scam: ಡಿಜಿಟಲ್ ಅರೆಸ್ಟ್ ಹಗರಣದಲ್ಲಿ 3.7 ಲಕ್ಷ ರೂ. ಕಳೆದುಕೊಂಡ ಮಹಿಳೆ!
ಇತ್ತೀಚೆಗೆ ಆನ್‌ಲೈನ್ ಹಗರಣಗಳ (Online scams) ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಈ ಹಗರಣಗಳು ವಿವಿಧ ರೀತಿಯಲ್ಲಿ ಜನರನ್ನು ಹಿಂಸೆಗೆ ಒಳಪಡಿಸುತ್ತಿದ್ದು, ಇದರಿಂದ ಸ್ಕ್ಯಾಮರ್‌ಗಳು ಭಾರೀ ಹಣ ಸಂಗ್ರಹ ಮಾಡುತ್ತಿದ್ದಾರೆ. ಅದರಂತೆ ಈಗ ಹೊಸ ಡಿಜಿಟಲ್ ಅರೆಸ್ಟ್ ಹಗರಣ (Digital Arrest Scam) ಬೆಳಕಿಗೆ ಬಂದಿದೆ.
ಹೌದು, ಆನ್‌ಲೈನ್ ವಂಚನೆಯ ಮತ್ತೊಂದು ಆಘಾತಕಾರಿ ಪ್ರಕರಣದಲ್ಲಿ ನೋಯ್ಡಾದ ಐಟಿ ಇಂಜಿನಿಯರ್‌ಗೆ ಮಹಾಮೋಸ ಮಾಡಲಾಗಿದೆ. ಆನ್‌ಲೈನ್‌ನಲ್ಲಿ ಪೊಲೀಸ್ ಅಧಿಕಾರಿಗಳು ಎಂದು ಸೋಗು ಹಾಕಿ ಅವರಿಂದ 3.75 ಲಕ್ಷ ರೂ.ಹಣ ಪಡೆದಿದ್ದಾರೆ. ಹಾಗಿದ್ರೆ, ಏನಿದು ಘಟನೆ? ಪೊಲೀಸ್ ಅಧಿಕಾರಿಗಳ ಹೆಸರಲ್ಲಿ ಈ ಸ್ಕ್ಯಾಮರ್‌ಗಳು ಮಾಡಿದ ಮೋಸ ಅಂತಹುದು?, ಈ ರೀತಿಯ ವಂಚನೆಯಿಂದ ಪಾರಾಗುವುದು ಹೇಗೆ ಅನ್ನೋ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಡಿಜಿಟಲ್ ಅರೆಸ್ಟ್ ಹಗರಣ: ಈ ಹೊಸ ರೀತಿಯ ಮೋಸದ ಘಟನೆ ನಕಲಿ ಪಾರ್ಸೆಲ್ ಟ್ರಿಕ್ (Fake parcel trick) ರೀತಿಯಲ್ಲೇ ಇದೆ. ವಂಚಕರು ಸಂತ್ರಸ್ತರನ್ನು ಬೆದರಿಸಿ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆಂದು ಸುಳ್ಳು ಆರೋಪ ಮಾಡುವ ಮೂಲಕ ಹಣವನ್ನು ಸುಲಿಗೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಈ ಪ್ರಕರಣದಲ್ಲಿ ನೋಯ್ಡಾದ ಸೆಕ್ಟರ್ 45 ರ ಅಮ್ರಪಾಲಿ ಸಫೈರ್ ನಿವಾಸಿ ಮಹಿಳಾ ಟೆಕ್ಕಿಗೆ ಮೋಸ ಮಾಡಲಾಗಿದೆ.
ಫೆಬ್ರವರಿ 28 ರಂದು ಇವರಿಗೆ ಕೊರಿಯರ್ ಕಂಪನಿಯಿಂದ ಒಂದು ಕರೆ ಬರುತ್ತದೆ. ಇಲ್ಲಿಂದ ಆರಂಭವಾಗುತ್ತದೆ ಇವರ ಅಗ್ನಿಪರೀಕ್ಷೆ. ಅಂದರೆ ಕರೆಯಲ್ಲಿ ಇರುವವರು ಮಹಿಳೆಯನ್ನು ಉದ್ದೇಶಿಸಿ ಡ್ರಗ್ಸ್ ಹೊಂದಿರುವ ಪಾರ್ಸೆಲ್ ಅನ್ನು ವಿಮಾನ ನಿಲ್ದಾಣದಲ್ಲಿ ವಶಪಡಿಸಿಕೊಳ್ಳಲಾಗಿದೆ ಎಂದಿದ್ದಾರೆ. ನಂತರದಲ್ಲಿ ಈ ಸಂಬಂಧ ವಿವರಗಳನ್ನು ಚರ್ಚಿಸಲು ಮತ್ತು ಪ್ರಕರಣದೊಂದಿಗೆ ಮುಂದುವರಿಯಲು 10:30 AM ಸುಮಾರಿಗೆ ಸ್ಕೈಪ್ ಕರೆಯಲ್ಲಿ ಭಾಗಿಯಾಗಲು ತಿಳಿಸಿದ್ದಾರೆ.
ಸ್ಕೈಪ್ ಕರೆಯಲ್ಲಿ ಭಾಗಿಯಾಗಿ ಎಂದರಲ್ಲ ಎಂದು ತಿಳಿದು ಇದು ಕಾನೂನುಬದ್ಧ ಕರೆ ಎಂದು ನಂಬಿದ ಮಹಿಳೆ ವಿಡಿಯೋ ಕರೆಯಲ್ಲಿ ಭಾಗಿಯಾಗಿದ್ದಾರೆ. ಅಲ್ಲಿ ವಂಚಕರು ಆಕೆಯನ್ನು ಬೆದರಿಸಿ ಸುಮಾರು ಏಳು ಗಂಟೆಗಳ ಕಾಲ ಕುಳಿತುಕೊಳ್ಳುವಂತೆ ಒತ್ತಾಯಿಸಿದರು. ಈ ಡಿಜಿಟಲ್ ಬಂಧನವನ್ನು ಆರಂಭಿಸಿದ ನಂತರ ಸ್ಕ್ಯಾಮರ್‌ಗಳು ಬ್ಯಾಂಕಿಂಗ್ ವಿವರ ಸೇರಿದಂತೆ ವೈಯಕ್ತಿಕ ವಿವರಗಳನ್ನು ಕೇಳಿದ್ದಾರೆ. ಅಲ್ಲದೆ ಈ ಪ್ರಕರಣದಿಂದ ಆಕೆಯ ಹೆಸರನ್ನು ತೆರವುಗೊಳಿಸಲು ಹಣ ನೀಡುವಂತೆ ಒತ್ತಾಯಿಸಿದ್ದಾರೆ.
ಇನ್ನು ಈ ವೇಳೆ ಮುಂಬೈನಿಂದ ತೈವಾನ್‌ಗೆ ಹೋಗುವ ಕೊರಿಯರ್ ಅನ್ನು ಕಸ್ಟಮ್ಸ್ ವಶಪಡಿಸಿಕೊಂಡಿದೆ. ಅಲ್ಲಿ ಅಕ್ರಮ ವಸ್ತುಗಳನ್ನು ಇರಿಸಲಾಗಿದೆ. ನಂತರ ಕರೆಯನ್ನು ನಕಲಿ ಪೊಲೀಸ್ ಅಧಿಕಾರಿಗೆ ವರ್ಗಾಯಿಸಲಾಯಿತು, ಅವರು ನನ್ನ ಹೆಂಡತಿಯ ಖಾತೆ ಮತ್ತು ಕುಟುಂಬದ ವಿವರಗಳನ್ನು ಕೇಳಿದರು. ಅವರು ಅವಳನ್ನು ಬೆದರಿಸಿ ಹಣ ನೀಡುವಂತೆ ಒತ್ತಾಯಿಸಿದರು ಎಂದು ಇವರ ಪತಿ ಮಾಹಿತಿ ನೀಡಿದ್ದಾರೆ.

ವಂಚಕರು ನನ್ನ ಹೆಂಡತಿಯನ್ನು ಬೆಳಿಗ್ಗೆ 10:30 ರಿಂದ ಸಂಜೆ 5:00 ರವರೆಗೆ ಒಂದೇ ಸ್ಥಳದಲ್ಲಿ ಕೂರಿಸಿದ್ದಾರೆ. ಈ ಮೂಲಕ ಅಧಿಕಾರಿಗಳ ರೀತಿಯಲ್ಲಿ ಕುಶಲತೆಯಿಂದ ವರ್ತಿಸಿದರು. ಅಷ್ಟೇ ಅಲ್ಲದೆ ಆಕೆ ಎಲ್ಲೂ ಕೂಡ ಅಲುಗಾಡದಂತೆ ಮಾಡಿದರು. ಆಕೆ ಇದಕ್ಕೆ ಏನಾದರೂ ಸಹಕರಿಸದಿದ್ದರೆ ಕುಟುಂಬ ಸದಸ್ಯರಿಗೆ ಹಾನಿ ಮಾಡುವುದಾಗಿ ಬೆದರಿಕೆ ಹಾಕಿದ್ದರು ಎಂದು ವಿವರಿಸಿದ್ದಾರೆ.
ಇನ್ನು ಗಂಟೆಗಟ್ಟಲೆ ಆಕೆಯನ್ನು ಡಿಜಿಟಲ್ ಬಂಧನಕ್ಕೆ ಒಳಪಡಿಸಿದ ವಂಚಕರು ಮಹಿಳೆಯ ಬ್ಯಾಂಕ್ ಖಾತೆಯ ವಿವರಗಳು ಪಡೆದು ಆಕೆಯ ಖಾತೆಯಿಂದ ಸುಮಾರು 3.7 ಲಕ್ಷ ರೂ. ಲಪಟಾಯಿಸಿದ್ದಾರೆ. ಇದೆಲ್ಲಾ ಆದ ಮೇಲೆ ಸಂತ್ರಸ್ತೆ ಸೈಬರ್ ಕ್ರೈಮ್ ಪೋರ್ಟಲ್‌ನಲ್ಲಿ ದೂರು ದಾಖಲು ಮಾಡಿದ್ದು, ನಂತರ ಪೊಲೀಸರನ್ನು ಸಂಪರ್ಕಿಸಿದ್ದಾರೆ.
ಗಮನಿಸಬೇಕಾದ ವಿಷಯ ಏನೆಂದರೆ ಅನೇಕ ಭಾರತೀಯರು ಇದೇ ರೀತಿಯ ತಂತ್ರಗಳಿಗೆ ಬಲಿಯಾಗಿದ್ದಾರೆ, ಡ್ರಗ್ಸ್ ಹೊಂದಿರುವ ಪಾರ್ಸೆಲ್ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳುವ ಮೂಲಕ ಹಗರಣಗಾರರು ತುರ್ತುಸ್ಥಿತಿಯನ್ನು ಉಂಟು ಮಾಡುತ್ತಾರೆ. ತರುವಾಯ, ಅವರು ಸ್ಕೈಪ್‌ನಂತಹ ಪ್ಲಾಟ್‌ಫಾರ್ಮ್‌ಗಳ ಮೂಲಕ ಡಿಜಿಟಲ್ ಅರೆಸ್ಟ್ ಮಾಡುವ ಕೆಲಸ ಮಾಡುತ್ತಾರೆ. ನಂತರದಲ್ಲಿ ಬಲಿಪಶುವಿನ ಹೆಸರನ್ನು ತೆರವುಗೊಳಿಸುವ ನೆಪದಲ್ಲಿ ಹಣವನ್ನು ಸುಲಿಗೆ ಮಾಡುವ ಕೆಲಸ ಮಾಡುತ್ತಿದ್ದಾರೆ. ಹಾಗಿದ್ರೆ, ಈ ರೀತಿಯ ವಂಚನೆಗಳ ವಿರುದ್ಧ ನಿಮ್ಮನ್ನು ನೀವು ರಕ್ಷಣೆ ಮಾಡಲು ಈ ಕ್ರಮ ಅನುಸರಿಸಿ.

ನಿಮ್ಮ ವೈಯಕ್ತಿಕ ಮಾಹಿತಿ ಅಥವಾ ಹಣವನ್ನು ಕೇಳಲು ಸಾಮಾಜಿಕ ಮಾಧ್ಯಮ ಅಥವಾ ವಿಡಿಯೋ ಕರೆಗಳ ಮೂಲಕ ಯಾವುದೇ ಕಾನೂನಾತ್ಮಕ ಮಾರ್ಗಗಳಿಲ್ಲ. ಇದರಿಂದ ಅರ್ಥ ಮಾಡಿಕೊಳ್ಳಿ ಯಾರೇ ಆದರೂ ಈ ರೀತಿ ಹೇಳಿಕೊಂಡು ಕರೆ ಮಾಡಿದ್ರೆ ಯಾವುದೇ ಕಾರಣಕ್ಕೂ ನಂಬಬೇಡಿ. ಜೊತೆಗೆ ಆ ಕರೆಯಲ್ಲಿ ಪರಿಶೀಲಿಸಿ.
ಫೋನ್ ಅಥವಾ ಆನ್‌ಲೈನ್‌ನಲ್ಲಿ ಬ್ಯಾಂಕ್ ಖಾತೆ ಸಂಖ್ಯೆಗಳು ಅಥವಾ ಪಾಸ್‌ವರ್ಡ್‌ಗಳಂತಹ ಗೌಪ್ಯ ವಿವರಗಳನ್ನು ಯಾರೊಂದಿಗೂ ಸಹ ಶೇರ್ ಮಾಡಿಕೊಳ್ಳಬೇಡಿ. ಮೊದಲೇ ತಿಳಿಸಿದಂತೆ ಕಾನೂನು ಅಧಿಕಾರಿಗಳು ಫೋನ್ ಅಥವಾ ಆನ್‌ಲೈನ್‌ನಲ್ಲಿ ಈ ರೀತಿಯ ವಿವರಗಳನ್ನು ಎಂದಿಗೂ ಕೇಳುವುದಿಲ್ಲ.
ಕರೆ ಮಾಡಿ ನಿಮಗೆ ಯಾರಾದರೂ ಬೆದರಿಕೆ ಹಾಕಿದರೆ ತಕ್ಷಣವೇ ಎಲ್ಲಾ ಸಂವಹನವನ್ನು ಕೊನೆಗೊಳಿಸಿ ಮತ್ತು ಘಟನೆಯನ್ನು ಸಂಬಂಧಿಸಿದ ಅಧಿಕಾರಿಗಳಿಗೆ ವರದಿ ಮಾಡಿ. ಈ ಮೂಲಕ ಯಾವುದೇ ರೀತಿಯ ವಂಚನೆಗಳಿಂದ ಪಾರಾಗಬಹುದಾಗಿದೆ. ಇದರಿಂದ ನಿಮ್ಮ ಬ್ಯಾಂಕ್‌ನಲ್ಲಿನ ಹಣವೂ ಸೇಫ್, ನೀವೂ ಸೇಫ್.


Click it and Unblock the Notifications








