ಭಾರೀ ಅಗ್ಗದ ದರದಲ್ಲಿ ಸೇವೆ ನೀಡುತ್ತಿದೆ ONDC: ಜೊಮೊಟೊ, ಸ್ವಿಗ್ಗಿಗೆ ಕಠಿಣ ಪ್ರತಿಸ್ಪರ್ಧಿ!
ಆನ್‌ಲೈನ್ ಮೂಲಕ ಆಹಾರ ಆರ್ಡರ್ ಮಾಡುವ ಆಲೋಚನೆ ಬಂದಾಗ ಥಟ್ಟನೆ ನೆನಪಾಗುವುದು ಜೊಮೊಟೊ ಹಾಗೂ ಸ್ವಿಗ್ಗಿ. ಈ ನಡುವೆ ಮತ್ತೊಂದು ಹೊಸ ಪ್ಲಾಟ್‌ಫಾರ್ಮ್ ಮುನ್ನೆಲೆಗೆ ಬರುತ್ತಿದ್ದು, ಈ ಮೂಲಕ ಆನ್‌ಲೈನ್ ಫುಡ್ ಆರ್ಡರ್ ವಿಭಾಗದಲ್ಲಿ ಭಾರೀ ಜನಪ್ರಿಯತೆ ಪಡೆದಿದ್ದ ಜೊಮೊಟೊ ಹಾಗೂ ಸ್ವಿಗ್ಗಿಗೆ ಕಠಿಣ ಸ್ಪರ್ಧೆ ನೀಡಲಿದೆ.
ಹೌದು, ಸಾಮಾನ್ಯವಾಗಿ ನಗರ ಹಾಗೂ ಮಹಾನಗರಗಳಲ್ಲಿ ಜೊಮೊಟೊ ಮತ್ತು ಸ್ವಿಗ್ಗಿ ಅತ್ಯಂತ ಅವಶ್ಯಕ ಆಪ್‌ಗಳಾಗಿದ್ದು,ಈ ಮೂಲಕ ಬೇಕಾದ ಆಹಾರಗಳನ್ನು ಮನೆಗೆ ತರಿಸಿಕೊಳ್ಳುವುದು ವಾಡಿಕೆಯಾಗಿದೆ.ಆದರೆ, ಈ ಆಪ್‌ಗಳು ಇತ್ತೀಚೆಗೆ ತಮ್ಮ ಆರ್ಡರ್ ವಿಭಾಗದಲ್ಲಿ ಬೆಲೆ ಹೆಚ್ಚಳ ಮಾಡಿವೆ. ಈ ನಡುವೆ ONDCತನ್ನದೇ ಆದ ರೀತಿಯಲ್ಲಿ ಜನರಿಗೆ ಹತ್ತಿರವಾಗುತ್ತಿದ್ದು, ಜೊಮೊಟೊ ಹಾಗೂ ಸ್ವಿಗ್ಗಿಗೆ ಈ ಮೂಲಕ ಶಾಕ್ ಆಗಿದೆ. ಹಾಗಿದ್ರೆ, ಬನ್ನಿ ಏನಿದು ONDC?,ಇದಕ್ಕೆ ತಗಲುವ ವೆಚ್ಚ ಏನು?ಎಂಬಿತ್ಯಾದಿ ಮಾಹಿತಿಯನ್ನು ತಿಳಿದುಕೊಳ್ಳೋಣ.

ಏನಿದು ONDC?: ಜೊಮೊಟೊ ಹಾಗೂ ಸ್ವಿಗ್ಗಿ ಆಪ್‌ಗಳು ಪೈಪೋಟಿಯಲ್ಲಿ ಬಳಕೆದಾರರಿಗೆ ಸ್ಪರ್ಧಾತ್ಮಕ ಕೊಡುಗೆ ಮೂಲಕ ತಮ್ಮ ಸೇವೆ ನೀಡುತ್ತಾ ಬರುತ್ತಿವೆ. ಅದರಂತೆ ಭಾರತ ಸರ್ಕಾರ ಈಗಾಗಲೇ ಡಿಜಿಟಲ್ ವಾಣಿಜ್ಯಕ್ಕಾಗಿ ಓಪನ್ ನೆಟ್‌ವರ್ಕ್ ಪ್ಲಾಟ್‌ಫಾರ್ಮ್(ONDC) ಪರಿಚಯಿಸಿದ್ದು, ಇದು ಈ ಎರಡೂ ಪ್ಲಾಟ್‌ಫಾರ್ಮ್‌ಗಳು ವಿಧಿಸುವ ದರಕ್ಕಿಂತ ಭಾರೀ ಪ್ರಮಾಣದಲ್ಲಿ ಕಡಿಮೆ ಬೆಲೆಗೆ ತನ್ನ ಸೇವೆ ನೀಡಲಿದೆ. ಈ ಆಪ್ ಮೂರನೇ ವ್ಯಕ್ತಿಯ ಅಗತ್ಯವಿಲ್ಲದೆ ನೇರವಾಗಿ ಗ್ರಾಹಕರಿಗೆ ಆಹಾರವನ್ನು ಮಾರಾಟ ಮಾಡಲು ರೆಸ್ಟೋರೆಂಟ್‌ಗಳನ್ನು ಅನುಮತಿಸುತ್ತದೆ.
ಈ ಫುಡ್ ಡೆಲಿವರಿ ಟೆಕ್ ಪ್ಲಾಟ್‌ಫಾರ್ಮ್ ONDC ಸೆಪ್ಟೆಂಬರ್ 2022 ರಿಂದಲೂ ಬಳಕೆಯಲ್ಲಿದ್ದರೂ ಸಹ ಬಹುಪಾಲು ಮಂದಿಗೆ ಇದರ ಬಗ್ಗೆ ತಿಳಿದಿಲ್ಲ. ಆದರೆ, ಇತ್ತೀಚೆಗೆ ಸ್ವಿಗ್ಗಿ ಹಾಗೂ ಜೊಮೊಟೊ ತನ್ನ ಸೇವೆಯ ಬೆಲೆಯನ್ನು ಹೆಚ್ಚಿಗೆ ಮಾಡಿದ ಪರಿಣಾಮ ಈ ಆಪ್ ಮುನ್ನೆಲೆಗೆ ಬರುತ್ತಿದೆ. ವರದಿಗಳ ಪ್ರಕಾರ ಇತ್ತೀಚೆಗೆ 10,000 ದೈನಂದಿನ ಆರ್ಡರ್ ಅನ್ನು ಸ್ವೀಕರಿಸಿದಯಂತೆ. ಈ ಮೂಲಕ ಜನರು ವ್ಯಾಪಕವಾಗಿ ಬಳಕೆ ಮಾಡುತ್ತಿದ್ದಾರೆ ಎನ್ನುವ ಮಾಹಿತಿ ಬಹಿರಂಗ ಆಗಿದೆ.

ಅದರಲ್ಲೂ ಸಾಮಾಜಿಕ ಜಾಲತಾಣದಲ್ಲಿ ಈ ಆಪ್ ಬಗ್ಗೆ ಟ್ರೆಂಡ್ ಸೃಷ್ಠಿಯಾಗಿದ್ದು, ಕಳೆದೆರಡು ದಿನಗಳಿಂದ ಬಹಳಷ್ಟು ಜನರು ONDC, ಸ್ವಿಗ್ಗಿ ಮತ್ತು ಜೊಟೊಮೊ ನೀಡುವ ಆಹಾರ ವಿತರಣಾ ಬೆಲೆಗಳನ್ನು ಹೋಲಿಸುವ ಸ್ಕ್ರೀನ್‌ಶಾಟ್‌ಗಳನ್ನು ಪೋಸ್ಟ್ ಮಾಡುತ್ತಿದ್ದಾರೆ. ಇವುಗಳನ್ನು ಗಮನಿಸುತ್ತಿರುವ ಸಾರ್ವಜನಿಕರು ಸ್ವಿಗ್ಗಿ ಮತ್ತು ಜೊಟೊಮೊಗಿಂತ ONDC ಯಲ್ಲಿ ಬೆಲೆ ಭಾರೀ ಕಡಿಮೆ ಇದೆ ಎಂದು ಅರಿತುಕೊಂಡಿದ್ದಾರೆ.
ONDCಯಲ್ಲಿ ಏನೆಲ್ಲಾ ಆರ್ಡರ್ ಮಾಡಬಹುದು? : ಓಪನ್ ನೆಟ್‌ವರ್ಕ್ ಫಾರ್ ಡಿಜಿಟಲ್ ಕಾಮರ್ಸ್ (ONDC) ಅನ್ನು ಭಾರತ ಸರ್ಕಾರವೇ ಅಭಿವೃದ್ಧಿಪಡಿಸಿದ್ದು, ಇದು ರೆಸ್ಟೋರೆಂಟ್‌ಗಳು ತಮ್ಮ ಆಹಾರವನ್ನು ಗ್ರಾಹಕರಿಗೆ ನೇರವಾಗಿ ಮಾರಾಟ ಮಾಡಲು ಅನುಮತಿಸುತ್ತದೆ. ಇದೆಲ್ಲಕ್ಕೂ ಮಿಗಿಲಾಗಿ ಈ ಆಪ್ ಬಳಕೆ ಮಾಡಿಕೊಂಡು ಜನರು ದಿನಸಿ ಸಾಮಾನುಗಳು, ಗೃಹಾಲಂಕಾರಗಳು, ಶುಚಿಗೊಳಿಸುವ ಸಾಮಾನುಗಳು ಸೇರಿದಂತೆ ಇತ್ಯಾದಿಗಳನ್ನು ಸಹ ಆರ್ಡರ್ ಮಾಡಬಹುದಾಗಿದೆ.
ONDC ಬಳಕೆ ಮಾಡಿದ ಮೊದಲ ನಗರ ಇದು: ಸೆಪ್ಟೆಂಬರ್ 2022 ಈ ONDCಯನ್ನು ಸರ್ಕಾರ ಪರಿಚಯಿಸಿದಾಗ ಮೊದಲು ಬಳಕೆ ಮಾಡಿದ್ದು ಬೆಂಗಳೂರಲ್ಲಿ. ಆದರೆ, ಇಂದು ಹಲವಾರು ನಗರಗಳಲ್ಲಿ ವಿಸ್ತಾರವಾಗಿದ್ದು, ಈ ಮೂಲಕ ಜನರು ಉತ್ತಮ ಡೀಲ್‌ಗಳನ್ನು ಪಡೆಯಲು ಸುಲಭವಾಗಿದೆ. ಅದರಲ್ಲೂ ಬೆಲೆ ವಿಚಾರದಲ್ಲಂತೂ ಹುಬ್ಬೇರಿಸುವಂತೆ ಮಾಡಲಾಗಿದೆ. ಉದಾಹರಣೆಗೆ ಹೇಳುವುದಾದರೆ ಸ್ವಿಗ್ಗಿಯಲ್ಲಿ 209ರೂ.ಇರುವ ಆಹಾರ ಜೊಮಾಟೊದಲ್ಲಿ 212ರೂ.ಗಳಿಗೆ ಕಾಣಿಸಿಕೊಂಡಿದೆ.ಆದರೆ, ಇದೇ ಆಹಾರ ONDCಯಲ್ಲಿ 147ರೂ.ಬೆಲೆ ಹೊಂದಿದೆ.

ONDC ಸೇವೆ ಪಡೆಯುವುದು ಹೇಗೆ? : ONDC ಸದ್ಯಕ್ಕೆ ಪ್ರತ್ಯೇಕವಾದ ಆಪ್ ಹೊಂದಿಲ್ಲ. ಆದರೆ, ಸಾಮಾನ್ಯವಾಗಿ ಎಲ್ಲರ ಬಳಿ ಇರುವ ಪೇಟಿಎಮ್ ಮೂಲಕವೇ ಇದರ ಸೇವೆ ಪಡೆದುಕೊಳ್ಳಬಹುದು. ಇದಕ್ಕಾಗಿ ನೀವು ಪೇಟಿಎಮ್ ಆಪ್ ಓಪನ್ ಮಾಡಿ. ನಂತರ ಸರ್ಚ್ ಪಟ್ಟಿಯಲ್ಲಿ ONDC ಎಂದು ಟೈಪ್ ಮಾಡಿ. ಬಳಿಕ ಅಲ್ಲಿ ದಿನಸಿ ಸೇರಿದಂತೆ ಹಲವಾರು ರೀತಿಯ ಅಗತ್ಯ ವಸ್ತುಗಳನ್ನು ಕಾಣಬಹುದು.
ಇದಾದ ನಂತರದಲ್ಲಿ ನೀವು ರೆಸ್ಟೋರೆಂಟ್‌ನಿಂದ ಆಹಾರವನ್ನು ಆರ್ಡರ್ ಮಾಡಲು ಪ್ರಯತ್ನಿಸುತ್ತಿದ್ದರೆ, ONDC ಫುಡ್ ಎಂಬ ವಿಭಾಗಕ್ಕೆ ಹೋಗಿ. ಅಲ್ಲಿ ನೀವು ಆರ್ಡರ್ ಮಾಡಲು ಬಯಸುವ ಆಹಾರಗಳನ್ನು ಪರಿಶೀಲಿಸಿ. ಜೊತೆಗೆ ಯಾವ ರೆಸ್ಟೋರೆಂಟ್‌ನಿಂದ ಆಹಾರವನ್ನು ಆರ್ಡರ್ ಮಾಡಬೇಕು ಎಂಬುದನ್ನು ನಿರ್ಧರಿಸಿ. ಆದರೆ, ಈ ONDC ಹೊಸದಾಗಿರುವುದರಿಂದ ಎಲ್ಲಾ ರೆಸ್ಟೋರೆಂಟ್‌ಗಳು ಈ ಪ್ಲಾಟ್‌ಫಾರ್ಮ್‌ನಲ್ಲಿ ಲಭ್ಯ ಇರುವುದಿಲ್ಲ ಎಂಬುದು ನಿಮ್ಮ ಗಮನಕ್ಕೆ ಇರಲಿ.


Click it and Unblock the Notifications








