ಭಾರತದಲ್ಲಿ 1 ಲಕ್ಷಕ್ಕೂ ಅಧಿಕ ಬೆಲೆಯ ಫೋನ್‌ಗಳನ್ನೇಕೆ ಲಾಂಚ್ ಮಾಡಲಾಗುತ್ತಿದೆ? ಜನ ನಿಜಕ್ಕೂ ಖರೀದಿಸ್ತಾರಾ!?
ಭಾರತದಲ್ಲಿರುವ ಬಹಳಷ್ಟು ಜನರು ಸ್ಮಾರ್ಟ್‌ಫೋನ್ (Smartphone) ಖರೀದಿ ಮಾಡುವಾಗ ಬೆಲೆಗೆ ಹೆಚ್ಚಿನ ಗಮನಹರಿಸುತ್ತಾರೆ. ಅದರಲ್ಲೂ ಬಜೆಟ್ ಬೆಲೆಯಲ್ಲಿ ಯಾವುದಾದರೂ ಅತ್ಯುತ್ತಮವಾದ ಫೋನ್ ಸಿಕ್ಕರೆ ಅವರಿಗೆ ಸಂಭ್ರಮ. ಅದರಂತೆ ಪ್ರಮುಖ ಕಂಪೆನಿಗಳು ವಿವಿಧ ಫೀಚರ್ಸ್ ಆಯ್ಕೆಯ ಅದೆಷ್ಟೋ ಬಜೆಟ್ ಶ್ರೇಣಿಯ (Budget range) ಫೋನ್‌ಗಳನ್ನು ಲಾಂಚ್ ಮಾಡಿವೆ.
ಹೌದು, ಬಜೆಟ್ ಬೆಲೆ ಹಾಗೂ ಭಾರತೀಯರಿಗೂ ಒಂದು ರೀತಿಯ ಸಂಬಂಧ. ಹಾಗಂದ ಮಾತ್ರಕ್ಕೆ ಭಾರತದಲ್ಲಿ ಬಹಳಷ್ಟು ಜನರು ಕೇವಲ ಇದೇ ರೀತಿಯ ಫೋನ್ ಖರೀದಿ ಮಾಡುತ್ತಾರೆ ಎಂದುಕೊಂಡರೆ ನಿಮ್ಮ ನಂಬಿಕೆ ತಪ್ಪು. ಯಾಕೆಂದರೆ ಪ್ರೀಮಿಯಂ ಫೋನ್‌ಗಳಿಗೆ (Premium phone) ಭಾರತ ಮುಖ್ಯ ಮಾರುಕಟ್ಟೆಯಾಗಿದೆ. ಉದಾಹರಣೆಗೆ ಆಪಲ್ ಫೋನ್‌ಗಳಿಗೆ ಭಾರತದಲ್ಲಿ ಹೆಚ್ಚಾಗುತ್ತಿರುವ ಕ್ರೇಜ್ ಅನ್ನು ನೀವು ಗಮನಿಸಬಹುದು. ಈ ಎಲ್ಲಾ ಬೆಳವಣಿಗೆ ನಡುವೆ ಆಂಡ್ರಾಯ್ಡ್ ಕಂಪೆನಿಗಳು ಒಂದು ಲಕ್ಷಕ್ಕೂ ಅಧಿಕ ಮೌಲ್ಯದ ಫೋನ್‌ಗಳನ್ನು ಇಲ್ಲಿ ಲಾಂಚ್ ಮಾಡಲು ಸಜ್ಜಾಗಿವೆ.

ಭಾರತದಲ್ಲಿನ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ 20,000 ರೂ.ಕ್ಕಿಂತ ಕಡಿಮೆ ಬೆಲೆಯ ಡಿವೈಸ್‌ಗಳು ಹೆಚ್ಚು ಸದ್ದು ಮಾಡುತ್ತಿರುವ ಬೆನ್ನಲ್ಲೇ 1 ಲಕ್ಷಕ್ಕಿಂತ ಹೆಚ್ಚಿನ ಬೆಲೆಯ ಸ್ಮಾರ್ಟ್‌ಫೋನ್‌ಗಳು ಸಹ ಇಲ್ಲಿ ತಮ್ಮ ನೆಲೆಯನ್ನು ಭದ್ರಪಡಿಸಿಕೊಳ್ಳುತ್ತಿವೆ. ಈ ಸಂಬಂಧ ಎಕನಾಮಿಕ್ ಟೈಮ್ಸ್‌ನ ವರದಿ ಮಾಡಿದ್ದು, 1 ಲಕ್ಷಕ್ಕಿಂತ ಹೆಚ್ಚಿನ ಬೆಲೆಯ ಸ್ಮಾರ್ಟ್‌ಫೋನ್‌ಗಳ ಬೇಡಿಕೆಯು ಒಂದು ವರ್ಷದಲ್ಲಿ 100% ವರೆಗೆ ಏರಿದೆ ಎಂದು ಉಲ್ಲೇಖಿಸಿದೆ.
ಪ್ರಸ್ತುತ ಈ ಪ್ರೀಮಿಯಂ ವಿಭಾಗವನ್ನು ಮುನ್ನಡೆಸುತ್ತಿರುವ ಕಂಪನಿಗಳ ವಿಭಾಗದಲ್ಲಿ ಆಪಲ್ ಮತ್ತು ಸ್ಯಾಮ್‌ಸಂಗ್ ಇದೆ. ಇದು ಚೀನಾದ ಪ್ರತಿಸ್ಪರ್ಧಿಗಳಾದ ಒಪ್ಪೋ, ಒನ್‌ಪ್ಲಸ್ ಮತ್ತು ಟೆಕ್ನೋ (Oppo, OnePlus, Techno) ಅನ್ನು ಫ್ಲ್ಯಾಗ್‌ಶಿಪ್ ಅಲ್ಟ್ರಾ ಪ್ರೀಮಿಯಂ ಹ್ಯಾಂಡ್‌ಸೆಟ್‌ಗಳನ್ನು ಪ್ರಾರಂಭಿಸಲು ಪ್ರೇರೇಪಿಸಿದೆ ಎಂದು ತಿಳಿದುಬಂದಿದೆ. ಅದರಲ್ಲೂ ಐಫೋನ್ 15 ಸರಣಿ (iPhone 15 series) ಸ್ಟಾಕ್ ಖಾಲಿಯಾಗುತ್ತಿರುವುದು ಭಾರತದಲ್ಲಿ ಈ ಪ್ರೀಮಿಯಂ ಫೋನ್‌ಗಳ ಮೇಲಿನ ಮೋಹ ಎಷ್ಟಿದೆ ಎಂದು ತೋರಿಸುವಂತಿದೆ.
ಆಪಲ್ ಫೋನ್‌ಗಳನ್ನು ಖರೀದಿ ಮಾಡಲು ಈಗ ಗ್ರಾಹಕರು ವಾರಗಟ್ಟಲೆ ಕಾಯಬೇಕಿದೆ. ಅದಾಗ್ಯೂ ಜನರು ಬೇಸರ ಮಾಡಿಕೊಳ್ಳದೆ ಈ ಫೋನ್‌ಗಳು ಯಾವಾಗ ತಮ್ಮ ಕೈ ಸೇರಲಿವೆಯೋ ಎಂಬ ಕಾತುರದಿಂದ ಇದ್ದಾರೆ. ಇನ್ನು ಮೂರನೇ ವ್ಯಕ್ತಿಯ ಚಿಲ್ಲರೆ ವ್ಯಾಪಾರಿಗಳ ಪ್ರಕಾರ, ಕಳೆದ ವರ್ಷದಿಂದ ಈ ಪ್ರೀಮಿಯಂ ಫೋನ್‌ಗಳ ಬೇಡಿಕೆಯು ದ್ವಿಗುಣಗೊಂಡಿದೆಯಂತೆ. ಚಿಲ್ಲರೆ ವ್ಯಾಪಾರಿಗಳು ಈ ಹೆಚ್ಚಿನ ಬೇಡಿಕೆಯನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ.
ಇಷ್ಟೇ ಅಲ್ಲದೆ ಮುಂಗಡ ಬುಕಿಂಗ್‌ಗಳಿಗೂ ಸಹ ಇನ್ನೂ ಫೋನ್‌ಗಳನ್ನು ತಲುಪಿಸಲು ಸಾಧ್ಯವಾಗಿಲ್ಲ. ವಿತರಣೆ ಇನ್ನೂ ಆಗದಿದ್ದರೂ ಸಹ ಜನರು ಅದನ್ನು ರದ್ದು ಮಾಡುವ ಕೆಲಸವನ್ನೂ ಸಹ ಮಾಡುತ್ತಿಲ್ಲ. ಅಷ್ಟೇ ಅಲ್ಲದೆ ಪ್ರೊ ಸರಣಿಗಾಗಿ ಮೂರರಿಂದ ನಾಲ್ಕು ವಾರಗಳು ಕಾಯಬೇಕಿದೆ. ಆದರೂ ಜನರು ಈ ಫೋನ್‌ಗಳನ್ನು ಪಡೆದೇ ತೀರುತ್ತೇವೆ ಎಂಬ ಮನೋಭಾವದಲ್ಲಿ ಇದ್ದಾರೆ ಎಂದು ಹೇಳಲಾಗಿದೆ.
ಸ್ಯಾಮ್‌ಸಂಗ್ ಕೂಡ ತನ್ನ ಇತ್ತೀಚಿನ ಫೋಲ್ಡಬಲ್ ಫೋನ್‌ಗಳಿಗೆ ಅಗಾಧ ಪ್ರತಿಕ್ರಿಯೆಯನ್ನು ಪಡೆದುಕೊಂಡಿದೆ. ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಫ್ಲಿಪ್ 5 (Samsung Galaxy Z Flip 5) ಮತ್ತು ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಫೋಲ್ಡ್ 5 (Samsung Galaxy Z Fold 5) ಸ್ಯಾಮ್‌ಸಂಗ್ ಕೂಡ ತನ್ನ ಹೊಸ ಫ್ಲಿಪ್, ಫೋಲ್ಡ್ ಮತ್ತು ಅಲ್ಟ್ರಾ ಸ್ಮಾರ್ಟ್‌ಫೋನ್‌ಗಳ ಸೇಲ್ ತಮ್ಮ ಹಿಂದಿನ ಮಾದರಿಗಳಿಗೆ ಹೋಲಿಸಿದರೆ 50% ರಷ್ಟು ಹೆಚ್ಚಾಗಿದೆ ಎಂದು ಸ್ಯಾಮ್‌ಸಂಗ್‌ನ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸಣ್ಣ ಪಟ್ಟಣಗಳಲ್ಲಿಯೂ ಸಹ ಇಎಂಐ ಆಯ್ಕೆ ಇರುವುದರಿಂದ ಈ ಫೋನ್‌ಗಳಿಗೆ ಹೆಚ್ಚಿನ ಬೇಡಿಕೆ ಇದೆ. ಸ್ಯಾಮ್‌ಸಂಗ್‌ನ ಹೊಸ ಫ್ಲಿಪ್ 5 ಮತ್ತು ಫೋಲ್ಡ್ 5 ಬೆಲೆ 1,84,999 ರೂ.ಗಳಾಗಿದೆ. ಹಿಂದಿನ ಪೀಳಿಗೆಯ ಸ್ಮಾರ್ಟ್‌ಫೋನ್‌ಗಳು 100,000 ಯುನಿಟ್ ಪ್ರೀ ಬುಕಿಂಗ್ ಪಡೆದಿದ್ದವು. ಆದರೆ, ಈಗ 150,000 ಯುನಿಟ್‌ಗಳ ಮುಂಗಡ ಬುಕಿಂಗ್‌ಗಳನ್ನು ಹೊಂದಿದೆ ಎಂದು ಎಕ್ಸಿಕ್ಯೂಟಿವ್ ಓರ್ವರು ತಿಳಿಸಿದ್ದಾರೆ.

ಜೊತೆಗೆ ಸ್ಯಾಮ್‌ಸಂಗ್ ಇಂಡಿಯಾ ಅಧ್ಯಕ್ಷ ಮತ್ತು ಮುಖ್ಯ ಕಾರ್ಯನಿರ್ವಾಹಕ ಜೆಬಿ ಪಾರ್ಕ್ ಇತ್ತೀಚೆಗೆ ಗ್ಯಾಲಕ್ಸಿ Z ಫ್ಲಿಪ್ 5 ಮತ್ತು ಫೋಲ್ಡ್ 5 ನ ಯಶಸ್ಸು ಭಾರತೀಯ ಗ್ರಾಹಕರು ಹೊಸ ಆವಿಷ್ಕಾರಗಳಿಗೆ ಅತ್ಯಂತ ಸಂವೇದನಾಶೀಲರಾಗಿದ್ದಾರೆ ಎಂದು ತೋರಿಸುತ್ತದೆ ಎಂದಿದ್ದಾರೆ. ಈ ಮೂಲಕ ಭಾರತದಲ್ಲಿ ದುಬಾರಿ ಬೆಲೆಯ ಫೋನ್‌ಗಳಿಗೆ ಗ್ರಾಹಕರು ಸದಾ ಹಾತೊರೆಯುತ್ತಿದ್ದಾರೆ ಎನ್ನುವುದನ್ನು ಕಂಪೆನಿಗಳು ಕಂಡುಕೊಂಡಿವೆ.
ಅದರಂತೆ ಈಗ ಒನ್‌ಪ್ಲಸ್ ಭಾರತದಲ್ಲಿ ತನ್ನ ಮೊದಲ ಫೋಲ್ಡಿಂಗ್ ಫೋನ್ ಅನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ. ಇದನ್ನು ಒನ್‌ಪ್ಲಸ್ ಓಪನ್ ಎಂದು ಕರೆಯುವ ಸಾಧ್ಯತೆಯಿದೆ. ಊಹಾಪೋಹಗಳ ಪ್ರಕಾರ ಇದರ ಬೆಲೆ ಒಂದು ಲಕ್ಷಕ್ಕೂ ಹೆಚ್ಚು. ಒಪ್ಪೋ ಸಹ ಮುಂದಿನ ವಾರ ಭಾರತದಲ್ಲಿ ತನ್ನ ಎರಡನೇ ಫ್ಲಿಪ್ ಫೋನ್ ಅನ್ನು ಬಿಡುಗಡೆ ಮಾಡಲು ಸಿದ್ಧವಾಗಿದ್ದು, ಇದಕ್ಕೆ ಫೈಂಡ್ N3 ಫ್ಲಿಪ್ (OPPO Find N3 Flip) ಎಂದು ಹೆಸರಿಸಲಾಗಿದೆ.
ಒಪ್ಪೋ ಇಂಡಿಯಾದ ಮುಖ್ಯ ಮಾರುಕಟ್ಟೆ ಅಧಿಕಾರಿ ದಮಯಂತ್ ಸಿಂಗ್ ಖನೋರಿಯಾ ಈ ಸಂಬಂಧ ಮಾತನಾಡಿದ್ದು, ಕಂಪನಿಯು ತನ್ನ ಮುಂಬರುವ ಫೋಲ್ಡಬಲ್ ಮಾಡೆಲ್ ಫೈಂಡ್ N3 ಫ್ಲಿಪ್‌ನ ಹಿಂದಿನ ಫ್ಲ್ಯಾಗ್‌ಶಿಪ್‌ಗೆ ಹೋಲಿಸಿದರೆ 2 ಪಟ್ಟು ಹೆಚ್ಚು ಮಾರಾಟವನ್ನು ನಿರೀಕ್ಷಿಸುತ್ತಿದೆ ಎಂದಿದ್ದಾರೆ. ಟೆಕ್ನೋ ಕೂಡ ಈ ವರ್ಷ ಭಾರತದಲ್ಲಿ ತನ್ನ ಫೋಲ್ಡಿಂಗ್ ಫೋನ್‌ಗಳನ್ನು ಬಿಡುಗಡೆ ಮಾಡಿದೆ.
ಕಂಪನಿಯು ಟೆಕ್ನೋ ಫ್ಯಾಂಟಮ್ ವಿ ಫ್ಲಿಪ್ (tecno Phantom V Flip) ನ 8 GB RAM + 256 GB ವೇರಿಯಂಟ್ ಫೋನ್ ಅನ್ನು ಲಾಂಚ್ ಮಾಡಿದೆ. ಇದರ ಬೆಲೆ 49,999ರೂ.ಗಳಾಗಿದೆ. ಇದರೊಂದಿಗೆ 12 GB RAM + 256 GB ಸ್ಟೋರೇಜ್‌ನ ಫೋನ್ ಅನ್ನು 82,499ರೂ.ಗಳಿಗೆ ಪರಿಚಯಿಸಿದೆ. ಈಗಾಗಲೇ ಈ ಫೋನ್‌ಗಳಿಗೆ ಭಾರೀ ಬೇಡಿಕೆ ಇದ್ದು, ಬಳಕೆದಾರರು ಹೊಸ ಹೊಸ ಫೋನ್‌ಗಳ ಮೂಲಕ ವಿಭಿನ್ನವಾದ ಸೌಲಭ್ಯ ಪಡೆದುಕೊಳ್ಳುತ್ತಿರುವುದು ಮಾತ್ರ ಸುಳ್ಳಲ್ಲ.


Click it and Unblock the Notifications








