ಆದಿತ್ಯ-L1 ಉಡಾವಣೆಗೆ ಕ್ಷಣಗಣನೆ ಪ್ರಾರಂಭ; ನೇರ ವೀಕ್ಷಣೆ ಮಾಡಲು ಇಲ್ಲಿದೆ ಮಾಹಿತಿ!
ಚಂದ್ರಯಾನ - 3 ಸಾಫ್ಟ್ ಲ್ಯಾಂಡಿಂಗ್ ಯಶಸ್ಸಿನ ಬೆನ್ನಲ್ಲೇ ಆದಿತ್ಯ-L1 ನೌಕೆ ಮೂಲಕ ಸೂರ್ಯ ಶಿಕಾರಿಗೆ ಸಜ್ಜಾಗಿದೆ. ಆದಿತ್ಯ-L1 ಉಪಗ್ರಹವು ಸೂರ್ಯನನ್ನು ಅಧ್ಯಯನ ಮಾಡಲು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ತಯಾರಾಗಿದೆ. ಆದಿತ್ಯ-L1 ಉಪಗ್ರಹ ಉಡಾವಣೆಗೆ ನಾಳೆ (ಸೆಪ್ಟೆಂಬರ್ 2 ರಂದು) ಮುಹೂರ್ತ ಫಿಕ್ಸ್ ಮಾಡಲಾಗಿದೆ.
ಹೌದು, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಆದಿತ್ಯ-L1 ಉಪಗ್ರಹವನ್ನು ಆಂಧ್ರ ಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ ಧವನ್ ಬಾಹ್ಯಾಕಾಶ ಕೇಂದ್ರದಿಂದ ಸೆಪ್ಟೆಂಬರ್ 2 ರಂದು ಬೆಳೆಗ್ಗೆ 11:50 ಗಂಟೆಗೆ ಉಡಾವಣೆ ಮಾಡಲು ಸಕಲ ತಯಾರಿ ಮಾಡಿದೆ.

ಈ ಬಗ್ಗೆ ಸೋಶೀಯಲ್ ಮಿಡಿಯಾ ಎಕ್ಸ್ ಪ್ಲಾಟ್‌ಫಾರ್ಮ್ ನಲ್ಲಿ ಪೋಸ್ಟ್ ಮಾಡಿರುವ ಇಸ್ರೋ ಸಂಸ್ಥೆಯು ಸೆಪ್ಟೆಂಬರ್ 2 ಶನಿವಾರ 11.50ಕ್ಕೆ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಆದಿತ್ಯ ಎಲ್-1 ಉಪಗ್ರಹ ಹೊತ್ತ ಪಿಎಸ್‌ಎಲ್‌ವಿ-ಸಿ 57 ರಾಕೆಟ್ ನಭಕ್ಕೆ ಹಾರಲಿದೆ ಎಂದು ಹೇಳಿದೆ.
ಇಸ್ರೋ ಸಂಸ್ಥೆಯು ಈ ಸೂರ್ಯ ಶಿಕಾರಿಗೆ ಆದಿತ್ಯ L1 ಎಂದು ಹೆಸರಿಸಿದ್ದು, ಸೂರ್ಯ-ಭೂಮಿಯ ವ್ಯವಸ್ಥೆಯ ಲ್ಯಾಗ್ರೇಂಜ್ ಪಾಯಿಂಟ್ (L1) ಸುತ್ತ ಹಾಲೋ ಕಕ್ಷೆಯಲ್ಲಿ ಇರುವ ಮೂಲಕ ಸೂರ್ಯನ ಬಗ್ಗೆ ಕೆಲವು ಮಹತ್ತರ ಒಳನೋಟಗಳ ಮಾಹಿತಿ ಒದಗಿಸುವ ಗುರಿಯನ್ನು ಈ ಮಿಷನ್ ಒಳಗೊಂಡಿದೆ.
ಆದಿತ್ಯ L1 ಮಿಷನ್ ಸೂರ್ಯನ ಹೊರಗಿನ ಪದರಗಳ ಜೊತೆಗೆ ದ್ಯುತಿಗೋಳ, ವರ್ಣಗೋಳ ಮತ್ತು ಕರೋನಾವನ್ನು ವೀಕ್ಷಿಸುವ ಉದ್ದೇಶವನ್ನು ಕೂಡಾ ಹೊಂದಿದೆ. ಸೌರ ಸ್ಫೋಟದ ಘಟನೆಗಳಿಗೆ ಕಾರಣವಾಗುವ ಪ್ರಕ್ರಿಯೆಗಳ ಬಗ್ಗೆ ಗುರುತಿಸಿ ಸೂರ್ಯನ ಕಣದ ಡೈನಾಮಿಕ್ಸ್ ಅಧ್ಯಯನಕ್ಕಾಗಿ ಡೇಟಾವನ್ನು ಒದಗಿಸುವ ಇನ್-ಸಿಟು ಕಣ ಮತ್ತು ಪ್ಲಾಸ್ಮಾ ಪರಿಸರವನ್ನು ಗಮನಿಸುವುದು ಇದರ ಉದ್ದೇಶಗಳಲ್ಲಿ ಒಂದಾಗಿದೆ.
ಆದಿತ್ಯ L1 ನ ಒಟ್ಟು ವೆಚ್ಚದ ಮಾಹಿತಿ :
ಇನ್ನು ಈ ಬಹುನಿರೀಕ್ಷಿತ ಆದಿತ್ಯ L1 ನ ಒಟ್ಟು ವೆಚ್ಚ 378 ಕೋಟಿ ರೂ.ಗಳು ($44.7 ಮಿಲಿಯನ್) ಆಗಿದೆ. ಇತ್ತೀಚೆಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಇಸ್ರೋ ಮುಖ್ಯಸ್ಥ ಎಸ್ ಸೋಮನಾಥ ಅವರು, 'ನಾವು ಉಡಾವಣೆಗೆ ತಯಾರಾಗುತ್ತಿದ್ದೇವೆ. ರಾಕೆಟ್ ಮತ್ತು ಉಪಗ್ರಹ ಸಿದ್ಧವಾಗಿದೆ, ನಾವು ಉಡಾವಣೆಯ ಪೂರ್ವಾಭ್ಯಾಸವನ್ನು ಪೂರ್ಣಗೊಳಿಸಿದ್ದೇವೆ. ಶುಕ್ರವಾರ ನಾವು ಉಡಾವಣೆಗೆ ಕ್ಷಣಗಣನೆಯನ್ನು ಪ್ರಾರಂಭಿಸಬೇಕಾಗಿದೆ. ಶನಿವಾರ ಉಡಾವಣೆ ಮಾಡಬೇಕಾಗಿದೆ ಎಂದು ಹೇಳಿದ್ದಾರೆ.
ಏನಿದು ಲಾಗ್ರೇಂಜ್ ಪಾಯಿಂಟ್ (L1) :
ಆದಿತ್ಯ L1 ಹೆಸರಿನಲ್ಲಿ L1 ಅಂದ್ರೆ ಏನು ಅಂತಾ ನೋಡುವುದಾರೆ, ಇದು ಲಾಗ್ರೇಂಜ್ ಪಾಯಿಂಟ್ 1 (L1) ಬಾಹ್ಯಾಕಾಶದಲ್ಲಿ ಸಮತೋಲನ ಬಿಂದುವಾಗಿದೆ. ಭೂಮಿಯ ಕಕ್ಷೆಯೊಳಗೆ ಸುಮಾರು 1.5 ಮಿಲಿಯನ್ ಕಿಲೋಮೀಟರ್‌ಗಳಷ್ಟು ಸ್ಥಾನದಲ್ಲಿರುವ L1 ಸೂರ್ಯ ಮತ್ತು ಭೂಮಿಯ ನಡುವೆ ಇದೆ. ಈ ಬಿಂದುವಿನಲ್ಲಿ ಎರಡೂ ಆಕಾಶಕಾಯಗಳಿಂದ ಗುರುತ್ವಾಕರ್ಷಣೆಯ ಶಕ್ತಿಗಳು ಪರಸ್ಪರ ರದ್ದುಗೊಳ್ಳುತ್ತವೆ. ಈ ಸ್ಥಾನವು ಬಾಹ್ಯಾಕಾಶ ನೌಕೆಗೆ ಕನಿಷ್ಠ ಶಕ್ತಿಯ ವೆಚ್ಚದೊಂದಿಗೆ ಆಕಾಶ ವಿದ್ಯಮಾನಗಳನ್ನು ವೀಕ್ಷಿಸಲು ಸ್ಥಿರ ವಾತಾವರಣವನ್ನು ಒದಗಿಸುತ್ತದೆ.
ಆದಿತ್ಯ L1 ಉಪಗ್ರಹ ಉಡಾವಣೆ ಯಾವಾಗ ಹಾಗೂ ಎಲ್ಲಿ ?
ಸೂರ್ಯ ಶಿಕಾರಿಗೆ ಸಜ್ಜಾಗಿರುವ ಆದಿತ್ಯ L1 ನೌಕೆಯನ್ನು ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ (ನಾಳೆ) ಸೆಪ್ಟೆಂಬರ್ 2 ರಂದು ಬೆಳಿಗ್ಗೆ 11:50 ಗಂಟೆಗೆ ಉಡಾವಣೆ ಮಾಡಲಾಗುತ್ತದೆ.
ಸೂರ್ಯ ಶಿಕಾರಿ ಆದಿತ್ಯ L1 ಉಪಗ್ರಹ ಉಡಾವಣೆ ಲೈವ್ ಆಗಿ ವೀಕ್ಷಿಸಬಹುದು :
* ಅಧಿಕೃತ ಯೂಟ್ಯೂಬ್ ಚಾನೆಲ್ https://youtube.com/watch?v=_IcgGYZTXQw
* ಡಿಡಿ ನ್ಯಾಷನಲ್ ಟಿವಿ ಚಾನೆಲ್ ನಲ್ಲಿ ಕೂಡಾ ವೀಕ್ಷಿಸಬಹುದು
* ಅಧಿಕೃತ ಇಸ್ರೋ ವೆಬ್‌ಸೈಟ್ https://isro.gov.in
* ಫೇಸ್‌ಬುಕ್ https://facebook.com/ISRO


Click it and Unblock the Notifications








