ಪ್ಯಾನ್‌ಕಾರ್ಡ್‌ಗೆ ಆಧಾರ್ ಜೋಡಣೆ ಮಾಡಿಸದಿದ್ರೆ ಏನೆಲ್ಲಾ ಸಮಸ್ಯೆ ಎದುರಾಗುತ್ತವೆ!?
ಪ್ಯಾನ್ ಕಾರ್ಡ್‌ನೊಂದಿಗೆ ಆಧಾರ್ ಜೋಡಣೆ ಕಡ್ಡಾಯ ಮಾಡಲಾಗಿದ್ದು, ಈ ಸಂಬಂಧ ಬಡವರು ಹಾಗೂ ಮಧ್ಯಮವರ್ಗದವರು ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ. ಯಾಕೆಂದರೆ ಈ ತಿಂಗಳು ಕೊನೇ ದಿನವಾಗಿದ್ದು, ಇದಕ್ಕೂ ಮೊದಲು 1,000 ರೂ. ಗಳ ದಂಡದೊಂದಿಗೆ ಈ ಪ್ರಕ್ರಿಯೆ ನಡೆಸಬೇಕಿದೆ. ಆದರೆ, ಲಿಂಕ್ ಮಾಡಿಸಲಿಲ್ಲ ಎಂದರೆ ಏನಾಗುತ್ತದೆ ಎಂಬುದು ನಿಮಗೆ ಗೊತ್ತಾ!?.
ಹೌದು, ಬಹುಪಾಲು ಮಂದಿ ಈಗ ಆಧಾರ್ ಅನ್ನು ಪ್ಯಾನ್‌ಗೆ ಲಿಂಕ್ ಮಾಡುವ ಹಾಗೂ ಅದಕ್ಕೆ ವಿಧಿಸಲಾಗಿರುವ ದಂಡದ ಬಗ್ಗೆಯಷ್ಟೇ ಮಾತನಾಡುತ್ತಿದ್ದಾರೆ. ಆದರೆ, ನೀವು ಸರ್ಕಾರದ ಆದೇಶದಂತೆ ಲಿಂಕ್ ಮಾಡಿಸದೆ ಇದ್ದರೆ ಏನೆಲ್ಲಾ ಸಮಸ್ಯೆಗಳಾಗುತ್ತವೆ ಎಂಬುದನ್ನು ನಾವಿಲ್ಲಿ ವಿವರಿಸಿದ್ದೇವೆ ಗಮನಿಸಿ. ಹಾಗೆಯೇ ಲಿಂಕ್ ಮಾಡಿದರೆ ಏನೆಲ್ಲಾ ಸಮಸ್ಯೆ ಪರಿಹಾರ ಆಗುತ್ತವೆ ಎಂಬುದನ್ನೂ ನೀಡಿದ್ದೇವೆ ಓದಿರಿ.

ಬಹುಪಾಲು ಹಣವಂತರು ಸಾಮಾನ್ಯವಾಗಿ ಆಗಾಗ್ಗೆ ಪ್ಯಾನ್ ಕಾರ್ಡ್ ಬಳಕೆ ಮಾಡುವುದರಿಂದಾಗಿ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದಾರೆ. ಆದರೆ ,ಸರ್ಕಾರದ ಯೋಜನೆಗಳನ್ನು ಪಡೆದುಕೊಳ್ಳಲು ಅಥವಾ ಇನ್ನಿತರೆ ಕೆಲವು ವ್ಯವಹಾರಕ್ಕಷ್ಟೇ ವರ್ಷಕ್ಕೆ ಒಮ್ಮೆ ಅಥವಾ ಕೆಲವು ಬಾರಿಯಷ್ಟೇ ಪ್ಯಾನ್ ಕಾರ್ಡ್ ಬಳಕೆ ಮಾಡುವ ಬಡವರು ಹಾಗೂ ಮಧ್ಯಮವರ್ಗದವರು ಮಾತ್ರ ಈಗ ದಂಡದ ಜೊತೆಗೆ ಆಧಾರ್ ಲಿಂಕ್ ಮಾಡಿಸುವಲ್ಲಿ ಬೇಸರ ಹೊರಹಾಕುತ್ತಿದ್ದಾರೆ. ಹಾಗಿದ್ರೆ, ನೀವು ಲಿಂಕ್ ಮಾಡಿಸದೆ ಇದ್ರೆ ಏನೆಲ್ಲಾ ಸಮಸ್ಯೆ ಉಂಟಾಗುತ್ತವೆ ಎಂಬುದನ್ನು ಗಮನಿಸಿ.
ಸಮಸ್ಯೆ 1: ಈ ವಿಚಾರದಲ್ಲಿ ಪ್ರಮುಖವಾದ ಸಮಸ್ಯೆ ಎಂದರೆ ಆದಾಯ ತೆರಿಗೆ ರಿಟರ್ನ್ (ಐಟಿಆರ್) ಸಲ್ಲಿಸುವುದು ದೊಡ್ಡ ಸವಾಲಾಗಿ ಪರಿಣಮಿಸಿದೆ. ಆದರೆ, ತೆರಿಗೆ ಕಟ್ಟುವ ಮಂದಿ ಈಗಾಗಲೇ ಆಧಾರ್ ಲಿಂಕ್ ಮಾಡಿಸಿಯೇ ಇರುತ್ತಾರೆ. ಅಕಸ್ಮಾತ್ ಈ ಲಿಂಕ್ ಮಾಡಿಸದೆ ಇದ್ದರೆ ಐಟಿ ಇಲಾಖೆಯು ಐಟಿಆರ್ ಅನ್ನು ಫೈಲ್ ಮಾಡದಂತೆ ತಡೆಹಿಡಿಯುತ್ತದೆ.

ಸಮಸ್ಯೆ 2: ಮಾರ್ಚ್ 31 ರೊಳಗೆ ಆಧಾರ್ ಕಾರ್ಡ್ ಅನ್ನು ಪ್ಯಾನ್ ಕಾರ್ಡ್‌ಗೆ ಲಿಂಕ್ ಮಾಡದೆ ಹೋದರೆ ಪ್ಯಾನ್ ಕಾರ್ಡ್ ನಿಷ್ಕ್ರಿಯವಾಗುತ್ತದೆ. ಈ ಮೂಲಕ ಆದಾಯ ತೆರಿಗೆ ನಿಯಮಗಳ ನಿಯಮ 114AAA ಅಡಿಯಲ್ಲಿ ಒಬ್ಬ ವ್ಯಕ್ತಿಯ ಪ್ಯಾನ್ ಕಾರ್ಡ್ ನಿಷ್ಕ್ರಿಯವಾಯಿತು ಎಂದಾದರೆ ಯಾವುದೇ ಬ್ಯಾಂಕ್ ವ್ಯವಹಾರ ಮಾಡಲು ಸಾಧ್ಯವಾಗುವುದಿಲ್ಲ.
ಸಮಸ್ಯೆ 3: ಸರ್ಕಾರ ಆಗಾಗ್ಗೆ ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತದೆ. ಹಾಗೆಯೇ ಬ್ಯಾಂಕ್‌ಗಳು ಸಹ ಕೆಲವು ಸಾಮಾಜಿಕ ಯೋಜನೆಗಳನ್ನು ನೀಡುತ್ತವೆ. ಈ ವೇಳೆ ಪ್ಯಾನ್ ಕಾರ್ಡ್ ಅಗತ್ಯವಾಗಿದ್ದು, ನಿಮ್ಮ ಪ್ಯಾನ್ ಕಾರ್ಡ್ ನಿಷ್ಕ್ರಿಯಗೊಂಡಿದ್ದರೆ ಈ ಎಲ್ಲಾ ಸೌಲಭ್ಯಗಳಿಂದ ವಂಚಿತವಾಗಬೇಕಾಗುತ್ತದೆ. ಹಾಗೆಯೇ ಈ ಎಲ್ಲಾ ಸೌಲಭ್ಯದಿಂದ ಸರ್ಕಾರ ವಂಚನೆ ಮಾಡಿದೆ ಎಂದು ದೂರಲಾಗದೆ ಆ ಹೊಣೆಯನ್ನೂ ಆತನೇ ಹೊರಬೇಕಾಗುತ್ತದೆ.
ಸಮಸ್ಯೆ 4 : ಇದೆಲ್ಲದರ ಜೊತೆಗೆ ಮತ್ತೊಂದು ದೊಡ್ಡ ಸಮಸ್ಯೆ ಎಂದರೆ ಬಿಕ್ಯೂ ಪ್ರೈಮ್ ಪ್ರಕಾರ ಸಬ್ಸಿಡಿ ಪಡೆಯಲು ಹಾಗೂ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಲು ಮತ್ತು ಬ್ಯಾಂಕ್ ಖಾತೆಯನ್ನು ತೆರೆಯಲು ಯಾವುದೇ ಕಾರಣಕ್ಕೂ ಸಾಧ್ಯವಾಗುವುದಿಲ್ಲ.ಈ ಮೂಲಕ ವ್ಯಕ್ತಿ ಎಲ್ಲಾ ರೀತಿಯ ಆರ್ಥಿಕ ಸಮಸ್ಯೆಗೆ ಒಳಗಾಗಬೇಕಾಗುತ್ತದೆ.

ಸಮಸ್ಯೆ 5 : ಅದಾಗ್ಯೂ ನೀವು ಈ ಹಳೆಯ ಪ್ಯಾನ್ ಕಾರ್ಡ್ ಬೇಡವೇ ಬೇಡ ಹೊಸದಾಗಿ ಅರ್ಜಿ ಸಲ್ಲಿಸುತ್ತೇವೆ ಎಂದುಕೊಂಡರೆ ಅದರಲ್ಲೂ ಹಲವು ಸಮಸ್ಯೆ ನಿರ್ಮಾಣ ಆಗುತ್ತವೆ ಎಂಬುದು ನಿಮ್ಮ ಗಮನಕ್ಕೆ ಇರಲಿದೆ. ಯಾಕೆಂದರೆ ನಿಮ್ಮ ಪ್ಯಾನ್ ಕಾರ್ಡ್ ಕಳೆದುಹೋದರೆ ಅಥವಾ ಹಾನಿಗೊಳಗಾಗಿದೆ ಎಂದು ಹೊಸ ಪ್ಯಾನ್ ಕಾರ್ಡ್ ಪಡೆಯಬೇಕು ಎಂದರೂ ಸಹ ಈ ಮೊದಲ ಪ್ಯಾನ್ ಕಾರ್ಡ್‌ಗೆ ಆಧಾರ್ ಲಿಂಕ್ ಆಗಿರಲೇಬೇಕು ಎಂಬುದು ಗೊತ್ತಿರಲಿ.
ಸಮಸ್ಯೆ 6 : ಕೆಲವು ವರದಿಗಳ ಪ್ರಕಾರ ಈಗ ವಿಧಿಸಲಾಗಿರುವ ದಂಡದ ಜೊತೆಗೆ ಆಧಾರ್ ಲಿಂಕ್ ಮಾಡಿಸಿದರೆ ಪರವಾಗಿಲ್ಲ. ಅದಾಗ್ಯೂ ಏನಾಗುತ್ತದೋ ಆಗಲಿ ಎಂದು ಬಿಟ್ಟರೆ ಮುಂದೆ ಇನ್ನೂ ಹೆಚ್ಚಿನ ದಂಡದ ಜೊತೆಗೆ ಈ ಪ್ರಕ್ರಿಯೆ ನಡೆಸಬೇಕಾದ ಅನಿವಾರ್ಯತೆ ಎದುರಾಗುತ್ತದೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಆದರೆ, ಇದರ ಬಗ್ಗೆ ಹಲವಾರು ಗೊಂದಲಗಳಿವೆ.
ಇದರಿಂದ ಆಗುವ ಅನುಕೂಲ ಏನು ಎಂಬ ಪ್ರಶ್ನೆಯೂ ನಿಮ್ಮಲ್ಲಿ ಮೂಡುವುದು ಸಹಜ. ಅದರಂತೆ ಮೊದಲನೆಯದಾಗಿ ಸರ್ಕಾರಕ್ಕೆ ನಿಖರವಾದ ಮಾಹಿತಿಗಳು ಲಭ್ಯವಾಗುತ್ತವೆ. ಹಾಗೆಯೇ ಯಾರೂ ಸಹ ಸರ್ಕಾರಕ್ಕೆ ಆರ್ಥಿಕ ವಂಚನೆ ಮಾಡಲು ಸಾಧ್ಯವಾಗುವುದಿಲ್ಲ ಹಾಗೂ ಇ-ಕೆವೈಸಿ ಪ್ರಕ್ರಿಯೆ ನಡೆಸಲು ಸರಳವಾಗುತ್ತದೆ. ಇದೆಲ್ಲಕ್ಕಿಂತ ಮಿಗಿಲಾಗಿ ಕೆಲವು ಒಂದಕ್ಕಿಂತ ಹೆಚ್ಚಿನ ಪ್ಯಾನ್ ಕಾರ್ಡ್ ಬಳಕೆ ಮಾಡಿಕೊಂಡು ಸರ್ಕಾರಕ್ಕೆ ವಂಚನೆ ಮಾಡುತ್ತಿರುವವರನ್ನು ಪತ್ತೆ ಮಾಡಬಹುದು.


Click it and Unblock the Notifications








