ಆತ್ಮಹತ್ಯೆ ಮಾಡಿಕೊಳ್ಳಲು ಗೂಗಲ್ ಯಾವುದೇ ಕಾರಣಕ್ಕೂ ಬಿಡುವುದಿಲ್ಲ: ಯಾಕಂದ್ರೆ?
ಆತ್ಮಹತ್ಯೆ ಎಂಬ ವಿಚಾರ ಇಂದಿನ ದಿನಗಳಲ್ಲಿ ಸಾಮಾನ್ಯವಾಗಿಬಿಟ್ಟಿದೆ. ಜನರು ಸಣ್ಣ ಪುಟ್ಟ ತೊಂದರೆಗಳನ್ನು ಎದುರಿಸಲಾಗದೆ ತಮ್ಮ ಅಮೂಲ್ಯ ಜೀವ ಕಳೆದುಕೊಳ್ಳುತ್ತಿದ್ದಾರೆ. ಈ ನಡುವೆ ಪ್ರಮುಖ ಎನ್‌ಜಿಓಗಳು ಹಾಗೂ ಸರ್ಕಾರಗಳು ಆತ್ಮಹತ್ಯೆ ಪ್ರಕರಣವನ್ನು ಕಡಿಮೆ ಮಾಡಲು ಒಂದಲ್ಲಾ ಒಂದು ರೀತಿಯ ಯೋಜನೆಗಳನ್ನು ಜಾರಿಗೆ ತರುತ್ತಿವೆ. ಅದಾಗ್ಯೂ ಈ ರೀತಿಯ ಪ್ರಕರಣಗಳನ್ನು ತಡೆಯುವಲ್ಲಿ ಸಾಧ್ಯವಾಗುತ್ತಿಲ್ಲ.
ಹೌದು, ಈ ಕೃತ್ಯಗಳಿಗೆ ಪರೋಕ್ಷವಾಗಿ ಬೆಳೆಯುತ್ತಿರುವ ತಂತ್ರಜ್ಞಾನವು ಒಂದು ದೊಡ್ಡ ಶಾಪವಾಗಿದೆ ಎಂದು ಹೇಳಿದರೆ ತಪ್ಪಾಗಲಾರದು. ಇಂದು ಯಾವುದೇ ನೋವು ನಲಿವುಗಳನ್ನು ಸ್ನೇಹಿತರು, ಸಂಬಂಧಿಗಳ ಬಳಿ ಹಂಚಿಕೊಳ್ಳುವ ಬದಲು ಸಾಮಾಜಿಕ ಜಾಲತಾಣಗಳ ಸ್ಟೇಟಸ್ ನಲ್ಲಿ ಹಂಚಿಕೊಳ್ಳಲಾಗುತ್ತಿದೆ. ಈ ಮೂಲಕ ಮನುಷ್ಯರ ನಡುವಿನ ಬಾಂಧವ್ಯ ಕಡಿಮೆ ಆಗುತ್ತಿದ್ದು, ಆನ್‌ಲೈನ್ ನಲ್ಲಿ ಪಡೆದ ಲೋನ್ ಕಿರುಕುಳ, ಸ್ಕ್ಯಾಮರ್‌ಗಳ ಕಾಟದಿಂದ ಅದೆಷ್ಟೋ ಜನ ತಮ್ಮ ಜೀವ ಕಳೆದುಕೊಂಡಿದ್ದಾರೆ. ಈ ನಡುವೆ ಗೂಗಲ್ ಹೊಸ ಕ್ರಮಕ್ಕೆ ಮುಂದಾಗಿದೆ.

ಏನಿದು ಗೂಗಲ್‌ನ ಹೊಸ ಕ್ರಮ?: ಗೂಗಲ್ ಅನ್ನು ಬಳಸುವ ಯಾರೇ ಆದರೂ ಇನ್ಮುಂದೆ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧಾರ ಮಾಡಿದರೆ ಖಂಡಿತಾ ಅದು ಸಾಧ್ಯವಾಗುವುದಿಲ್ಲ. ಈ ಮೂಲಕ ಗೂಗಲ್ ನಿಮ್ಮ ಅಮೂಲ್ಯ ಜೀವವನ್ನು ಕಾಪಾಡುತ್ತದೆ. ಅಷ್ಟೇ ಅಲ್ಲದೆ ನೀವು ಮನೋವೈದ್ಯರಿಂದ ಆಟೋಮ್ಯಾಟಿಕ್ ಆಗಿ ಮೆಸೆಜ್ ಒಂದನ್ನೂ ಸಹ ಸ್ವೀಕಾರ ಮಾಡುತ್ತೀರಿ. ಹಾಗಿದ್ರೆ, ಗೂಗಲ್‌ನ ಈ ಹೊಸ ಪ್ಲ್ಯಾನ್ ಹೇಗೆ ಕೆಲಸ ಮಾಡುತ್ತದೆ ? ಎಂಬುದನ್ನು ತಿಳಿಯೋಣ ಬನ್ನಿ.
ಇತ್ತೀಚೆಗೆ ಹೆಚ್ಚಾಗುತ್ತಿವೆ ಆತ್ಮಹತ್ಯೆ ಪ್ರಕರಣ: ಕೆಲವು ವರ್ಷಗಳಿಂದ ಆನ್‌ಲೈನ್ ರಮ್ಮಿಯಿಂದ, ಸಾಲಬಾಧೆಯಿಂದ, ಪ್ರೇಮ ವೈಫಲ್ಯದಿಂದ, ಅರಿಯಾದ ಒತ್ತಡದಿಂದ, ಪರೀಕ್ಷೆ ಭಯ ಸೇರಿದಂತೆ ಹಲವು ವಿಷಯಗಳಿಗೆ ಸಂಬಂಧಿಸಿದಂತೆ ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿದೆ. ಅಷ್ಟೇ ಯಾಕೆ ಪೋಷಕರು ಮಕ್ಕಳನ್ನು ಜೋರಾಗಿ ಬೈದರು ಮಕ್ಕಳು ನೇಣಿಗೆ ಕೊರಳೊಡ್ಡುವ ಮಟ್ಟಕ್ಕೆ ಬಂದಿದ್ದಾರೆ. ಈ ಪರಿಸ್ಥಿತಿಯಲ್ಲಿ ಅವರಿಗೆ ಮಾನಸಿಕ ವೈದ್ಯರ ಅಗತ್ಯತೆ ತುಂಬಾನೆ ಹೆಚ್ಚಾಗಿ ಇರುತ್ತದೆ.

ಇನ್ನು ಆತ್ಮಹತ್ಯೆ ಮಾಡಿಕೊಳ್ಳುವ ವ್ಯಕ್ತಿ ನೆಮ್ಮದಿಯಾಗಿ ಜೀವ ಕಳೆದುಕೊಳ್ಳುತ್ತಾರೆ ಎಂದು ಇಟ್ಟುಕೊಳ್ಳಿ. ಆದರೆ, ಆ ಘಟನೆ ಹಿಂದೆ ಅದೆಷ್ಟೋ ಕುಟುಂಬಗಳು ನರಳುತ್ತಿರುವುದನ್ನು ಯಾರೂ ಗಮನಹರಿಸುವುದಿಲ್ಲ. ಒಬ್ಬನ ಆತ್ಮಹತ್ಯೆ ಆತನ ಕುಟುಂಬದ ಭವಿಷ್ಯವನ್ನೇ ಹಾಳು ಮಾಡಿರುವ ಘಟನೆಗಳು ನಮ್ಮ ಕಣ್ಣ ಮುಂದೆಯೇ ಇವೆ. ಈ ಎಲ್ಲಾ ಪ್ರಮುಖ ಕಾರಣಗಳಿಂದಲೇ ಗೂಗಲ್ ಮಹತ್ವದ ಈ ಕ್ರಮ ತೆಗೆದುಕೊಳ್ಳುತ್ತಿರುವುದು.
ಗೂಗಲ್ ಹೇಗೆ ಸಹಾಯ ಮಾಡಲಿದೆ?: ಈಗ ದೊಡ್ಡ ದೊಡ್ಡ ಟೆಕ್ ಕಂಪನಿಗಳು ಕೂಡ ಆತ್ಮಹತ್ಯೆ ತಡೆಗಟ್ಟುವ ಪ್ರಯತ್ನಗಳಲ್ಲಿ ತಮ್ಮದೇ ಆದ ಕೆಲಸ ಮಾಡುತ್ತಿದ್ದು, ಈ ಸಾಲಿನಲ್ಲಿ ಗೂಗಲ್ ಕೂಡ ಪ್ರಮುಖವಾಗಿದೆ. ಈ ಮೂಲಕ ಆತ್ಮಹತ್ಯೆಗೆ ಸಂಬಂಧಿಸಿದ ಯಾವುದೇ ವಿಷಯಗಳನ್ನು ನೀವು ಗೂಗಲ್‌ನಲ್ಲಿ ಹುಡುಕಿದ್ದೇ ಆದರೆ ಎಐ ಅದನ್ನು ಗುರುತಿಸುತ್ತದೆ. ತಕ್ಷಣವೇ ನಿಮ್ಮ ಹತ್ತಿರದ ಆತ್ಮಹತ್ಯಾ ತಡೆಗಟ್ಟುವ ಸಂಸ್ಥೆಗಳು ಅಥವಾ ಮನೋವೈದ್ಯಕೀಯ ಆಸ್ಪತ್ರೆಗಳ ಸಹಾಯವಾಣಿ ಸಂಖ್ಯೆಗಳನ್ನು ನಿಮ್ಮ ಪರದೆಯ ಮೇಲೆ ಕಾಣಿಸುವಂತೆ ಮಾಡುತ್ತದೆ.
ಡಿಸ್‌ಪ್ಲೇನಲ್ಲಿ ತೋರಿಸಲಾಗುವ ನಂಬರ್‌ಗಳನ್ನು ಬಳಕೆ ಮಾಡಿಕೊಂಡು ನಿಮ್ಮ ಕಷ್ಟಗಳನ್ನು ಅವರೊಂದಿಗೆ ಹಂಚಿಕೊಳ್ಳಬಹುದು ಅಥವಾ ಅವರಿಂದ ಸಾಂತ್ವನ ಪಡೆಯಬಹುದು. ಈ ಕಾರ್ಯಕ್ರಮವನ್ನು ಮೊದಲ ಬಾರಿಗೆ ಯುಎಸ್‌ನಲ್ಲಿ ಆರಂಭಿಸಲಾಗಿದ್ದು. ಇದಕ್ಕಾಗಿ ಒಟ್ಟು 988 ಆತ್ಮಹತ್ಯೆ ತಡೆ ಸಂಘಟನೆಗಳು ಕೈಜೋಡಿಸಿವೆ. ಈ ಯೋಜನೆಯು ಮುಂದಿನ ದಿನಗಳಲ್ಲಿ ವಿಶ್ವಾದ್ಯಂತ ಜಾರಿಗೆ ಬರಲಿದೆ ಎನ್ನಲಾಗಿದೆ.

ಈಗಾಗಲೇ ಭಾರತದಲ್ಲಿ ಗೂಗಲ್ ಬಳಕೆದಾರರಿಗೆ ಜೆನೆರಿಕ್ ಲೈಫ್‌ಲೈನ್ ಸಂಖ್ಯೆಗಳನ್ನು ತೋರಿಸುತ್ತಿದೆ. ಅಂದರೆ, ಆತ್ಮಹತ್ಯೆ ಎಂದು ಟೈಪ್ ಮಾಡಿದರೆ ಸಾಕು ಈ ಲೈಫ್ ಲೈನ್ ನಂಬರ್ ಕಾಣಿಸುತ್ತದೆ. ಅದಾಗ್ಯೂ ಮುಂದಿನ ದಿನಗಳಲ್ಲಿ ಈ ಯೋಜನೆ ಇನ್ನಷ್ಟು ಅಭಿವೃದ್ಧಿಯಾಗಲಿದ್ದು, ಸಂಪೂರ್ಣ ಆತ್ಮಹತ್ಯೆ ತಡೆಗೆ ಗೂಗಲ್ ಕ್ರಮವಹಿಸಿದೆ. ಇದರಿಂದಾಗಿ ಸುಂದರ ಬದುಕನ್ನು ಕಟ್ಟಿಕೊಳ್ಳಲು ಗೂಗಲ್ ಸಹಾಯ ಮಾಡಲಿದೆ.


Click it and Unblock the Notifications








