ವಿಶೇಷ ಚೇತನ ಆಟೋ ಚಾಲಕನಿಗೆ ವಂಚಿಸಿದ ಚಾಲಾಕಿ! ಫೋನ್‌ಪೇ ಮೂಲಕ 23,400ರೂ. ಯಾಮಾರಿಸಿದ್ದು ಹೇಗೆ?
ಆನ್‌ಲೈನ್ ವಂಚನೆಗಳಿಗೆ ಬೆಂಗಳೂರು (Bangalore) ಒಂದು ರೀತಿಯ ಅಡ್ಡೆಯಾಗಿದೆ. ಯಾವುದೇ ಹೊಸ ತರಹದ ಮೋಸದ ಆನ್‌ಲೈನ್ ವಂಚನೆ (Online fraud) ಪ್ರಕರಣ ಮೊದಲು ಇಲ್ಲಿಂದಲೇ ವರದಿಯಾಗುತ್ತವೆ. ಅಷ್ಟರ ಮಟ್ಟಿಗೆ ಸ್ಕ್ಯಾಮರ್‌ಗಳು ಬೆಂಗಳೂರಿಗರನ್ನು ಗುರಿಯಾಗಿಸಿಕೊಂಡಿದ್ದಾರೆ. ಈ ನಡುವೆ ಫೋನ್‌ಪೇ ಬಳಕೆ ಮಾಡಿಕೊಂಡು ಚಾಲಾಕಿಯೋರ್ವಳು ಆಟೋ ಚಾಲಕನಿಗೆ ಮೋಸ ಮಾಡುದ್ದಾಳೆ.
ಹೌದು, ಬೆಂಗಳೂರಿನ ಆಟೋರಿಕ್ಷಾ ಚಾಲಕರೊಬ್ಬರಿಗೆ ಚಾಲಾಕಿ ಮೋಸ ಮಾಡಿದ್ದಾಳೆ. ಸಾಮಾನ್ಯವಾಗಿ ಕೆಲವು ಪ್ರಯಾಣಿಕರು ಆಟೋ ಚಾಲಕರಿಗೆ ಮೋಸ ಮಾಡುವುದು ಉಂಟು ಹಾಗೂ ಇನ್ನೂ ಕೆಲವು ಆಟೋ ರಿಕ್ಷಾ ಚಾಲಕರು ಬೇಕಾಬಿಟ್ಟಿ ಹಣ ವಸೂಲಿ ಮಾಡುವುದು ಉಂಟು. ಆದರೆ, ಇವೆರಡಕ್ಕೂ ಮಿಗಿಲಾಗಿ ಈ ಚಾಲಾಕಿ ಅಂಗವಿಕಲ ಆಟೋ ಚಾಲಕನಿಗೆ ತನ್ನದೇ ಆದ ರೀತಿಯಲ್ಲಿ ವಂಚನೆ ಮಾಡಿದ್ದಾಳೆ.

ಘಟನೆ ವಿವರ: ಕೊರೊನಾ ಸಮಯದಲ್ಲಿ ಗ್ಯಾಂಗ್ರೀನ್‌ನಿಂದ ತನ್ನ ಬಲಗಾಲನ್ನು ಕಳೆದುಕೊಂಡ 58 ವರ್ಷದ ಶಿವಕುಮಾರ್ ವಿ ಹೆಚ್ ಎಂಬುವರು ತಮ್ಮ ಸ್ನೇಹಿತನನ್ನು ಭೇಟಿಯಾಗಲು ಮುಂದಾಗಿದ್ದಾಗ ಈ ಘಟನೆ ಜರುಗಿದೆ. 'ಫೋನ್‌ನಲ್ಲಿ ಮಾತನಾಡುತ್ತಿದ್ದಾಗ 20 ವರ್ಷದ ಆಕೆ ನನ್ನ ಬಳಿಗೆ ಬಂದು ಪಿಇಎಸ್ ಕಾಲೇಜಿನ ಬಳಿಗೆ ಕರೆದೊಯ್ಯುತ್ತೀರಾ ಎಂದು ಕೇಳಿಕೊಂಡಳು. ನಾನು ಅದೇ ಮಾರ್ಗದಲ್ಲಿ ಹೋಗಬೇಕಾಗಿದ್ದರಿಂದ ಒಪ್ಪಿಕೊಂಡೆ. ಆದರೆ, ಡ್ರೈವಿಂಗ್ ಸಮಯದಲ್ಲಿ ಸ್ನೇಹಿತನೊಂದಿಗೆ ಹಣಕ್ಕೆ ಸಂಬಂಧಿಸಿದ ವಿಷಯದ ಬಗ್ಗೆ ಫೋನ್‌ನಲ್ಲಿ ಮಾತನಾಡುವಾಗ ಅದನ್ನು ಆಕೆ ಕೇಳಿಸಿಕೊಂಡಳು' ಎಂದು ವಿವರಿಸಿದ್ದಾರೆ.
'ಇದಾದ ನಂತರ ಆಕೆ ಫೋನ್‌ಪೇ (Phonepe) ಖಾತೆಯನ್ನು ಹೊಂದಿದ್ದೀರಾ ಎಂದು ನನ್ನನ್ನು ಕೇಳಿದಳು. ಹೇಗೋ ಆಕೆ ಆಟೋ ಚಾರ್ಜ್ ಅನ್ನು ಫೋನ್‌ಪೇ ಮೂಲಕ ನೀಡುತ್ತಾಳೆ ಎಂದು ನಾಯಂಡಹಳ್ಳಿ ಬಳಿ ಬಂದಾಗ ನನ್ನ ಫೋನ್‌ಪೇ ಸಂಖ್ಯೆಯನ್ನು ನೀಡಿದೆ' ಎಂದು ಘಟನೆ ಬಗ್ಗೆ ಮಾಹಿತಿ ನೀಡಿದ್ದಾರೆ. ಇಲ್ಲಿಂದ ಆರಂಭ ಆಗುತ್ತದೆ ನೋಡಿ ಆಕೆಯ ವಂಚನೆ. ಅಂದರೆ ಚಾಲಕ ತನ್ನ ಹಣಕಾಸಿನ ವ್ಯವಹಾರ ಮುಗಿಸುವವರೆಗೂ ಆಕೆ ಅಲ್ಲಿಂದ ಕಾಲ್ಕಿತ್ತಿಲ್ಲ.
'ನಾವು ಕಾಲೇಜಿನ ಬಳಿ ಇದ್ದಾಗ ನನ್ನ ಸ್ನೇಹಿತ 25,000 ರೂ.ಗಳನ್ನು ನನ್ನ ಕೈಗೆ ಕೊಟ್ಟು ಹೋದನು. ನಾನು ಅವಳ ಎದುರಲ್ಲೇ ಹಣವನ್ನು ಎಣಿಸಿದೆ. ಆ ವೇಳೆ , 'ಅಂಕಲ್, ನಿಮಗೆ ಈ ಹಣ ಬೇಕೇ?' ಎಂದು ಪ್ರಶ್ನೆ ಮಾಡಿದಳು. ನಾನು ಹೌದು ಎಂದು ಪ್ರತ್ಯುತ್ತರ ನೀಡಿದೆ. ಆಗ ಆಕೆ ನಾನು ಕಾಲೇಜು ಶುಲ್ಕವನ್ನು ಪಾವತಿಸಬೇಕು, ಕಾಲೇಜಿನಲ್ಲಿ ಡಿಜಿಟಲ್ ಪಾವತಿಗಳನ್ನು ತೆಗೆದುಕೊಳ್ಳುವುದಿಲ್ಲ. ಆದ ಕಾರಣ ಆ ಹಣ ನನಗೆ ನೀಡಿ, ನಾನು ಫೋನ್ ಪೇ ಮೂಲಕ ನಿಮಗೆ ಹಣ ಪಾವತಿ ಮಾಡುತ್ತೇನೆ ಎಂದು ಎಂದಳು.' ಎಂದು ಟೈಮ್ಸ್ ಆಪ್ ಇಂಡಿಯಾಗೆ ಮಾಹಿತಿ ನೀಡಿದ್ದಾರೆ.

ಯುವತಿ ಕಾಲೇಜಿನ ಫೀಸ್‌ಗೆ ಎಂದಾಕ್ಷಣೆ ತಕ್ಷಣ ಮಾನವೀಯತೆ ತೋರಿಸಲು ಮುಂದಾದ ಆಟೋ ಚಾಲಕ ಸರಿ ಎಂದು ಒಪ್ಪಿಕೊಂಡಿದ್ದಾರೆ. ಅಷ್ಟು ಮಾತ್ರವಲ್ಲದೆ ಸುರಕ್ಷತೆ ದೃಷ್ಟಿಯಿಂದ ಮೊದಲು ಆನ್‌ಲೈನ್ ಹಣ ವರ್ಗಾವಣೆ ಮಾಡು ಎಂದು ಕೇಳಿಕೊಂಡಿದ್ದಾರಂತೆ. ಆದರೆ ಆಕೆ ಹಣ ಪಾವತಿ ವರ್ಗಾವಣೆ ಆಗಿದೆ ಎಂದು ಉಲ್ಲೇಖ ಮಾಡಿದ್ದ ನಕಲಿ ಮೆಸೆಜ್ ಅನ್ನು ಫೋನ್‌ಪೇನಲ್ಲಿ ನಲ್ಲಿ ತೋರಿಸಿದ್ದಾಳೆ.
'ನನ್ನಿಂದ 23,400ರೂ.ಗಳ ಹಣವನ್ನು ತೆಗೆದುಕೊಂಡ ಆಕೆ ನಾನು ಹಣದ ಬಗ್ಗೆ ದೃಢೀಕರಣ ಪಡೆಯುವ ಮುನ್ನವೇ ಅಲ್ಲಿಂದ ಹೊರಡಲು ಮುಂದಾದಳು. ಆದರೆ, ಹಣ ಪಾವತಿ ಆಗಿರುವ ಬಗ್ಗೆ ಯಾವುದೇ ಮೆಸೆಜ್ ಬಾರದ ಕಾರಣ ಆಕೆಯನ್ನು ನನ್ನ ಬಳಿಯೇ ಇರುವಂತೆ ಹೇಳಿದೆ. ಆದರೆ, ಆಕೆ ನನಗೆ ತನ್ನ ಮೊಬೈಲ್ ಸಂಖ್ಯೆಯನ್ನು ನೀಡಿದಳು. ಜೊತೆಗೆ ಯಾವುದೇ ಸಮಸ್ಯೆ ಎದುರಾದರೆ ಕರೆ ಮಾಡಿ ಎಂದು ಹೇಳಿದಳು. ಅದಾಗ್ಯೂ ಫೋನ್‌ನಲ್ಲಿ ಅವಳ ಫೋಟೋವನ್ನು ನಾನು ತೆಗೆದುಕೊಂಡೆ.ಆದರೆ, ಅವಳು ತರಾತುರಿಯಲ್ಲಿ ರಸ್ತೆ ದಾಟಿ ಕಾಲೇಜು ಆವರಣ ಪ್ರವೇಶಿಸಿದಳು' ಎಂದು ನೋವು ತೋಡಿಕೊಂಡಿದ್ದಾರೆ.
ಇಷ್ಟೆಲ್ಲಾ ಆದ ಮೇಲೆ ಬ್ಯಾಂಕ್ ಖಾತೆಯನ್ನು ಮತ್ತೊಮ್ಮೆ ಪರಿಶೀಲಿಸಿದಾಗ ಯಾವುದೇ ಪಾವತಿಯನ್ನು ಸ್ವೀಕರಿಸದಿರುವುದನ್ನು ಕಂಡು ಚಾಲಕ ಆಘಾತಕ್ಕೊಳಗಾಗಿದ್ದಾರೆ. ಆಗ ತಾವು ಮೋಸ ಹೋಗಿದ್ದೇನೆ ಎಂದು ಅರಿತುಕೊಂಡಿದ್ದಾರೆ. ಅದಾಗ್ಯೂ ತಮ್ಮ ಅಂಗವೈಕಲ್ಯದಿಂದಾಗಿ ಮಹಿಳೆಯನ್ನು ಹಿಂಬಾಲಿಸುವುದು ಆ ಚಾಲಕನಿಗೆ ಸವಾಲಾಗಿದೆ. ಕಾಲೇಜಿಗೆ ಪ್ರವೇಶಿಸುವ ಪ್ರಯತ್ನ ಮಾಡಿದರೂ ಯಶಸ್ವಿಯಾಗಲಿಲ್ಲ. ಬಳಿಕ ಆಕೆಯ ವಿರುದ್ಧ ಪೊಲೀಸರಿಗೆ ದೂರು ದಾಖಲು ಮಾಡಿದ್ದಾರೆ.


Click it and Unblock the Notifications