ಟ್ರೂಕಾಲರ್‌ನಲ್ಲಿ ಲಭ್ಯ ಎಐ 'ಅಸಿಸ್ಟೆಂಟ್'; ಇದು ನಿಮಗೆ ಹೇಗೆ ಸಹಾಯಕ!
ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಟ್ರೂಕಾಲರ್ ಅತ್ಯಗತ್ಯ ಆಪ್ ಆಗಿದ್ದು, ಈ ಮೂಲಕ ಅನಾಮಿಕ ಕರೆಗಳು ಹಾಗೂ ಮೋಸದ ಕರೆಗಳಿಂದ ಎಚ್ಚೆತ್ತುಕೊಳ್ಳಬಹುದಾಗಿದೆ. ಈ ನಡುವೆ ಟ್ರೂಕಾಲರ್ ಆಪ್‌ನಲ್ಲಿ ಅಚ್ಚರಿ ಫೀಚರ್ಸ್ ಲಭ್ಯ ಆಗಿದ್ದು, ಈ ಮೂಲಕ ಬಳಕೆದಾರರು ಮತ್ತಷ್ಟು ಉತ್ತಮ ಸೇವೆ ಪಡೆದುಕೊಳ್ಳಬಹುದಾಗಿದೆ.
ಹೌದು, ಪ್ರಮುಖ ಕಾಲರ್ ಐಡೆಂಟಿಫಿಕೇಶನ್ ಆಪ್ ಆಗಿರುವ ಟ್ರೂಕಾಲರ್ ದೇಶದಲ್ಲಿ ಕೃತಕ ಬುದ್ಧಿಮತ್ತೆ (AI) ಚಾಲಿತ 'ಸಹಾಯಕ' (Assistant) ಅನ್ನು ಲಾಂಚ್ ಮಾಡಲಾಗಿದೆ. ಈ ಟ್ರೂಕಾಲರ್ ಅಸಿಸ್ಟೆಂಟ್ ಎಂಬುದು ಯಂತ್ರ ಕಲಿಕೆ ಮತ್ತು ಕ್ಲೌಡ್ ಟೆಲಿಫೋನಿ ರಚಿಸಲು ಒಂದು ನಾವೀನ್ಯತೆಯಾಗಿದ್ದು, ಈ ಮೂಲಕ ಬಳಕೆದಾರರು ವಿಭಿನ್ನವಾದ ಅನುಭವವನ್ನು ಪಡೆದುಕೊಳ್ಳಬಹುದು. ಹಾಗಿದ್ರೆ, ಏನಿದು ಅಸಿಸ್ಟೆಂಟ್?, ಇದರಿಂದ ಯಾರಿಗೆಲ್ಲಾ ಪ್ರಯೋಜನ? ಎಂಬ ಮಾಹಿತಿ ಇಲ್ಲಿದೆ ನೋಡಿ.

ಟ್ರೂಕಾಲರ್ ಅಸಿಸ್ಟೆಂಟ್: ಇದೀಗ ಭಾರತದಲ್ಲಿ ಟ್ರೂಕಾಲರ್ ಎಐ ಆಧಾರಿತ ಅಸಿಸ್ಟೆಂಟ್ ಅನ್ನು ಲಭ್ಯವಾಗಿಸಿದೆ. ಇದು ಆಂಡ್ರಾಯ್ಡ್‌ನಲ್ಲಿ ಮಾತ್ರ ಲಭ್ಯವಿದ್ದು, ಈ ಫೀಚರ್ಸ್ ಗ್ರಾಹಕೀಯಗೊಳಿಸಬಹುದಾದ, ಸಂವಾದಾತ್ಮಕ, ಡಿಜಿಟಲ್ ಸ್ವಾಗತಕಾರನಾಗಿ ಕೆಲಸ ಮಾಡಲಿದ್ದು, ಬಳಕೆದಾರರ ಕರೆಗಳಿಗೆ ಉತ್ತರಿಸುತ್ತದೆ ಮತ್ತು ಅನಗತ್ಯ ಕರೆ ಮಾಡುವವರನ್ನು ತಪ್ಪಿಸಲು ಅವರಿಗೆ ತನ್ನದೇ ಆದ ರೀತಿಯಲ್ಲಿ ಕೆಲಸ ಮಾಡುತ್ತದೆ.
ಅಷ್ಟು ಮಾತ್ರವಲ್ಲದೆ ತ್ವರಿತವಾಗಿ ಪ್ರತಿಕ್ರಿಯಿಸುವ ಹಾಗೂ ಹೆಚ್ಚಿನ ನಿಖರತೆಯೊಂದಿಗೆ ಬಳಕೆದಾರರ ಕಾಲರ್ ಅನ್ನು ಅರ್ಥಮಾಡಿಕೊಳ್ಳುವ ಕೆಲಸ ಮಾಡುತ್ತದೆ. ಇದರೊಂದಿಗೆ ಕರೆ ಮಾಡಿದವರು ಏನು ಮಾತನಾಡುತ್ತಿದ್ದಾರೆ ಎಂಬುದರ ನೇರ ಪ್ರತಿಲೇಖನವನ್ನು ನೀವು ಈ ಸೌಲಭ್ಯದ ಮೂಲಕ ವೀಕ್ಷಣೆ ಮಾಡಬಹುದು. ಆದ್ದರಿಂದ ಅವರು ಯಾರು ಮತ್ತು ಅವರು ಯಾಕೆ ಕರೆ ಮಾಡುತ್ತಿದ್ದಾರೆಂದು ನೀವು ಅರ್ಥೈಸಿಕೊಳ್ಳಬಹುದಾಗಿದೆ.
ಇಲ್ಲಿಯವರೆಗೆ ನಿಮ್ಮ ಫೋನ್‌ಗೆ ಯಾರು ಕರೆ ಮಾಡುತ್ತಿದ್ದಾರೆ ಎಂಬುದನ್ನು ಟ್ರೂಕಾಲರ್ ತೋರಿಸುತ್ತಿತ್ತು. ಆದರೆ, ಈಗ ನೀವು ನಿಮ್ಮ ಪರವಾಗಿ ಕರೆ ಮಾಡಿದವರ ಜೊತೆಗೆ ಟ್ರೂಕಾಲರ್ ಸಹಾಯಕ ಸಂವಾದ ನಡೆಸುತ್ತದೆ ಎಂದು ಟ್ರೂಕಾಲರ್‌ನ ಎಂಡಿ ಇಂಡಿಯಾ ರಿಶಿತ್ ಜುಂಜುನ್‌ವಾಲಾ ಮಾಹಿತಿ ನೀಡಿದ್ದಾರೆ. ಜೊತೆಗೆ ಸ್ಪ್ಯಾಮ್ ಮತ್ತು ವಂಚನೆ ಕರೆ ಮಾಡುವವರನ್ನು ಸಂಪೂರ್ಣವಾಗಿ ತಪ್ಪಿಸಲು ಜನರಿಗೆ ಸಹಾಯ ಮಾಡುವಲ್ಲಿ ಇದು ನಮಗೆ ಬಹಳ ರೋಮಾಂಚನಕಾರಿ ಹಂತವಾಗಿದೆ ಎಂದು ಉಲ್ಲೇಖಿಸಿದ್ದಾರೆ.
ನಾವು ಇದನ್ನು ಮೊದಲು ಕೆಲವು ಮಾರುಕಟ್ಟೆಗಳಿಗೆ ಮಾತ್ರ ಹೊರತಂದಿದ್ದೇವೆ ಮತ್ತು ಭಾರತದಲ್ಲಿನ ಟ್ರೂಕಾಲರ್ ಅಭಿಮಾನಿಗಳಿಗೆ ಇದನ್ನು ನೀಡಲು ನಾವು ನಿಜವಾಗಿಯೂ ಸಂತೋಷಪಡುತ್ತೇವೆ. ಟ್ರೂಕಾಲರ್ ಅಸಿಸ್ಟೆಂಟ್ ಉಚಿತ 14 ದಿನದ ಪ್ರಯೋಗದಲ್ಲಿ ಬಳಕೆದಾರರಿಗೆ ಲಭ್ಯ ಇದ್ದು, ಇದಾದ ನಂತರದಲ್ಲಿ ಚಂದಾದಾರರಾಗಬೇಕಿದೆ. ಇದಕ್ಕಾಗಿ ತಿಂಗಳಿಗೆ 149 ರೂ.ಗಳ ಆರಂಭಿಕ ಬೆಲೆಯಿಂದ ಪ್ಲ್ಯಾನ್ ಆರಂಭ ಆಗುತ್ತವೆ ಎಂದು ಮಾಹಿತಿ ನೀಡಿದ್ದಾರೆ.
ಈ ಸೇವೆಯನ್ನು ಆರಂಭದಲ್ಲಿ ಯುಎಸ್ ಮತ್ತು ಆಸ್ಟ್ರೇಲಿಯಾದಲ್ಲಿ ಪ್ರಾರಂಭಿಸಲಾಗಿತ್ತು. ಆದರೆ, ಈಗ ಭಾರತಲ್ಲೂ ಈ ಸೌಲಭ್ಯ ಲಭ್ಯ ಇದ್ದು, ಹೊಸ ಅಸಿಸ್ಟೆಂಟ್ ಫೀಚರ್ಸ್ ಆರಂಭದಲ್ಲಿ ಇಂಗ್ಲಿಷ್, ಹಿಂದಿ ಭಾಷೆಯನ್ನು ಬೆಂಬಲಿಸಲಿದೆ. ಅದರಲ್ಲೂ ಬಳಕೆದಾರರು ವೃತ್ತಿಪರ, ಸ್ನೇಹಪರ ಅಥವಾ ವಿನಯಶೀಲತೆಯಂತಹ ವಿಭಿನ್ನ ಶೈಲಿಗಳಲ್ಲಿ ವಿಭಿನ್ನವಾದ ಉಚ್ಚಾರಣೆಗಳು ಮತ್ತು ಧ್ವನಿಯೊಂದಿಗೆ ವಿಭಿನ್ನ ವೈಯಕ್ತಿಕಗೊಳಿಸಿದ ಅಸಿಸ್ಟೆಂಟ್ ಅನ್ನು ಆಯ್ಕೆ ಮಾಡಬಹುದು ಎಂದು ಕಂಪನಿ ಹೇಳಿದೆ.
ಆರೋಪಿಗಳ ಬಗ್ಗೆ ಭಯಾನಕ ಮಾಹಿತಿ ನೀಡಿದ ಟ್ರೂಕಾಲರ್: ಈ ನಡುವೆ ಪುಣೆಯಲ್ಲಿ ದ್ವಿಚಕ್ರ ವಾಹನ ಕಳ್ಳರನ್ನು ಕೊತ್ರೂಡ್ ಪೊಲೀಸರು ಬಂಧಿಸಿದ್ದು, ಈ ನಡುವೆ ಟ್ರೂಕಾಲರ್ ಮಹತ್ವದ ಪಾತ್ರ ವಹಿಸಿದೆ. ಆರೋಪಿಗಳು ಆರಂಭದಲ್ಲಿ ಹಿಂದೂ ಶೈಲಿಯ ಹೆಸರುಗಳನ್ನು ಹೇಳಿದ್ದಾರೆ. ಆದರೆ, ಅವರ ಹೆಸರಲ್ಲಿದ್ದ ಫೋನ್ ಸಂಖ್ಯೆಯನ್ನು ಟ್ರೂ ಕಾಲರ್‌ನಲ್ಲಿ ಡಯಲ್ ಮಾಡಿ ನೋಡಿದಾಗ ಬೇರೆ ಧರ್ಮದ ಹೆಸರು ಕಾಣಿಸಿಕೊಂಡಿದೆ.

ಇದರಿಂದ ಅನುಮಾನಗೊಂಡ ಪೊಲೀಸರು ಹೆಚ್ಚಿನ ತನಿಖೆ ನಡೆಸಿದಾಗ ಸಂಬಂಧಪಟ್ಟ ಆರೋಪಿಗಳು ಎನ್‌ಐಎಗೆ ಬೇಕಾಗಿರುವ ಭಯೋತ್ಪಾದಕರು ಎಂದು ತಿಳಿದುಬಂದಿದೆ. ಜೊತೆಗೆ ಇವರ ಸುಳಿವು ನೀಡಿದ್ದಲ್ಲಿ ಐದು ಲಕ್ಷ ರೂ.ಗಳನ್ನು ನೀಡುವುದಾಗಿ ಎನ್‌ಐಎ ಘೋಷಣೆ ಮಾಡಿತ್ತಂತೆ. ಆದರೆ, ಟ್ರೂಕಾಲರ್ ನೀಡಿದ ಮಾಹಿತಿಯಿಂದಾಗಿ ದೊಡ್ಡ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಪೊಲೀಸರೇ ಬೆಚ್ಚಿಬಿದ್ದಿದ್ದಾರೆ.


Click it and Unblock the Notifications








