23 ವರ್ಷದ ಈ ಯುವಕನ ಸಂಬಳ 1.5ಲಕ್ಷ, ಬೈಕ್, ಐಫೋನ್ ಏನೇನೂ ಇಲ್ಲ! ಕಾರಣ ಏನಂದ್ರೆ?
ಭಾರತದ ಕೌಟುಂಬಿಕ ವ್ಯವಸ್ಥೆ ಇಡೀ ಜಗತ್ತಿಗೆ ಮಾದರಿ ಎಂಬುದಕ್ಕೆ ಈ ಘಟನೆ ಸಾಕ್ಷಿ. ಯಾಕೆಂದರೆ ಮನೆಯಲ್ಲಿ ಗಂಡು ಮಕ್ಕಳು ಬೆಳೆದು ದೊಡ್ಡವರಾಗುತ್ತಿದ್ದಂತೆ ಸಂಸಾರದ ನೌಕೆ ಕೂಡ ದೊಡ್ಡದಾಗುತ್ತದೆ. ಈ ನಡುವೆ ಕೆಲವರು ಇದರಿಂದ ಜಾರಿಕೊಂಡರೆ ಇನ್ನೂ ಕೆಲವರು ಶ್ರದ್ಧಾ ಪೂರ್ವಕವಾಗಿ ಸಂಸಾರದ ನೌಕೆಯನ್ನು ಹೊರುತ್ತಾರೆ. ಅದರಂತೆ ಈ ಯುವಕನ ಜೀವನ ಮಾತ್ರ ಎಲ್ಲರಿಗೂ ಮಾದರಿ.
ಹೌದು, ಭಾರತದಲ್ಲಿ ವಿಭಿನ್ನ ಜೀವನಶೈಲಿ ಕಾಣಿಸುತ್ತದೆ. ಅದರಲ್ಲಿ ಒಂದು ಕಡೆ ಪಿತ್ರಾರ್ಜಿತ ಆಸ್ತಿ ಹೊಂದಿರುವ ಶ್ರೀಮಂತ ಕುಟುಂಬಗಳಲ್ಲಿ ಜನಿಸಿದ ಮಕ್ಕಳು ಒಂದು ಕಡೆಯಾದರೆ ಮತ್ತೊಂದು ಕಡೆ ಮಧ್ಯಮ ವರ್ಗದ ಕುಟುಂಬಗಳಲ್ಲಿ ಜನಿಸಿದ ಮಕ್ಕಳು ಬಾಡಿಗೆ ಮನೆಯಲ್ಲಿ ಜೀವನ ಮಾಡುತ್ತಾ, ಜೊತೆ ಜೊತೆಗೆ ಕೆಲಸ ಮಾಡುತ್ತಾ ಸಂಸಾರವನ್ನು ಸಾಕುತ್ತಾರೆ. ಈ ನಡುವೆ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ಸುಶ್ರುತ್ ಮಿಶ್ರಾ ಈಗ ಭಾರೀ ಚರ್ಚೆಯಲ್ಲಿದ್ದಾರೆ. ಹಾಗಿದ್ರೆ, ಇವರು ಮಾಡಿದ್ದಾದ್ರೂ ಏನು ಎಂದು ತಿಳಿಯೋಣ ಬನ್ನಿ.

ಸುಶ್ರುತ್ ಮಿಶ್ರಾ ತಮ್ಮ ಯೌವನವನ್ನು ಸಂಪೂರ್ಣವಾಗಿ ಬದಿಗೊತ್ತಿದ್ದು, ಅವರ ಕನಸು ಮತ್ತು ಆಕಾಂಕ್ಷೆಗಳನ್ನು ಮರೆತು ಕರ್ತವ್ಯವನ್ನೇ ಹುಸಿರಾಗಿಸಿಕೊಂಡಿದ್ದಾರೆ. ಶಿಕ್ಷಣದಿಂದ ಮಾತ್ರ ಜೀವನದಲ್ಲಿ ಪ್ರಗತಿಯಾಗುತ್ತದೆ ಎಂದು ನಂಬಿರುವ ಇವರು ಕೋಟಿಗಟ್ಟಲೆ ಯುವಕರರಿಗೆ ಮಾದರಿಯಾಗಿದ್ದಾರೆ. ಲಕ್ನೋ ಮೂಲದ ಇವರು ವಿಸಿ ಮೀಡಿಯಾದ ಸಹ-ಸಂಸ್ಥಾಪಕರಾಗಿದ್ದಾರೆ. 23 ವರ್ಷದ ಈ ಯುವಕ ಈಗ ಮಾಸಿಕ 1.5 ಲಕ್ಷ ರೂ.ಸಂಪಾದನೆ ಮಾಡುತ್ತಿದ್ದಾರೆ.
ವಿಷಯ ಏನೆಂದರೆ ಇಷ್ಟು ಸಂಬಳ ಪಡೆಯುವ ಇವರ ಬಳಿ ಒಂದು ಬೈಕ್ ಇಲ್ಲ ಅಂದ್ರೆ ನೀವು ನಂಬಲೇಬೇಕು. ಅಷ್ಟೇ ಯಾಕೆ ತಿಂಗಳಿಗೆ ಐದಂಕಿಯ ಸಂಬಳ ಪಡೆದರೆ ಸಾಕು ಆಪಲ್ ಐಫೋನ್, ಐಪ್ಯಾಡ್ ಖರೀದಿಸಿ ಐಷಾರಾಮಿ ಜೀವನ ಮಾಡುವ ಯುವಕ-ಯುವತಿಯರ ನಡುವೆ ಈ ಯುವಕ ಮಾತ್ರ ಭಿನ್ನ. ಯಾಕೆಂದರೆ ಇವರ ಸಂಪೂರ್ಣ ಸಂಬಳವನ್ನು ತಮ್ಮ ಪೋಷಕರಿಗೆ ಖರ್ಚು ಮಾಡುತ್ತಿದ್ದಾರೆ. ಈ ಮೂಲಕ ತನ್ನ ಕುಟುಂಬದ ಭವಿಷ್ಯಕ್ಕಾಗಿ ಹಣ ಉಳಿಸುತ್ತಿದ್ದಾರೆ.
ಎಷ್ಟು ದುಡಿದರೇನು ಇವರ ಬಳಿ ಒಂದು ಬೈಕ್ ಇಲ್ಲ ಎಂದು ಸ್ನೇಹಿತರು, ಬಂಧುಗಳು ನಿಂದನೆ ಮಾಡುತ್ತಿದ್ದರಂತೆ. ಇದಕ್ಕೆ ಟ್ವಿಟರ್ ಪೇಜ್‌ನಲ್ಲಿ ಒಂದು ಪೋಸ್ಟ್ ಹಾಕಿದ್ದಾರೆ. ಅದರಲ್ಲಿ ತನಗೆ 23 ವರ್ಷ,ತಿಂಗಳಿಗೆ ಒಂದೂವರೆ ಲಕ್ಷ ರೂ.ಗೂ ಹೆಚ್ಚು ಸಂಪಾದನೆ. ಆದರೆ, ನನ್ನ ಬಳಿ ಆಪಲ್ ಫೋನ್ ಇಲ್ಲ,ಬೈಕ್ ಇಲ್ಲ,ಕಾರು ಇಲ್ಲ.ಏಕೆಂದರೆ ಭಾರತದಲ್ಲಿ ಹುಟ್ಟಿದ ಒಬ್ಬ ಸಾಮಾನ್ಯ ಮಗನ ಕರ್ತವ್ಯ ನನಗೂ ಇದೆ.ನಿವೃತ್ತ ಪೋಷಕರನ್ನು ನೋಡಿಕೊಳ್ಳಬೇಕು.ಮನೆಯ ಬಿಲ್ ಪಾವತಿಸಬೇಕು.ಭವಿಷ್ಯದ ಯೋಜನೆಗಳಿವೆ ಇದನ್ನೇ ನಾನು ಹೇಳಲು ಬಯಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

ಇವರ ಈ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ಹಲವು ಕಮೆಂಟ್‌ಗಳನ್ನು ಪಡೆದುಕೊಂಡಿದೆ. ಅಷ್ಟು ಮಾತ್ರವಲ್ಲ ಇದೇ ರೀತಿ ತಮಗೂ ಜವಾಬ್ದಾರಿಗಳಿವೆ ಎಂದು ಸಾವಿರಾರು ಟ್ವೀಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ಜೊತೆಗೆ ಯೌವನದ ಬದುಕನ್ನು ಅನುಭವಿಸಿ ಎಂದೂ ಸಹ ಅನೇಕರು ಸಲಹೆ ನೀಡುತ್ತಿದ್ದಾರೆ. ಏನೇ ಇರಲಿ ಟ್ವಿಟ್ಟರ್‌ನಲ್ಲಿ ಮಾಡಿದ ಈ ಒಂದು ಟ್ವೀಟ್ ಈಗ ಜಗತ್ತಿನ ಗಮನ ಸೆಳೆದಿದ್ದು, ದುಡಿಯಲು ಮುಂದಾಗುತ್ತಿದ್ದಂತೆ ಪೋಷಕರನ್ನು ದೂರ ಮಾಡುವ ಅದೆಷ್ಟೋ ಜನರಿಗೆ ಇದು ಪಾಠದಂತಿದೆ.
ಇನ್ನು ಇವರಿಗೆ ಬಂದ ಪ್ರಕ್ರಿಯೆಗಳನ್ನು ಗಮನಿಸುವುದಾದರೆ, ಅಭಿನಂದನೆಗಳು ಮ್ಯಾನ್! ಕಳೆದ ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯಲ್ಲಿ ನೀವು ಸಾಕಷ್ಟು ಕಠಿಣ ಕೆಲಸವನ್ನು ಮಾಡಿದ್ದೀರಿ. ನೀವು ನಿಮ್ಮನ್ನು ನಿಭಾಯಿಸುತ್ತಿರುವ ರೀತಿ ಹೆಮ್ಮೆ ಪಡುವಂತಹುದು ಎಂದು ಓರ್ವರು ಕಮೆಂಟ್ ಮಾಡಿದ್ದರೆ, ಸರಿಯಾದ ಅಡಿಪಾಯ ಹಾಕಿಕೊಳ್ಳುವುದು ಮೊದಲು ಅಗತ್ಯವಾಗಿದೆ. ನಿಮ್ಮ ಬಗ್ಗೆ ಮೆಚ್ಚುಗೆ ಇದೆ. ಹಾಗೆಯೇ ನೀವು ಸಹ ಎಲ್ಲವನ್ನೂ ಸಹ ಹೊಂದಬಹುದು, ಅದು ನಿಮಗೆ ಶೀಘ್ರದಲ್ಲೇ ಆಗುತ್ತದೆ ಎಂದು ಭಾವಿಸುತ್ತೇವೆ ಎಂದು ಮತ್ತೋರ್ವರು ಪ್ರತಿಕ್ರಿಯೆ ನೀಡಿದ್ದಾರೆ.
ಟ್ವೀಟ್ ಸಂಚಲನ: ಸಾಮಾಜಿಕ ಮಾಧ್ಯಮಗಳು ಮಾಹಿತಿ, ಮನರಂಜೆ ನೀಡುವುದರ ಜೊತೆಗೆ ಮುನುಷ್ಯನ ಭಾವನಾತ್ಮಕ ವಿಷಯಗಳನ್ನೂ ಕೆಣಕುವಷ್ಟು ಸಾಮರ್ಥ್ಯ ಪಡೆದುಕೊಂಡಿದೆ. ಈ ಕಾರಣಕ್ಕಾಗಿಯೇ ಯಾರ ಬಳಿಯೂ ಹೇಳಿಕೊಳ್ಳದ ವಿಷಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುತ್ತಾರೆ. ಜೊತೆಗೆ ಇಲ್ಲಿ ಹಲವು ಮಿಶ್ರ ಅಭಿಪ್ರಾಯಗಳನ್ನು ಸ್ವೀಕರಿಸಿ ಸಮಾಜದಲ್ಲಿ ಉತ್ತಮವಾದ ಜೀವನ ನಡೆಸಲು ಮುಂದಾಗುತ್ತಾರೆ.


Click it and Unblock the Notifications








