ಭಾರತದಲ್ಲಿ ಈವರೆಗೆ 36 ಲಕ್ಷ ಖಾತೆಗಳನ್ನು ನಿರ್ಬಂಧಿಸಿದ ವಾಟ್ಸಾಪ್!
ಪ್ರಮುಖ ಮೆಸೆಜಿಂಗ್ ಪ್ಲಾಟ್‌ಫಾರ್ಮ್ ಆಗಿರುವ ವಾಟ್ಸಾಪ್‌ನಲ್ಲಿ ಸಾಕಷ್ಟು ಹೊಸ ಹೊಸ ಫೀಚರ್ಸ್‌ಗಳು ಲಭ್ಯವಾಗುತ್ತಿದ್ದು, ಇವುಗಳು ಹಲವರಿಗೆ ಅನುಕೂಲ ಆದರೆ ಇದನ್ನೇ ಬಂಡವಾಳ ಮಾಡಿಕೊಳ್ಳುವ ಕೆಲವರು ಇದನ್ನು ದುರುಪಯೋಗಪಡಿಸಿಕೊಳ್ಳುವ ಮೂಲಕ ವಾಟ್ಸಾಪ್‌ನ ಕಾನೂನು ಕ್ರಮಗಳಿಗೆ ಒಳಗಾಗುತ್ತಿದ್ದಾರೆ. ಈ ಕಾರಣಕ್ಕೆ ಲಕ್ಷಾಂತರ ಖಾತೆಗಳನ್ನು ನಿರ್ಬಂಧಿಸಲಾಗಿದೆ.
ಹೌದು, ವಾಟ್ಸಾಪ್‌ನಲ್ಲಿ ವಂಚನೆ ಮಾಡಲು ಮುಂದಾಗುವ ಖಾತೆಗಳ ಮೇಲೆ ವಾಟ್ಸಾಪ್ ಹದ್ದಿನ ಕಣ್ಣಿಡುತ್ತಿದ್ದು, ಇದರ ಭಾಗವಾಗಿಯೇ ಪ್ರತಿ ತಿಂಗಳು ಲಕ್ಷಾಂತರ ಖಾತೆಗಳನ್ನು ನಿರ್ಬಂಧ ಮಾಡಿರುವ ಬಗ್ಗೆ ವರದಿ ನೀಡುತ್ತಿದೆ. ಅದರಂತೆ ಭಾರತದಲ್ಲಿ ಈ ಸಂಖ್ಯೆ ಹೆಚ್ಚಾಗಿಯೇ ಇದ್ದು, ವಾಟ್ಸಾಪ್ ಕಟ್ಟು ನಿಟ್ಟಿನ ನಿರ್ಧಾರ ತೆಗೆದುಕೊಳ್ಳುತ್ತಿದೆ. ಹಾಗಿದ್ರೆ, ಭಾರತದಲ್ಲಿ ಈ ತಿಂಗಳು ಬ್ಯಾನ್ ಆದ ಖಾತೆಗಳ ಸಂಖ್ಯೆ ಎಷ್ಟು?. ಈ ಖಾತೆಗಳನ್ನು ಯಾವುದಕ್ಕೆ ಬಳಕೆ ಮಾಡಿಕೊಳ್ಳಲಾಗುತ್ತಿತ್ತು ಎಂಬಿತ್ಯಾದಿ ಮಾಹಿತಿಯನ್ನು ತಿಳಿಸಿಕೊಡಲಾಗಿದೆ ಓದಿರಿ.

ಭಾರತದಲ್ಲಿ ಲಕ್ಷಾಂತರ ಖಾತೆಗಳು ನಿರ್ಬಂಧ: ವಾಟ್ಸಾಪ್ ಈ ಈವರೆಗೆ ಬರೋಬ್ಬರಿ 36 ಲಕ್ಷ ಮೊಬೈಲ್ ಸಂಪರ್ಕಗಳನ್ನು ನಿಷೇಧ ಮಾಡಿದೆ. ಇದರಿಂದಾಗಿ ಭಾರತದಲ್ಲಿ ವಾಟ್ಸಾಪ್ ಮೂಲಕ ನಡೆಯುವ ಅದೆಷ್ಟೋ ವಂಚನೆಗಳನ್ನು ತಡೆದಂತೆ ಆಗಿದೆ. ಜೊತೆಗೆ ಭಾರೀ ಹಣವನ್ನು ಉಳಿಸಿದಂತೆ ಆಗಿದೆ. ಈ ಪ್ರಕ್ರಿಯೆ ಪ್ರತಿ ತಿಂಗಳು ಸಹ ಪಡೆಯುತ್ತಿದ್ದು, ವಾಟ್ಸಾಪ್ ಯಾವುದೇ ಮುಲಾಜಿಲ್ಲದೆ ಅಂತಹ ಖಾತೆಗಳನ್ನು ತನ್ನ ಪ್ಲಾಟ್‌ಫಾರ್ಮ್‌ನಿಂದ ಹೊರದಬ್ಬುತ್ತಿದೆ.
ಟೆಲಿಕಾಂ ಸಚಿವ ಅಶ್ವಿನಿ ವೈಷ್ಣವ್ ಅವರು ವ್ವಾಟ್ಸಾಪ್ ಕರೆಗಳ ಮೂಲಕ ವಂಚನೆಯನ್ನು ತಡೆಯಲು ಸರ್ಕಾರ ತೆಗೆದುಕೊಳ್ಳುತ್ತಿರುವ ಕ್ರಮಗಳ ಬಗ್ಗೆ ಮಾತನಾಡಿ, 'ವಂಚನೆಯ ಚಟುವಟಿಕೆಗಳಲ್ಲಿ ತೊಡಗಿರುವ ಯಾವುದೇ ಮೊಬೈಲ್ ಫೋನ್ ಸಂಖ್ಯೆಗೆ ಲಿಂಕ್ ಮಾಡಲಾದ ಸೇವೆಗಳನ್ನು ನಿಷ್ಕ್ರಿಯಗೊಳಿಸಲು ಮೆಟಾ-ಮಾಲೀಕತ್ವದ ಅಪ್ಲಿಕೇಶನ್ ಒಪ್ಪಿಕೊಂಡಿದೆ. ಜೊತೆಗೆ ಅಗತ್ಯ ಕ್ರಮ ತೆಗೆದುಕೊಳ್ಳುತ್ತಿದೆ' ಎಂದು ತಿಳಿಸಿದ್ದಾರೆ.
ನಾವು ವಾಟ್ಸಾಪ್‌ನೊಂದಿಗೆ ಸಕ್ರಿಯವಾಗಿ ತೊಡಗಿಸಿಕೊಂಡಿದ್ದೇವೆ. ಈ ನಡುವೆ ಗ್ರಾಹಕರ ಸುರಕ್ಷತೆಯು ಅತ್ಯಂತ ಮುಖ್ಯವಾದ ಕೆಲಸವಾಗಿದೆ ಎಂದು ವಾಟ್ಸಾಪ್ ತಿಳಿಸಿದೆ ಎಂದಿದ್ದಾರೆ. ಇನ್ನು ಎಲ್ಲಾ ಓಟಿಟಿ ಪ್ಲಾಟ್‌ಫಾರ್ಮ್‌ಗಳು ಸಹ ವಂಚನೆ ಖಾತೆಗಳನ್ನು ನಿರ್ಬಂಧಿಸಲು ಸಹಕರಿಸುತ್ತಿವೆ. ಈ ಕಾರಣಕ್ಕೆ 36 ಲಕ್ಷ ಮೊಬೈಲ್ ಸಂಪರ್ಕಗಳನ್ನು ಕಡಿತಗೊಳಿಸಲಾಗಿದೆ ಮತ್ತು ಏಕಕಾಲದಲ್ಲಿ ಅವರ ವಾಟ್ಸಾಪ್ ಖಾತೆಯನ್ನು ನಿರ್ಬಂಧಿಸಲಾಗಿದೆ ಎಂದು ವೈಷ್ಣವ್ ಮಾಹಿತಿ ನೀಡಿದ್ದಾರೆ.

ಸಚಿವರಿಗೆ ಕೃತಜ್ಞತೆ ಸಲ್ಲಿಸಿದ ವಾಟ್ಸಾಪ್: ಬಳಕೆದಾರರ ಸುರಕ್ಷತೆಗೆ ವಾಟ್ಸಾಪ್‌ನ ನಿರಂತರ ಬದ್ಧತೆಯನ್ನು ಸಚಿವರು ಒಪ್ಪಿಕೊಂಡಿದ್ದಕ್ಕಾಗಿ ನಾವು ಕೃತಜ್ಞರಾಗಿರುತ್ತೇವೆ. ಪ್ಲಾಟ್‌ಫಾರ್ಮ್‌ನಿಂದ ವಂಚನೆ ಮಾಡುವವರನ್ನು ಹೊರಹಾಕುವುದು ಸೇರಿದಂತೆ ಸುರಕ್ಷಿತ ಬಳಕೆದಾರರ ಅನುಭವವನ್ನು ನಿರಂತರವಾಗಿ ಖಚಿತಪಡಿಸಿಕೊಳ್ಳಲು ನಾವು ಸರ್ಕಾರದೊಂದಿಗೆ ಸಕ್ರಿಯವಾಗಿ ತೊಡಗಿಸಿಕೊಂಡಿದ್ದೇವೆ ಎಂದು ವಾಟ್ಸಾಪ್‌ನ ವಕ್ತಾರರು ಸಹ ಪ್ರತಿಕ್ರಿಯೆ ನೀಡಿದ್ದಾರೆ.
ವಾಟ್ಸಾಪ್‌ನಲ್ಲಿ ಸ್ಪ್ಯಾಮ್ ಕರೆಗಳು: ಈ ನಡುವೆ ವಾಟ್ಸಾಪ್ ಎಷ್ಟೇ ಭದ್ರತಾ ಫೀಚರ್ಸ್ ಅನ್ನು ನೀಡಿದರೂ ಸಹ ವಂಚಕರು ಹೊಸ ರೀತಿಯಲ್ಲಿ ಬಳಕೆದಾರರನ್ನು ಮೋಸ ಮಾಡಲು ಹೊಂಚು ಹಾಕುತ್ತಲೇ ಇರುತ್ತಾರೆ. ಈ ಸಂಬಂಧ ಸರ್ಕಾರ ಬಳಕೆದಾರರಿಗೆ ಎಚ್ಚರಿಕೆ ನೀಡಿದೆ. ಜೊತೆಗೆ ವಾಟ್ಸಾಪ್ ಕೂಡ ಎಚ್ಚರಿಸಿದ್ದು, ಇಂಡೋನೇಷ್ಯಾ (+62),ವಿಯೆಟ್ನಾಂ (+84), ಮಲೇಷ್ಯಾ (+60),ಕೀನ್ಯಾ (+254) ಮತ್ತು ಇಥಿಯೋಪಿಯಾ (+251)ಗೆ ಸೇರಿದ ದೇಶದ ಕೋಡ್‌ಗಳೊಂದಿಗೆ ಬರುವ ಕರೆ ಸ್ವೀಕಾರ ಮಾಡಬೇಡಿ ಎಂದು ತಿಳಿಸಲಾಗಿದೆ.
ಈಗಾಗಲೇ ಭಾರತದ ಅದೆಷ್ಟೋ ಜನರು ಈ ರೀತಿಯ ಕರೆಗಳನ್ನು ಸ್ವೀಕಾರ ಮಾಡಿದ್ದು, ಕೆಲವರು ಎಚ್ಚೆತ್ತುಕೊಂಡರೆ ಇನ್ನೂ ಕೆಲವರು ಮೋಸ ಹೋಗಿದ್ದಾರೆ. ಈ ಎಲ್ಲಾ ಬೆಳವಣಿಗೆ ನಡುವೆ ಪ್ರಸ್ತುತ ಕರೆ ದರವನ್ನು ಕನಿಷ್ಠ 50 ಪ್ರತಿಶತದಷ್ಟು ಕಡಿಮೆ ಮಾಡಲಾಗಿದೆ. ಹಾಗೆಯೇ ಈ ರೀತಿಯ ಪ್ರಕರಣಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ನಾವು ಮುಂದಾಗಿದ್ದೇವೆ. ನಮ್ಮ ಬಳಕೆದಾರರಿಗೆ ಸುರಕ್ಷಿತ ಅನುಭವವನ್ನು ಖಚಿತಪಡಿಸಿಕೊಳ್ಳಲು ನಾವು ಪಟ್ಟುಬಿಡದೆ ಕೆಲಸ ಮಾಡುತ್ತೇವೆ ಎಂದು ವಾಟ್ಸಾಪ್ ಹೇಳಿದೆ.

ಈ ರೀತಿಯ ಕರೆಗಳಿಂದ ಎಚ್ಚೆತ್ತ ಸರ್ಕಾರ ವಾಟ್ಸಾಪ್‌ಗೆ ನೋಟಿಸ್ ಕಳುಹಿಸುವುದಾಗಿ ಹೇಳಿದ ನಂತರ ವಾಟ್ಸಾಪ್‌ನಲ್ಲಿ ಈ ಬೆಳವಣಿಗೆ ಕಂಡುಬಂದಿದೆ. ಅಂದರೆ, ವಾಟ್ಸಾಪ್ ಬಳಕೆದಾರರು ಅಪರಿಚಿತ ಅಂತರಾಷ್ಟ್ರೀಯ ಸಂಖ್ಯೆಗಳಿಂದ ಸ್ಪ್ಯಾಮ್ ಕರೆಗಳನ್ನು ಸ್ವೀಕಾರ ಮಾಡುತ್ತಿರುವುದನ್ನು ಸಚಿವಾಲಯವು ಗಮನಿಸುತ್ತಿದೆ. ಈ ಮೂಲಕ ವಾಟ್ಸಾಪ್‌ಗೆ ನೋಟಿಸ್ ಕಳುಹಿಸಲಾಗುತ್ತದೆ ಎಂದು ಐಟಿ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಮಾಧ್ಯಮಗಳಿಗೆ ತಿಳಿಸಿದ್ದರು.


Click it and Unblock the Notifications








