ಕ್ರಾಂತಿಕಾರಿ ಹೆಜ್ಜೆ... ನೀವು ಜೀಸಸ್ ಜೊತೆ ಸುಲಭವಾಗಿ ಸಂವಹನ ನಡೆಸಬಹುದು!
ಇಂದಿನ ಟೆಕ್ನಾಲಜಿ ಎಲ್ಲವನ್ನೂ ಸಾಧ್ಯವಾಗಿಸುತ್ತಿದೆ. ಈ ಮೂಲಕ ಜನರು ಇದರಿಂದ ಪ್ರಯೋಜನ ಪಡೆಯುವುದರ ಜೊತೆಗೆ ಹಲವಾರು ಸಮಸ್ಯೆಗಳನ್ನೂ ಸಹ ಎದುರಿಸುವಂತಾಗಿದೆ. ಈ ನಡುವೆ ಬಳಕೆದಾರರು ಏಸುವಿನೊಂದಿಗೂ (Jesus) ಮಾತನಾಡಬಹುದಾದ ಸೌಲಭ್ಯವನ್ನು ಕಲ್ಪಿಸಿಕೊಡಲಾಗಿದೆ. ಅಚ್ಚರಿ ಆಗಬೇಡಿ ಈ ಸುದ್ದಿ ಓದಿ.
ಹೌದು, ಪ್ರಪಂಚದಲ್ಲಿ ಎಲ್ಲೇ ಆದರೂ ಸಹ ಧಾರ್ಮಿಕ ವಿಚಾರಗಳು ಬಹಳ ಸೂಕ್ಷ್ಮತೆಯಿಂದ ಕೂಡಿರುತ್ತವೆ. ಇದನ್ನೇ ಬಳಕೆ ಮಾಡಿಕೊಂಡು ಕೆಲವರು ಸಮಾಜದಲ್ಲಿ ಗೊಂದಲ ಉಂಟು ಮಾಡಿದ್ರೆ ಇನ್ನೂ ಕೆಲವರು ಈ ಮೂಲಕ ಮಾನಸಿಕ ನೆಮ್ಮದಿ ಪಡೆಯುತ್ತಾರೆ. ಆದರೆ, ಇದೆಲ್ಲವನ್ನು ಮೀರಿದ ಹೊಸ ಬೆಳವಣಿಯೊಂದು ಜರುಗಿದ್ದು, ಜನರು ಯೇಸುವಿನೊಂದಿಗೆ ಸಂವಹನ ನಡೆಸುವ ಅನುಭವ ಪಡೆಯಬಹುದಾಗಿದೆ. ಹಾಗಿದ್ರೆ, ಇದು ಹೇಗೆ ಸಾಧ್ಯ?, ಈ ವಿಷಯ ಈಗ ಕೆಲವು ಗೊಂದಲಕ್ಕೆ ಕಾರಣ ಆಗಿರುವುದು ಯಾಕೆ? ಎಂಬ ಮಾಹಿತಿ ಇಲ್ಲಿದೆ ನೋಡಿ.

ಕೃತಕ ಬುದ್ಧಿಮತ್ತೆಯ (AI) ಬೆಳವಣಿಗೆ ಪ್ರತಿಯೊಬ್ಬರ ಜೀವನವನ್ನು ಕ್ರಾಂತಿಗೊಳಿಸುತ್ತಾ ಬರುತ್ತಿದೆ. ಇದನ್ನು ಟೆಕ್ ಉದ್ಯಮದಲ್ಲಿ ಮಾತ್ರವಲ್ಲದೆ, ಶಿಕ್ಷಕನಾಗಿ, ಪಾರ್ಟನರ್ ಆಗಿ, ಜ್ಯೋತಿಷಿ ಆಗಿಯೂ ಬಳಕೆ ಮಾಡಿಕೊಳ್ಳಬಹುದಾಗಿದೆ. ಈ ಮೂಲಕ ಎಐ ಜನರ ಜೀವನದ ಒಂದು ಭಾಗದಂತೆ ಆಗುತ್ತಿದ್ದು, ಈ ನಡುವೆ ಎಐ ಮೂಲಕ ಜನರನ್ನು ದೈವಿಕ ಜಗತ್ತಿಗೆ ಸಂಪರ್ಕಿಸಲು ಈ ಆಪ್ ಕೆಲಸ ಮಾಡುತ್ತಿದೆ.
ಟೆಕ್ಸ್ಟ್ ವಿತ್ ಜೀಸಸ್ (text with Jesus) ಎಂಬ ಹೊಸ ಎಐ ಚಾಟ್‌ಬಾಟ್ ಆಪ್ ಬಳಕೆದಾರರಿಗೆ ಬೈಬಲ್‌ನ ಧಾರ್ಮಿಕ ಮುಖ್ಯ ವ್ಯಕ್ತಿಗಳಾದ ಯೇಸು, ಮೇರಿ ಮತ್ತು ಇತರರೊಂದಿಗೆ ಸಂಭಾಷಣೆಗಳನ್ನು ನಡೆಸಲು ಅನುಮತಿಸುತ್ತದೆ. ಇದೇನೋ ಸಂತಸಪಡುವ ವಿಷಯ. ಆದರೆ, ಈ ವೇಳೆ ಸೈತಾನನೊಂದಿಗೂ ಕೂಡ ಸಂವಹನ ನಡೆಸುವ ಆಯ್ಕೆ ನೀಡಲಾಗಿದ್ದು. ಇದು ವಿವಾದವನ್ನು ಹುಟ್ಟುಹಾಕಿದೆ.
ಈ ಆಪ್ ಅನ್ನು ಶ್ರದ್ಧಾಭಕ್ತಿಯುಳ್ಳ ಕ್ರಿಶ್ಚಿಯನ್ನರನ್ನು ಗಮನದಲ್ಲಿಟ್ಟುಕೊಂಡು ರಚಿಸಲಾಗಿದೆ ಎನ್ನಲಾಗಿದ್ದು. ಈ ಜನರೇಟಿವ್ ಎಐ ಅಪ್ಲಿಕೇಶನ್ ದೈವಿಕ ಪಾತ್ರಗಳು ಹೇಗೆ ಪ್ರತಿಕ್ರಿಯಿಸುತ್ತವೆ ಎಂಬುದರ ಆಧಾರದ ಮೇಲೆ ಬಳಕೆದಾರರಿಗೆ ಉತ್ತರಗಳನ್ನು ನೀಡಲಿವೆ. ಅಂದರೆ ಜೀಸಸ್, ಮೇರಿ, ಜೋಸೆಫ್, ಪೀಟರ್ ಮತ್ತು ಮ್ಯಾಥ್ಯೂ ಸೇರಿದಂತೆ ಅನೇಕರ ಜೊತೆ ಸಂವಹನ ನಡೆಸಬಹುದಾಗಿದೆ.
ಆದಾಗ್ಯೂ ಈ ಎಐ ವಿಚಾರದಲ್ಲಿ ಕೆಲವು ಸಮಸ್ಯೆಗಳು ಕಂಡುಬಂದಿವೆ. ಈ ಆಪ್ ಬಳಕೆದಾರರಿಗೆ ಸೈತಾನನೊಂದಿಗೂ ಸಂಭಾಷಣೆ ನಡೆಸಲು ಅನುವು ಮಾಡಿಕೊಡುತ್ತದೆ. ದೇವದೂತರ ಮತ್ತು ಪವಿತ್ರ ಪಾತ್ರಗಳೊಂದಿಗಿನ ನಡೆಸುವ ಸಂವಹನ ಆಧ್ಯಾತ್ಮಿಕವಾಗಿ ಉನ್ನತಿಗೇರಿಸಬಹುದಾದರೂ ಸೈತಾನನೊಂದಿಗಿನ ಸಂಭಾಷಣೆಗಳು ತಪ್ಪುದಾರಿಗೆಳೆಯಬಹುದು ಎಂದು ಕೆಲವರು ದೂರುತ್ತಿದ್ದಾರೆ.
ಅನಿಯಂತ್ರಿತ ಕಂಟೆಂಟ್‌ನೊಂದಿಗೆ ವಿವಾದಾತ್ಮಕ ಸಂಭಾಷಣೆಯಲ್ಲಿ ತೊಡಗಿರುವ ಬಗ್ಗೆ ಎಐ ಈಗಾಗಲೇ ಚರ್ಚೆಯಲ್ಲಿದೆ. ಈ ನಡುವೆ ಸೈತಾನನೊಂದಿಗಿನ ಸಂಭಾಷಣೆಯ ಫೀಚರ್ಸ್ ಅನ್ನು ಸೇರಿಸುವುದು ಈಗ ಮತ್ತಷ್ಟು ಗೊಂದಲವನ್ನು ಹುಟ್ಟುಹಾಕಿದೆ. ಇದು ಯಾವ ರೀತಿಯಲ್ಲಿ ಬಳಕೆದಾರರ ಮೇಲೆ ಕೆಟ್ಟ ಪರಿಣಾಮ ಬೀರಲಿದೆ ಎಂಬ ಆತಂಕವನ್ನೂ ಸಹ ಹುಟ್ಟುಹಾಕಿದೆ.
ಅದಾಗ್ಯೂ ಸಂತಸ ಪಡುವು ವಿಚಾರ ಏನೆಂದರೆ ಸೈತಾನರೊಂದಿಗೆ ನಡೆಸುವ ಪ್ರತಿಯೊಂದು ಸಂವಹನವು ಕೊಂಬುಗಳೊಂದಿಗೆ ನಗುತ್ತಿರುವ ಮುಖದ ಎಮೋಜಿಯೊಂದಿಗೆ ಮುಕ್ತಾಯಗೊಳ್ಳುತ್ತದೆ. ಸೈತಾನನೊಂದಿಗೆ ಸಂವಹನ ಮಾಡುವ ಆಯ್ಕೆಯನ್ನು ಬಳಕೆದಾರರಿಗೆ ಬಿಡಲಾಗಿದೆ. ಅವರು ಇಷ್ಟ ಪಟ್ಟರೆ ಮಾತ್ರ ಹಸ್ತಚಾಲಿತವಾಗಿ ಇದನ್ನು ಸಕ್ರಿಯಗೊಳಿಸಿಕೊಳ್ಳಬಹುದಾಗಿದೆ. ಆದರೂ ಸಹ ಧಾರ್ಮಿಕ ವಿಚಾರದಲ್ಲಿ ಇದು ಹಲವಾರು ಜನರ ಭಾವನೆಗೆ ಧಕ್ಕೆ ತಂದಿದೆ ಎಂದು ಕೆಲವರು ದೂರುತ್ತಿದ್ದಾರೆ.

ಇನ್ನು ಬೈಬಲ್‌ನ ಪ್ರಸ್ತಾಪಗಳು ಮತ್ತು ಉತ್ತಮ ಪಠ್ಯವನ್ನು ಬಳಕೆ ಮಾಡಿಕೊಂಡು ಆಪ್ ಅನ್ನು ಅಭಿವೃದ್ಧಿಪಡಿಸಲಾಗಿದೆ. ಪರಿಣಾಮ ಚಾಟ್‌ಬಾಟ್ ಪ್ರಶ್ನೆಯು ಬಳಕೆದಾರರಿಗೆ ಪವಿತ್ರ ಪುಸ್ತಕದ ಆಧಾರದ ಮೇಲೆ ಉತ್ತರಗಳನ್ನು ಪಡೆಯಲು ಅನುಮತಿಸುತ್ತದೆ. ಈ ಚಿತ್ರಣವು ಕ್ರಿಶ್ಚಿಯನ್ ಬೋಧನೆಗಳನ್ನು ಆಧರಿಸಿದ್ದು, ಬಳಕೆದಾರರು ಆಪ್‌ನಲ್ಲಿ ಒಳಗೊಂಡಿರುವ ಎಲ್ಲಾ ಪಾತ್ರಗಳೊಂದಿಗೆ ತಮ್ಮ ಎಂಗೇಜ್‌ಮೆಂಟ್ ಮೇಲೆ ಸಂಪೂರ್ಣ ಕಂಟ್ರೋಲ್ ಅನ್ನು ಹೊಂದಿರುತ್ತಾರೆ ಎಂದು ಈ ಆಪ್‌ನಲ್ಲಿ ಉಲ್ಲೇಖ ಮಾಡಲಾಗಿದೆ.
ಸದ್ಯಕ್ಕೆ ಈ ಆಪ್ ಉಚಿತವಾಗಿ ಲಭ್ಯ ಇದ್ದು, ಪ್ರೀಮಿಯಂ ಚಂದಾದಾರಿಕೆಗೆ ಆಯ್ಕೆಯನ್ನೂ ಸಹ ಇದರಲ್ಲಿ ನೀಡಲಾಗಿದೆ. ಈ ಅಪ್ಲಿಕೇಶನ್‌ನ ಪ್ರೀಮಿಯಂ ಆವೃತ್ತಿಯು ತಿಂಗಳಿಗೆ ಕೇವಲ $2.99 ಕ್ಕೆ ಲಭ್ಯವಿದೆ (246 ರೂ.ಗಳು). ಇದರಲ್ಲಿ ಆಡಮ್ ಮತ್ತು ಈವ್‌ನ ಕಥೆ ಅಥವಾ ಉತ್ತಮ ನಿರೂಪಣೆಗಳೊಂದಿಗೆ ಸಂಭಾಷಣೆಗಳನ್ನು ನಡೆಸಲು ಅನುವು ಮಾಡಿಕೊಡುತ್ತದೆ. ಈ ಮೂಲಕ ನೀವು ವಿಶೇಷ ಅನುಭವ ಪಡೆಯಬಹುದಾಗಿದೆ.
ಅದರಲ್ಲೂ ಈ ಆಪ್ ಐಫೋನ್, ಐಪ್ಯಾಡ್ ಹಾಗೂ ಮ್ಯಾಕ್ ಡಿವೈಸ್‌ಗಳಿಗೆ ಮಾತ್ರ ಬೆಂಬಲ ನೀಡಲಿದೆ. ಇದನ್ನು ಬಳಕೆ ಮಾಡಬೇಕು ಎಂದರೆ ಡಿವೈಸ್ ಐಓಎಸ್ ಅಥವಾ ಐಪ್ಯಾಡ್ ಓಎಸ್ 16 ಅಥವಾ ನಂತರದ ಆವೃತ್ತಿ ಹಾಗೂ ಮ್ಯಾಕ್ ಓಎಸ್ 13 (Ventura) ಅಥವಾ ನಂತರದ ಆವೃತ್ತಿಯಲ್ಲಿ ರನ್ ಆಗುತ್ತಿರಬೇಕು. ಈ ನಡುವೆ ಈ ಆಪ್ ಅನ್ನು ಆಂಡ್ರಾಯ್ಡ್ ಬಳಕೆದಾರರಿಗೂ ಸಹ ಲಭ್ಯವಾಗಿಸಲು ಯೋಜನೆ ನಡೆಯುತ್ತಿದೆ ಎನ್ನಲಾಗಿದೆ.


Click it and Unblock the Notifications








