8 ದೊಡ್ಡ ಯ್ಯೂಟ್ಯೂಬರ್‌ಗಳ ಕಥೆ ಮುಗೀತು! ಬ್ಯಾನ್ ಮಾಡಲು ಆದೇಶ... ಕೋಟ್ಯಾಂತರ ರೂ.ಆದಾಯಕ್ಕೆ ಕಲ್ಲು!
ಒಂದು ರೂ. ಖರ್ಚಿಲ್ಲದೆ ದುಡಿಮೆ ಮಾಡಬೇಕು ಎಂದರೆ ನೀವು ಯೂಟ್ಯೂಬ್ (YouTube) ಚಾನಲ್ ಓಪನ್ ಮಾಡಬಹುದು. ಇಲ್ಲಿ 1000 ಚಂದಾದಾರರು ಹಾಗೂ 4000 ವೀಕ್ಷಣೆ ಆದರೆ ಸಾಕು ಹಣ ಸಂಪಾದನೆ ಮಾಡಲು ಅರ್ಹತೆ ಪಡೆದಂತೆ. ಆದರೆ, ಇದನ್ನು ದುರುಪಯೋಗಪಡಿಸಿಕೊಂಡರೆ ಈ ಚಾನಲ್‌ಗಳಿಗೆ ಆದ ಗತಿ ನಿಮ್ಮ ಚಾನಲ್‌ಗೂ ಆಗುತ್ತದೆ. ಅಂದರೆ ಇದರಲ್ಲಿ ಲಕ್ಷ ಲಕ್ಷ ಸಂಪಾದನೆ ಮಾಡಿದ್ರೂ ಸಹ ಚಾನಲ್ ಕ್ಲೋಸ್ ಆಗೋದು ಪಕ್ಕಾ.
ಹೌದು, ಭಾರತದ ಸರ್ಕಾರ (Government of India) ಕೆಲವು ಸಾಮಾಜಿಕ ಜಾಲತಾಣದ ಮೇಲೆ ಸದಾ ಹದ್ದಿನ ಕಣ್ಣಿಟ್ಟಿರುತ್ತದೆ. ಇಂದಿನ ದಿನಗಳಲ್ಲಿ ಹಲವಾರು ಜನರು ಹಣ ಸಂಪಾದನೆ ಮಾಡುವ ಉದ್ದೇಶದಿಂದಲೇ ಯೂಟ್ಯೂಬ್ ಸೇರಿದಂತೆ ಇತರೆ ಪ್ಲಾಟ್‌ಫಾರ್ಮ್‌ಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದು, ಅಂತಹುದೇ ಕೆಲಸ ಮಾಡಿದ ಎಂಟು ಭಾರತದ ಯೂಟ್ಯೂಬ್ ಚಾನಲ್‌ಗಳನ್ನು ಈಗ ನಿರ್ಬಂಧಿಸಲಾಗಿದೆ. ಹಾಗಿದ್ರೆ,ಯಾವುವು ಈ ಯೂಟ್ಯೂಬ್ ಚಾನಲ್?, ಎಷ್ಟು ಚಂದಾದಾರರು? ಹಾಗೂ ಎಷ್ಟು ವೀಕ್ಷಣೆ ಪಡೆದಿದ್ದವು? ಎಂಬ ಮಾಹಿತಿಗಾಗಿ ಈ ಲೇಖನ ಓದಿರಿ.

ಸುಳ್ಳು ಸುದ್ದಿ ಪ್ರಸಾರ ಮಾಡುತ್ತಿದ್ದ ಚಾನಲ್‌ಗಳು: ನಿಷೇದಕ್ಕೆ ಒಳಗಾದ ಚಾನಲ್‌ಗಳಲ್ಲಿ ಲೋಕಸಭಾ ಚುನಾವಣೆಯನ್ನು ಮುಂಚಿತವಾಗಿ ಘೋಷಿಸಲಾಗಿದೆ, ಎಲೆಕ್ಟ್ರಾನಿಕ್ ಮತಯಂತ್ರಗಳನ್ನು ನಿಷೇಧಿಸಲಾಗಿದೆ ಎಂದು ನಕಲಿ ಸುದ್ದಿ ಪ್ರಸಾರ ಮಾಡಲಾಗಿದೆ. ಈ ಚಾನಲ್‌ಗಳು ಒಟ್ಟಾಗಿ 23 ಮಿಲಿಯನ್ ಚಂದಾದಾರರನ್ನು ಹೊಂದಿದ್ದು, ಜನರಿಗೆ ಸರ್ಕಾರದ ಬಗ್ಗೆ ಕೆಟ್ಟ ಆಲೋಚನೆ ಬರುವಂತೆ ಮಾಡಲಾಗಿದೆ ಎಂದು ಸರ್ಕಾರ ಈ ನಿರ್ಧಾರ ಮಾಡಿದೆ.
ಯಾವೆಲ್ಲಾ ಚಾನಲ್ ನಿರ್ಬಂಧ: ನಿಷೇಧಿಸಲ್ಪಟ್ಟ ಯೂಟ್ಯೂಬ್ ಚಾನೆಲ್‌ಗಳ(Banned YouTube Channel) ಪಟ್ಟಿಯಲ್ಲಿ ಯಹಾನ್ ಸಚ್ ದೇಖೋ, ಕ್ಯಾಪಿಟಲ್ ಟಿವಿ, ಕೆಪಿಎಸ್ ನ್ಯೂಸ್, ಸರ್ಕಾರಿ ವ್ಲಾಗ್, ಅರ್ನ್ ಟೆಕ್ ಇಂಡಿಯಾ, ಎಸ್‌ಪಿಎನ್ 9 ನ್ಯೂಸ್, ಎಜುಕೇಷನಲ್ ದೋಸ್ತ್ ಮತ್ತು ವರ್ಲ್ಡ್ ಬೆಸ್ಟ್ ನ್ಯೂಸ್. ಈ ಯೂಟ್ಯೂಬ್ ಚಾನೆಲ್‌ಗಳಲ್ಲಿನ ವಿಡಿಯೋಗಳನ್ನು ಪರಿಶೀಲನೆ ನಡೆಸಲಾಗಿದ್ದು, ಸುಳ್ಳು ಸುದ್ದಿಗಳನ್ನು ಹರಡಿದ್ದಕ್ಕಾಗಿ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಪ್ರೆಸ್ ಇನ್ಫರ್ಮೇಷನ್ ಬ್ಯೂರೋ ಅಧಿಕಾರಿಗಳು ತಿಳಿಸಿದ್ದಾರೆ.
ಇದರಲ್ಲಿ ವರ್ಲ್ಡ್ ಬೆಸ್ಟ್ ನ್ಯೂಸ್ (World's Best News) ಯುಟ್ಯೂಬ್ ಚಾನೆಲ್ ಭಾರತೀಯ ಸೇನೆಯನ್ನು ತಪ್ಪಾಗಿ ಬಿಂಬಿಸುತ್ತಿರುವುದು ಕಂಡುಬಂದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಚಾನಲ್ 1.7 ಮಿಲಿಯನ್ ಚಂದಾದಾರರನ್ನು ಹೊಂದಿದ್ದು, ಮತ್ತು 18 ಕೋಟಿಗೂ ಹೆಚ್ಚು ವೀಕ್ಷಣೆಗಳನ್ನು ಪಡೆದಿದೆ. ಆದರೆ ಈಗ ಸರ್ಕಾರದಿಂದ ಈ ಚಾನಲ್‌ಗೆ ಛಡಿ ಏಟು ನೀಡಲಾಗಿದೆ.
ಹಾಗೆಯೇ 3.43 ಮಿಲಿಯನ್ ಚಂದಾದಾರರು ಮತ್ತು 23 ಕೋಟಿ ವೀಕ್ಷಣೆ ಹೊಂದಿರುವ ಎಜುಕೇಷನಲ್ ದೋಸ್ತ್(Educational Dost) ಚಾನಲ್ ಸರ್ಕಾರದ ಯೋಜನೆಗಳ ಬಗ್ಗೆ ಸುಳ್ಳು ಮಾಹಿತಿಯನ್ನು ಹರಡುತ್ತಲೇ ಬಂದಿದೆ. 4.8 ಮಿಲಿಯನ್ ಚಂದಾದಾರರು ಮತ್ತು 189 ಕೋಟಿ ವೀಕ್ಷಣೆಗಳನ್ನು ಹೊಂದಿರುವ ಎಸ್‌ಪಿಎನ್ 9 ನ್ಯೂಸ್ ಯೂಟ್ಯೂಬ್ ಚಾನೆಲ್ ರಾಷ್ಟ್ರಪತಿ, ಪ್ರಧಾನ ಮಂತ್ರಿ ಮತ್ತು ಹಲವಾರು ಕೇಂದ್ರ ಮಂತ್ರಿಗಳಿಗೆ ಸಂಬಂಧಿಸಿದ ನಕಲಿ ಸುದ್ದಿಗಳನ್ನು ಪ್ರಚಾರ ಮಾಡುತ್ತಾ ಬಂದಿದೆ.
4.5 ಮಿಲಿಯನ್‌ಗೂ ಹೆಚ್ಚು ಚಂದಾದಾರರು ಮತ್ತು 9.4 ಕೋಟಿಗೂ ಹೆಚ್ಚು ವೀಕ್ಷಣೆ ಹೊಂದಿರುವ ಸರ್ಕಾರಿ ವ್ಲಾಗ್ ಚಾನಲ್ ಸರ್ಕಾರಿ ಯೋಜನೆಗಳ ಬಗ್ಗೆ ಸುಳ್ಳು ಸುದ್ದಿಗಳನ್ನು ಪ್ರಸಾರ ಮಾಡಿಕೊಂಡು ಬಂದಿದೆ. ಇದರೊಂದಿಗೆ ಒಂದು ಮಿಲಿಯನ್‌ಗೂ ಹೆಚ್ಚು ಚಂದಾದಾರರನ್ನು ಹೊಂದಿರುವ ಮತ್ತು 13 ಕೋಟಿಗೂ ಹೆಚ್ಚು ವೀಕ್ಷಣೆ ಹೊಂದಿರುವ ಕೆಪಿಎಸ್ ನ್ಯೂಸ್ ಚಾನೆಲ್ ಸರ್ಕಾರಕ್ಕೆ ಸಂಬಂಧಿಸಿದ ಯೋಜನೆಗಳು, ಆದೇಶಗಳು ಮತ್ತು ನಿರ್ಧಾರಗಳ ಬಗ್ಗೆ ಸುಳ್ಳು ಸುದ್ದಿಗಳನ್ನು ಹರಡಿದೆ.
ಇನ್ನು 3.5 ಮಿಲಿಯನ್ ಚಂದಾದಾರರು ಮತ್ತು 160 ಕೋಟಿಗೂ ಹೆಚ್ಚು ವೀಕ್ಷಣೆಗಳನ್ನು ಹೊಂದಿರುವ ಕ್ಯಾಪಿಟಲ್ ಟಿವಿ ಚಾನಲ್ ಭಾರತದ ಪ್ರಧಾನಿ, ಸರ್ಕಾರ ಮತ್ತು ಪಶ್ಚಿಮ ಬಂಗಾಳದಲ್ಲಿ ರಾಷ್ಟ್ರಪತಿ ಆಳ್ವಿಕೆಗೆ ಸಂಬಂಧಿಸಿದ ಆದೇಶಗಳ ಬಗ್ಗೆ ಸುಳ್ಳು ಸುದ್ದಿಗಳನ್ನು ಪ್ರಚಾರ ಮಾಡಿದೆ ಹಾಗೂ ಯಹಾನ್ ಸಚ್ ದೇಖೋ ಚಾನಲ್ 3 ಮಿಲಿಯನ್ ಚಂದಾದಾರರು ಮತ್ತು 100 ಮಿಲಿಯನ್ ವೀಕ್ಷಣೆಗಳನ್ನು ಹೊಂದಿದ್ದು, ಇದು ಚುನಾವಣಾ ಆಯೋಗ ಮತ್ತು ಭಾರತದ ಮುಖ್ಯ ನ್ಯಾಯಾಧೀಶರ ಬಗ್ಗೆ ವರದಿ ಮಾಡಿಕೊಂಡು ಬರುತ್ತಿತ್ತು.

ಇದರೊಂದಿಗೆ 31,000 ಚಂದಾದಾರರು ಮತ್ತು 3.6 ಮಿಲಿಯನ್ ವೀಕ್ಷಣೆಗಳನ್ನು ಹೊಂದಿರುವ ಅರ್ನ್ ಟೆಕ್ ಇಂಡಿಯಾ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಮತ್ತು ಇತರರಿಗೆ ಸಂಬಂಧಿಸಿದ ನಕಲಿ ಸುದ್ದಿಗಳನ್ನು ಪ್ರಚಾರ ಮಾಡಿಕೊಂಡು ಹೆಚ್ಚಿನ ವೀಕ್ಷಕರನ್ನು ಪಡೆದುಕೊಳ್ಳುತ್ತಿತ್ತು. ಇನ್ನು ಸರ್ಕಾರ ವಿರುದ್ಧ ಸುಳ್ಳು ಸುದ್ದಿ ಹರಡುವ ಹಾಗೂ ಜನರನ್ನು ತಪ್ಪುದಾರಿಗೆ ಎಳೆಯುವ ಎಲ್ಲಾ ಸಾಮಾಜಿಕ ಜಾಲತಾಣದ ವಿರುದ್ಧ ಭಾರತ ಸರ್ಕಾರ ತನ್ನದೇ ಆದ ರೀತಿಯಲ್ಲಿ ಸಮರ ಸಾರಿದೆ.


Click it and Unblock the Notifications








