iPhone: ಫ್ಲಿಪ್‌ಕಾರ್ಟ್‌ನಲ್ಲಿ ಐಫೋನ್ 15 ಆರ್ಡರ್: ಈ ರೀತಿಯೂ ಮೋಸ ಆಗುತ್ತೆ ಹುಷಾರ್!
ಐಫೋನ್‌ಗಳು (iPhone) ಇಂದು ಇತರೆ ಫೋನ್‌ಗಳಿಗಿಂತ ಹೆಚ್ಚಿನ ಬೇಡಿಕೆ ಇರುವ ಫೋನ್‌ಗಳಾಗಿವೆ. ಅದರಲ್ಲೂ ಪ್ರಮುಖ ಇ-ಕಾಮರ್ಸ್ ಸೈಟ್‌ಗಳಲ್ಲಿ ಈ ಫೋನ್‌ಗಳಿಗೆ ವಿವಿಧ ರೀತಿಯ ಕೊಡುಗೆ ಸಹ ಇದ್ದು, ಇದರಿಂದಾಗಿ ಗ್ರಾಹಕರು ಮುಗಿಬಿದ್ದು ಈ ಫೋನ್‌ಗಳನ್ನು ಖರೀದಿ ಮಾಡುತ್ತಿದ್ದಾರೆ. ಆದರೆ, ಫ್ಲಿಪ್‌ಕಾರ್ಟ್‌ನಲ್ಲಿ (Flipkart) ಐಫೋನ್ 15 ಆರ್ಡರ್ ಮಾಡಿದ್ದ ವ್ಯಕ್ತಿ ಈಗ ತಲೆ ಮೇಲೆ ಕೈ ಹಾಕಿ ಕೂರುವಂತಾಗಿದೆ.
ಹೌದು, ಸಾಮಾನ್ಯವಾಗಿ ಪ್ರಮುಖ ಇ-ಕಾಮರ್ಸ್ ಸೈಟ್‌ಗಳಲ್ಲಿ ಸ್ಮಾರ್ಟ್‌ಫೋನ್‌ಗಳನ್ನು ಹೆಚ್ಚಾಗಿ ಖರೀದಿ ಮಾಡಲಾಗುತ್ತದೆ. ಇದಕ್ಕೆ ಕಾರಣ ಹೆಚ್ಚಿನ ಆಫರ್ ಲಭ್ಯವಾಗುತ್ತದೆ ಎಂದು. ಅದರಂತೆ ಇಲ್ಲೋರ್ವರು ಹೊಸ ಸರಣಿಯ ಐಫೋನ್ ಅನ್ನು ಅನಾವರಣ ಮಾಡಿದ್ದು, ಈ ಫೋನ್ ಸ್ವೀಕಾರ ಮಾಡಿದ ವ್ಯಕ್ತಿ ಶಾಕ್‌ಗೆ ಒಳಗಾಗಿದ್ದಾರೆ. ಅಷ್ಟಕ್ಕೂ ಆಗಿದ್ದೇನು?, ಐಫೋನ್ ಹೆಸರಲ್ಲಿ ಹೇಗೆಲ್ಲಾ ಮೋಸ ಮಾಡಲಾಗುತ್ತದೆ ಅನ್ನೋ ಮಾಹಿತಿ ಇಲ್ಲಿದೆ ನೋಡಿ.

ಡ್ಯಾಮೇಜ್ ಐಫೋನ್ 15: ಪ್ರಮುಖ ಇ-ಕಾಮರ್ಸ್ ಸೈಟ್ ಆಗಿರುವ ಫ್ಲಿಪ್‌ಕಾರ್ಟ್‌ಮೂಲಕ ಐಫೋನ್ 15 ಅನ್ನು ಆರ್ಡರ್ ಮಾಡಲಾಗಿತ್ತು. ಆದರೆ, ನಿರೀಕ್ಷೆಯಂತೆ ಅದು ಉತ್ತಮ ಐಫೋನ್ ಆಗಿರಲಿಲ್ಲ. ಬದಲಿಗೆ ದೋಷಯುಕ್ತ ಐಫೋನ್ 15 (iPhone 15) ಸ್ವೀಕರಿದ್ದಾರೆ. ಅಷ್ಟೇ ಅಲ್ಲದೆ ಈ ಫೋನ್ ನಕಲಿ ಬ್ಯಾಟರಿಯನ್ನೂ ಸಹ ಹೊಂದಿದೆ. ಈ ಫೋನ್ ಸ್ವೀಕಾರ ಮಾಡಿದ ಬಳಿಕ ಗ್ರಾಹಕರು ಫ್ಲಿಪ್‌ಕಾರ್ಟ್‌ಗೆ ವರದಿ ಮಾಡಿದ್ದು, ಅದು ಈಗ ಪರಿಶೀಲನೆಯಲ್ಲಿದೆ.
ಅಜಯ್ ರಾಜಾವತ್ ಎಂಬುವರೇ ಈ ನಕಲಿ ಐಫೋನ್ ಅನ್ನು ಸ್ವೀಕಾರ ಮಾಡಿದವರು. ಇವರು ಇದೀಗ ತಮ್ಮ ನೋವನ್ನು ಸಾಮಾಜಿಕ ಜಾಲತಾಣದ ಮೂಲಕ ಹೊರಹಾಕಿದ್ದಾರೆ. ಜೊತೆಗೆ ಈ ವೇಳೆ ಕೆಲವು ಸ್ಕ್ರೀನ್ ಶಾಟ್‌ಗಳು ಹಾಗೂ ಅನ್‌ಬಾಕ್ಸಿಂಗ್ ವಿಡಿಯೋವನ್ನೂ ಸಹ ಪೋಸ್ಟ್ ಮಾಡಿದ್ದಾರೆ. ಗಮನಿಸಬೇಕಾದ ವಿಷಯ ಏನೆಂದರೆ ಫ್ಲಿಪ್‌ಕಾರ್ಟ್ ನಲ್ಲಿ ಇಂತಹ ಸಮಸ್ಯೆ ವರದಿಯಾಗುತ್ತಿರುವುದು ಇದೇ ಮೊದಲಲ್ಲ.

ಫ್ಲಿಪ್‌ಕಾರ್ಟ್‌ನ ರಿಪಬ್ಲಿಕ್ ಡೇ ಸೇಲ್‌ನಲ್ಲಿ ಅಜಯ್ ಈ ಫೋನ್ ಅನ್ನು ಆರ್ಡರ್ ಮಾಡಿದ್ದಾರೆ. ಈ ಫೋನ್ ಜನವರಿ 15 ರಂದು ಗ್ರಾಹಕರಿಗೆ ತಲುಪಿದೆ. ಆದರೆ ಬಾಕ್ಸ್ ಅನ್ನು ತೆರೆದ ನಂತರ, ರಾಜವತ್ ಅವರು ದೋಷಯುಕ್ತ ಐಫೋನ್ (Defective iPhone) ಅನ್ನು ನೋಡಿ ಆಘಾತಕ್ಕೊಳಗಾಗಿದ್ದಾರೆ. ಇನ್ನು ಫ್ಲಿಪ್‌ಕಾರ್ಟ್, ಗ್ರಾಹಕರ ಕುಂದುಕೊರತೆಗಳಿಗೆ ಪ್ರತಿಕ್ರಿಯೆಯಾಗಿ, ಸಮಸ್ಯೆಯನ್ನು ಬಗೆಹರಿಸುವುದಾಗಿ ಒಪ್ಪಿಕೊಂಡಿದೆ. ಫ್ಲಿಪ್‌ಕಾರ್ಟ್‌ನ ಹೇಳಿಕೆಯಲ್ಲಿ ಗ್ರಾಹಕರ ಅಹಿತಕರ ಅನುಭವಕ್ಕಾಗಿ ವಿಷಾದ ವ್ಯಕ್ತಪಡಿಸಿದೆ. ಅಷ್ಟೇ ಅಲ್ಲದೆ ಬ್ರಾಂಡ್‌ನಂತೆ ನಟಿಸುವ ನಕಲಿ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳಿಗೆ ಪ್ರತಿಕ್ರಿಯಿಸದಂತೆ ಎಚ್ಚರಿಕೆಯನ್ನೂ ಸಹ ನೀಡಿದೆ.
ನಕಲಿ ಒನ್‌ಪ್ಲಸ್ ಫೋನ್ ಖರೀದಿ ಮಾಡಿದ್ದ ಗ್ರಾಹಕ: ಇದೇ ರೀತಿಯ ಸಾಕಷ್ಟು ಘಟನೆಗಳು ಫ್ಲಿಪ್‌ಕಾರ್ಟ್ ನಲ್ಲಿ ಜರುಗಿವೆ. ಅದರಲ್ಲೂ ಇತ್ತೀಚೆಗಷ್ಟೇ, ಕೊಚ್ಚಿ ನಿವಾಸಿ ಎಂಕೆ ಸತೀಶ್ ಅವರು ಫ್ಲಿಪ್‌ಕಾರ್ಟ್‌ನಿಂದ ಪ್ರೀಮಿಯಂ ಒನ್‌ಪ್ಲಸ್ 11 5G (OnePlus 11 5G) ಸ್ಮಾರ್ಟ್‌ಫೋನ್ ಅನ್ನು ಆರ್ಡ್ ಮಾಡಿ ಇದೇ ರೀತಿಯ ಸಮಸ್ಯೆಗಳನ್ನು ಎದುರಿಸಿದ್ದರು. ಹೊಸ ಫೋನ್ ಬದಲಾಗಿ ಭೌತಿಕ ಹಾನಿಯೊಂದಿಗೆ ಬಳಕೆ ಮಾಡಿದ್ದ ಡಿವೈಸ್ ಅನ್ನು ಅವರು ಪಡೆದಿದ್ದರಂತೆ.
ಸತೀಶ್ ಅವರು ಡೆಲಿವರಿ ಶುಲ್ಕ ಸೇರಿದಂತೆ 53,098 ರೂ.ಗಳನ್ನು ಈ ಫೋನ್‌ಗೆ ಪಾವತಿ ಮಾಡಿದ್ದರು. ಈ ಫೋನ್ ಅನ್ನು ಅನ್‌ಬಾಕ್ಸಿಂಗ್ ಮಾಡಿದ ನಂತರ ಫೋನ್ ಕಾರ್ಯನಿರ್ವಹಿಸದಿರುವುದನ್ನು ಸತೀಶ್ ಕಂಡುಕೊಂಡಿದ್ದಾರೆ. ಸಾಮಾನ್ಯವಾಗಿ ಗ್ರಾಹಕರು ರಿಟರ್ನ್ ಅಥವಾ ಎಕ್ಸ್‌ಚೇಂಜ್ ಆಯ್ಕೆಯನ್ನು ಪಡೆಯಬಹುದಾಗಿದ್ದು, ಈ ಮೂಲಕ ಸತೀಶ್ ಇದರ ಸೌಲಭ್ಯ ಪಡೆದಿದ್ದಾರೆ.


Click it and Unblock the Notifications








