Acer: ಭಾರತದಲ್ಲಿ ಏಸರ್ ಟ್ರಾವೆಲ್‌ಲೈಟ್ ಲ್ಯಾಪ್‌ಟಾಪ್ ಲಾಂಚ್! ಬೆಲೆ ಕೇವಲ ಇಷ್ಟೇ..
ಏಸರ್ (Acer) ಈಗಾಗಲೇ ಸಾಕಷ್ಟು ಭಿನ್ನ ಫೀಚರ್ಸ್ ಆಯ್ಕೆ ಇರುವ ಲ್ಯಾಪ್‌ಟಾಪ್‌ಗಳನ್ನು (Laptops) ಅನಾವರಣ ಮಾಡಿಕೊಂಡು ಬಂದಿದೆ. ಈ ನಡುವೆ ಭಾರತದಲ್ಲಿ ಏಸರ್ ಟ್ರಾವೆಲ್‌ಲೈಟ್ ಲ್ಯಾಪ್‌ಟಾಪ್ (Acer TravelLite Laptop) ಅನ್ನು ಲಾಂಚ್ ಮಾಡಿದ್ದು, ಆಕರ್ಷಕ ಫೀಚರ್ಸ್ ಹಾಗೂ ವಿಶೇಷ ಶೈಲಿ ಪಡೆದಿದೆ.
ಹೌದು, ಲ್ಯಾಪ್‌ಟಾಪ್ ವಿಭಾಗದಲ್ಲಿ ಭಿನ್ನ ರೀತಿಯ ಅಗತ್ಯಗಳನ್ನು ಪೂರೈಸುವ ಡಿವೈಸ್‌ಗಳನ್ನು ಕಾಣಬಹುದು. ಅವುಗಳ ಸಾಲಿನಲ್ಲಿ ಈಗ ಏಸರ್ ಟ್ರಾವೆಲ್‌ಲೈಟ್ ಲ್ಯಾಪ್‌ಟಾಪ್ ವಿಶೇಷವಾಗಿ ಗುರುತಿಸಿಕೊಳ್ಳಲಿದೆ. ಈ ಲ್ಯಾಪ್‌ಟಾಪ್ ಹಗುರವಾದ, ಬಾಳಿಕೆ ಬರುವ ಮತ್ತು ಸುಧಾರಿತ ಭದ್ರತಾ ಫೀಚರ್ಸ್ ಅನ್ನು ಪಡೆದುಕೊಂಡಿದೆ. ಹಾಗಿದ್ರೆ, ತಡಯಾಕೆ ಬನ್ನಿ ಈ ಲ್ಯಾಪ್‌ಟಾಪ್ ಏನೆಲ್ಲಾ ಫೀಚರ್ಸ್ ಹೊಂದಿದೆ?, ಬೆಲೆ ಎಷ್ಟು ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯೋಣ.

ಏಸರ್ ಟ್ರಾವೆಲ್‌ಲೈಟ್ ಲ್ಯಾಪ್‌ಟಾಪ್: ಏಸರ್ ಟ್ರಾವೆಲ್‌ಲೈಟ್ ಲ್ಯಾಪ್‌ಟಾಪ್ ವ್ಯಾಪಾರಕ್ಕಾಗಿ ವಿಶೇಷವಾಗಿ ತಯಾರಿಸಲಾಗಿದೆ. ಈ ಲ್ಯಾಪ್‌ಟಾಪ್ ಕಠಿಣ ಕೆಲಸ ಮಾಡಲು, ಉತ್ತಮ-ಗುಣಮಟ್ಟದ ಶೈಲಿ ಪಡೆದಿದ್ದು, ಸಾಗಿಸಲು ಸುಲಭವಾಗಿದೆ. ಆಧುನಿಕ ಕಂಪನಿಗಳ ಬದಲಾಗುತ್ತಿರುವ ಅಗತ್ಯಗಳನ್ನು ಪೂರೈಸಲು ಇದನ್ನು ಪರಿಚಯಿಸಲಾಗಿದ್ದು, ಏಸರ್‌ನ ಮೇಕ್ ಇನ್ ಇಂಡಿಯಾ ಉಪಕ್ರಮದ ಭಾಗವಾಗಿ ಇದು ಕಾಣಿಸಿಕೊಂಡಿದೆ. 1.34 ಕೆಜಿ ತೂಕದ ಟ್ರಾವೆಲ್‌ಲೈಟ್ ಸಂಚಾರಿ ವೃತ್ತಿಪರರಿಗೆ ಉತ್ತಮವಾದ ಆಯ್ಕೆ ಆಗಿರಲಿದೆ.
ಈ ಲ್ಯಾಪ್‌ಟಾಪ್ 14 ಇಂಚಿನ ಫುಲ್ ಹೆಚ್‌ಡಿ ಡಿಸ್‌ಪ್ಲೇ ಮತ್ತು ಗೌಪ್ಯತೆ ಶಟರ್‌ನೊಂದಿಗೆ ಇನ್‌ಬಿಲ್ಟ್ ಕ್ಯಾಮೆರಾ ಆಯ್ಕೆ ಪಡೆದುಕೊಂಡಿದೆ. ಹಾಗೆಯೇ ಟ್ರಸ್ಟೆಡ್ ಪ್ಲಾಟ್‌ಫಾರ್ಮ್ ಮಾಡ್ಯೂಲ್ (TPM), BIOS ಪಾಸ್‌ವರ್ಡ್‌ಗಳು ಮತ್ತು ಐಚ್ಛಿಕ ಫಿಂಗರ್‌ಪ್ರಿಂಟ್ ರೀಡರ್‌ನಂತಹ ಸುಧಾರಿತ ಭದ್ರತಾ ಫೀಚರ್ಸ್ ಅನ್ನು ಸಹ ಹೊಂದಿದ್ದು, ಮೆಟಲ್-ಅಲ್ಯೂಮಿನಿಯಂ ಬಾಡಿ ಹಾಗೂ MIL-STD 810H ಪ್ರಮಾಣೀಕರಣದೊಂದಿಗೆ ಬಾಳಿಕೆ ಬರುವಂತೆ ನಿರ್ಮಿಸಲಾಗಿದೆ.
ಇದು ಸ್ಲಿಮ್ ಮತ್ತು ಸಾಗಿಸಲು ಸುಲಭವಾಗಿದೆ ಹಾಗೆಯೇ ಇದರ ಡಿಸ್‌ಪ್ಲೇ ಪರಿಸರ ಸ್ನೇಹಿಯಾಗಿದ್ದು, ಎದ್ದುಕಾಣುವ ದೃಶ್ಯಗಳಿಗಾಗಿ ಇಂಟೆಲ್ ® ಐರಿಸ್ ® ಎಕ್ಸ್‌ಇ ಗ್ರಾಫಿಕ್ಸ್‌ನೊಂದಿಗೆ ಕಾಣಿಸಿಕೊಂಡಿದೆ. ಇದರ ಜೊತೆಗೆ ಮಲ್ಟಿಮೀಡಿಯಾ ಎಡಿಟಿಂಗ್ ಮತ್ತು ವಿಡಿಯೋ ಪ್ಲೇಬ್ಯಾಕ್‌ನಂತಹ ಕಾರ್ಯಗಳಿಗೆ ಬೆಂಬಲ ನೀಡಲಿದೆ. ಇದಕ್ಕಾಗಿ ಈ ಲ್ಯಾಪ್‌ಟಾಪ್ 13 ನೇ ಜನ್ ಇಂಟೆಲ್ ಕೋರ್ i7 ಪ್ರೊಸೆಸರ್ ನಿಂದ ಕಾರ್ಯನಿರ್ವಹಿಸಲಿದ್ದು, 1TB ಜನ್4 NVMe ವರೆಗಿನ SSD ಸಾಮರ್ಥ್ಯದ ಸ್ಟೋರೇಜ್ ಆಯ್ಕೆಯನ್ನು ಇದರಲ್ಲಿ ಕಾಣಬಹುದಾಗಿದೆ.
ಇನ್ನು ತ್ವರಿತ ಡೇಟಾ ಪ್ರವೇಶ ಮತ್ತು ಅತ್ಯುತ್ತಮ ಸಿಸ್ಟಂ ಸ್ಪಂದಿಸುವಿಕೆಯನ್ನು ಖಾತ್ರಿಗೊಳಿಸಲಿದ್ದು, ಯುಎಸ್‌ಬಿ 3.2 ಜನ್ 2 ಮತ್ತು ಯುಎಸ್‌ಬಿ ಟೈಪ್-ಸಿ ಫುಲ್ ಫಂಕ್ಷನಲ್ ಪೋರ್ಟ್ ಸೇರಿದಂತೆ ವಿವಿಧ ಯುಎಸ್‌ಬಿ ಪೋರ್ಟ್‌ಗಳನ್ನು ಹೊಂದಿದೆ. ಡ್ಯುಯಲ್ ಚಾನೆಲ್ DDR4 ಮೆಮೊರಿಯೊಂದಿಗೆ 64GB RAM ವರೆಗೆ ಬೆಂಬಲಿಸಲಿದ್ದು, ಪ್ರಬಲ ಕಂಪ್ಯೂಟಿಂಗ್ ಅನುಭವವನ್ನು ನೀಡಲಿದೆ.

ಈ ಸಂಬಂಧ ಏಸರ್ ಇಂಡಿಯಾದ ಮುಖ್ಯ ವ್ಯಾಪಾರ ಅಧಿಕಾರಿ ಸುಧೀರ್ ಗೋಯೆಲ್ ಪ್ರತಿಕ್ರಿಯೆ ನೀಡಿ, ವ್ಯವಹಾರಗಳಿಗೆ ಪೋರ್ಟಬಿಲಿಟಿ ಮತ್ತು ಉತ್ಪಾದಕತೆಯನ್ನು ಮರುವ್ಯಾಖ್ಯಾನಿಸಲು ವಿನ್ಯಾಸಗೊಳಿಸಲಾದ ಲ್ಯಾಪ್‌ಟಾಪ್ ಏಸರ್ ಟ್ರಾವೆಲ್‌ಲೈಟ್ ಅನ್ನು ಪರಿಚಯಿಸಲು ನಾವು ಉತ್ಸುಕರಾಗಿದ್ದೇವೆ. ಅದರ ದೃಢವಾದ ಪ್ರೊಸೆಸರ್‌ಗಳು, ಬಾಳಿಕೆ ಬರುವ ನಿರ್ಮಾಣ ಮತ್ತು ಪರಿಸರ ಸ್ನೇಹಿ ವಿನ್ಯಾಸದೊಂದಿಗೆ, ಟ್ರಾವೆಲ್‌ಲೈಟ್ ಮೇಕ್ ಇನ್ ಇಂಡಿಯಾ ಪ್ರಯತ್ನಗಳಲ್ಲಿ ನಾವೀನ್ಯತೆಗೆ ಏಸರ್‌ನ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದ್ದಾರೆ.
ಇನ್ನು ಈ ಟ್ರಾವೆಲ್‌ಲೈಟ್ ಬೆಲೆ 34990ರೂ.ಗಳಿಂದ ಆರಂಭ ಆಗಲಿದ್ದು, ವಿವಿಧ ಬ್ಯಾಟರಿ ವೇರಿಯಂಟ್ ಆಯ್ಕೆಯಲ್ಲಿ ಲಭ್ಯವಿದೆ. ಈ ಮೂಲಕ ಒಂದು ಚಾರ್ಜಿಂಗ್‌ನಲ್ಲಿ ಇಡೀ ದಿನದ ಬಳಕೆಯನ್ನು ಖಾತ್ರಿಪಡಿಸುತ್ತದೆ. ಉಳಿದಂತೆ ಈ ಲ್ಯಾಪ್‌ಟಾಪ್ ಸ್ಪಿಲ್-ರೆಸಿಸ್ಟೆಂಟ್ ಕೀಬೋರ್ಡ್‌ಗಳು ಮತ್ತು ಉತ್ತಮ ಬಳಕೆದಾರ ಕಂಟ್ರೋಲ್ ಮತ್ತು ನ್ಯಾವಿಗೇಷನ್‌ಗಾಗಿ ಮೈಕ್ರೋಸಾಫ್ಟ್ ® ಪ್ರೆಸಿಶನ್ ® ಮಲ್ಟಿ-ಜೆಸ್ಚರ್ ಕ್ಲಿಕ್ ಪ್ಯಾಡ್‌ಗಳಂತಹ ಫೀಚರ್ಸ್ ಆಯ್ಕೆಯನ್ನು ಪಡೆದುಕೊಂಡಿದೆ.


Click it and Unblock the Notifications








