ಗೃಹಲಕ್ಷ್ಮಿ ಯೋಜನೆ ಸಂಬಂಧ ಸಂತಸದ ಸುದ್ದಿ ನೀಡಿದ ಸಿದ್ದರಾಮಯ್ಯ! 1.33 ಕೋಟಿ ಮಹಿಳೆಯರಿಂದ ನೋಂದಣಿ
ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ (Congress Govt) ಅಧಿಕಾರಕ್ಕೆ ಬಂದಾಗಿನಿಂದ ಗ್ಯಾರಂಟಿ ಯೋಜನೆಗಳು ಬಹಳ ಸದ್ದು ಮಾಡುತ್ತಿವೆ. ಅದರಲ್ಲೂ ಇತ್ತೀಚೆಗೆ ಯಾರೆಲ್ಲಾ ಗೃಹಲಕ್ಷ್ಮಿಗೆ (Gruhalakshmi Scheme) ಅರ್ಹರು ಎಂಬ ಲಿಸ್ಟ್ ಅನ್ನು ಸಹ ಸರ್ಕಾರ ಪ್ರಕಟಿಸಿದ್ದು, ಈ ಮೂಲಕ ಹಲವರು ಸಂತವಾಗಿದ್ದರೆ ಇನ್ನೂ ಕೆಲವರು ಇರದಲ್ಲಿ ನಮ್ಮ ಲಿಸ್ಟ್ ಇಲ್ಲವಲ್ಲ ಎಂಬ ಬೇಸರ ಸಹ ಹೊರಹಾಕುತ್ತಿದ್ದಾರೆ. ಇದೆಲ್ಲದರ ನಡುವೆ ಸಿದ್ದರಾಮಯ್ಯ ಈ ಯೋಜನೆ ಸಂಬಂಧ ಸಂತಸದ ಸುದ್ದಿ ನೀಡಿದ್ದಾರೆ.
ಹೌದು, ಗೃಹಲಕ್ಷ್ಮಿ ಯೋಜನೆಗೆ ಎಲ್ಲಾ ಮಹಿಳೆಯರು ನೋಂದಾವಣೆ ಮಾಡಿಸಿಕೊಳ್ಳುತ್ತಿದ್ದಾರೆ. ಈವರೆಗೆ 1.33 ಕೋಟಿ ಮಹಿಳೆಯರು ನೋಂದಾಯಿಸಿಕೊಂಡಿದ್ದು, ಗೃಹ ಲಕ್ಷ್ಮಿ ಭಾರತದ ಅತಿದೊಡ್ಡ ಯೋಜನೆಗಳಲ್ಲಿ ಒಂದಾಗಿದೆ ಎಂದು ಕರ್ನಾಟಕ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಮಹಿಳೆಯರಿಗೆ ಮಾಸಿಕ 2,000ರೂ. ಒದಗಿಸುವ ಯೋಜನೆಗೆ ವಾರ್ಷಿಕ 32,000 ಕೋಟಿ ವ್ಯಯಿಸಲು ಸರ್ಕಾರ ಸಿದ್ಧವಾಗಿದೆ. ಹಾಗಿದ್ರೆ, ಈ ಯೋಜನೆ ಎಂದಿನಿದ ಅಧಿಕೃತವಾಗಿ ಲಾಂಚ್ ಆಗಲಿದೆ?, ಯಾರೆಲ್ಲಾ ಅರ್ಹರು ಎಂಬುದನ್ನು ಚೆಕ್ ಮಾಡುವುದು ಹೇಗೆ?, ಜೊತೆಗೆ ಹೊಸದಾಗಿ ಈ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ? ಎಂಬ ಮಾಹಿತಿ ಇಲ್ಲಿದೆ ನೋಡಿ.

ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅವರು ಈ ಬಗ್ಗೆ ಮಾಹಿತಿ ನೀಡಿದ್ದು, ಕರ್ನಾಟಕದಲ್ಲಿ ಆಗಸ್ಟ್ 27, 2023 ರಂತೆ 1.33 ಕೋಟಿ ಮಹಿಳೆಯರು ಗೃಹ ಲಕ್ಷ್ಮಿ ಯೋಜನೆಗೆ ನೋಂದಾಯಿಸಿಕೊಂಡಿದ್ದಾರೆ. ಈ ಮೂಲಕ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರದ ನಾಲ್ಕನೇ ಭರವಸೆಯಾದ ಗೃಹ ಲಕ್ಷ್ಮಿ ಯೋಜನೆಯು ಭಾರತದ ಅತಿದೊಡ್ಡ ಸರ್ಕಾರಿ ಕಾರ್ಯಕ್ರಮಗಳಲ್ಲಿ ಒಂದಾಗಲಿದೆ ಎಂದು ತಿಳಿಸಿದ್ದಾರೆ. ಜೊತೆಗೆ ಇದಕ್ಕಾಗಿ ಸರ್ಕಾರ 32,000 ಕೋಟಿ ವೆಚ್ಚ ಮಾಡುತ್ತದೆ ಎಂದೂ ಸಹ ಹೇಳಿದ್ದಾರೆ.
ಈ ಯೋಜನೆ ಜಾರಿ ಯಾವಾಗ?: ಆಗಸ್ಟ್ 30 ರಂದು ಮೈಸೂರಿನಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಈ ಯೋಜನೆಗೆ ಚಾಲನೆ ನೀಡಲಿದ್ದಾರೆ. ಇದು ಸರ್ಕಾರದ ಕಾರ್ಯಕ್ರಮ. ಖರ್ಗೆ ಮತ್ತು ರಾಹುಲ್ ಗಾಂಧಿ ಅವರು ಸಂಸತ್ತಿನ ಸದಸ್ಯರಾಗಿ ಭಾಗವಹಿಸುತ್ತಿದ್ದಾರೆ. ಗೃಹ ಲಕ್ಷ್ಮಿ ಯೋಜನೆ ಬಿಡುಗಡೆಯು ಪಕ್ಷದ ಕಾರ್ಯಕ್ರಮವಲ್ಲ ಎಂದು ಇದೇ ವೇಳೆ ತಿಳಿಸಿದ್ದಾರೆ.
ಇನ್ನು ಫಲಾನುಭವಿಗಳಿಗೆ ತಿಂಗಳಿಗೆ 2,000ರೂ.ಗಳನ್ನು ನೀಡುವ ಯೋಜನೆಗೆ ಇದುವರೆಗೆ 1.33 ಕೋಟಿ ಮಹಿಳೆಯರು ನೋಂದಾಯಿಸಿಕೊಂಡಿದ್ದಾರೆ. ಈ ವರ್ಷ ಸರ್ಕಾರವು ಈ ಯೋಜನೆಗೆ 18,000 ಕೋಟಿ ಖರ್ಚು ಮಾಡಲಿದೆ. ಮುಂದಿನ ವರ್ಷ ಸುಮಾರು 32,000 ಕೋಟಿ ವೆಚ್ಚವಾಗಲಿದೆ. ಶಕ್ತಿ, ಅನ್ನ ಭಾಗ್ಯ ಮತ್ತು ಗೃಹ ಜ್ಯೋತಿ ನಂತರ ಬಿಡುಗಡೆ ಮಾಡಲಾಗುತ್ತಿರುವ ನಾಲ್ಕನೇ ಗ್ಯಾರಂಟಿ ಇದಾಗಿದೆ ಎಂದು ಹೇಳಿದರು.
ಅರ್ಹರ ಲಿಸ್ಟ್ ಚೆಕ್ ಮಾಡುವುದು ಹೇಗೆ?:
ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯಾ ಎಂದು ತಿಳಿದುಕೊಳ್ಳಲು ನೀವು ಅಧಿಕೃತ ಸೈಟ್‌ಗೆ ಭೇಟಿ ನೀಡಬೇಕಿದೆ. ಇದಕ್ಕಾಗಿ ನೀವು https://ahara.kar.nic.in/WebForms/Show_Village_List.aspx ವೆಬ್‌ಸೈಟ್ ಬಳಕೆ ಮಾಡಿಕೊಳ್ಳಬಹುದು.
ಇದಾದ ನಂತರದಲ್ಲಿ ನಿಮ್ಮ ಜಿಲ್ಲೆ, ತಾಲೂಕು, ಗ್ರಾಮ ಪಂಚಾಯಿತಿ ಹಾಗೂ ಊರಿನ ಹೆಸರನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ ಇದಾದ ಬಳಿಕ ಸಬ್‌ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿದ್ರೆ ಗ್ರಾಮದಲ್ಲಿನ ಫಲಾನುಭವಿಗಳ ಪಟ್ಟಿ ಕಾಣಿಸಿಕೊಳ್ಳಲಿದ್ದು, ಅದರಲ್ಲಿ ನಿಮ್ಮ ಹೆಸರನ್ನು ಪರಿಶೀಲನೆ ಮಾಡಿಕೊಳ್ಳಬಹುದು.
ಅದಾಗ್ಯೂ ಗೃಹಲಕ್ಷ್ಮಿ ಯೋಜನೆಗ ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರು ಕಾಣಿಸಿಲ್ಲ ಎಂದರೆ ಆತಂಕ ಬೇಡ. ಯಾಕೆಂದರೆ ಆಗಸ್ಟ್ 30 ರಂದು ಅಧಿಕೃತ ಚಾಲನೆ ಸಿಗುವುದರಿಂದ ಅಲ್ಲಿಯ ತನಕ ನಿಮ್ಮ ಹೆಸರು ಲಿಸ್ಟ್‌ನಲ್ಲಿ ಅಪ್ಡೇಟ್ ಆಗಲಿದೆ. ಅದಾಗ್ಯೂ ಏನಾದರೂ ಸಮಸ್ಯೆ ಇದ್ದರೆ ಮತ್ತೆ ಅರ್ಜಿ ಸಲ್ಲಿಸಲು ಮುಂದಾಗಿ. ಅರ್ಜಿ ಸಲ್ಲಿಕೆಗೆ ಯಾವುದೇ ಅಂತಿಮ ದಿನಾಂಕ ಇಲ್ಲ.

ಅರ್ಜಿ ಸಲ್ಲಿಸುವುದು ಹೇಗೆ?
ಗೃಹಲಕ್ಷ್ಮಿ ಯೋಜನೆಯಲ್ಲಿ ಜನರಿಗೆ ನೇರವಾಗಿ ಹಣ ನೀಡುವುದರಿಂದಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆ ಮಾಡಲು ಅನುಮತಿ ನೀಡಿಲ್ಲ. ಈ ಕಾರಣಕ್ಕೆ ಜನರು ಸರ್ಕಾರ ನಿಗದಿಪಡಿಸಿದ ಕೇಂದ್ರಗಳಲ್ಲಿ ಮಾತ್ರ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ. ಅಂದರೆ ರಾಜ್ಯಾದ್ಯಂತ ಇರುವ ಕರ್ನಾಟಕ ಒನ್, ಗ್ರಾಮ ಒನ್, ಬೆಂಗಳೂರು ಒನ್, ಬಾಪೂಜಿ ಸೇವಾ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದು.
ಈ ಮೊದಲು ವಾಟ್ಸಾಪ್‌ನಲ್ಲಿ ಮೆಸೆಜ್ ಮಾಡಿ ಕಚೇರಿಗೆ ಯಾವಾಗ ಹೋಗಬೇಕು ಎಂಬ ಪೂರ್ವ ಅನುಮತಿಯನ್ನು ಪಡೆಯಬೇಕಿತ್ತು. ಆದರೆ, ಈಗ ಅದನ್ನೂ ಸಹ ತೆಗೆದುಹಾಕಲಾಗಿದ್ದು, ಮಹಿಳೆಯರು ಆಧಾರ್ ಕಾರ್ಡ್, ರೇಷನ್ ಕಾರ್ಡ್ ಹಾಗೂ ಬ್ಯಾಂಕ್ ವಿವರಗಳೊಂದಿಗೆ ನೇರವಾಗಿ ಹೋಗಿ ಅರ್ಜಿ ಸಲ್ಲಿಸಬಹುದಾಗಿದೆ.


Click it and Unblock the Notifications








