ಮದ್ಯ ಪ್ರಿಯರೇ ಎಚ್ಚರ... ನಿಮಗೆ ಕಾದಿದೆ ಸಂಚಕಾರ! ಹೀಗೋ ಮೋಸ ಮಾಡ್ತಾರೆ ಹುಷಾರ್...
ಇತ್ತೀಚಿನ ದಿನಗಳಲ್ಲಿ ಎಲ್ಲವನ್ನೂ ಸಹ ಆನ್‌ಲೈನ್ (Online) ಮೂಲಕವೇ ಖರೀದಿ ಮಾಡುವ ಜನರು ಬಹಳಷ್ಟು ಮಂದಿ ಇದ್ದಾರೆ. ಜೊತೆಗೆ ಆನ್‌ಲೈನ್ ಮೂಲಕ ಸೇವೆ ನೀಡುವ ಕಂಪೆನಿಗಳು ಸಹ ಹೆಚ್ಚಾಗುತ್ತಿದ್ದು, ಈ ನಡುವೆ ನೀವೇನಾದರೂ ಆನ್‌ಲೈನ್ ಮೂಲಕ ಎಣ್ಣೆ ಆರ್ಡರ್ ಮಾಡಲು ಮುಂದಾದರೆ ವಂಚನೆಗೆ ಒಳಗಾಗಬೇಕಾಗುತ್ತದೆ.
ಹೌದು, ಹೆಚ್ಚಿನ ಜನರು ತಾವು ಖರೀದಿಸಲು ಬಯಸುವ ಯಾವುದೇ ವಸ್ತುಗಳಿಗೆ ಆನ್‌ಲೈನ್ ಮೊರೆ ಹೋಗುತ್ತಾರೆ. ಈ ಮೂಲಕ ಯಾವುದೇ ವಸ್ತುವನ್ನು ಖರೀದಿ ಮಾಡಲು ವಿನಿಯೋಗಿಸುವ ಸಮಯವನ್ನು ಉಳಿಸುವ ಕೆಲಸ ಮಾಡುತ್ತಾರೆ. ಆದರೆ, ಇದನ್ನೇ ವಂಚಕರು ಬಂಡವಾಳ ಮಾಡಿಕೊಂಡಿದ್ದಾರೆ. ಈ ಘಟನೆಯಲ್ಲಿ ಯುವತಿಯೊಬ್ಬಳು ಬಲಿಯಾಗಿದ್ದಾರೆ. ಈ ವಿಷಯ ಎಲ್ಲಾ ಕಡೆ ಬಹಳ ಚರ್ಚೆಗೆ ಗ್ರಾಸವಾಗಿದೆ. ಹಾಗಿದ್ರೆ, ಏನಿದು ಘಟನೆ?, ಇದು ಎಲ್ಲಿ ನಡೆದಿದ್ದು? ಎಂಬಿತ್ಯಾದಿ ಮಾಹಿತಿಯನ್ನು ತಿಳಿಸಿಕೊಡಲಾಗಿದೆ ಓದಿರಿ.

ಯುವತಿಗೆ ಮೋಸ: ಹರಿಯಾಣ ಗುರುಗ್ರಾಮ್‌ನ 33 ವರ್ಷದ ಯುವತಿ ಆನ್‌ಲೈನ್ ಮೂಲಕ ಎಣ್ಣೆ ಆರ್ಡರ್ ಮಾಡಲು ಮುಂದಾಗಿದ್ದಾಳೆ. ಆದರೆ, ಎಲ್ಲೂ ಈ ಸೌಲಭ್ಯ ಸಿಕ್ಕಿಲ್ಲ. ಆದರೆ ಫೋನ್ ಮೂಲಕ ಎಣ್ಣೆ ಆರ್ಡರ್ ಮಾಡುವ ವಿಷಯವನ್ನು ಗೂಗಲ್‌ನಲ್ಲಿ ಗಮನಿಸಿದ್ದಾಳೆ. ತಕ್ಷಣವೇ ಅಲ್ಲಿ ನೀಡಲಾಗಿದ್ದ ನಂಬರ್‌ಗೆ ಕರೆ ಮಾಡಿ 3000ರೂ.ಗಳ ಬೆಲೆ ಇದ್ದ ಗ್ಲೆನ್‌ಫಿಡಿಚ್ ಬಾಟಲನ್ನು ಆರ್ಡರ್ ಮಾಡಿದ್ದಾಳೆ.
ಇದಾದ ನಂತರದಲ್ಲಿ ಅವರು ನೀಡಿದ ಸಂಖ್ಯೆಗೆ ಯುವತಿ ನಿಗದಿಪಡಿಸಲಾಗಿದ್ದ ಮೊತ್ತವನ್ನು ಯುಪಿಐ ಮೂಲಕ ಪಾವತಿ ಮಾಡಿದ್ದಾಳೆ. ಅದಾಗ್ಯೂ ಅವರು ಕರೆ ಮಾಡಿ, ನಿಮ್ಮ ಮನೆಗೆ ಈ ಎಣ್ಣೆ ತರಲು ಹೆಚ್ಚುವರಿ ವೆಚ್ಚವಾಗುತ್ತದೆ ಎಂದು ತಿಳಿಸಿದ್ದಾರೆ. ಇದರಿಂದ ಬೇಸರಗೊಂಡ ಯುವತಿ, ಹಾಗಿದ್ರೆ, ಈ ಎಣ್ಣೆ ನನಗೆ ಬೇಡ ಎಂದು ಆರ್ಡರ್ ಕ್ಯಾನ್ಸಲ್ ಮಾಡಲು ಮುಂದಾಗಿದ್ದಾಳೆ.

ದುರಂತ ಏನೆಂದರೆ ರದ್ದು ಮಾಡಬೇಕು ಎಂದರೂ ಸಹ ಹಣ ಪಾವತಿ ಮಾಡಬೇಕು ಅದು ಕೇವಲ ಐದು ರೂ. ಎಂದು ಸ್ಕ್ಯಾಮರ್‌ಗಳು ತಿಳಿಸಿದ್ದಾರೆ. ಇರಲಿ ಬಿಡು ಎಂದುಕೊಂಡ ಯುವತಿ ಅದನ್ನೂ ಸಹ ಪಾವತಿ ಮಾಡಿದ್ದಾಳೆ. ಆದರೆ, ಇದಾಗಿದ್ದೇ ತಡ ಇದ್ದಕ್ಕಿದ್ದಂತೆ ಆಕೆಯ ಮೊಬೈಲ್‌ಗೆ ಒಂದು ಮೆಸೆಜ್ ಬರುತ್ತದೆ. ಅದುವೇ 'ನಿಮ್ಮ ಬ್ಯಾಂಕ್‌ನಿಂದ 29,986 ರೂ. ಕಡಿತವಾಗಿದೆ' ಎಂದು. ಇದನ್ನು ನೋಡಿದ ತಕ್ಷಣ ಯುವತಿ ಶಾಕ್ ಆಗಿದ್ದಾಳೆ.
ಇದಾದ ಬಳಿಕ ಯುವತಿ ತಕ್ಷಣ ಬ್ಯಾಂಕ್ ಅನ್ನು ಸಂಪರ್ಕಿಸಿ ಏನಾಯಿತು ಎಂದು ವಿವರಿಸಿ ಅನಾಮಿಕರೊಂದಿಗೆ ನಡೆಸಿದ ಎಲ್ಲಾ ಮಾಹಿತಿಯನ್ನು ಬ್ಯಾಂಕ್ ಸಿಬ್ಬಂದಿಗೆ ತಿಳಿಸಿದ್ದಾಳೆ. ಈ ಸಂಬಂಧ ಕಳೆದ ಶುಕ್ರವಾರ ಮನೇಸರ್ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 420 (ವಂಚನೆ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಗುರುಗ್ರಾಮ್ ಎಸಿಪಿ ವಿಪಿನ್ ಅಹ್ಲಾವತ್ ಅವರು ಬ್ಯಾಂಕ್ ವಿವರಗಳನ್ನು ಸಲ್ಲಿಸಲು ವಿಳಂಬವಾಗಿರುವುದರಿಂದ ಪ್ರಕರಣವನ್ನು ದಾಖಲಿಸಲು ಸಮಯ ತೆಗೆದುಕೊಂಡಿದೆ. ಅಪರಾಧಿಗಳನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಹೇಳಿದ್ದಾರೆ. ಹಾಗೆಯೇ ಆನ್‌ಲೈನ್‌ನಲ್ಲಿ ಆರ್ಡರ್ ಮಾಡುವಾಗ ಈ ರೀತಿಯ ವಂಚನೆಗಳ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದೂ ಸಹ ತಿಳಿಸಿದ್ದಾರೆ.

ಸುರಕ್ಷಿತವಾಗಿರುವುದು ಹೇಗೆ?:
ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್ (Amazon and Flipkart) ನಂತಹ ವಿಶ್ವಾಸಾರ್ಹ ಆನ್‌ಲೈನ್ ಸೈಟ್‌ಗಳ ಹೊರತಾಗಿ ಎಷ್ಟೇ ಆಫರ್ ಹಾಗೂ ಕ್ಯಾಶ್ ಬ್ಯಾಕ್‌ನಂತಹ ಆಸೆ ತೋರಿಸಿದರೂ ಸಹ ಬೇರೆ ವೆಬ್‌ಸೈಟ್‌ಗಳನ್ನು ನಂಬಬೇಡಿ. ಜೊತೆಗೆ ನಿಮ್ಮ ಬ್ಯಾಂಕ್ ವಿವರಗಳನ್ನು ನೀಡುವ ಬದಲು ಡೆಲಿವರಿ ಸಂದರ್ಭದಲ್ಲಿ ಹಣ ಪಾವತಿ ಮಾಡುತ್ತೇನೆ ಎಂದು ತಿಳಿಸಿ. ಆಗ ನಿಮಗೆ ಯಾರೂ ಸಹ ಮೋಸ ಮಾಡಲು ಆಗುವುದಿಲ್ಲ.
ಇದರೊಂದಿಗೆ ನೀವು ಯಾವುದೇ ಸಂದರ್ಭದಲ್ಲೂ ವಂಚನೆಯ ಸೈಟ್‌ಗಳಲ್ಲಿ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ವಿವರಗಳನ್ನು ಶೇರ್ ಮಾಡಿಕೊಳ್ಳಬೇಡಿ. ಅದೇ ರೀತಿ ನಕಲಿ ಜಿಎಸ್‌ಟಿ ಬಿಲ್ ಕಳುಹಿಸಿ ಬ್ಯಾಂಕ್ ವಿವರ ಕೇಳುವ ಗ್ಯಾಂಗ್ ಎಲ್ಲಡೆ ಇದೆ. ಈ ವೇಳೆ ನೀವು ಅದಕ್ಕೆ ಪ್ರತಿಕ್ರಿಯೆ ನೀಡಿದ್ದೇ ಆದರೆ ಖಂಡಿತಾ ನಿಮ್ಮ ಬ್ಯಾಂಕ್ ಖಾತೆಯಲ್ಲಿರುವ ಹಣವನ್ನು ಅವರು ಖಾಲಿ ಮಾಡುತ್ತಾರೆ.


Click it and Unblock the Notifications








