Acer Scooter: ಭಾರತದಲ್ಲಿ ಅಗ್ಗದ ಏಸರ್ MUVI 125 ಎಲೆಕ್ಟ್ರಿಕ್ ಸ್ಕೂಟರ್ ಲಾಂಚ್.. ಸೂಪರ್ ಫೀಚರ್ಸ್
ಏಸರ್ (Acer) ಅಂದಾಕ್ಷಣ ಥಟ್ಟನೆ ನೆನಪಿಗೆ ಬರುವುದು ಈ ಕಂಪೆನಿಯ ವಿಶೇಷವಾದ ಲ್ಯಾಪ್‌ಟಾಪ್‌ಗಳು(Laptops). ಆದರೆ, ಇನ್ಮುಂದೆ ನಿಮಗೆ ಏಸರ್ ಸ್ಕೂಟರ್‌ಗಳು (Acer Scooter) ಸಹ ನೆನಪಿಗೆ ಬರಲಿವೆ. ಯಾಕೆಂದರೆ ಭಾರತದಲ್ಲಿ ಏಸರ್ ಇ-ಸ್ಕೂಟರ್ ಅನ್ನು ಲಾಂಚ್ ಮಾಡಲಾಗಿದೆ. ಹೈದರಾಬಾದ್‌ನಲ್ಲಿ ನಡೆದ ಸಮಾರಂಭದಲ್ಲಿ ಭಾರತೀಯ ಮಾರುಕಟ್ಟೆಗೆ ಇ-ಸ್ಕೂಟರ್ ಅನ್ನು ಸೇರ್ಪಡೆ ಮಾಡಿದೆ.
ಹೌದು, ಇತ್ತೀಚಿನ ದಿನಗಳಲ್ಲಿ ಇ-ಸ್ಕೂಟರ್‌ಗಳ (E-scooter) ಬಳಕೆ ಹೆಚ್ಚಾಗುತ್ತಿದೆ. ಪರಿಣಾಮ ಟೆಕ್ ದೈತ್ಯರೆಲ್ಲಾ ಇ-ವಾಹನಗಳ ಕಡೆ ಮುಖ ಮಾಡಿದ್ದು, ಅದರಂತೆ ಲ್ಯಾಪ್‌ಟಾಪ್‌ಗಳಿಗೆ ಹೆಸರುವಾಸಿಯಾಗಿದ್ದ ಏಸರ್ ಈಗ ಭಾರತದಲ್ಲಿ ಹೊಸ ಸಂಚಲನ ಉಂಟು ಮಾಡಲು ಮುಂದಾಗಿದೆ. ಅಂದರೆ ಏಸರ್ MUVI 125 4G ಇ-ಸ್ಕೂಟರ್ ಅನ್ನು ಲಾಂಚ್ ಮಾಡಿದೆ. ಈ ಸ್ಕೂಟರ್80 ಕಿಮೀ ವ್ಯಾಪ್ತಿಯೊಂದಿಗೆ, ಕಾಲೇಜು ವಿದ್ಯಾರ್ಥಿಗಳು, ದಿನನಿತ್ಯದ ಪ್ರಯಾಣಿಕರಿಗೆ ಉತ್ತಮ ಆಯ್ಕೆ ಆಗಿದೆ. ಹಾಗಿದ್ರೆ, ಇ-ಸ್ಕೂಟರ್ ನ ಪ್ರಮುಖ ಫೀಚರ್ಸ್ ಹಾಗೂ ಬೆಲೆ ಬಗ್ಗೆ ತಿಳಿಯೋಣ ಬನ್ನಿ.

ಏಸರ್ MUVI 125 4G ಸ್ಕೂಟರ್: ಏಸರ್ MUVI 125 4G (Acer MUVI 125 4G) ಅನ್ನು ಲಾಂಚ್ ಮಾಡಲಾಗಿದ್ದು, ಇದನ್ನು ತಯಾರು ಮಾಡಲು ಏಸರ್ ಇಬೈಕ್‌ಗೋ (eBikeGo) ಪ್ರೈವೇಟ್ ಲಿಮಿಟೆಡ್‌ನೊಂದಿಗೆ ಪಾಲುದಾರಿಕೆ ಪಡೆದುಕೊಂಡಿತ್ತು. ಇನ್ನು ಈ ವಿಶೇಷ ಸ್ಕೂಟರ್ ಮಹಾನಗರಗಳಿಗೆ ಯೋಗ್ಯವಾಗಿದೆ. ಅಂದರೆ ಕಚೇರಿಗೆ ಹೋಗುವವರು, ಕಾಲೇಜು ವಿದ್ಯಾರ್ಥಿಗಳು, ದಿನನಿತ್ಯದ ಪ್ರಯಾಣಿಕರಿಗೆ ಸಾಕಷ್ಟು ಅನುಕೂಲವಾಗಲಿದೆ ಈ ಸ್ಕೂಟರ್. ಅಷ್ಟೇ ಅಲ್ಲದೆ ಹೈಪರ್-ಲೋಕಲ್ ಫುಡ್ ಡೆಲಿವರಿ ಅಥವಾ ಕಿರಾಣಿ ವಿತರಣೆಯಂತಹ B2B ಬಳಕೆಗೂ ಇದು ಉತ್ತಮ ಎಂದು ಕಂಪೆನಿ ತಿಳಿಸಿದೆ.
ಇದರ ಪೀಚರ್ಸ್ ಬಗ್ಗೆ ಮಾತನಾಡುವುದಾದರೆ ಬದಲಾಯಿಸಬಹುದಾದ ಬ್ಯಾಟರಿ ಆಯ್ಕೆಯನ್ನು ಇದು ಪಡೆದುಕೊಂಡಿದೆ. ಈ ಎಲೆಕ್ಟ್ರಿಕ್ ಸ್ಕೂಟರ್ 48V 35.2Ah ಬ್ಯಾಟರಿ ಪ್ಯಾಕ್ ಅನ್ನು ಹೊಂದಿದ್ದು, ಇದು ಒಂದೇ ಚಾರ್ಜ್‌ನಲ್ಲಿ 80 ಕಿಲೋಮೀಟರ್ ಮೈಲೇಜ್ ಅನ್ನು ನೀಡಲಿದೆ. ಜೊತೆಗೆ ಗಂಟೆಗೆ 75 ಕಿಲೋಮೀಟರ್ ವೇಗವನ್ನು ಹೊಂದಿದ್ದು, 4 ಗಂಟೆಗಳಲ್ಲಿ ಬ್ಯಾಟರಿಯನ್ನು ಸಂಪೂರ್ಣ ಚಾರ್ಜ್ ಮಾಡಬಹುದಾಗಿದೆ. ಇದು 2 ಬ್ಯಾಟರಿ ಪ್ಯಾಕ್‌ಗಳನ್ನು ಹೊಂದಿದ್ದು, ಒಂದು ಬ್ಯಾಟರಿಯ ಮೂಲಕವೂ ಸಹ ಈ ಸ್ಕೂಟರ್ ಓಡಿಸಬಹುದಾಗಿದೆ.
ವಿನ್ಯಾಸದ ಬಗ್ಗೆ ಹೇಳುವುದಾದರೆ, ಈ ಎಲೆಕ್ಟ್ರಿಕ್ ಸ್ಕೂಟರ್ ಫ್ಯೂಚರಿಸ್ಟಿಕ್ ವಿನ್ಯಾಸವನ್ನು ಪಡೆದುಕೊಂಡಿದೆ. ಹಾಗೆಯೇ ಹಗುರವಾದ ಚಾಸಿಸ್‌ನೊಂದಿಗೆ ಕಾಣಿಸಿಕೊಂಡಿದ್ದು, 16 ಇಂಚಿನ ಟೈರ್‌ಗಳು ಈ ಬೈಕ್‌ನ ಆಕರ್ಷಣೆಯನ್ನು ಇನ್ನಷ್ಟು ಹೆಚ್ಚಿಗೆ ಮಾಡಿವೆ. ಸ್ಕೂಟರ್‌ನ ಹಿಂಭಾಗದಲ್ಲಿ ಶಾಕ್ ಅಬ್ಸಾರ್ಬರ್ ಆಯ್ಕೆ ನೀಡಲಾಗಿದ್ದು, ಇದು ಹೈಡ್ರಾಲಿಕ್ ಫೋರ್ಕ್‌ನೊಂದಿಗೆ ಕಾಣಿಸಿಕೊಂಡಿದೆ.
ಉಳಿದಂತೆ ಈ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಕಸ್ಟಮೈಸ್ ಮಾಡಲು ನೀವು ಆಂಡ್ರಾಯ್ಡ್ ಮತ್ತು ಐಓಎಸ್(Android, iOS) ಡಿವೈಸ್ ಬಳಸಬಹುದು. ಸ್ಕೂಟರ್ ಬ್ಲೂಟೂತ್ ಸಕ್ರಿಯಗೊಳಿಸಿದ 4 ಇಂಚಿನ ಎಲ್‌ಸಿಡಿ ಡಿಸ್‌ಪ್ಲೇ ಹೊಂದಿದ್ದು, ಇದು 3 ಕಾನ್ಫಿಗರೇಶನ್‌ಗಳೊಂದಿಗೆ ಬರುತ್ತದೆ. ಈ ಸಂಬಂಧ ಏಸರ್ ಇಂಕ್ ನ ಅಧಿಕಾರಿ ಜೇಡ್ ಝೌ ಸಂತಸ ಹೊರಹಾಕಿದ್ದು, ಸುಸ್ಥಿರತೆ ಮತ್ತು ನಾವೀನ್ಯತೆಗೆ ಏಸರ್ ಬ್ರ್ಯಾಂಡ್ ಹೆಸರುವಾಸಿಯಾಗಿದೆ. ಏಸರ್‌ನ ಎರಡು ಪ್ರಮುಖ ತತ್ವ ಇವೇ ಆಗಿವೆ. ಅದರಂತೆ ಏಸರ್ MUVI 125 4G ಈ ಎರಡನ್ನೂ ಪ್ರತಿನಿಧಿಸುತ್ತದೆ ಎಂದಿದ್ದಾರೆ.
ಇಬೈಕ್‌ಗೋ ಪ್ರೈವೇಟ್ ಲಿಮಿಟೆಡ್‌ನ ಸಿಇಓ ಡಾ. ಇರ್ಫಾನ್ ಖಾನ್ ಮಾತನಾಡಿ, ಏಸರ್ MUVI 125 4G ಹಸಿರು ಭವಿಷ್ಯಕ್ಕಾಗಿ ನಮ್ಮ ದೃಷ್ಟಿಯನ್ನು ಪ್ರತಿನಿಧಿಸುತ್ತದೆ. ನಗರ ಪ್ರಯಾಣಿಕರಿಗೆ ಇದು ಆದ್ಯತೆಯ ಆಯ್ಕೆಯಾಗಲಿದೆ ಎಂದು ನಾವು ನಂಬುತ್ತೇವೆ ಎಂದಿದ್ದಾರೆ. ಈ ಮೂಲಕ ಮಹಾನಗರಳಿಗೆ ಯೋಗ್ಯವಾಗುವ ಸೌಲಭ್ಯಗಳನ್ನು ಈ ಬೈಕ್‌ನಲ್ಲಿ ನೀಡಲಾಗಿದೆ ಎಂಬುದನ್ನು ತಿಳಿಸಿದ್ದಾರೆ.
ಇನ್ನು MUVI 125 4G ಭಾರತದಲ್ಲಿ ಏಸರ್ ಬ್ರ್ಯಾಂಡ್ ಅಡಿಯಲ್ಲಿ ಬಿಡುಗಡೆಯಾದ ಮೊದಲ ಇವಿ ಮಾದರಿಯಾಗಿದ್ದು. ಮುಂದಿನ ದಿನಗಳಲ್ಲಿ, ಇ-ಬೈಸಿಕಲ್‌ಗಳು, ಇ-ಬೈಕ್‌ಗಳು, ಇ-ಟ್ರೈಕ್‌ಗಳು ಸೇರಿದಂತೆ ಬಹು 2 ಮತ್ತು 3 ವೀಲರ್ ಇವಿಗಳನ್ನು ಪರಿಚಯಿಸಲು ಏಸರ್ ಯೋಜಿಸುತ್ತಿದೆ ಎಂದು ಹೇಳಲಾಗಿದೆ. ಈ ಮೂಲಕ ವಾಹನ ವಿಭಾಗದಲ್ಲೂ ಏಸರ್ ಭಾರತದಲ್ಲಿ ತನ್ನದೇ ಆದ ಸಾಮರ್ಥ್ಯ ತೋರಲಿದೆ.
ಏಸರ್ MUVI 125 4G ಸ್ಕೂಟರ್ ಬೆಲೆ ಹಾಗೂ ಸಬ್ಸಿಡಿ ವಿವರ: ಈ ಬೈಕ್ ಅನ್ನು ಒಂದು ಲಕ್ಷ ರೂ. ಗಳ ಬೆಲೆಗೆ ಪರಿಚಯಿಸಲಾಗಿದ್ದು. ಇದು ಬಿಳಿ, ಕಪ್ಪು ಮತ್ತು ಬೂದುಬಣ್ಣದಲ್ಲಿ ಲಭ್ಯ ಇರಲಿದೆ. ಜೊತೆಗೆ ಕೇಂದ್ರ ಮತ್ತು ರಾಜ್ಯ-ಮಟ್ಟದ ಸರ್ಕಾರಿ ಸಬ್ಸಿಡಿಗಳಿಗೆ ಅರ್ಹತೆ ಪಡೆದುಕೊಂಡಿದೆ. ಅಷ್ಟೇ ಅಲ್ಲದೆ ಸುಲಭವಾಗಿ ಬದಲಾಯಿಸಬಹುದಾದ ಬಿಡಿಭಾಗಗಳು ಮತ್ತು ಕಡಿಮೆ ನಿರ್ವಹಣಾ ವೆಚ್ಚವು ಹೆಚ್ಚಿನ ಬಳಕೆದಾರರನ್ನು ಸೆಳೆಯುವುದಂತೆ ಪಕ್ಕಾ.

ಏಸರ್ MUVI 125 4G ಗಾಗಿ ಮುಂಗಡ ಬುಕಿಂಗ್ ಶೀಘ್ರದಲ್ಲೇ ಲಭ್ಯವಿರುತ್ತದೆ ಎಂದು ಕಂಪೆನಿ ಮಾಹಿತಿ ನೀಡಿದೆ. ಜೊತೆಗೆ ಡೀಲರ್‌ಶಿಪ್ ಅವಕಾಶಗಳಲ್ಲಿ ಆಸಕ್ತಿ ಹೊಂದಿರುವವರಿಗೂ ಸಹ ಅವಕಾಶ ನೀಡಲಾಗುವುದು ಎಂದು ಏಸರ್ ತಿಳಿಸಿದೆ. ಪ್ರೀ-ಬುಕಿಂಗ್ ಮತ್ತು ಡೀಲರ್‌ಶಿಪ್ ವಿಚಾರಣೆ ಎರಡಕ್ಕೂ ನೀವು acerelectric.in ಗೆ ಭೇಟಿ ನೀಡಬಹುದು.


Click it and Unblock the Notifications








