ಗುಡ್ ನ್ಯೂಸ್: ಆಧಾರ್ ಸಂಖ್ಯೆ ನಮೂದು ಕಡ್ಡಾಯವಲ್ಲ... UGC ಹೊರಡಿಸಿದ ಆದೇಶದಲ್ಲೇನಿದೆ?
ಆಧಾರ್ ಕಾರ್ಡ್ (Aadhaar Card) ಇಲ್ಲದೆ ಏನೂ ಆಗುವುದಿಲ್ಲ ಎಂಬ ಮಟ್ಟಕ್ಕೆ ಆಧಾರ್ ಕಾರ್ಡ್ ತನ್ನ ಮೌಲ್ಯವನ್ನು ಹೆಚ್ಚಿಗೆ ಮಾಡಿಕೊಂಡಿದೆ. ಅದರಲ್ಲೂ ಕೆಲವೊಂದಷ್ಟು ಜನರು ಆಧಾರ್ ಕಾರ್ಡ್‌ನಲ್ಲಿನ ದೋಷಗಳಂದಾಗಿ ಹಲವಾರು ಸಮಸ್ಯೆಗೆ ಸಿಲುಕುವುದುಂಟು. ಈ ನಡುವೆ ಶೈಕ್ಷಣಿಕ ವಿಷಯಕ್ಕೆ ಸಂಬಂಧಿಸಿದಂತೆ ಮಹತ್ವದ ಆದೇಶವೊಂದನ್ನು ಮಾಡಲಾಗಿದೆ.
ಹೌದು, ಇನ್ಮುಂದೆ ಡಿಗ್ರಿ ಮತ್ತು ಇತರೆ ಕೋರ್ಸ್ಗಳ ಸರ್ಟಿಫಿಕೇಟ್ ಮೇಲೆ ಆಧಾರ್ ಸಂಖ್ಯೆಯನ್ನು ಕಡ್ಡಾಯಗೊಳಿಸುವ ನಿಯಮಕ್ಕೆ ಬ್ರೇಕ್ ಹಾಕಲಾಗಿದೆ. ಈ ಮೂಲಕ ವಿದ್ಯಾರ್ಥಿಗಳಿಗೆ ಸಂತಸದ ಸುದ್ದಿ ನೀಡಲಾಗಿದೆ. ಹಾಗಿದ್ರೆ ,ಏನಿದು ಹೊಸ ಆಧಾರ್ ಸಂಬಂಧಿ ವಿಚಾರ?, ಯಾಕೆ ಈ ಯುಜಿಸಿ(UGC) ಯಾಕೆ ಈ ನಿರ್ಧಾರ ಮಾಡಿದೆ? ಎಂಬಿತ್ಯಾದಿ ಮಾಹಿತಿ ಇಲ್ಲಿದೆ ನೋಡಿ.

ಯುಜಿಸಿ ಹೊರಡಿಸಿದ ನಿರ್ದೇಶನ ಏನು? : ಪದವಿ ಮತ್ತು ಇತರೆ ತಾತ್ಕಾಲಿಕ ಪ್ರಮಾಣಪತ್ರಗಳಲ್ಲಿ (Degree and other provisional certificate) ವಿದ್ಯಾರ್ಥಿಗಳ ಆಧಾರ್ ಸಂಖ್ಯೆಯನ್ನು ಉಲ್ಲೇಖಿಸದಂತೆ ವಿಶ್ವವಿದ್ಯಾಲಯ ಧನಸಹಾಯ ಆಯೋಗ (UGC) ವಿಶ್ವವಿದ್ಯಾಲಯಗಳಿಗೆ ಸೂಚನೆ ನೀಡಿದೆ. ಈ ಮೂಲಕ ಅದೆಷ್ಟೋ ವಿದ್ಯಾರ್ಥಿಗಳಿಗೆ ಮುಂದಾಗುತ್ತಿದ್ದ ಹಲವಾರು ಸಮಸ್ಯೆಗಳಿಗೆ ಮುಕ್ತಿ ಹಾಡಲಾಗಿದೆ.
ಪದವಿ ಅಥವಾ ಪ್ರಮಾಣ ಪತ್ರದಲ್ಲಿ ವಿದ್ಯಾರ್ಥಿಗಳ ಆಧಾರ್ ಸಂಖ್ಯೆಯನ್ನು ನಮೂದಿಸಿರುವುದು ಹಲವು ಕಾಲೇಜುಗಳಲ್ಲಿ ಕಂಡು ಬರುತ್ತಿದೆ. ಈ ಬಗ್ಗೆ ಯುಜಿಸಿ ಗಮನಕ್ಕೆ ಬಂದ ಹಿನ್ನೆಲೆ ಈ ಆದೇಶ ಹೊರಡಿಸಲಾಗಿದೆ. ಪರಿಣಾಮ ಇನ್ಮುಂದೆ ಎಲ್ಲಾ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳು ಆಧಾರ್ ಸಂಖ್ಯೆಯನ್ನು ನಮೂದು ಮಾಡಬಾರದು ಎಂದು ತಿಳಿಸಲಾಗಿದೆ. ಇದರೊಂದಿಗೆ ವಿದ್ಯಾರ್ಥಿಗಳ ಖಾಸಗಿ ಡೇಟಾಬೇಸ್ ಅನ್ನು ಸಾರ್ವಜನಿಕಗೊಳಿಸುವುದು ಸ್ವೀಕಾರಾರ್ಹವಲ್ಲ ಎಂದು ಉಲ್ಲೇಖಿಸಿದೆ.
ಹಾಗೆಯೇ ಎಲ್ಲಾ ವಿಶ್ವವಿದ್ಯಾಲಯಗಳ ಉಪಕುಲಪತಿಗಳು ಮತ್ತು ಕಾಲೇಜುಗಳ ಪ್ರಾಂಶುಪಾಲರಿಗೆ ಪತ್ರ ಬರೆದಿರುವ ಯುಜಿಸಿ, ವಿಶ್ವವಿದ್ಯಾನಿಲಯಗಳಿಂದ ನೀಡಲಾದ ತಾತ್ಕಾಲಿಕ ಪ್ರಮಾಣಪತ್ರಗಳು ಮತ್ತು ಪದವಿ ಪ್ರಮಾಣ ಪತ್ರಗಳ ಮೇಲೆ ಆಧಾರ್ ಸಂಖ್ಯೆಯನ್ನು ಮುದ್ರಿಸಲು ಪರಿಗಣಿಸಲಾಗುತ್ತಿದೆ. ಆದರೆ ಆಧಾರ್ (ಮಾಹಿತಿ ಹಂಚಿಕೆ) ನಿಯಮಾವಳಿಗಳು, 2016 ರ ನಿಯಮ 6 ರ ಉಪ-ನಿಯಂತ್ರಣ (3) ಗೆ ಗಮನಹರಿಸಬೇಕಿದೆ. ಇದು ಆಧಾರ್ ಸಂಖ್ಯೆಯನ್ನು ಹೊಂದಿರುವ ಯಾವುದೇ ಘಟಕವು ಅದನ್ನು ಯಾವುದೇ ಡೇಟಾಬೇಸ್‌ನಲ್ಲಿ ಹಂಚಿಕೊಳ್ಳಬಾರದು ಅಥವಾ ಮಾಡಬಾರದು ಎಂದು ಉಲ್ಲೇಖಿಸುತ್ತದೆ ಎಂದು ತಿಳಿಸಲಾಗಿದೆ.
ಅಂದರೆ ಯಾವುದೇ ಸಂಸ್ಥೆಯು ಯಾವುದೇ ವ್ಯಕ್ತಿಯ ಆಧಾರ್ ಸಂಖ್ಯೆಯನ್ನು ಸಾರ್ವಜನಿಕಗೊಳಿಸಲು ಸಾಧ್ಯವಿಲ್ಲ ಎಂದು ಈ ಮೂಲಕ ಒತ್ತಿ ಹೇಳಲಾಗಿದೆ. ಜೊತೆಗೆ ಯುಜಿಸಿ ಕಾರ್ಯದರ್ಶಿ ಮನೀಶ್ ಜೋಶಿ ಅವರ ಸಹಿ ಇರುವ ಪತ್ರದಲ್ಲಿ ಈ ಮಾಹಿತಿ ಉಲ್ಲೇಖ ಮಾಡಲಾಗಿದೆ. ನಿಯಮಗಳ ಪ್ರಕಾರ ಪದವಿ ಮತ್ತು ತಾತ್ಕಾಲಿಕ ಪ್ರಮಾಣಪತ್ರಗಳಲ್ಲಿ ಆಧಾರ್ ಸಂಖ್ಯೆ ಮುದ್ರಿಸಲು ಅವಕಾಶವಿಲ್ಲ ಎಂದು ಬರೆಯಲಾಗಿದೆ.
ಉನ್ನತ ಶಿಕ್ಷಣ ಸಂಸ್ಥೆಗಳು ಯುಐಡಿಎಐನ ನಿಯಮಗಳು ಮತ್ತು ನಿಬಂಧನೆಗಳನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು. ಆಧಾರ್ ಸಂಖ್ಯೆಯನ್ನು ಮುದ್ರಿಸುತ್ತಿದ್ದರೆ ಅದನ್ನು ತಕ್ಷಣವೇ ನಿಲ್ಲಿಸಬೇಕು ಮತ್ತು ಆ ರೀತಿಯ ಏನಾದರೂ ಯೋಜಿಸುತ್ತಿದ್ದರೆ ಅದನ್ನು ಈಗಲೇ ತಡೆಹಿಡಿಯಬೇಕು ಎಂದು ಸೂಚನೆ ನೀಡಲಾಗಿದೆ. ಜೊತೆಗೆ ಪದವಿ ಅಥವಾ ಇತರೆ ಪ್ರಮಾಣಪತ್ರದಲ್ಲಿ ಆಧಾರ್ ಸಂಖ್ಯೆಯನ್ನು ಮರೆಮಾಡದೆ ನಮೂದಿಸುವುದು ನಿಯಮಗಳಿಗೆ ವಿರುದ್ಧವಾಗಿದೆ ಎಂದು ಎಚ್ಚರಿಸಲಾಗಿದೆ.
ಶಾಲೆಗಳಿಗೆ UIDAI ಸೂಚನೆ: ಈ ನಡುವೆ ಆಧಾರ್ ಪ್ರಾಧಿಕಾರ ಸಹ ಶಾಲೆಗಳಿಗೆ ಸೂಚನೆ ನೀಡಿದೆ. ಸೆಪ್ಟೆಂಬರ್ 5 ರಂದು ತಮ್ಮ ಆಧಾರ್ ಕಾರ್ಡ್ ಅನ್ನು ಒದಗಿಸದ ವಿದ್ಯಾರ್ಥಿಗಳಿಗೆ ಪ್ರವೇಶವನ್ನು ನಿರಾಕರಿಸದಂತೆ ಶಾಲೆಗಳಿಗೆ ನಿರ್ದೇಶನ ನೀಡಲಾಗಿದೆ. ಅಂತಹ ನಿರಾಕರಣೆಗಳನ್ನು ಅಮಾನ್ಯವೆಂದು ಕರೆಯಬಹುದು ಮತ್ತು ಕಾನೂನಿನ ಅಡಿಯಲ್ಲಿ ಅನುಮತಿಸಲಾಗುವುದಿಲ್ಲ ಎಂದು ಪ್ರತಿಪಾದಿಸಿದೆ.

ಆಧಾರ್ ವಿಷಯಕ್ಕೆ ಯಾವುದೇ ಮಕ್ಕಳು ಸರ್ಕಾರ ಪ್ರಯೋಜನಗಳು ಅಥವಾ ಹಕ್ಕುಗಳಿಂದ ವಂಚಿತರಾಗುವುದಿಲ್ಲ /ನಿರಾಕರಣೆಯಾಗುವುದಿಲ್ಲ ಎಂದು ಈ ಮೂಲಕ ಖಚಿತಪಡಿಸಿಕೊಳ್ಳಬೇಕು ಎಂದು ಯುಐಡಿಎಐ ತನ್ನ ಸುತ್ತೋಲೆಯಲ್ಲಿ ಉಲ್ಲೇಖ ಮಾಡಿದ್ದು, ಈ ಮೂಲಕ ಆಧಾರ್ ವಿಷಯವನ್ನು ಮುಂದಿಟ್ಟುಕೊಂಡು ಆಗುತ್ತಿದ್ದ ಹಲವಾರು ಶೈಕ್ಷಣಿಕ ಸಮಸ್ಯೆಗಳಿಗೆ ಈ ಮೂಲಕ ಪರಿಹಾರ ನೀಡಲಾಗಿದೆ.


Click it and Unblock the Notifications








