Apple iPhone : ಅಧಿಕೃತ ಆಪಲ್ ಸ್ಟೋರ್‌ನಿಂದ ಐಫೋನ್ 15 ಆರ್ಡರ್! ಬಂದಿದ್ದು ಆಂಡ್ರಾಯ್ಡ್ ಫೋನ್ !
ಐಫೊನ್‌ಗಳಿಗೆ ಜಾಗತಿಕವಾಗಿ ಭಾರೀ ಬೇಡಿಕೆ ಇದೆ. ಅದರಲ್ಲೂ ಇತ್ತೀಚಿನ ಫೋನ್ ಆದ ಐಫೋನ್ 15 (iPhone 15) ಅನ್ನು ಈ ಕ್ಷಣಕ್ಕೂ ಜನರು ಮುಗಿಬಿದ್ದು ಖರೀದಿ ಮಾಡುತ್ತಿದ್ದಾರೆ. ಈ ಬೆಳವಣಿಗೆ ನಡುವೆ ಐಫೋನ್ ಖರೀದಿ ಮಾಡಲು ಮುಂದಾಗುವರು ಶಾಕ್‌ಗೆ ಒಳಗಾಗುವ ಸುದ್ದಿಯೊಂದು ಹೊರಬಿದ್ದಿದೆ.
ಹೌದು, ಇಲ್ಲೋರ್ವ ವ್ಯಕ್ತಿ ಆಪಲ್ ಸ್ಟೋರ್‌ನಿಂದ ಐಫೋನ್ 15 ಪ್ರೊ ಅನ್ನು ಆರ್ಡರ್ ಮಾಡಿದ್ದಾರೆ. ಆದರೆ, ಅದನ್ನು ಡೆಲಿವರಿ ಮಾಡಿದ ನಂತರ ಬಾಕ್ಸ್ ಓಪನ್ ಮಾಡಿ ನೋಡಿದ್ರೆ ಅದರಲ್ಲಿ ಆಂಡ್ರಾಯ್ಡ್ ಫೋನ್ ಕಂಡುಬಂದಿದೆ. ಹಾಗಿದ್ರೆ, ಈ ರೀತಿ ಘಟನೆ ಯಾಕೆ ಆಯಿತು? ಅಧೀಕೃತ ಆಪಲ್ ಸೈಟ್ ಮೂಲಕವೇ ಮೋಸ ಹೋದ್ರಾ? ಎಂಬಿತ್ಯಾದಿ ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ ನೋಡಿ.

ಆರ್ಡರ್ ಮಾಡಿದ್ದು, ಐಫೋನ್ ಬಂದಿದ್ದು ಆಂಡ್ರಾಯ್ಡ್ ಫೋನ್: ಇಂಗ್ಲೆಂಡ್‌ನ ಸರ್ರೆಯ ಎಡ್ ಎಂಬ ವ್ಯಕ್ತಿ ಅಧಿಕೃತ ಆಪಲ್ ಸ್ಟೋರ್‌ನಿಂದ ಐಫೋನ್ 15 ಪ್ರೊ (iPhone 15 Pro) ಅನ್ನು ಆರ್ಡರ್ ಮಾಡಿದ್ದಾರೆ. ಆದರೆ ಇದರ ಬದಲಿಗೆಆಂ ಡ್ರಾಯ್ಡ್ ಫೋನ್ (Android phone) ಬಂದಿದೆ. ಇದನ್ನು ನೋಡಿ ಎಡ್ ಆಘಾತಕ್ಕೊಳಗಾಗಿದ್ದಾರೆ. ಇನ್ನು ಆಪಲ್ ಅನ್ನೇ ಹೋಲುವ ಈ ಆಂಡ್ರಾಯ್ಡ್ ಫೋನ್ ಇದಾಗಿದ್ದರಿಂದ ಇನ್ನಷ್ಟು ದಿಘ್ಬ್ರಮೆ ಉಂಟಾಗುವಂತೆ ಆಗಿದೆ.
ದುರಂತ ಏನೆಂದರೆ ಇವರು ಆಪಲ್ ಹಾಗೂ DPD ಎರಡರಿಂದಲೂ ಕಾನೂನುಬದ್ಧ ಟ್ರ್ಯಾಕಿಂಗ್ ಮತ್ತು ದೃಢೀಕರಣ ಇಮೇಲ್‌ಗಳನ್ನು ಸ್ವೀಕರಿಸಿದ್ದಾರೆ. ಅಷ್ಟೇ ಅಲ್ಲದೆ ಆಪಲ್‌ನ ಅಧಿಕೃತ ವೆಬ್‌ಸೈಟ್ ಮೂಲಕ ನೇರವಾಗಿ ಆರ್ಡರ್ ಮಾಡಿರುವುದಾಗಿ ಎಡ್ ಹೇಳಿಕೊಂಡಿದ್ದಾರೆ. ಆದಾಗ್ಯೂ, ಡೆಲಿವರಿ ಆದ ನಂತರ ಆದ ಬೆಳವಣಿಗೆ ನೋಡಿ ಏನೂ ತೋಚದಂತೆ ಆಗಿದ್ದಾರೆ. ಇನ್ನು ಈ ಫೋನ್ ಹೊರನೋಟಕ್ಕೆ 256GB ಸ್ಟೋರೇಜ್ ಆಯ್ಕೆ ಇರುವ ನ್ಯಾಚುರಲ್ ಟೈಟಾನಿಯಂನಲ್ಲಿನ ಐಫೋನ್ 15 ಪ್ರೊ ನಂತೆ ಕಾಣಿಸಿಕೊಂಡಿದೆ. ಆದರೆ ಈ ಫೋನ್ ನಕಲಿಯಾಗಿದೆ.

ನಕಲಿ ಎಂದು ಕಂಡುಬಂದಿದ್ದು ಹೇಗೆ?: ಈ ಫೋನ್ ಅನ್ನು ನಕಲಿ ಎಂದು ಕಂಡುಕೊಳ್ಳಲು ಹಲವಾರು ವಿಷಯಗಳನ್ನು ಪರಿಶೀಲನೆ ಮಾಡಲಾಗಿದೆ. ಅಂದರೆ, ಡಿಸ್‌ಪ್ಲೇನಲ್ಲಿ ಗಮನಾರ್ಹವಾದ ಬದಲಾವಣೆ ಕಂಡುಬಂದಿದೆ. ಇದರೊಂದಿಗೆ ಈ ಫೋನ್‌ನಲ್ಲಿ ಫೇಸ್‌ಬುಕ್, ಯೂಟ್ಯೂಬ್, ಟಿಕ್‌ಟಾಕ್ ಸೇರಿದಂತೆ ಇತರೆ ಪೂರ್ವಸ್ಥಾಪಿತ ಆಪ್‌ಗಳು ಈ ಫೋನ್‌ನಲ್ಲಿ ಕಾಣಿಸಿಕೊಂಡಿವೆಯಂತೆ. ವಿಷಯ ಏನೆಂದರೆ ಆಪಲ್ ಎಂದಿಗೂ ಈ ರೀತಿ ಮಾಡುವುದಿಲ್ಲ.
ಈ ಎಲ್ಲಾ ವಿಷಯ ಮನಗಂಡ ಎಡ್ ಅವರು ತಕ್ಷಣವೇ ಆಪಲ್ ಸಂಪರ್ಕ ಕೇಂದ್ರಕ್ಕೆ ಕರೆ ಮಾಡಿ ತಮಗೆ ಆದ ಮೋಸದ ಬಗ್ಗೆ ಮಾಹಿತಿ ನೀಡಿದ್ದಾರೆ. ಆದರೆ, ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎನ್ನುವುದು ಇವರ ಆರೋಪವಾಗಿದೆ. ಇಷ್ಟೇ ಅಲ್ಲದೆ ತನ್ನ ಆರ್ಡರ್ ಸಂಖ್ಯೆಯನ್ನು ಫೋನ್‌ನ ಎಲ್ಲಾ ರೀತಿಯ ಮಾಹಿತಿಯನ್ನು ಈ ವೇಳೆ ಅವರು ಶೇರ್ ಮಾಡಿಕೊಂಡಿದ್ದಾರೆ. ಅಂದರೆ, ಮೇಲ್ ಸ್ವೀಕೃತಿಗಳು ಹಾಗೂ ಇತರೆ ವಿವರಗಳನ್ನು ಇವರು ಹಂಚಿಕೊಂಡಿದ್ದು, ಈ ಮೂಲಕವಾದರೂ ಆಪಲ್ ದೃಢೀಕರಣ ಮಾಡಲಿ ಎನ್ನುವುದು ಇವರ ಆಗ್ರಹವಾಗಿದೆ.
ಆಪಲ್ ಸಾಮಾನ್ಯವಾಗಿ ಲಕ್ಷಾಂತರ ಐಫೋನ್‌ಗಳನ್ನು ಸಾಗಣೆ ಮಾಡುತ್ತದೆ. ಈ ಕಾರಣಕ್ಕೆ ಈ ವಿಭಾಗದಲ್ಲಿ ಈ ರೀತಿಯ ಹಗರಣಗಳು ಹೆಚ್ಚಾಗುತ್ತವೆ ಎಂದು ತಿಳಿದುಬಂದಿದೆ. ಜೊತೆಗೆ ಇದು ಡೇಟಾ ಕಳ್ಳತನದ ಗಮನಾರ್ಹ ಅಪಾಯವನ್ನು ಉಂಟುಮಾಡುತ್ತದೆ ಎಂದೂ ಸಹ ತಿಳಿದುಬಂದಿದೆ. ಅಷ್ಟೇ ಅಲ್ಲದೆ ಈ ನಕಲಿ ಫೋನ್ ಬಳಕೆದಾರರಿಗೆ ತಮ್ಮ ಐಕ್ಲೌಡ್ ರುಜುವಾತುಗಳನ್ನು ನಮೂದಿಸಲು ಈ ರೀತಿಯ ಫೋನ್‌ಗಳು ಪ್ರೇರೇಪಿಸುತ್ತದೆ.

ಇನ್ನು ಆಪಲ್ ಈ ವರೆಗೂ ಸಹ ಎಡ್ ಅವರಿಗೆ ಯಾವುದೇ ಪ್ರತಿಕ್ರಿಯೆ ನೀಡದ ಹಿನ್ನೆಲೆ ಈ ಘಟನೆ ಯಾಕೆ ಸಂಭವಿಸಿದೆ. ಈ ರೀತಿಯಲ್ಲಿ ಮೋಸ ಮಾಡಿದ್ದು ಯಾರು ಎಂಬಿತ್ಯಾದಿ ವಿಷಯಗಳು ರಹಸ್ಯವಾಗಿಯೇ ಉಳಿಯಲಿವೆ. ಪರಿಣಾಮ ಇದಕ್ಕೆ ಆಪಲ್ ಸ್ವತಃ ಮಾಹಿತಿ ನೀಡಿ ಎಡ್ ಅವರ ಸಮಸ್ಯೆಯನ್ನು ಬಗೆಹರಿಸಬೇಕಾಗಿದೆ. ಇಲ್ಲವಾದರೆ ಮುಂದಿನ ದಿನಗಳಲ್ಲಿ ಆಪಲ್ ಫೋನ್ ಅನ್ನು ಆನ್‌ಲೈನ್‌ನಲ್ಲಿ ಖರೀದಿ ಮಾಡುವವರು ಒಂದು ಹೆಜ್ಜೆ ಹಿಂದೆ ಸರಿಯಲಿದ್ದಾರೆ.


Click it and Unblock the Notifications








