ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ವೇ ನಲ್ಲಿ ಎಐ ಕ್ಯಾಮೆರಾ... ಚಾಲಕರೇ ಎಚ್ಚರ!,ಇಲ್ಲವಾದ್ರೆ...
ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ವೇ (Bangalore-Mysore Expressway) ಹೆಚ್ಚಾಗಿ ಅಪಘಾತಗಳಿಂದಲೇ ಸುದ್ದಿ ಆಗುತ್ತಿದೆ. ಈ ನಡುವೆ ಸರ್ಕಾರ ಹಾಗು ಸಂಬಂಧಿಸಿದ ಅಧಿಕಾರಿಗಳು ಇಲ್ಲಿ ಹೇಗಾದರೂ ಅಪಘಾತಗಳ (Accidents) ಸಂಖ್ಯೆಯನ್ನು ಕಡಿಮೆ ಮಾಡಲೇಬೇಕು ಎಂದು ಪಣ ತೊಟ್ಟಿದ್ದಾರೆ. ಈ ಕಾರಣಕ್ಕೆ ಹೊಸ ಹೊಸ ತಂತ್ರಜ್ಞಾನಗಳನ್ನೂ ಸಹ ಅಳವಡಿಸಿಕೊಳ್ಳಲಾಗುತ್ತಿದೆ.
ಹೌದು, ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ವೇ ನಲ್ಲಿ ಈಗಾಗಲೇ ಸಾಕಷ್ಟು ಅಮಾಯಕರ ಜೀವಗಳು ಹಾರಿಹೋಗಿವೆ. ವಾರದಲ್ಲಿ ಒಂದಲ್ಲಾ ಒಂದು ಪ್ರಕರಣಗಳು ವರದಿ ಆಗುತ್ತಲೇ ಇವೆ. ಈ ಎಲ್ಲಾ ಕಾರಣಕ್ಕೆ ಪೊಲೀಸರು ಅಗತ್ಯ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದು, ಇದರ ಭಾಗವಾಗಿಯೇ ಈಗ ಎಎನ್‌ಪಿಆರ್ ಕ್ಯಾಮರಾ ಅಳವಡಿಕೆ ಮಾಡಲಾಗುತ್ತಿದೆ. ಹಾಗಿದ್ರೆ, ಏನಿದು ವಿಶೇಷ ಕ್ಯಾಮರಾ? ಇದರಿಂದ ಅಪಘಾತ ಪ್ರಕರಣಗಳು ಹೇಗೆ ಕಡಿಮೆ ಆಗುತ್ತವೆ ಎಂಬ ಮಾಹಿತಿ ಇಲ್ಲಿದೆ ನೋಡಿ.

ಎಕ್ಸ್ಪ್ರೆಸ್ ವೇ ಮೇಲೆ ಪೊಲೀಸರ ಹದ್ದಿನ ಕಣ್ಣು: ಇನ್ನು ಈ ರಸ್ತೆಯಲ್ಲಿ ಸುಧಾರಿತ ಫೀಚರ್ಸ್ ಇರುವ ಕ್ಯಾಮೆರಾಗಳನ್ನು(Camera) ಅಳವಡಿಕೆ ಮಾಡಲಾಗುತ್ತಿದೆ. ಈ ಮೂಲಕ ಟ್ರಾಫಿಕ್ ಪೊಲೀಸರು ವಾಹನಗಳ ವೇಗದ ಮೇಲೆ ಸದಾ ಕಣ್ಣಿಟ್ಟಿರುತ್ತಾರೆ. ಈ ನಡುವೆ ಸಂಚಾರ ನಿಯಮ ಕೊಂಚ ಉಲ್ಲಂಘನೆಯಾದರೂ ಸಹ ಅವರಿಗೆ ದಂಡ ಹಾಕಲಾಗುತ್ತದೆ. ಅಂದರೆ ಈ ರಸ್ತೆಯಲ್ಲಿ ಸಂಚಾರ ಮಾಡುವಾಗ ಅತಿವೇಗದ ಚಾಲನೆ, ಒನ್ ವೇ ವಾಹನ ಚಾಲನೆ ಸೇರಿ ಇತರೆ ನಿಯಮಗಳನ್ನು ಉಲ್ಲಂಘನೆ ಮಾಡಿದರೆ ತಕ್ಷಣವೇ ಕ್ರಮ ತೆಗೆದುಕೊಳ್ಳಲಾಗುತ್ತದೆ.
ಈ ಸಂಬಂಧ ರಾಜ್ಯ ರಸ್ತೆ ಸುರಕ್ಷತಾ ಎಡಿಜಿಪಿ ಅಲೋಕ್ ಕುಮಾರ್(ADGP Alok Kumar) ಆದೇಶದ ಮೇರೆಗೆ ಈ ಕ್ಯಾಮರಾ ಅಳವಡಿಕೆ ಮಾಡಲಾಗಿದೆ. ಈ ಕ್ಯಾಮರಾ ಅಳವಡಿಕೆ ಬಗ್ಗೆ ಸ್ವತಃ ಎಡಿಜಿಪಿ ಅಲೋಕ್ ಕುಮಾರ್ ಅವರೇ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ. ಇದರೊಂದಿಗೆ ಬಿಡದಿ ಬಳಿ ಪ್ರಾಯೋಗಿಕವಾಗಿ ಎಐ ಕ್ಯಾಮೆರಾ(AI camera) ಅಳವಡಿಕೆ ಮಾಡಲಾಗಿದ್ದು, ಈ ಕ್ಯಾಮೆರಾ ಯಾವುದೇ ವಾಹನಗಳ ಸಂಚಾರ ಉಲ್ಲಂಘನೆಯ ಸವಿವರವನ್ನು ತಕ್ಷಣವೇ ನೀಡುತ್ತದೆ.
ಈ ಮಾಹಿತಿಯನ್ನು ವೀಕ್ಷಣೆ ಮಾಡಲು ಡಿಜಿಟಲ್ ಡಿಸ್‌ಪ್ಲೇ ಆಯ್ಕೆ ನೀಡಲಾಗಿದ್ದು, ಇದರಲ್ಲಿ ವಾಹನದ ನೋಂದಣಿ ಸಂಖ್ಯೆ(Vehicle registration number), ಅದು ಎಷ್ಟು ವೇಗವಾಗಿ ಸಂಚಾರ ಮಾಡುತ್ತಿದೆ ಎಂಬಿತ್ಯಾದಿ ಮಾಹಿತಿಯನ್ನು ಪ್ರದರ್ಶನ ಮಾಡುತ್ತದೆ. ಉಳಿದಂತೆ ಮತ್ತಷ್ಟು ಕ್ಯಾಮೆರಾಗಳನ್ನು ಆಯಕಟ್ಟಿನ ಪ್ರದೇಶಗಳಲ್ಲಿ ಅಳವಡಿಸಲಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಏನಿದು ಎಐ ಕ್ಯಾಮೆರಾ?: ಸಂಚಾರ ದಟ್ಟಣೆಯಲ್ಲಿ ಈಗ ಎಐ ಕ್ಯಾಮೆರಾ ಅಥವಾ ಸ್ವಯಂಚಾಲಿತ ನಂಬರ್ ಪ್ಲೇಟ್ ರೆಕಗ್ನಿಷನ್ (ಎಎನ್‌ಪಿಆರ್) ಪ್ರಮುಖ ಪಾತ್ರ ವಹಿಸುತ್ತಿದೆ. ಸಂಚಾರ ನಿರ್ವಹಣಾ ವ್ಯವಸ್ಥೆಯನ್ನು ಸುಧಾರಿಸುವುದು ಇದರ ಪ್ರಮುಖ ಕೆಲಸವಾಗಿದೆ. ಹಾಗೆಯೇ ಈ ಕ್ಯಾಮೆರಾ ಆಪ್ಟಿಕಲ್ ಕ್ಯಾರೆಕ್ಟರ್ ರೆಕಗ್ನಿಷನ್ ತಂತ್ರಜ್ಞಾನದ ಮೂಲಕ ವಾಹನಗಳ ನಂಬರ್ ಪ್ಲೇಟ್‌ಗಳನ್ನು ರೀಡ್ ಮಾಡುತ್ತದೆ.
ಅಷ್ಟು ಮಾತ್ರವಲ್ಲದೆ ಈ ಕ್ಯಾಮೆರಾ ರಾತ್ರಿ ವೇಳೆಯಲ್ಲಿಯೂ ಸಹ ಸ್ವಷ್ಟವಾಗಿ ನಂಬರ್‌ಗಳನ್ನು ಸೆರೆಹಿಡಿಯುವ ಸಾಮರ್ಥ್ಯ ಹೊಂದಿದೆ. ಇದಕ್ಕಾಗಿ ಇದು ಡಿಜಿಟಲ್ ಇಮೇಜ್ ಕ್ಯಾಪ್ಚರ್ ಯುನಿಟ್, ಇನ್ಫ್ರಾರೆಡ್ ಲೈಟಿಂಗ್, ಪ್ರೊಸೆಸಿಂಗ್ ಯೂನಿಟ್ ಮತ್ತು ವಿಭಿನ್ನ ಅಲ್ಗಾರಿದಮ್‌ಗಳ ಆಧಾರದ ಮೇಲೆ ಕೆಲಸ ಮಾಡುತ್ತದೆ.ಉಳಿದಂತೆ ಪೊಲೀಸ್ ತನಿಖೆಗೆ ಪ್ರಮುಖವಾಗಿ ಸಹಕರಿಸುತ್ತದೆ.
ಅಂದರೆ ಕದ್ದ ವಾಹನಗಳನ್ನು ಸುಲಭವಾಗಿ ಈ ಕ್ಯಾಮೆರಾ ಬಳಕೆ ಮಾಡಿಕೊಂಡು ಪತ್ತೆ ಹಚ್ಚಬಹುದು. ಅಷ್ಟು ಮಾತ್ರವಲ್ಲದೆ ಕದಿಯುವಾಗ ಅಪರಾಧಿಗಳನ್ನು ರೆಡ್ ಹ್ಯಾಂಡ್ ಆಗಿ ಹಿಡಿಯಲು ಇದು ಸಹಾಯ ಮಾಡುತ್ತದೆ. ಇದರ ಜೊತೆಗೆ, ಅಕ್ರಮ, ವಿಮೆ ಮಾಡದ ವಾಹನಗಳನ್ನು ಮತ್ತು ವಾಹನ ತೆರಿಗೆಯನ್ನು ಪಾವತಿಸದಿರುವ ಅಪರಾಧಿಗಳನ್ನು ಗುರುತಿಸಲು ಮತ್ತು ಕಾನೂನು ಕ್ರಮ ಜರುಗಿಸಲು ಇದು ಪೊಲೀಸರಿಗೆ ಸಹಾಯ ಮಾಡುತ್ತದೆ.
ಎಕ್ಸ್ ಪ್ರೆಸ್-ವೇಯಲ್ಲಿ ವೈಜ್ಞಾನಿಕ ಪ್ಲ್ಯಾನ್‌ಗಳ ಸಮಸ್ಯೆಗಳಿವೆ ಎಂದು ಗೃಹ ಸಚಿವ ಜಿ ಪರಮೇಶ್ವರ ಅವರು ಹೇಳಿಕೆ ನೀಡಿದ್ದ ಬೆನ್ನಲ್ಲೇ ಈ ಎಲ್ಲಾ ಬೆಳವಣಿಗೆ ನಡೆಯುತ್ತಿವೆ. ಅದರಂತೆ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಲೋಕ್ ಕುಮಾರ್ ನೇತೃತ್ವದಲ್ಲಿ ಪೊಲೀಸ್ ಇಲಾಖೆ ಜೂನ್‌ನಲ್ಲಿ ಸಮಿತಿ ರಚಿಸಿದ್ದು, ಪರಿಶೀಲನೆ ನಡೆಸಲಾಗಿದೆ. ಇನ್ನು ಜನವರಿಯಿಂದ ಸಂಭವಿಸಿದ 296 ಅಪಘಾತಗಳಲ್ಲಿ 132 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.


Click it and Unblock the Notifications








