ಜಿಯೋ ಫೋನ್ ಬಳಕೆದಾರರಿಗೂ ಲಭ್ಯವಾಗುತ್ತೆ 'ಆರೋಗ್ಯ ಸೇತು' ಆಪ್!
ಮಹಾಮಾರಿ ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ಸರ್ಕಾರ ಲಾಕ್‌ಡೌನ್ ಜಾರಿಮಾಡಿದೆ. ಜೊತೆಗೆ ಕೋವಿಡ್ ಟ್ರಾಕಿಂಗ್ ಮಾಡಲು ಆರೋಗ್ಯ ಸೇತು ಮೊಬೈಲ್ ಆಪ್ ಸಹ ಬಿಡುಗಡೆ ಮಾಡಿದೆ. ಜನರ ಹತ್ತಿರದಲ್ಲಿ ಕೋವಿಡ್ ಸೋಂಕಿತರು ಕಂಡುಬಂದರೇ ಆ ಬಗ್ಗೆ ಆರೋಗ್ಯ ಸೇತು ಆಪ್ ಬಳಕೆದಾರರಿಗೆ ಎಚ್ಚರಿಸುತ್ತದೆ. ಆರೋಗ್ಯ ಸೇತು ಆಪ್ ಅನ್ನು ಎಲ್ಲರೂ ಬಳಕೆ ಮಾಡಲು ಸೂಚಿಸಲಾಗಿದ್ದು, ಈಗಾಗಲೇ 70 ಮಿಲಿಯನ್ ಡೌನ್‌ಲೋಡ್ ಕಂಡಿರುವ ಈ ಆಪ್ ಇನ್ನು ಜಿಯೋ ಫೋನ್ ಬಳಕೆದಾರರಿಗೂ ಲಭ್ಯವಾಗಲಿರುವುದು ವಿಶೇಷ.

ಹೌದು, ಜಿಯೋ ಫೋನ್ ಬಳಕೆದಾರರಿಗಾಗಿ ಆರೋಗ್ಯಾ ಸೇತು ಮೊಬೈಲ್ ಆಪ್‌ನ ವಿಭಿನ್ನ ಆವೃತ್ತಿಯನ್ನು ಅಭಿವೃದ್ಧಿಪಡಿಸುವ ಮೂಲಕ ಜಿಯೋ ಫೋನ್ ಬಳಕೆದಾರರಿಗೂ ಆಪ್ ಲಭ್ಯವಾಗಿಸಲು ಸರ್ಕಾರ ಯೋಜಿಸುತ್ತಿದೆ ಎಂದು ಮೈಗೋವ್ ಇಂಡಿಯಾದ ಸಿಇಒ ಅಭಿಷೇಕ್ ಸಿಂಗ್ ಹೇಳಿದ್ದಾರೆ. IVRS (ಇಂಟರ್ಯಾಕ್ಟಿವ್ ವಾಯ್ಸ್ ರೆಸ್ಪಾನ್ಸ್ ಸಿಸ್ಟಮ್) ಮೂಲಕ ಫೀಚರ್ ಫೋನ್‌ಗಳಿಗೂ ಆರೋಗಾ ಸೇತು ಆಪ್ ಲಭ್ಯವಾಗುವಂತೆ ಮಾಡುವ ಯೋಜನೆ ಇದೆ.

ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳು ಆಂಡ್ರಾಯ್ಡ್ ಓಎಸ್ ನಲ್ಲಿ ಕಾರ್ಯನಿರ್ವಹಿಸುತ್ತವೆ. ಈಗಾಗಲೇ ಆಂಡ್ರಾಯ್ಡ್ ಓಎಸ್‌ನಲ್ಲಿ ಆರೋಗ್ಯ ಸೇತು ಆಪ್ ಲಭ್ಯವಿದೆ. ಆದರೆ ರಿಲಯನ್ಸ್ ಜಿಯೋ ಫೋನ್‌ಗಳು KaiOS ಆಪರೇಟಿಂಗ್ ಸಿಸ್ಟಂನಲ್ಲಿ ಕಾರ್ಯನಿರ್ವಹಿಸುತ್ತವೆ. ಈ ಆಪರೇಟಿಂಗ್ ಸಿಸ್ಟಂಗೆ ಬೆಂಬಲ ಸೂಚಿಸುವಂತೆ ಆರೋಗ್ಯಾ ಸೇತು ಆಪ್ ಅನ್ನು ಭಿನ್ನ ಆವೃತ್ತಿಯಲ್ಲಿ ಪರಿಚಯಿಸಲು ಸರ್ಕಾರ ಈಗಾಗಲೇ ಕಾರ್ಯನಿರ್ವಹಿಸುತ್ತಿದೆ ಎಂದು ಅಭಿಷೇಕ್ ಸಿಂಗ್ ಹೇಳಿದ್ದಾರೆ.

ಭಾರತದಲ್ಲಿ ಸ್ಮಾರ್ಟ್‌ಫೋನ್‌ಗಳ ಸಂಖ್ಯೆ ಸುಮಾರು 45 ರಿಂದ 50 ಕೋಟಿಗಳಷ್ಟಿದೆ. ಹಾಗೆಯೇ ಫೀಚರ್ ಫೋನ್‌ಗಳನ್ನು ಬಳಸುವ ಜನರ ಸಂಖ್ಯೆ ಹೆಚ್ಚಿದೆ. ಸುಮಾರು 11 ಕೋಟಿ ಜನರು ಜಿಯೋ ಫೋನ್ ಬಳಸುತ್ತಾರೆ. ಆದ್ದರಿಂದ, KaiOS ಆಪರೇಟಿಂಗ್ ಸಿಸ್ಟಮ್ ಬಳಸುವ ಜಿಯೋ ಫೋನ್‌ಗಳಿಗಾಗಿ, ಆರೋಗಾ ಸೇತು ಆವೃತ್ತಿಯನ್ನು ಅಭಿವೃದ್ಧಿಪಡಿಸುತ್ತಿದ್ದೇವೆ, ಹೊಸ ಆವೃತ್ತಿ KaiOS ಮತ್ತು ಜಿಯೋ ಫೋನ್‌ನಲ್ಲಿ ಕಾರ್ಯನಿರ್ವಹಿಸಲಿದೆ ಎಂದಿದ್ದಾರೆ. ಇದರಿಂದ ಸುಮಾರು 11 ಕೋಟಿ ಜಿಯೋ ಫೋನ್ ಬಳಕೆದಾರರಿಗೆ ಆರೋಗ್ಯ ಸೇತು ಆಪ್ ಲಭ್ಯವಾಗಲಿದೆ.

ಒಂದು ವೇಳೆ ಸ್ಮಾರ್ಟ್‌ಫೋನ್ ಇಲ್ಲದಿದ್ದರೆ, ಆರೋಗ್ಯಾ ಸೇತು ಇಂಟರ್ಯಾಕ್ಟಿವ್ ವಾಯ್ಸ್ ರೆಸ್ಪಾನ್ಸ್ ಸಿಸ್ಟಮ್ (IVRS)ನ ಟೋಲ್-ಫ್ರೀ ಸಂಖ್ಯೆಯನ್ನು 1921 ಬಳಸಬಹುದು. ಈ ಸಂಖ್ಯೆಗೆ ಮಿಸ್ಡ್ ಕಾಲ್ ನೀಡಬಹುದಾಗಿದೆ. ಮಿಸ್ಡ್ ಕಾಲ್ ಮಾಡಿದ ಬಳಿಕ ಮರಳಿ ಕರೆ ಬರಲಿದ್ದು, ಆರೋಗ್ಯದ ಬಗ್ಗೆ ಸರಳ ಮಾಹಿತಿ ಸಂಗ್ರಹಿಸಲಾಗುತ್ತದೆ. ಸಂಗ್ರಹಿಸ ಮಾಹಿತಿಯನ್ನು ಆರೋಗ್ಯ ಸೇತು ಆಪ್‌ನ ಡೇಟಾಬೇಸ್‌ಗೆ ಸೇರಿಸಲಾಗುತ್ತದೆ.


Click it and Unblock the Notifications








