲಾಗುತ್ತದೆ. ಹಿಂದಿಯಲ್ಲಿ ಭಾರತ್ ಎಂದು ಕರೆಯಲಾಗುತ್ತದೆ.
ಈಗ ನಾವು .IN ವಿಚಾರಕ್ಕೆ ಬರೋಣ. .IN ಒಂದು ccTLD (ದೇಶದ ಕೋಡ್ ಟಾಪ್ ಲೇಯರ್ ಡೊಮೇನ್) ಹಾಗೂ .IN ಅನ್ನು ಬಳಕೆ ಮಾಡುವ ಯಾವುದೇ ವೆಬ್‌ಸೈಟ್ ತನ್ನ ಡೊಮೇನ್ ಹೆಸರನ್ನು NIXI ನಿಂದ ರಚಿಸಲಾದ INRegistry ಯೊಂದಿಗೆ ನೋಂದಾಯಿಸಿಕೊಂಡಿದೆ ಎಂದು ಜಗತ್ತಿಗೆ ತಿಳಿಸುತ್ತದೆ. ಅಷ್ಟೇ ಅಲ್ಲದೆ .IN ಕೆಲವು ಉಪಡೊಮೇನ್‌ಗಳನ್ನು ಹೊಂದಿದ್ದು ಅದನ್ನು ನಿರ್ದಿಷ್ಟ ಬಳಕೆಗಾಗಿ ಪ್ರತ್ಯೇಕವಾಗಿ ಕಾಯ್ದಿರಿಸಲಾಗಿದೆ. ಅಂದರೆ gov.in ಅನ್ನು ಭಾರತೀಯ ಸರ್ಕಾರದ ಬಳಕೆಗಾಗಿ ಕಾಯ್ದಿರಿಸಲಾಗಿದ್ದು, mil.in ಅನ್ನು ಭಾರತೀಯ ಮಿಲಿಟರಿಯ ಬಳಕೆಗಾಗಿ ಕಾಯ್ದಿರಿಸಲಾಗಿದೆ.
ಇನ್ನು ಈವರೆಗೂ ನಾವು .IN ವೆಬ್‌ಸೈಟ್ ಅನ್ನು ನೋಡಿದಾಗ, ಅದು ಭಾರತೀಯ ವೆಬ್‌ಸೈಟ್ ಎಂದು ಸುಲಭವಾಗಿ ತಿಳಿಯುತ್ತದೆ. ಜೊತೆಗೆ ಇತರ ಎಲ್ಲಾ ccTLD ಗಳಿಗೂ ಅದೇ ಇರುತ್ತದೆ. ಅಂದರೆ .CN ಚೈನೀಸ್ ವೆಬ್‌ಸೈಟ್ .US ಅಮೇರಿಕನ್ ವೆಬ್‌ಸೈಟ್ ಎಂದು ನಾವು ಸುಲಭವಾಗಿ ತಿಳಿದುಕೊಳ್ಳಬಹುದು. ಆದರೆ ಮುಂದಿನ ದಿನಗಳಲ್ಲಿ ಏನಾದರೂ ಭಾರತವನ್ನು ವೆಬ್‌ನಾದ್ಯಂತ ಭಾರತ್ ಎಂದು ಕರೆದರೆ, ದೇಶದ ವೆಬ್‌ಸೈಟ್‌ಗಳಿಗೆ ಹೊಸ TLD ಅನ್ನು ಸಹ ಹೊಂದಿಸಬೇಕಾಗುತ್ತದೆ.
ಅಂದರೆ ಹೊಸ TLD ನಲ್ಲಿ .BH ಅಥವಾ .BR , BT ನಂತಹ ಅಕ್ಷರಗಳನ್ನು ಬಳಕೆ ಮಾಡಬಹುದು. ಇಲ್ಲಿ ನಿರ್ಮಾಣ ಆಗುವ ಸಮಸ್ಯೆ ಏನೆಂದರೆ ಈ ಮೇಲೆ ತಿಳಿಸಿದ ಎಲ್ಲಾ ಅಕ್ಷರಗಳನ್ನು ಈಗಾಗಲೇ ಇತರೆ ದೇಶಗಳಲ್ಲಿ ಬಳಕೆ ಮಾಡಲಾಗುತ್ತಿದೆ. ಅಂದರೆ .BH ಬಹ್ರೇನ್‌ಗೆ ಸೇರಿದರೆ, .BR ಬ್ರೆಜಿಲ್‌ಗೆ ಸೇರಿದೆ. ಇದರೊಂದಿಗೆ .BT ಭೂತಾನ್‌ಗೆ ಸೇರಿದೆ. ಪರಿಣಾಮ ಈ ವಿಷಯದಲ್ಲಿ ಸರ್ಕಾರಕ್ಕೆ ಕೊಂಚ ತಲೆನೋವು ಉಂಟಾಗಬಹುದು.

ಅದಾಗ್ಯೂ ಈ ರೀತಿಯ ಸಮಸ್ಯೆಗಳನ್ನು ಪರಿಹರಿಸಲು BHRT ಎಂದು ಬಳಕೆ ಮಾಡಬಹುದು ಅಥವಾ ಇನ್ನೂ ಹೆಚ್ಚಿನ ಅಕ್ಷರಗಳನ್ನು ಬಳಕೆ ಮಾಡಬಹುದು ಎಂದು ಹೇಳಲಾಗುತ್ತಿದೆ. ಆದರೆ ಈ ವಿಷಯದಲ್ಲಿ ಗಮನಿಸಬೇಕಾದ ಮಾಹಿತಿ ಏನಂದರೆ ಈಗಾಗಲೇ ಇಂಡಿಯಾ ಹಾಗೂ ಭಾರತ್ ಎಂದು ನಮ್ಮ ದೇಶವನ್ನು ಕರೆಯಲಾಗುತ್ತದೆ. ಎರಡೂ ಹೆಸರಿದ್ದರೂ ಸಹ .IN ಡೊಮೇನ್‌ಗಳನ್ನು ಬಳಕೆ ಮಾಡುವ ವೆಬ್‌ಸೈಟ್‌ಗಳಿಗೆ ಯಾವುದೇ ಕಾರ್ಯಾಚರಣೆಯ ಸಮಸ್ಯೆ ಎದುರಾಗಿಲ್ಲ .


Click it and Unblock the Notifications








