Bengaluru: ಆ ಆಪ್ ಇನ್‌ಸ್ಟಾಲ್ ಮಾಡಿದ್ದೇ ತಡ 5.2 ಕೋಟಿ ರೂ. ಮಾಯ.. ನೀವು ಎಚ್ಚರ
ಇತ್ತೀಚಿನ ದಿನಗಳಲ್ಲಿ ಆನ್‌ಲೈನ್ ಹಗರಣಗಳ (Online scam) ಸಂಖ್ಯೆ ಹೆಚ್ಚಾಗುತ್ತಿದೆ. ಪರಿಣಾಮ ಸಾವಿರದಿಂದ ಹಿಡಿದ ಲಕ್ಷದ ವರೆಗೆ ಜನರು ಹಣ ಕಳೆದುಕೊಳ್ಳುತ್ತಿದ್ದಾರೆ. ಆದರೆ ಈ ಪ್ರಕರಣದಲ್ಲಿ ಬೆಂಗಳೂರು (Bengaluru) ಮೂಲದ ವ್ಯಕ್ತಿ ಬರೋಬ್ಬರಿ 5.2 ಕೋಟಿ ರೂ. ಕಳೆದುಕೊಂಡಿದ್ದಾರೆ.
ಹೌದು,ಸ್ಕ್ಯಾಮರ್‌ಗಳು ವಿವಿಧ ರೀತಿಯಲ್ಲಿ ಜನರನ್ನು ವಂಚಿಸುತ್ತಲೇ ಇದ್ದಾರೆ. ಇದರಿಂದ ಹಲವರು ಬಚಾವ್ ಆದರೆ ಇನ್ನೂ ಕೆಲವರೂ ಇನ್ನೂ ಹೆಚ್ಚಿನ ಹಣ ಸಂಪಾದನೆ ಮಾಡಬೇಕು ಎಂದುಕೊಂಡು ಸ್ಕ್ಯಾಮರ್‌ಗಳು ತೋಡಿದ ಹಳ್ಳಕ್ಕೆ ಬಿದ್ದು, ಈ ರೀತಿ ಕೋಟ್ಯಂತರ ರೂ. ಹಣ ಕಳೆದುಕೊಳ್ಳುತ್ತಿದ್ದಾರೆ. ಅದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಹಾಗಿದ್ರೆ, ಇಷ್ಟೊಂದು ಹಣವನ್ನು ಈ ವ್ಯಕ್ತಿ ಕಳೆದುಕೊಂಡಿದ್ದು ಹೇಗೆ?, ಈ ರೀತಿಯ ವಂಚನೆಗಳಿಂದ ನೀವು ಪಾರಾಗುವುದು ಹೇಗೆ ಅನ್ನೋ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

5.2 ಕೋಟಿ ರೂ. ಕಳೆದುಕೊಂಡ ವ್ಯಕ್ತಿ: ಭಾರತದಲ್ಲಿ ಆನ್‌ಲೈನ್ ಸ್ಟಾಕ್ ಹೂಡಿಕೆ ಹಗರಣಗಳು ವ್ಯಾಪಕವಾಗಿವೆ. ಕಳೆದ ಕೆಲವು ತಿಂಗಳುಗಳಲ್ಲಿ, ದೇಶಾದ್ಯಂತ ನೂರಾರು ವ್ಯಕ್ತಿಗಳು ಈ ಹಗರಣಗಳಿಗೆ ಬಲಿಯಾಗಿದ್ದಾರೆ. ಇತ್ತೀಚಿನ ಪ್ರಕರಣವೊಂದರಲ್ಲಿ, ಜಯನಗರದ ಉದ್ಯಮಿಯೊಬ್ಬರು ಅತ್ಯಾಧುನಿಕ ಸೈಬರ್ ಅಪರಾಧಕ್ಕೆ ಬಲಿಯಾಗಿ 5.2 ಕೋಟಿ ರೂ. ಕಳೆದುಕೊಂಡಿದ್ದಾರೆ. ಷೇರು ಮಾರುಕಟ್ಟೆಗೆ ಹೊಸಬರಾಗಿದ್ದ 52 ವರ್ಷ ವಯಸ್ಸಿನ ವ್ಯಕ್ತಿ ಅಪರಿಚಿತ ವ್ಯಕ್ತಿಗಳಿಂದ ವಂಚನೆಗೆ ಒಳಗಾಗಿದ್ದಾರೆ.
ಈ ಘಟನೆ ಸಂಬಂಧ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಈ ವರದಿಯಲ್ಲಿ ಇರುವಂತೆ ಮಾರ್ಚ್ 11 ರಂದು ಲಾಭದಾಯಕ ಷೇರು ಮಾರುಕಟ್ಟೆ ಆದಾಯದ ಭರವಸೆಯ ವಾಟ್ಸಾಪ್ ಮೆಸೆಜ್ ಅನ್ನು ಇವರು ಸ್ವೀಕಾರ ಮಾಡಿದ್ದಾರಂತೆ. ಇಲ್ಲಿಂದ ನೋಡಿ ಇವರ ಅಗ್ನಿಪರೀಕ್ಷೆ ಆರಂಭವಾಗಿದ್ದು, ಈ ಮೆಸೆಜ್‌ನಲ್ಲಿ 'bys-app.com' ನಿಂದ ಆಪ್ ಅನ್ನು ಡೌನ್‌ಲೋಡ್ ಮಾಡಲು ತಿಳಿಸಲಾಗಿತ್ತು. ಜೊತೆಗೆ ಅದಕ್ಕೆ ಸಂಬಂಧಿಸಿದ ಲಿಂಕ್ ಅನ್ನೂ ಸಹ ನೀಡಲಾಗಿತ್ತು. ಆರಂಭದಲ್ಲಿ, ಅವರು ಈ ಮೆಸೆಜ್ ಅನ್ನು ನಿರ್ಲಕ್ಷಿಸಿದ್ದರು ಮತ್ತು ಅಲ್ಲಿದ್ದ ಲಿಂಕ್ ಅನ್ನು ಕ್ಲಿಕ್ ಮಾಡಿರಲಿಲ್ಲ. ಆದರೆ ನಂತರ ಅವರನ್ನು ಸುಮಾರು 160 ಸದಸ್ಯರನ್ನು ಹೊಂದಿರುವ 'Y-5 ಎವರ್ ಕೋರ್ ಫೈನಾನ್ಶಿಯಲ್ ಲೀಡರ್' ಹೆಸರಿನ ವಾಟ್ಸಾಪ್ ಗ್ರೂಪ್‌ಗೆ ಆಡ್ ಮಾಡಲಾಗಿದೆ.

ಅದಾಗ್ಯೂ ಇವರು ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲವಂತೆ. ನಂತರ ಸ್ಕ್ಯಾಮರ್‌ಗಳು ಇವರಿಗೆ ಅಪರಿಚಿತ ಸಂಖ್ಯೆಗಳಿಂದ ಕರೆಗಳನ್ನು ಮಾಡಲು ಮುಂದಾಗಿದ್ದಾರೆ. ಒದಗಿಸಿದ ಲಿಂಕ್ ಮೂಲಕ ಆಪ್ ಅನ್ನ ಡೌನ್‌ಲೋಡ್ ಮಾಡಲು ನಿರಂತರವಾಗಿ ಒತ್ತಾಯಿಸಿದರು. ಆರಂಭದಲ್ಲಿ ಹಿಂಜರಿಯುತ್ತಿದ್ದರೂ, ಶರತ್ ಅವರು ಅಂತಿಮವಾಗಿ ಇದು ನ್ಯಾಯಸಮ್ಮತವಾದ ವ್ಯವಹಾರ ಎಂದು ನಂಬಿ ಇನ್‌ಸ್ಟಾಲ್ ಮಾಡಲು ಮುಂದಾಗಿದ್ದಾರೆ.
ಒಮ್ಮೆ ಅವರು ಆಪ್ ಅನ್ನು ಡೌನ್‌ಲೋಡ್ ಮಾಡಿದ ನಂತರ, ಸ್ಕ್ಯಾಮರ್‌ಗಳು ಅವರಿಗೆ ವಿವಿಧ ರೀತಿಯ ಹೂಡಿಕೆ ಅವಕಾಶಗಳನ್ನು ಮತ್ತು ಹಣವನ್ನು ವರ್ಗಾಯಿಸಲು ಬಹು ಖಾತೆಗಳನ್ನು ನೀಡಿದ್ದಾರೆ. ಈ ಹಣವನ್ನು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲಾಗುತ್ತಿದೆ ಎಂದು ಅವರು ಭರವಸೆ ನೀಡಿದ್ದಾರೆ. ಗಮನಿಸಬೇಕಾದ ವಿಷಯ ಏನೆಂದರೆ ಈ ಎಲ್ಲಾ ಖಾತೆಗಳನ್ನು ವಂಚಕರು ನಿಯಂತ್ರಿಸುತ್ತಿದ್ದರು.

ಏಪ್ರಿಲ್ 2 ರ ಹೊತ್ತಿಗೆ ಇದು ಮೋಸ ಎಂದು ಮನವರಿಕೆ ಮಾಡಿಕೊಂಡ ಶರತ್ ಆದಾಗಲೇ 5.2 ಕೋಟಿ ರೂ. ಗಳನ್ನು ಕಳೆದುಕೊಂಡಿದ್ದರು. ಇವರು ತಮ್ಮ ಲಾಭಗಳನ್ನು ಹಿಂತೆಗೆದುಕೊಳ್ಳಲು ಪ್ರಯತ್ನಿಸಿದಾಗ ಅಥವಾ ಹೆಚ್ಚಿನ ವ್ಯಾಪಾರಕ್ಕಾಗಿ ತನ್ನ ಪ್ರಮುಖ ಹೂಡಿಕೆಯ ಒಂದು ಭಾಗವನ್ನು ಹಿಂತೆಗೆದುಕೊಳ್ಳಲು ಪ್ರಯತ್ನಿಸಿದಾಗ ವಂಚಕರು ನಿರಾಕರಿಸಿದ್ದಾರೆ. ನಂತರ, ಐಟಿ ಕಾಯ್ದೆಯಡಿ ಪ್ರಕರಣ ದಾಖಲು ಮಾಡಿದ್ದಾರೆ.
ಈ ರೀತಿಯ ಘಟನೆಗಳಿಂದ ಸುರಕ್ಷಿತವಾಗಿರುವು ಹೇಗೆ?: ವಾಟ್ಸಾಪ್ ಗ್ರೂಪ್‌ಗಳು ಮತ್ತು ಷೇರು ಮಾರುಕಟ್ಟೆ ಹೂಡಿಕೆಯ ಮೂಲಕ ಹಣವನ್ನು ಹೆಚ್ಚಿಗೆ ಮಾಡಿಕೊಡಲಾಗುತ್ತದೆ ಎನ್ನುವ ಮೆಸೆಜ್‌ಗಳನ್ನು ನಂಬಬೇಡಿ. ಅನೇಕ ವ್ಯಕ್ತಿಗಳು ಇದೇ ರೀತಿಯ ಬಲೆಗಳಲ್ಲಿ ಬಿದ್ದು ಹಣವನ್ನು ಕಳೆದುಕೊಂಡಿದ್ದಾರೆ. ಹೆಚ್ಚಿದ ಅರಿವಿನ ಹೊರತಾಗಿಯೂ, ಜನರು ಅಪೇಕ್ಷಿಸದ ಹೂಡಿಕೆ ಸಲಹೆ ಅಥವಾ ಕೊಡುಗೆಗಳೊಂದಿಗೆ ವ್ಯವಹರಿಸುವಾಗ ಎಚ್ಚರಿಕೆಯನ್ನು ವಹಿಸುತ್ತಿಲ್ಲ ಅನ್ನೋದೇ ದುರಂತ.
ಮೂಲಗಳನ್ನು ಪರಿಶೀಲಿಸಿ: ಹಣಕಾಸಿನ ಅವಕಾಶಗಳ ನ್ಯಾಯಸಮ್ಮತತೆಯನ್ನು ಯಾವಾಗಲೂ ಪರಿಶೀಲಿಸಿ. ವಿಶೇಷವಾಗಿ ಮೆಸೆಜ್‌ಗಳು, ಇಮೇಲ್‌ಗಳು ಅಥವಾ ಅಪರಿಚಿತ ಮೂಲಗಳಿಂದ ಬರುವ ಕರೆಗಳ ಮೂಲವನ್ನು ಕಂಡುಕೊಳ್ಳಿ. ಅಂದರೆ ಅವರು ಹೇಳುವ ಕಂಪನಿ ಅಥವಾ ವ್ಯಕ್ತಿಗಳ ಹೆಸರನ್ನು ಸಂಶೋಧಿಸಿ. ಇದ್ಯಾವುದು ಆಗುವುದಿಲ್ಲ ಎಂದರೆ ಸುಮ್ಮನೆ ಇದ್ದುಬಿಡಿ. ಆದರೆ ಯಾವುದೇ ಕಾರಣಕ್ಕೂ ಸ್ಕ್ಯಾಮರ್‌ಗಳು ಹೇಳಿದ ಹಾಗೆ ಮಾಡಬೇಡಿ.

ಅಜ್ಞಾತ ಲಿಂಕ್‌ಗಳು ಮತ್ತು ಆಪ್‌ಗಳ ಬಗ್ಗೆ ಎಚ್ಚರ: ಅಜ್ಞಾತ ಮೂಲಗಳಿಂದ ಲಿಂಕ್‌ಗಳನ್ನು ಕ್ಲಿಕ್ ಮಾಡಬೇಡಿ, ವಿಶೇಷವಾಗಿ ಅವುಗಳು ಪರಿಚಯವಿಲ್ಲದ ವೆಬ್‌ಸೈಟ್‌ಗಳಿಗೆ ನಿಮ್ಮನ್ನು ಕರೆದುಕೊಂಡು ಹೋಗುತ್ತವೆ. ಅನಧಿಕೃತ ಅಥವಾ ಅನುಮಾನಾಸ್ಪದ ವೆಬ್‌ಸೈಟ್‌ಗಳಿಂದ ಆಪ್‌ಗಳನ್ನು ಇನ್‌ಸ್ಟಾಲ್ ಮಾಡುವ ಬಗ್ಗೆ ಜಾಗರೂಕರಾಗಿರಿ. ಇನ್ನು ಹೂಡಿಕೆಯ ಅವಕಾಶವು ಕಡಿಮೆ ಅಪಾಯದೊಂದಿಗೆ ಅಸಾಮಾನ್ಯವಾಗಿ ಹೆಚ್ಚಿನ ಆದಾಯವನ್ನು ಭರವಸೆ ನೀಡಿದರೆ, ಜಾಗರೂಕರಾಗಿರಿ.


Click it and Unblock the Notifications








