Smartwatch ಬಳಕೆದಾರರಿಗೆ ಸಂತಸದ ಸುದ್ದಿ; ಸಂಶೋಧಕರಿಂದ ಗೊತ್ತಾಯ್ತು ಹೊಸ ವಿಷಯ!
ಸ್ಮಾರ್ಟ್‌ವಾಚ್‌ಗಳು (Smartwatch) ಇಂದು ವಿವಿಧ ರೀತಿಯ ಹೊಸ ಫೀಚರ್ಸ್‌ನೊಂದಿಗೆ ಕಾಣಿಸಿಕೊಳ್ಳತ್ತಿದ್ದು, ಈ ಮೂಲಕ ಬಳಕೆದಾರರ ಪ್ರಮುಖ ಆರೋಗ್ಯ ಸಂಬಂಧಿ ಮಾಹಿತಿಯನ್ನು ನೀಡುವುದರಿಂದಾಗಿ ತಮ್ಮದೇ ಆದ ಜನಪ್ರಿಯತೆ ಸೃಷ್ಟಿ ಮಾಡಿಕೊಂಡಿವೆ. ಈ ನಡುವೆ ಸ್ಮಾರ್ಟ್‌ವಾಚ್ ಪ್ರಿಯರು ಮತ್ತಷ್ಟು ಸಂತಸ ಪಡುವ ಸುದ್ದಿಯೊಂದು ಹೊರಬಿದ್ದಿದೆ.
ಹೌದು, ಈಗಾಗಲೇ ಸ್ಮಾರ್ಟ್‌ವಾಚ್‌ಗಳು ಬಳಕೆದಾರರನ್ನು ಹಲವಾರು ರೀತಿಯಲ್ಲಿ ರಕ್ಷಣೆ ಮಾಡುತ್ತಾ ಬರುತ್ತಿವೆ. ಅದರಲ್ಲೂ ಆಪಲ್ ವಾಚ್‌ಗಳಂತೂ ಜಗತ್ತಿನಲ್ಲಿ ಅದೆಷ್ಟೋ ಜನರ ಜೀವವನ್ನು ಕೊನೇ ಗಳಿಗೆಯಲ್ಲಿ ಕಾಪಾಡಿವೆ. ರೀತಿಯ ವಿಶೇಷ ಫೀಚರ್ಸ್ ಹೊಂದಿರುವ ಸ್ಮಾರ್ಟ್‌ವಾಚ್‌ಗಳಲ್ಲಿ ಮತ್ತೊಂದು ಇಂಟ್ರೆಸ್ಟಿಂಗ್ ಸೌಲಭ್ಯವೊಂದು ಲಭ್ಯ ಆಗುತ್ತಿದ್ದು, ಇದರಿಂದಾಗಿ ಸಾಕಷ್ಟು ಸ್ಮಾರ್ಟ್‌ವಾಚ್ ಬಳಕೆದಾರರಿಗೆ ಅನುಕೂಲ ಆಗಲಿದೆ. ಹಾಗಿದ್ರೆ, ಸ್ಮಾರ್ಟ್‌ವಾಚ್ ಏನೆಲ್ಲಾ ಹೊಸ ಮಾಹಿತಿ ನೀಡುತ್ತದೆ?, ಇದು ಯಾರಿಗೆ ಅನುಕೂಲ ಎಂಬ ಮಾಹಿತಿಯನ್ನು ತಿಳಿಯೋಣ ಬನ್ನಿ.

ಪಾರ್ಕಿನ್ಸನ್ ಕಾಯಿಲೆ ಪತ್ತೆಗೆ ಸಹಕಾರಿ: ಸ್ಮಾರ್ಟ್‌ವಾಚ್‌ಗಳು ಸಾಮಾನ್ಯವಾಗಿ ಬಳಕೆದಾರರ ಹೃದಯದ ಬಡಿತ ಸೇರಿದಂತೆ ಇತರೆ ಪ್ರಮುಖ ಆರೋಗ್ಯ ಸಂಬಂಧಿ ವಿಷಯಗಳ ಮೇಲೆ ಸದಾ ಮೇಲ್ವಿಚಾರಣೆ ಮಾಡುತ್ತವೆ. ಆದರೆ, ಇವೆಲ್ಲಕ್ಕೂ ಮೀರಿ ಈಗ ಪಾರ್ಕಿನ್ಸನ್ ಕಾಯಿಲೆ (Parkinson's disease) ಪತ್ತೆಗೂ ಈ ವಾಚ್‌ಗಳು ಸಹಕಾರಿ ಎಂದು ಅಧ್ಯಯನದಿಂದ ತಿಳಿದುಬಂದಿದೆ. ಅಂದರೆ ಜಗತ್ತಿನಲ್ಲಿ ಹಲವಾರು ಜನರು ಈ ಖಾಯಿಲೆಗೆ ಬಲಿಯಾಗುತ್ತಿದ್ದು, ಇನ್ಮುಂದೆ ಇದರ ಸಂಖ್ಯೆ ಕಡಿಮೆ ಆಗಬಹುದೇನೋ?.
ಈ ಸಂಬಂಧ ಸ್ಕೈ ನ್ಯೂಸ್ ವರದಿ ಮಾಡಿದೆ ಹಾಗೆಯೇ ನೇಚರ್ ಮೆಡಿಸಿನ್ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ ಹೊಸ ಸಂಶೋಧನೆಯು ಪಾರ್ಕಿನ್ಸನ್ ಕಾಯಿಲೆಯನ್ನು ಪತ್ತೆಹಚ್ಚಲು ಬಳಕೆದಾರರಿಗೆ ಸಹಾಯ ಮಾಡುತ್ತದೆ ಎಂದು ಉಲ್ಲೇಖಿಸಿದೆ. ಪಾರ್ಕಿನ್ಸನ್ ಕಾಯಿಲೆಗೆ ಸಂಬಂಧಿಸಿದ ಮಾನವರ ಚಲನೆಯ ಮಾದರಿಗಳಲ್ಲಿನ ಬದಲಾವಣೆಗಳನ್ನು ಸ್ಮಾರ್ಟ್‌ವಾಚ್‌ಗಳು ಟ್ರ್ಯಾಕ್ ಮಾಡಬಹುದು ಎಂದು ಹೇಳಲಾಗಿದೆ.
ಇನ್ನು ಏಳು ದಿನಗಳ ಅವಧಿಗೆ ಸ್ಮಾರ್ಟ್ ವಾಚ್‌ಗಳನ್ನು ಬಳಕೆ ಮಾಡಿದ 103,000 ಜನರನ್ನು ಸಂಶೋಧಕರು ಅಧ್ಯಯನ ನಡೆಸಿದ್ದಾರೆ. ಈ ಸಂಬಂಧ ದಿ ಇಂಡಿಪೆಂಡೆಂಟ್ ವರದಿ ಮಾಡಿದ್ದು, ಸ್ಮಾರ್ಟ್ ವಾಚ್‌ಗಳನ್ನು ಬಳಕೆ ಮಾಡುವ ವ್ಯಕ್ತಿಗಳ ಚಲನೆಯ ಸಂಕೇತಗಳನ್ನು ಈ ವಾಚ್‌ಗಳು ಮತ್ತೆ ಮಾಡಿವೆ. ಇದಾದ ನಂತರ ಪಾರ್ಕಿನ್ಸನ್ ಕಾಯಿಲೆಯಿಂದ ಗುರುತಿಸಲ್ಪಟ್ಟ ವ್ಯಕ್ತಿಗಳ ಮಾಹಿತಿಯೊಂದಿಗೆ ಈ ಡೇಟಾವನ್ನು ಹೋಲಿಕೆ ಮಾಡಲು ಎಐ ಮಾದರಿಯನ್ನು ಬಳಕೆ ಮಾಡಲಾಗಿದೆ ಎಂದು ಉಲ್ಲೇಖಿಸಲಾಗಿದೆ.
ಇದರಲ್ಲಿ ಗಮನಿಸಬೇಕಾದ ವಿಷಯ ಏನೆಂದರೆ ರೋಗ ದೊಡ್ಡದಾಗುವ ಮುನ್ನವೇ ಈ ಖಾಯಿಲೆಯ ಲಕ್ಷಣಗಳನ್ನು ಪತ್ತೆ ಮಾಡುವುದರಿಂದಾಗಿ ಮುಂದಿನ ಅನಾಹುತಗಳನ್ನು ತಪ್ಪಿಸಲು ಈ ವಾಚ್‌ಗಳು ಮಹತ್ವದ ಪಾತ್ರ ವಹಿಸುತ್ತವೆ ಎಂದು. ಜೊತೆಗೆ ಕಾಲಾನಂತರದಲ್ಲಿ ರೋಗದ ಪ್ರಗತಿಯ ಬಗ್ಗೆ ಅಂದಾಜುಗಳನ್ನು ಸಹ ಈ ವಾಚ್‌ಗಳು ನೀಡಿವೆ. ಅಷ್ಟು ಮಾತ್ರವಲ್ಲದೆ ಪಾರ್ಕಿನ್ಸನ್ ಕಾಯಿಲೆಯ ಅಪಾಯದಲ್ಲಿರುವ ಜನರನ್ನು 90% ನಿಖರತೆಯೊಂದಿಗೆ ಗುರುತಿಸಲು ಈ ಸ್ಮಾರ್ಟ್‌ವಾಚ್ ಸಮರ್ಥವಾಗಿವೆ ಎಂದು ಕಂಡುಕೊಳ್ಳಲಾಗಿದೆ.

ಇದಿಷ್ಟು ಮಾತ್ರವಲ್ಲದೆ ಪಾರ್ಕಿನ್ಸನ್ ಕಾಯಿಲೆ ಪತ್ತೆ ಮಾಡಲು ಈ ಸ್ಮಾರ್ಟ್‌ವಾಚ್‌ಗಳನ್ನು ಸ್ಕ್ರೀನಿಂಗ್ ಡಿವೈಸ್ ಆಗಿಯೂ ಬಳಕೆ ಮಾಡಬಹುದು ಎಂದು ಸಂಶೋಧನೆಯಿಂದ ತಿಳಿದುಬಂದಿದೆ. ಉಳಿದಂತೆ ಈ ರೋಗದ ಅಪಾಯದಲ್ಲಿರುವ ಜನರನ್ನು ಗುರುತಿಸಲು ಸ್ಮಾರ್ಟ್‌ವಾಚ್‌ಗಳನ್ನು ಬಳಕೆ ಮಾಡಬಹುದಾಗಿದ್ದು, ಇದು ರೋಗನಿರ್ಣಯ ಮತ್ತು ಚಿಕಿತ್ಸೆಗೆ ಅನುಕೂಲ ಮಾಡಿಕೊಡುತ್ತದೆ ಎಂದು ಸಂಶೋಧನಾ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಅದರಂತೆ ಲೇಖಕಿ ಸಿಂಥಿಯಾ ಸ್ಯಾಂಡರ್ ಈ ಬಗ್ಗೆ ಮಾಹಿತಿ ನೀಡಿದ್ದು, ಒಂದು ವಾರದ ದತ್ತಾಂಶವನ್ನು ಇದರಲ್ಲಿ ಸೆರೆಹಿಡಿಯಲಾಗಿದೆ. ಭವಿಷ್ಯದಲ್ಲಿ ಏಳು ವರ್ಷಗಳವರೆಗೆ ಘಟನೆಗಳನ್ನು ಈ ಮೂಲಕ ಊಹಿಸಬಹುದು. ಈ ಫಲಿತಾಂಶಗಳೊಂದಿಗೆ ನಾವು ಮೌಲ್ಯಯುತವಾದ ಸ್ಕ್ರೀನಿಂಗ್ ಡಿವೈಸ್‌ಅನ್ನು ಅಭಿವೃದ್ಧಿಪಡಿಸಬಹುದು. ಪಾರ್ಕಿನ್‌ಸನ್ಸ್‌ನ ಆರಂಭಿಕ ಪತ್ತೆಗೆ ಸಹಾಯ ಮಾಡಲು ಇದು ಅತ್ಯಂತ ಸಹಕಾರಿ ಎಂದು ಹೇಳಿದ್ದಾರೆ.
ಏನಿದು ಪಾರ್ಕಿನ್ಸನ್ ಕಾಯಿಲೆ?: ಈ ಕಾಯಿಲೆ ಬಗ್ಗೆ ಹಲವರಿಗೆ ತಿಳಿದಿಲ್ಲ. ಅಂತೆಯೇ ಇದು ಮಿದುಳಿನ ಅಸ್ವಸ್ಥತೆಯಾಗಿದ್ದು ಮೆದುಳಿನ ಕೋಶಗಳ ನಷ್ಟದಿಂದಾಗಿ ಚಲನೆಯ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಇದು ನಿಧಾನವಾಗಿ ಮುಂದುವರೆಯಲಿದ್ದು, ಅಂತಿಮವಾಗಿ ಗಂಭೀರ ಸಮಸ್ಯೆಗೆ ಕಾರಣ ಆಗಬಹುದು. ಇದರ ರೋಗಲಕ್ಷಣಗಳೆಂದರೆ ನಡುಕ, ಬಿಗಿತ, ನಿಧಾನ ಚಲನೆ ಮತ್ತು ನಡೆಯಲು ತೊಂದರೆ ಆಗುವುದು ಸೇರಿದಂತೆ ಅನೇಕ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.


Click it and Unblock the Notifications








