ಆಧಾರ್ ಕಾರ್ಡ್ ಬಳಕೆದಾರರಿಗೆ ಇದಕ್ಕಿಂತ ಬೇರೆ ಅವಕಾಶ ಬೇಕೆ?... ಲಕ್ಷಾಂತರ ಜನರಿಗೆ ಗುಡ್ ನ್ಯೂಸ್!
ಆಧಾರ್ ಕಾರ್ಡ್ (Aadhaar Card) ಬಳಕೆ ಇಂದು ಎಲ್ಲಾ ಕಡೆ ಅಗತ್ಯವಾಗಿದೆ. ಅದರಲ್ಲೂ ಬ್ಯಾಂಕಿಂಗ್ ವ್ಯವಹಾರ ಹಾಗೂ ಸರ್ಕಾರಿ ಯೋಜನೆಗಳಿಗೆ ಇದು ಅತ್ಯಗತ್ಯವಾಗಿದ್ದು, ಇದರೊಂದಿಗೆ ಕರ್ನಾಟಕದಲ್ಲಿ ಗೃಹಲಕ್ಷ್ಮಿ, ಶಕ್ತಿ ಯೋಜನೆಗೆ ಕಡ್ಡಾಯವಾಗಿದೆ. ಈ ನಡುವೆ ಆಧಾರ್ ಕಾರ್ಡ್ ಹೊಂದಿರುವ ಎಲ್ಲರಿಗೂ ಗುಡ್ ನ್ಯೂಸ್ ನೀಡಲಾಗಿದೆ.
ಹೌದು, ಆಧಾರ್ ಕಾರ್ಡ್ ಅನ್ನು ಪ್ರತಿಯೊಬ್ಬರು ಹೊಂದುವುದು ಕಡ್ಡಾಯವಾಗಿದೆ. ಈ ಮೂಲಕ ಇದು ಮಹತ್ವದ ಗುರುತಿನ ದಾಖಲೆಯಾಗಿದೆ. ಆದರೆ ಕೆಲವರು ತಪ್ಪಾದ ಆಧಾರ್ ಹೊಂದಿದ್ದು, ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಈ ನಡುವೆ ಆಧಾರ್ ಪ್ರಾಧಿಕಾರ ಸೆಫ್ಟೆಂಬರ್ ವರೆಗೆ ಉಚಿತವಾಗಿ ಆಧಾರ್ ತಿದ್ದುಪಡಿಗೆ ಅವಕಾಶ ನೀಡಿತ್ತು. ಆದರೆ, ಈಗ ಆ ದಿನಾಂಕವನ್ನು ವಿಸ್ತರಣೆ ಮಾಡಿದೆ. ಹಾಗಿದ್ರೆ, ಎಲ್ಲಿಯವರೆಗೆ ಉಚಿತವಾಗಿ ಆಧಾರ್ ತಿದ್ದುಪಡಿ ಮಾಡಿಸಿಕೊಳ್ಳಬಹುದು?, ಇದು ಯಾಕೆ ಅಗತ್ಯ ಎಂಬ ಮಾಹಿತಿ ಇಲ್ಲಿದೆ ನೋಡಿ.

ಆಧಾರ್ ತಿದ್ದುಪಡಿ ದಿನಾಂಕ ವಿಸ್ತರಣೆ: ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ಆಧಾರ್‌ನಲ್ಲಿನ ದಾಖಲೆಗಳನ್ನು ನವೀಕರಿಸಲು ಕೊನೆಯ ದಿನಾಂಕವನ್ನು ಸೆಪ್ಟೆಂಬರ್ 14 ರಿಂದ ಡಿಸೆಂಬರ್ 14 ರವರೆಗೆ ಮೂರು ತಿಂಗಳವರೆಗೆ ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ. ಈ ಮೂಲಕ ಇನ್ನೂ ಯಾರೆಲ್ಲಾ ಕೆಲವು ಸಮಸ್ಯೆಗಳಿಂದ ಆಧಾರ್ ತಿದ್ದುಪಡಿ ಮಾಡಿಸಿಕೊಂಡಿಲ್ಲವೋ ಅವರು ಈ ಕಾಲಾವಕಾಶದ ಒಳಗೆ ಬದಲಾವಣೆ ಮಾಡಿಸಿಕೊಳ್ಳಬಹುದಾಗಿದೆ.
ಅಧಿಕೃತ ಮೆಮೊರಾಂಡಮ್‌ನಲ್ಲಿ UIDAI, ಸಾಕಷ್ಟು ಜನರನ್ನು ತಮ್ಮ ದಾಖಲೆಗಳನ್ನು ಆಧಾರ್‌ನಲ್ಲಿ ನವೀಕರಿಸಲು ಪ್ರೋತ್ಸಾಹಿಸುವ ಸಲುವಾಗಿ, ಸೆಪ್ಟೆಂಬರ್ 14 ರವರೆಗೆ ಉಚಿತವಾಗಿ ಮೈಆಧಾರ್ ಪೋರ್ಟಲ್ ಮೂಲಕ ಆಧಾರ್‌ನಲ್ಲಿ ತಮ್ಮ ದಾಖಲೆಯನ್ನು ನವೀಕರಿಸಲು ಅವಕಾಶ ನೀಡಲು ನಿರ್ಧರಿಸಲಾಗಿದೆ ಎಂದು ಉಲ್ಲೇಖಿಸಲಾಗಿದೆ. ಈವರೆಗೂ ಸೆಪ್ಟೆಂಬರ್ 14 ಕೊನೇ ದಿನವಾಗಲಿದೆ. ಮುಂದೆ ಹಣ ನೀಡಿ ಈ ತಿದ್ದುಪಡಿ ಮಾಡಿಸಿಕೊಳ್ಳಬೇಕಾಗುತ್ತದೆ ಎನ್ನಲಾಗಿತ್ತು, ಆದರೆ ಇನ್ನೂ ಮೂರು ತಿಂಗಳು ಯಾವುದೇ ಹಣ ನೀಡದೆ ನವೀಕರಿಸಿಕೊಳ್ಳಬಹುದು.
ಇನ್ನು ಜನರ ಸಕಾರಾತ್ಮಕ ಪ್ರತಿಕ್ರಿಯೆಯ ಆಧಾರದ ಮೇಲೆ ಈ ಸೌಲಭ್ಯವನ್ನು ಇನ್ನೂ ಮೂರು ತಿಂಗಳವರೆಗೆ ವಿಸ್ತರಿಸಲು ನಿರ್ಧರಿಸಲಾಗಿದೆ. ಅಂದರೆ ಸೆಪ್ಟೆಂಬರ್ 15 ರಿಂದ ಡಿಸೆಂಬರ್ 14 ರವರೆಗೆ ಇರಲಿದೆ. ಡಾಕ್ಯುಮೆಂಟ್ ನವೀಕರಣದ ಸೌಲಭ್ಯವು ಮೈ ಆಧಾರ್ ಪೋರ್ಟಲ್ (My Aadhaar Portal) ಮೂಲಕ ಉಚಿತವಾಗಿ ಮುಂದುವರಿಯುತ್ತದೆ ಎಂದು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ತಿಳಿಸಿದೆ.
ಯಾರೆಲ್ಲಾ ನವೀಕರಣ ಮಾಡಿಸಬೇಕು?: ಆಧಾರ್ ಅನ್ನು ಎಲ್ಲರೂ ಕಡ್ಡಾಯವಾಗಿ ನವೀಕರಣ ಮಾಡಿಸಬೇಕು ಅಂತೇನಿಲ್ಲ. ಆದರೆ, ಆಧಾರ್ ಪಡೆದು ಹತ್ತು ವರ್ಷ ಆಗಿದ್ದರೆ, ಹೆಸರು, ವಿಳಾಸ ಬದಲಾಗಿದ್ದರೆ, ಮದುವೆಯಾಗಿದ್ರೆ ಅಥವಾ ಸಾವು ಸಂಭವಿಸಿದ್ರೆ ಈ ವೇಳೆ ಮಾಹಿತಿಯನ್ನು ನವೀಕರಣ ಮಾಡಬೇಕಿದೆ. ಈ ಮೂಲಕ ನಿಖರ ಮಾಹಿತಿಗಳು ಸರ್ಕಾರಕ್ಕೆ ಸಿಗುವಂತೆ ಮಾಡಬಹುದಾಗಿದೆ.
ಇನ್ನು ನೀವೇ ಇದನ್ನು ನವೀಕರಣ ಮಾಡುತ್ತೀರಿ ಎಂದಾದರೆ ಉಚಿತ ಆಗಿರುತ್ತದೆ. ಆದರೆ ನಿಮಗೆ ಅದರ ಬಗ್ಗೆ ಅರಿವು ಇಲ್ಲ ಎಂದಾದರೆ ಸಮೀಪದ ಸೈಬರ್‌ಸೆಂಟರ್‌ನಲ್ಲಿ ಈ ಬದಲಾವಣೆ ಮಾಡಿಸಿಕೊಳ್ಳಬಹುದು. ಆದರೆ, ಇದಕ್ಕೆ ನೀವು 25 ರೂಪಾಯಿಗಳನ್ನು ನೀಡಬೇಕಾಗುತ್ತದೆ. ಹಾಗಿದ್ರೆ, ಈ ಆಧಾರ್ ಬದಲಾವಣೆಗಾಗಿ ವಿಳಾಸದ ಪುರಾವೆಗಳನ್ನು ಅಪ್‌ಲೋಡ್ ಮಾಡುವುದು ಹೇಗೆ ಎಂದು ತಿಳಿಯೋಣ ಬನ್ನಿ.
- ನಿಮ್ಮ ಬಳಿ ಲ್ಯಾಪ್‌ಟಾಪ್ ಅಥವಾ ಕಂಪ್ಯೂಟರ್ ಇದ್ದರೆ UIDAI ಯ ಅಧಿಕೃತ ಸೈಟ್‌ಗೆ ಭೇಟಿ ನೀಡಿ. ಇದಕ್ಕಾಗಿ ನೀವು https://myaadhaar.uidai.gov.in/ ಲಿಂಕ್ ಅನ್ನು ಬಳಕೆ ಮಾಡಿಕೊಳ್ಳಬಹುದು.
- ನಂತರ ಲಾಗ್ ಇನ್ ಮಾಡಿದರೆ ಅಲ್ಲಿ ಹೆಸರು/ಲಿಂಗ/ಹುಟ್ಟಿದ ದಿನಾಂಕ ಮತ್ತು ವಿಳಾಸ ನವೀಕರಣ ಎಂಬ ಆಯ್ಕೆ ಕಾಣಿಸಿಕೊಳ್ಳುತ್ತದೆ ಅದರ ಮೇಲೆ ಕ್ಲಿಕ್ ಮಾಡಿ.
- ಈ ಕೆಲಸ ಮಾಡಿದ ನಂತರ ಆಧಾರ್ ಆನ್‌ಲೈನ್‌ನಲ್ಲಿ ನವೀಕರಿಸಿ ಎಂಬ ಆಯ್ಕೆ ಕಾಣಿಸಿಕೊಳ್ಳುತ್ತದೆ ಅದರ ಮೇಲೆ ಕ್ಲಿಕ್ ಮಾಡಿ.
- ಇದೆಲ್ಲವನ್ನೂ ಮಾಡಿದ ನಂತರ ಜನಸಂಖ್ಯಾ ಆಯ್ಕೆಗಳ ಲಿಸ್ಟ್‌ನಲ್ಲಿ ವಿಳಾಸ ಎಂಬ ಆಯ್ಕೆ ಕಾಣಿಸಿಕೊಳ್ಳುತ್ತದೆ. ಅದರ ಮೇಲೆ ಕ್ಲಿಕ್ ಮಾಡಿದರೆ ಆಧಾರ್ ಅನ್ನು ನವೀಕರಿಸಲು ಮುಂದುವರಿಯಿರಿ ಎಂಬ ಬಟನ್ ಕಾಣಿಸಿಕೊಳ್ಳುತ್ತದೆ ಅದರ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ.
- ಈ ವೇಳೆ ಸ್ಕ್ಯಾನ್ ಮಾಡಿದ ಪ್ರತಿಯನ್ನು ಅಪ್‌ಲೋಡ್ ಮಾಡಿ ಮತ್ತು ಅಗತ್ಯವಿರುವ ಜನಸಂಖ್ಯಾ ಮಾಹಿತಿಯನ್ನು ಅಲ್ಲಿ ಎಂಟ್ರಿ ಮಾಡಿ. ಆದರೆ ಈ ವೇಳೆ 25 ರೂ.ಗಳನ್ನು ಪಾವತಿ ಮಾಡಿ ಎಂದು ತೋರಿಸುತ್ತದೆಯಾದರೂ ಡಿಸೆಂಬರ್ 14 ರವರೆಗೆ ಉಚಿತ ಆಗಿರುವುದರಿಂದ ಯಾವುದೇ ಪಾವತಿ ಮಾಡಬೇಡಿ.

ಇಷ್ಟೆಲ್ಲಾ ಮಾಡಿದ ಮೇಲೆ ನಿಮಗೆ ಸೇವಾ ವಿನಂತಿ ಸಂಖ್ಯೆ (SRN) ಅನ್ನು ನಿಮ್ಮ ಫೋನ್ ಗೆ ಕಳುಹಿಸಲಾಗುತ್ತದೆ. ಈ ಮೂಲಕ ನೀವು ನಿಮ್ಮ ಆಧಾರ್ ಯಾವ ಹಂತದಲ್ಲಿದೆ, ನಿಮಗೆ ಅಗತ್ಯ ಎನಿಸಿದ ಮಾಹಿತಿ ಬದಲಾಗಿದೆಯಾ ಎಂಬಿತ್ಯಾದಿ ಮಾಹಿತಿಯನ್ನು ಫೋನ್ ಮೂಲಕವೇ ನೋಡಿಕೊಳ್ಳಬಹುದು. ಹಾಗಿದ್ರೆ, ಮತ್ಯಾಕೆ ತಡ ಈಗಲೇ ನಿಮ್ಮ ಆಧಾರ್ ಕಾರ್ಡ್ ಅನ್ನು ನವೀಕರಿಸಿಕೊಳ್ಳಿ.


Click it and Unblock the Notifications








