Anna Bhagya:ಇಷ್ಟೊಂದು ಲಕ್ಷ ಜನರು ಅನ್ನಭಾಗ್ಯ ಯೋಜನೆಯ ಹಣದಿಂದ ವಂಚಿತರೇ? ತಕ್ಷಣವೇ ಈ ದುಡ್ಡು ಪಡೆಯೋದು ಹೇಗೆ?
ಕರ್ನಾಟಕ ಸರ್ಕಾರ (Government of Karnataka) ಮಹತ್ವದ ಯೋಜನೆಗಳಲ್ಲಿ ಪ್ರಮುಖವಾಗಿರುವ ಅನ್ನಭಾಗ್ಯ (Anna bhagya)ಯೋಜನೆಯಡಿ ಬಡಜನರಿಗೆ ಅಗತ್ಯ ಪಡಿತರ ಪೂರೈಕೆ ಮಾಡಲಾಗುತ್ತಿದೆ. ಈ ನಡುವೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ಹತ್ತು ಕೆಜಿ ಅಕ್ಕಿ ಕೊಡುತ್ತೇವೆ ಎಂದು ತಿಳಿಸಿತ್ತು. ಆದರೆ ಅಕ್ಕಿ ಅಲಭ್ಯ ಹಿನ್ನೆಲೆ ಐದು ಕೆಜಿಗೆ ಆರಂಭದಲ್ಲಿ ಹಣ ಪಾವತಿ ಮಾಡಿ ಜನರಿಗೆ ಸಂತಸದ ಸುದ್ದಿ ನೀಡಿತ್ತು. ಈಗ ನಾಡಿನ ಹಲವು ಜನತೆಗೆ ಶಾಕಿಂಗ್ ಸುದ್ದಿ ನೀಡಿದೆ.
ಹೌದು, ತಾಂತ್ರಿಕ ಕಾರಣ ನೀಡಿ ಹಾಗೂ ದೋಷಪೂರಿತ ಮಾಹಿತಿ ನೀಡಲಾಗಿದೆ ಎಂಬ ಕಾರಣ ನೀಡಿ ನಾಡಿನ 29 ಲಕ್ಷ ಫಲಾನುಭವಿಗಳ ಕಾರ್ಡ್‌ಗೆ (ration card) ನೇರ ನಗದು ವರ್ಗಾವಣೆ ಮಾಡಲಾಗಿಲ್ಲ. ಆದರೆ, ಆಗಷ್ಟ್ ಹಾಗೂ ಜುಲೈ ತಿಂಗಳಲ್ಲಿ 98 ಲಕ್ಷ ಕುಟುಂಬಗಳಿಗೆ ಮಾತ್ರ ಹಣ ವರ್ಗಾವಣೆ ಮಾಡಲಾಗಿದೆ. ಹಾಗಿದ್ರೆ, ಈ ಅನಾನುಕೂಲತೆಗೆ ಸರ್ಕಾರ ನೀಡುವ ಉತ್ತರಗಳು ಏನು?, ಈ ಹಣ ಪಡೆಯಲು ಅರ್ಹರು ಏನು ಮಾಡಬೇಕು? ಎಂಬ ಮಾಹಿತಿ ಇಲ್ಲಿದೆ ನೋಡಿ.

ಸರ್ಕಾರ ನೀಡುವ ಕಾರಣ ಏನು?: ಆಗಸ್ಟ್ ಹಾಗೂ ಜುಲೈ ತಿಂಗಳಲ್ಲಿ ನಾಡಿನ 98 ಲಕ್ಷ ಅರ್ಹ ಕುಟುಂಬಗಳಿಗೆ ಮಾತ್ರ ಹಣ ವರ್ಗಾವಣೆ ಮಾಡಲಾಗಿದ್ದು, ಉಳಿದ ಎಲ್ಲರಿಗೂ ತಿದ್ದುಪಡಿಗೆ ಅವಕಾಶ ನೀಡಿದೆ. ಜೊತೆಗೆ ತಾಂತ್ರಿಕ ಕಾರಣಗಳಿಂದ ಹಾಗೂ ತಪ್ಪಾದ ಮಾಹಿತಿ ಕಂಡುಬಂದಿದ್ದರಿಂದ ಅವರ ಖಾತೆಗೆ ಹಣ ಜಮೆ ಮಾಡಿಲ್ಲ, ಅವರು ಸೆ.1 ರಿಂದ 10 ರವರೆಗೆ ತಿದ್ದುಪಡಿಗೆ ಅವಕಾಶ ನೀಡಲಾಗಿದೆ ಎಂದು ಸರ್ಕಾರ ತಿಳಿಸಿದೆ.
ಇದರೊಂದಿಗೆ ಮತ್ತೊಂದು ಕಾರಣ ನೀಡಿರುವ ಸರ್ಕಾರ, ಫಲಾನುಭವಿ ಕುಟುಂಬದ ಗರಿಷ್ಠ ಸದಸ್ಯರ ಮಿತಿ ದಾಟಿರುವ ಕಾರಣಕ್ಕೆ ಹಾಗೂ ಸತತ ಮೂರು ತಿಂಗಳಿಂದ ಪಡಿತರ ಪಡೆಯದೇ ಇರುವ ಕಾರಣಕ್ಕೂ ಆ ಕುಟುಂಬಕ್ಕೆ ಡಿಬಿಟಿ ಸವಲತ್ತು ಸ್ಥಗಿತಗೊಳಿಸಿದೆ ಎಂದು ಉಲ್ಲೇಖಿಸಿದೆ. ಇನ್ನು ಐದು ಕೆ.ಜಿ ಅಕ್ಕಿ ಬದಲಿಗೆ ತಲಾ ಒಂದು ಕೆ.ಜಿ. ಗೆ 34 ರೂ.ನಂತೆ 170 ರೂ.ಗಳನ್ನು ಅರ್ಹರ ಬ್ಯಾಂಕ್ ಖಾತೆಗೆ ಹಾಕುವ ಕೆಲಸ ಮಾಡಲಿದೆ.
ಇದನ್ನು ಅಂಕಿ ಅಂಶ ಸಮೇತ ನೋಡುವುದಾದರೆ ರಾಜ್ಯದಲ್ಲಿನ ಎಎವೈ ಹಾಗೂ ಪಿಎಚ್‌ಎಚ್ (AAY and PHH) ಕಾರ್ಡ್ ಬಳಕೆದಾರರನ್ನು ಸೇರಿದಂತೆ ಒಟ್ಟು 1.27 ಕೋಟಿ ಕುಟುಂಬಗಳಿಗೆ ಈ ಯೋಜನೆಯ ಲಾಭ ಸಿಗಬೇಕಿತ್ತು. ಅದಾಗ್ಯೂ ಸರ್ಕಾರ ಮೇಲೆ ತಿಳಿಸಿದ ಕಾರಣಗಳನ್ನು ನೀಡಿ ಬರೋಬ್ಬರಿ 29 ಲಕ್ಷ ಪಡಿತರ ಹೊಂದಿರುವ ಕುಟುಂಬಗಳಿಗೆ ಹಣ ನೀಡದೆ ಅವರ ಕೆಂಗಣ್ಣಿಗೆ ಗುರಿಯಾಗಿದೆ.
ಇದರೊಂದಿಗೆ ಸರ್ಕಾರದ ಆಹಾರ-ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯು ಡಿಬಿಟಿ ಪ್ರಕ್ರಿಯೆಯನ್ನು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ(NPCI) ಮೂಲಕ ನಿರ್ವಹಿಸುತ್ತಿದೆ. ಆದರೆ, ಇದೇ ಎನ್‌ಪಿಸಿಐ 21 ಲಕ್ಷ ಫಲಾನುಭವಿ ಕುಟುಂಬಗಳ ಮಾಹಿತಿ ದೋಷಪೂರಿತವಾಗಿದೆ ಎಂದು ಇಲಾಖೆಗೆ ವರದಿ ಕೊಟ್ಟ ಬೆನ್ನಲ್ಲೇ ಈ ನಿರ್ಧಾರ ಮಾಡಲಾಗಿದೆ.
ಇಷ್ಟೇ ಅಲ್ಲದೆ ಫಲಾನುಭವಿಗಳು ಇಕೆವೈಸಿ ಮಾಡಿಸಿಲ್ಲ ಹಾಗೂ ಬ್ಯಾಂಕ್ ಖಾತೆ-ಪಡಿತರ ಚೀಟಿ ಮತ್ತು ಆಧಾರ್ ಕಾರ್ಡ್‌ನಲ್ಲಿರುವ ಫಲಾನುಭವಿಗಳ ವೈಯಕ್ತಿಕ ವಿವರ ಒಂದಕ್ಕೊಂದು ತಾಳೆಯಾಗುತ್ತಿಲ್ಲ ಜೊತೆಗೆ ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆಯಾಗಿಲ್ಲ ಎಂದು ತಿಳಿಸಿರುವ ಎನ್‌ಪಿಸಿಐ, ಇದರೊಂದಿಗೆ ನಕಲಿ ಫಲಾನುಭವಿಗಳ ಸೃಷ್ಟಿ ಸಾಧ್ಯತೆಯಿದೆ ಎಂದು ನೀಡಲಾದ ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ.
ಹಾಗಿದ್ರೆ ಹಣ ಪಡೆಯಲು ಏನು ಮಾಡಬೇಕು?: ಈ ಸೌಲಭ್ಯದಿಂದ ವಂಚಿತರಾದವರೆಲ್ಲರಿಗೂ ಸರ್ಕಾರ ಈಗ ತಿದ್ದುಪಡಿಗೆ ಅವಕಾಶ ಕಲ್ಪಿಸಿಕೊಟ್ಟಿದೆ. ಈ ಮೂಲಕ ಯಾರಿಗೆಲ್ಲಾ ಹಣ ಜಮೆ ಆಗಿಲ್ಲವೋ ಅವರು ಈ ತಿಂಗಳ ಹತ್ತರ ಒಳಗೆ ಇಕೆವೈಸಿ ಪೂರ್ಣಗೊಳಿಸಿ, ಜೊತೆಗೆ ಕಾರ್ಡ್‌ನಲ್ಲಿ ಏನಾದರೂ ತಪ್ಪುಗಳು ಕಂಡು ಬಂದರೆ ಅವುಗಳನ್ನು ತಿದ್ದುಪಡಿ ಮಾಡಿಸಿಕೊಳ್ಳಿ, ಅಷ್ಟೇ ಅಲ್ಲೆ ಮುಖ್ಯಸ್ಥರ ವಿಭಾಗದಲ್ಲಿ ಪುರುಷರು ಇದ್ದರೆ ಅದನ್ನು ಬದಲಾಯಿಸಿ.

ಎಲ್ಲೆಲ್ಲಿ ಈ ತಿದ್ದುಪಡಿ ಕೆಲಸ ಮಾಡಲಾಗುತ್ತದೆ?: ಗ್ರಾಮ ಒನ್, ಕರ್ನಾಟಕ ಒನ್,ಬಾಪೂಜಿ ಸೇವಾ ಕೇಂದ್ರ, ನಾಗರಿಕ ಸೇವಾ ಕೇಂದ್ರ ಸೇರಿದಂತೆ ನಿಮ್ಮ ಸಮೀಪದ ಸೈಬರ್ ಕೇಂದ್ರಗಳಲ್ಲಿ ಈ ಕಾರ್ಯ ಮಾಡಬಹುದಾಗಿದೆ. ಅದರಲ್ಲೂ ಈ ಕೆಲಸವನ್ನು ಬೆಳಗ್ಗೆ 10 ಗಂಟೆಯಿಂದ ಸಂಜೆ 5ರವರೆಗೆ ಮಾತ್ರ ಮಾಡಲಾಗುತ್ತದೆ. ಇದೆಲ್ಲದರ ನಡುವೆ ಈಗ ಸರ್ವರ್ ನೆಪಗಳನ್ನು ನೀಡಲಾಗುತ್ತಿದೆ.


Click it and Unblock the Notifications








