ಎರಡನೇ ಅತಿದೊಡ್ಡ ಫೋನ್ ತಯಾರಕ ರಾಷ್ಟ್ರವಾದ ಭಾರತ, 2 ಬಿಲಿಯನ್ 'ಮೇಡ್ ಇನ್ ಇಂಡಿಯಾ' ಶಿಪ್‌ಮೆಂಟ್!
ಭಾರತವನ್ನು ಇಂದು ಇಡೀ ಜಗತ್ತೇ ಕುತೂಹಲದಿಂದ ನೋಡುತ್ತಿದೆ. ಇತ್ತೀಚಿನ ದಿನಗಳಲ್ಲಿ ಟೆಕ್ನಾಲಜಿ ವಲಯದಲ್ಲಿ ಆಗುತ್ತಿರುವ ಬೆಳವಣಿಗೆಗಳು ದೇಶದ ಜನರನ್ನು ಅಭಿವೃದ್ಧಿ ಕಡೆ ಒಂದು ಹೆಜ್ಜೆ ಮುಂದೆ ಇಡುವಂತೆ ಮಾಡಿವೆ. ಈ ಎಲ್ಲಾ ಬೆಳವಣಿಗೆ ನಡುವೆ ಫೋನ್ ವಿಭಾಗದಲ್ಲಿ 'ಮೇಡ್ ಇನ್ ಇಂಡಿಯಾ' (Made in India) ಶಿಪ್‌ಮೆಂಟ್‌ಗಳೊಂದಿಗೆ ಭಾರತ ದೊಡ್ಡ ಸಾಧನೆ ಮಾಡಿದೆ.
ಹೌದು, ಭಾರತದ ಕೆಲವು ವರ್ಷಗಳಿಂದ ಇತರೆ ದೇಶಗಳ ಅವಲಂಬನೆ ಕಡಿಮೆ ಮಾಡಿದೆ. ಈ ಕಾರಣಕ್ಕೆ ದೇಶದಲ್ಲಿ ಹಲವಾರು ರೀತಿಯ ಯೋಜನೆಗಳನ್ನು ಜಾರಿ ಮಾಡಲಾಗಿದ್ದು, 2014 ಮತ್ತು 2022 ರ ನಡುವೆ 2 ಬಿಲಿಯನ್ 'ಮೇಡ್ ಇನ್ ಇಂಡಿಯಾ' ಶಿಪ್‌ಮೆಂಟ್‌ಗಳೊಂದಿಗೆ ಭಾರತದ ಎರಡನೇ ಅತಿದೊಡ್ಡ ಫೋನ್ ತಯಾರಕ ಎಂದು ಗುರುತಿಸಿಕೊಂಡಿದೆ. ಇದಕ್ಕೆ ಸರ್ಕಾರದ ಮೇಕ್ ಇನ್ ಇಂಡಿಯಾ ಉಪಕ್ರಮವೂ ಸೇರಿದಂತೆ ಹಲವಾರು ವಿಷಯಗಳು ಈ ಬೆಳವಣಿಗೆಗೆ ಕಾರಣವಾಗಿದೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ಫೋನ್ ವಲಯದಲ್ಲಿ ಭಾರತದ ದೊಡ್ಡ ಸಾಧನೆ: ಭಾರತದ ಮೊಬೈಲ್ ಫೋನ್ ಉತ್ಪಾದನಾ ಉದ್ಯಮವು(Mobile phone manufacturing industry) 2014 ಮತ್ತು 2022 ರ ನಡುವೆ ಒಟ್ಟು 2 ಬಿಲಿಯನ್ ಮೊಬೈಲ್ ಫೋನ್‌ಗಳನ್ನು ಉತ್ಪಾದಿಸಿದೆ ಎಂದು ತಿಳಿದುಬಂದಿದ್ದು, ಈ ಮೂಲಕ ಟೆಕ್ ವಲಯ ಭಾರೀ ಸಂತಸ ಉಂಟು ಮಾಡಿದೆ. ಯಾಕೆಂದರೆ ವಿಶ್ವದ ಎರಡನೇ ಅತಿದೊಡ್ಡ ಮೊಬೈಲ್ ಉತ್ಪಾದನಾ ದೇಶವಾಗಿ ಈ ಮೂಲಕ ಗುರುತಿಸಿಕೊಂಡಿದೆ.
ಈ ದೊಡ್ಡ ಸಾಧನೆಗೆ ಹಲವಾರು ಕಾರಣಗಳಿವೆಯಾದರೂ ಪ್ರಮುಖವಾಗಿ ಸ್ಥಳೀಯ ಉತ್ಪಾದನೆಗೆ ಪ್ರೋತ್ಸಾಹ ನೀಡಲು ಆರಂಭ ಮಾಡಿದ 'ಮೇಕ್ ಇನ್ ಇಂಡಿಯಾ' ಉಪಕ್ರಮ ಮತ್ತು ಭಾರತದಲ್ಲಿ ಮೊಬೈಲ್ ಫೋನ್‌ಗಳಿಗೆ ಹೆಚ್ಚುತ್ತಿರುವ ಬೇಡಿಕೆ ಸೇರಿದಂತೆ ಹಲವಾರು ಅಂಶಗಳು ಮೊದಲ ಸ್ಥಾನದಲ್ಲಿ ನಿಲ್ಲುತ್ತವೆ. ಅದರಂತೆ ಈ ಬಗ್ಗೆ ಕೌಂಟರ್‌ಪಾಯಿಂಟ್ ರಿಸರ್ಚ್ ವರದಿ ಮಾಡಿದೆ.
2014 ಮತ್ತು 2022 ರ ನಡುವೆ ಭಾರತದ ಮೊಬೈಲ್ ಫೋನ್ ಉತ್ಪಾದನೆಯು 23 ಪ್ರತಿಶತದ ಸಂಯುಕ್ತ ವಾರ್ಷಿಕ ಬೆಳವಣಿಗೆ ದರದಲ್ಲಿ ಏರಿಕೆ ಕಂಡಿದೆ. ಈ ಅವಧಿಯಲ್ಲಿ 'ಮೇಡ್ ಇನ್ ಇಂಡಿಯಾ' ಮೊಬೈಲ್ ಫೋನ್ ಸಾಗಣೆಗಳು 2 ಬಿಲಿಯನ್ ಸಂಚಿತ ಘಟಕಗಳನ್ನು ದಾಟಿದೆ ಎಂದು ತಿಳಿಸಿದೆ. ಇನ್ನು 2014 ರಲ್ಲಿ ಕೇವಲ 19 ಪ್ರತಿಶತದಷ್ಟು ದೇಶೀಯ ಸಾಗಣೆಗಳು ಸ್ಥಳೀಯವಾಗಿ ನಿರ್ಮಾಣ ಆಗಿರುವುದನ್ನು ಈ ವೇಳೆ ಸ್ಮರಿಸಿಕೊಳ್ಳಬಹುದಾಗಿದ್ದು, 2022 ರಲ್ಲಿ 98 ಪ್ರತಿಶತದಷ್ಟು ಹೆಚ್ಚಾಗಿರುವುದು ಹೆಮ್ಮೆಯ ಸಂಗತಿಯಾಗಿದೆ.
ಹೆಚ್ಚುತ್ತಿರುವ ಆಂತರಿಕ ಬೇಡಿಕೆಗಳು, ಹೆಚ್ಚುತ್ತಿರುವ ಡಿಜಿಟಲ್ ಸಾಕ್ಷರತೆ ಮತ್ತು ಉತ್ಪಾದಕರಿಗೆ ಸರ್ಕಾರದ ಪ್ರೋತ್ಸಾಹಗಳು ಈ ಬೆಳವಣಿಗೆಗೆ ಪ್ರಮುಖ ಕಾರಣಗಳಾಗಿವೆ ಎಂದು ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ. ಹಂತ ಹಂತದ ಉತ್ಪಾದನಾ ಕಾರ್ಯಕ್ರಮ (PMP), ಮೇಕ್ ಇನ್ ಇಂಡಿಯಾ, ಪ್ರೊಡಕ್ಷನ್ ಲಿಂಕ್ಡ್ ಇನ್ಸೆಂಟಿವ್ (PLI), ಮತ್ತು ಆತ್ಮ-ನಿರ್ಭರ್ ಭಾರತ್ ನಂತಹ ಉಪಕ್ರಮಗಳು ದೊಡ್ಡ ಮಟ್ಟದಲ್ಲಿ ಇದಕ್ಕೆ ಕೊಡುಗೆ ನೀಡಿವೆ ಎಂದರೆ ತಪ್ಪಾಗಲಾರದು.

ಈ ಸಂಬಂಧ ಕೌಂಟರ್‌ಪಾಯಿಂಟ್‌ನ ಸಂಶೋಧನಾ ನಿರ್ದೇಶಕ ತರುಣ್ ಪಾಠಕ್ ಮಾಹಿತಿ ನೀಡಿದ್ದು, 2014 ರಲ್ಲಿನ ಬೆಳವಣಿಗೆಯನ್ನು ಇಂದಿನ ದಿನಕ್ಕೆ ಹೋಲಿಸಿದರೆ ಸ್ಥಳೀಯ ಮೌಲ್ಯವರ್ಧನೆಯು ಈಗ ಶೇಕಡಾ 15 % ಕ್ಕಿಂತ ಹೆಚ್ಚಿದೆ. ಇದು ಬೆಳೆಯುತ್ತಿರುವ ಹೂಡಿಕೆಗಳು, ಉದ್ಯೋಗಗಳು ಮತ್ತು ಒಟ್ಟಾರೆ ಪರಿಸರ ವ್ಯವಸ್ಥೆಯ ಅಭಿವೃದ್ಧಿಗೆ ಕಾರಣವಾಗಿದೆ ಎಂದು ಉಲ್ಲೇಖ ಮಾಡಿದ್ದಾರೆ.
ಅದರಲ್ಲೂ ಭಾರತವನ್ನು ಸೆಮಿಕಂಡಕ್ಟರ್ ಉತ್ಪಾದನೆ ಮತ್ತು ರಫ್ತು ಕೇಂದ್ರ ಮಾಡುವ ಗುರಿಯೊಂದಿಗೆ ಸರ್ಕಾರವು ಈ ಪ್ರಗತಿಯ ಲಾಭವನ್ನು ಪಡೆಯಲು ಮುಂದಾಗಿದೆ ಎಂದು ತಿಳಿಸಿರುವ ಅವರು, ಈ ನಡುವೆ ದೇಶವು ಹೆಚ್ಚುತ್ತಿರುವ ಸೆಮಿಕಂಡಕ್ಟರ್ಉತ್ಪಾದನೆಯನ್ನು ಗಮನಿಸಬಹುದು ಎಂದು ಹೇಳಿದ್ದಾರೆ. ಜೊತೆಗೆ ಈಗ ಮೊಬೈಲ್ ಫೋನ್ ರಫ್ತು ಮಾಡುವ ಶಕ್ತಿ ಕೇಂದ್ರವಾಗಲು ಪ್ರಯತ್ನಿಸುತ್ತಿದೆ ಎಂದು ತಿಳಿಸಿದ್ದಾರೆ.
ಇನ್ನು ಭಾರತವನ್ನು ಸೆಮಿಕಂಡಕ್ಟರ್ ಹಬ್ (Semiconductor hub) ಮಾಡುವತ್ತ ಸರ್ಕಾರ ಗಮನಹರಿಸಿದೆ ಎಂದು ವಿಶ್ಲೇಷಕ ಪ್ರಾಚಿರ್ ಸಿಂಗ್ ಹೇಳಿಕೆಯನ್ನು ವರದಿಯಲ್ಲಿ ಉಲ್ಲೇಖ ಮಾಡಲಾಗಿದ್ದು, ಈ ವೇಳೆ ಸೆಮಿಕಂಡಕ್ಟರ್ PLI ಯೋಜನೆಯನ್ನು ಪ್ರಸ್ತಾಪಿಸಲಾಗಿದೆ. ಇದು ಭಾರತದಲ್ಲಿ ಸೆಮಿಕಂಡಕ್ಟರ್ ಉತ್ಪಾದನಾ ಘಟಕಗಳನ್ನು ಸ್ಥಾಪಿಸುವ ಕಂಪನಿಗಳಿಗೆ ಆರ್ಥಿಕ ಪ್ರೋತ್ಸಾಹವನ್ನು ನೀಡಲಿದೆ.
ಈ ಯೋಜನೆಗಳಿಗೆ ಮತ್ತಷ್ಟು ಉತ್ತೇಜನ ನೀಡಲು ಕೇಂದ್ರ ಸರ್ಕಾರವು 1 ಟ್ರಿಲಿಯನ್ ಡಾಲರ್ ಅಂದರೆ 83,21,600 ಕೋಟಿ ಗಳನ್ನು ಮೂಲಸೌಕರ್ಯಕ್ಕಾಗಿ ಹೂಡಿಕೆ ಮಾಡುತ್ತಿದೆ ಎಂದು ವರದಿಯಾಗಿದೆ. ಈ ಕ್ರಮಗಳು ಭಾರತದಲ್ಲಿ ಮೊಬೈಲ್ ಫೋನ್ ತಯಾರಿಕೆಯನ್ನು ಮತ್ತಷ್ಟು ಉತ್ತೇಜಿಸುವ ನಿರೀಕ್ಷೆಯಿದೆ.


Click it and Unblock the Notifications








