52 ಲಕ್ಷ ಸಿಮ್‌ಗಳ ಸಂಪರ್ಕ ಕಡಿತ; ಏನಿದು ಸರ್ಕಾರದ ಶಾಕಿಂಗ್ ಸುದ್ದಿ? ಯಾಕಾಗಿ ಈ ನಿರ್ಧಾರ?
ಸಿಮ್ ಕಾರ್ಡ್ (SIM card) ಸಂಬಂಧ ಸರ್ಕಾರ ಈಗಾಗಲೇ ಹಲವಾರು ರೀತಿಯಲ್ಲಿ ಕಠಿಣ ನಿಯಮಗಳನ್ನು ತೆಗೆದುಕೊಂಡಿದೆ. ಅದರಲ್ಲೂ ಕೆಲವು ದಿನಗಳ ಹಿಂದೆ ಈ ನಿಯಮಗಳನ್ನು ಇನ್ನಷ್ಟು ಬಿಗಿಗೊಳಿಸಿ ಆದೇಶ ಮಾಡಲಾಗಿತ್ತು. ಟೆಲಿಕಾಂ ಇಲಾಖೆಯ ಬಿಗಿಗೊಂಡ ನಿಯಮಗಳ ಪರಿಣಾಮ ಅದೆಷ್ಟೋ ಜನರ ಸಿಮ್ ಸಂಪರ್ಕ ಈಗ ಕಡಿತಗೊಂಡಿದೆ.
ಹೌದು, ಟೆಲಿಕಾಂ ಇಲಾಖೆ (DoT) ಸಿಮ್ ಕಾರ್ಡ್‌ಗಳ ಮಾರಾಟಕ್ಕೆ ಹೊಸ ನಿಯಮಗಳನ್ನು ಪ್ರಕಟಿಸಿದ್ದು, ವಂಚನೆಯ ಫೋನ್ ಕರೆಗಳು ಮತ್ತು ಮೆಸೆಜ್‌ಗಳು ಸೇರಿದಂತೆ ವ್ಯಾಪಕವಾದ ಟೆಲಿಕಾಂ ವಂಚನೆಗಳ ವರದಿ ಈ ಹಿನ್ನೆಲೆ ಈ ನಿರ್ಧಾರ ಮಾಡಲಾಗಿದೆ. ಅಷ್ಟೇ ಅಲ್ಲದೆ ಒಬ್ಬ ವ್ಯಕ್ತಿಯ ಹೆಸರು ಮತ್ತು ಗುರುತಿನ ಪುರಾವೆಗೆ ಸಾವಿರಾರು ಸಿಮ್ ಕಾರ್ಡ್‌ಗಳನ್ನು ನೀಡಲಾಗುತ್ತಿದೆ ಎಂಬ ವರದಿಗಳೂ ಜನರಿಗೆ ಅಚ್ಚರಿ ಉಂಟು ಮಾಡಿವೆ. ಹಾಗಿದ್ರೆ, ಬನ್ನಿ ಸದ್ಯಕ್ಕೆ ಎಷ್ಟು ಸಿಮ್‌ಗಳನ್ನು ನಿಷ್ಕ್ರಿಯಮಾಡಲಾಗಿದೆ? ಟೆಲಿಕಾಂ ಇಲಾಖೆ ಹೇಗೆಲ್ಲಾ ಕ್ರಮ ತೆಗೆದುಕೊಂಡಿದೆ ಎಂಬುದನ್ನು ನೋಡೋಣ.

ವಂಚನೆ ಪ್ರಕರಣಕ್ಕೆ ಬ್ರೇಕ್: ದೇಶದಲ್ಲಿ ಆನ್‌ಲೈನ್ ವಂಚನೆಗೆ ಸಿಮ್‌ಗಳು ಪ್ರಮುಖ ಪಾತ್ರ ವಹಿಸುತ್ತವೆ. ಈ ಸಂಬಂಧ ದೂರಸಂಪರ್ಕ ಸಚಿವ ಅಶ್ವಿನಿ ವೈಷ್ಣವ್ ಮಾಹಿತಿ ನೀಡಿದ್ದು, ಈಗಾಗಲೇ ಸರ್ಕಾರವು 66,000 ಮೋಸದ ವಾಟ್ಸಾಪ್ ಖಾತೆಗಳನ್ನು ನಿರ್ಬಂಧಿಸಿದೆ ಹಾಗೂ 67,000 ಸಿಮ್ ಕಾರ್ಡ್ ಡೀಲರ್‌ಗಳನ್ನು ಕಪ್ಪು ಪಟ್ಟಿಗೆ ಸೇರಿಸಿದೆ. ಜೊತೆಗೆ ವಂಚಕರ ವಿರುದ್ಧ 300 ಎಫ್‌ಐಆರ್‌ಗಳನ್ನು ದಾಖಲಿಸಲಾಗಿದ್ದು, 52 ಲಕ್ಷ ಫೋನ್ ಸಂಪರ್ಕಗಳನ್ನು ನಿಷ್ಕ್ರಿಯಗೊಳಿಸಿದೆ. ಹಾಗೆಯೇ ವಂಚಕರು ಬಳಸುತ್ತಿದ್ದ ಸುಮಾರು 8 ಲಕ್ಷ ಬ್ಯಾಂಕ್ ವ್ಯಾಲೆಟ್ ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.
ಹೊಸ ಸಿಮ್ ಕಾರ್ಡ್ ನಿಯಮಗಳೇನು?
-ಹೊಸ ನಿಯಮಗಳು ಸಿಮ್ ಕಾರ್ಡ್‌ಗಳ ಮೋಸದ ಮಾರಾಟವನ್ನು ಪರಿಶೀಲಿಸುವ ಗುರಿ ಹೊಂದಿದ್ದು, ಈ ಕಟ್ಟು ನಿಟ್ಟಿನ ನಿಯಮಗಳು ಅಕ್ಟೋಬರ್ 1 ರಿಂದ ಜಾರಿಗೆ ಬರಲಿವೆ. ಟೆಲಿಕಾಂ ಆಪರೇಟರ್‌ಗಳು ಸೆಪ್ಟೆಂಬರ್ 30 ರ ಮೊದಲು ಎಲ್ಲಾ 'ಪಾಯಿಂಟ್ ಆಫ್ ಸೇಲ್' (ಪಿಒಎಸ್) ಅನ್ನು ನೋಂದಾಯಿಸಿಕೊಳ್ಳಬೇಕು ಎಂದು ಸುತ್ತೋಲೆಯಲ್ಲಿ ಉಲ್ಲೇಖಿಸಲಾಗಿದೆ.
- ಇದರೊಂದಿಗೆ ಟೆಲಿಕಾಂ ಆಪರೇಟರ್‌ಗಳಲ್ಲಿ ನೋಂದಾಯಿಸದ ಡೀಲರ್‌ಗಳ ಮೂಲಕ ಸಿಮ್ ಕಾರ್ಡ್‌ಗಳನ್ನು ಮಾರಾಟ ಮಾಡಿದರೆ 10 ಲಕ್ಷ ರೂಪಾಯಿ ದಂಡವನ್ನು ವಿಧಿಸುವುದಾಗಿ ತಿಳಿಸಲಾಗಿದ್ದು, ಪರವಾನಗಿದಾರರು ಯಾವುದೇ ಹೊಸ ಪಿಒಎಸ್ ಅನ್ನು ಅಂದರೆ, ಸೆಪ್ಟೆಂಬರ್ 30, 2023 ರ ನಂತರ, ನೋಂದಣಿ ಇಲ್ಲದೆ ಗ್ರಾಹಕರನ್ನು ದಾಖಲಿಸಲು ಅನುಮತಿ ನೀಡಿದ್ರೆ ಅವರು ದಂಡಕ್ಕೆ ಅರ್ಹರು ಎಂದು ಎಚ್ಚರಿಸಲಾಗಿದೆ.
- ನೋಂದಾಯಿತವಲ್ಲದ ಪಿಒಎಸ್ ಮೂಲಕ ಸಕ್ರಿಯಗೊಳಿಸಲಾದ ಎಲ್ಲಾ ಮೊಬೈಲ್ ಸಂಪರ್ಕಗಳನ್ನು ಅಸ್ತಿತ್ವದಲ್ಲಿರುವ ಸೂಚನೆಗಳ ಪ್ರಕಾರ ಮರುಪರಿಶೀಲಿಸಬೇಕಾಗಿದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದ್ದು, ಅಸ್ತಿತ್ವದಲ್ಲಿರುವ ಎಲ್ಲಾ ಪಿಒಎಸ್ ಮಾರಾಟಗಾರರು ದಾಖಲೆಗಳನ್ನು ಸಲ್ಲಿಸಬೇಕು ಮತ್ತು ಸೆಪ್ಟೆಂಬರ್ ಅಂತ್ಯದೊಳಗೆ ನೋಂದಾಯಿಸಿಕೊಳ್ಳಬೇಕು ಎಂದು ಕಡ್ಡಾಯ ಆದೇಶ ನೀಡಲಾಗಿದೆ.
- ಪಿಒಎಸ್ ಅಥವಾ ಚಿಲ್ಲರೆ ವ್ಯಾಪಾರಿಯು ನೋಂದಣಿಗಾಗಿ ಕಾರ್ಪೊರೇಟ್ ಗುರುತಿನ ಸಂಖ್ಯೆ (CIN), ಸೀಮಿತ ಹೊಣೆಗಾರಿಕೆ ಪಾಲುದಾರಿಕೆ ಗುರುತಿನ ಸಂಖ್ಯೆ (LLPIN) ಅಥವಾ ವ್ಯಾಪಾರ ಪರವಾನಗಿ, ಆಧಾರ್ ಅಥವಾ ಪಾಸ್‌ಪೋರ್ಟ್, ಪ್ಯಾನ್, ಸರಕು ಮತ್ತು ಸೇವಾ ತೆರಿಗೆ ನೋಂದಣಿ ಪ್ರಮಾಣಪತ್ರ ಇತ್ಯಾದಿಗಳನ್ನು ನೀಡಬೇಕಾಗುತ್ತದೆ ಎಂದು ಸೂಚಿಸಲಾಗಿದೆ. ಜೊತೆಗೆ ಸಲ್ಲಿಕೆ ಮಾಡಲಾದ ದಾಖಲೆಗಳು ನಕಲಿ ಎಂದು ಕಂಡುಬಂದಲ್ಲಿ ಎಲ್ಲಾ ಚಂದಾದಾರರನ್ನು ಮರುಪರಿಶೀಲಿಸಬೇಕಾಗುತ್ತದೆ.

- ಪಿಒಎಸ್ ನಕಲಿ ದಾಖಲೆಗಳನ್ನು ಸಲ್ಲಿಕೆ ಮಾಡಿದ್ದೇ ಆದರೆ ಟೆಲಿಕಾಂ ಆಪರೇಟರ್‌ಗಳು ಅದರ ಐಡಿಯನ್ನು ನಿರ್ಬಂಧಿಸಬೇಕಾಗುತ್ತದೆ ಮತ್ತು ಆ ಪಿಒಎಸ್ ಮೂಲಕ ದಾಖಲಾದ ಎಲ್ಲಾ ಗ್ರಾಹಕರನ್ನು ಮರು-ಪರಿಶೀಲಿಸಬೇಕಾಗುತ್ತದೆ ಎಂದು ತಿಳಿಸಲಾಗಿದೆ. ಇದರಿಂದ ಮುಂದೆ ಆಗುವ ವಂಚನೆ ಪ್ರಕರಣಗಳನ್ನು ಬುಡಸಮೇತ ಕಿತ್ತು ಹಾಕಲು ಸರ್ಕಾರ ಮುಂದಾಗಿದೆ.


Click it and Unblock the Notifications








