ಎಚ್ಚರ...!ಯೂಟ್ಯೂಬ್‌ನಲ್ಲಿ ಈ ವಿಡಿಯೋಗಳನ್ನು ನೋಡಿದ್ರೆ ತೊಂದರೆಗೆ ಸಿಲುಕುತ್ತೀರಾ!
ಅತ್ಯಂತ ಹೆಚ್ಚು ಬಳಕೆ ಮಾಡುವ ವಿಡಿಯೋ ಸ್ಟ್ರೀಮಿಂಗ್ ಆಪ್‌ಗಳಲ್ಲಿ ಯೂಟ್ಯೂಬ್ ಪ್ರಮುಖವಾಗಿದ್ದು, ಯಾವುದೇ ಮಾಹಿತಿ ಹಾಗೂ ಮನರಂಜನೆಗಾಗಿ ಮೊದಲು ಯೂಟ್ಯೂಬ್ ಅನ್ನು ಓಪನ್ ಮಾಡಲಾಗುತ್ತದೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಹ್ಯಾಕರ್ಸ್‌ಗಳು ವಿಡಿಯೋ ಮೂಲಕ ನಿಮ್ಮನ್ನು ಎಂತಹ ಸಂಕಷ್ಟಕ್ಕೆ ಸಿಲುಕಿಸುತ್ತಿದ್ದಾರೆ ಗೊತ್ತಾ!?.
ಹೌದು, ಸಾಮಾನ್ಯವಾಗಿ ಯಾವುದಾದರೂ ಲಿಂಕ್‌ಗಳನ್ನು ಎಸ್‌ಎಮ್‌ಎಸ್ ಮಾಡುವ ಮೂಲಕ ಅಥವಾ ಯಾವುದಾದರೂ ಆಪ್ ಅನ್ನು ಇನ್‌ಸ್ಟಾಲ್ ಮಾಡಿಕೊಳ್ಳಲು ಒತ್ತಾಯ ಮಾಡುವ ಮೂಲಕ ಹ್ಯಾಕರ್ಸ್‌ಗಳು ಮೊಬೈಲ್ ಬಳಕೆದಾರರ ಡೇಟಾ ಕದಿಯಲು ಮುಂದಾಗುತ್ತಿದ್ದರು. ಆದರೆ, ಹೊಸ ವರದಿಯ ಪ್ರಕಾರ ಈ ಹ್ಯಾಕರ್ಸ್ ನೀವು ನಿತ್ಯ ವೀಕ್ಷಣೆ ಮಾಡುವ ಯೂಟ್ಯೂಬ್ ವಿಡಿಯೋ ಮೂಲಕವೇ ಬೇಕಾದದ್ದನ್ನು ಸಾಧಿಸುತ್ತಿದ್ದಾರೆ. ಹಾಗಿದ್ರೆ, ಇದರಿಂದ ಎಚ್ಚರಿಕೆ ವಹಿಸುವುದು ಹೇಗೆ? , ಹ್ಯಾಕರ್ಸ್‌ಗಳ ಕುತಂತ್ರ ಏನು ಎಂಬ ಮಾಹಿತಿಯನ್ನು ತಿಳಿದುಕೊಳ್ಳಿ.

ಎಐ ಆಧಾರಿತ ವಿಡಿಯೋ ಮೂಲಕ ಗಾಳ ಹಾಕುತ್ತಿರುವ ಹ್ಯಾಕರ್ಸ್‌ಗಳು ಅಮಾಯಕ ಜನರ ಖಾಸಗಿ ಬದುಕಿನ ಜೊತೆ ಚೆಲ್ಲಾಟ ಆಡಲು ಮುಂದಾಗಿದ್ದಾರೆ ಎನ್ನಲಾಗಿದೆ. ಅಂದರೆ, ಖಾಸಗಿ ಮಾಹಿತಿ ಕದಿಯುವ ವಿಡಾರ್, ರೆಡ್‌ಲೈನ್ ಹಾಗೂ ರಕೂನ್‌ನಂತಹ ಮಾಲ್‌ವೇರ್‌ಗಳಿಗೆ ಈ ವಿಡಿಯೋಗಳು ಲಿಂಕ್ ಆಗಿದ್ದು, ಈ ಪ್ರಕ್ರಿಯೆ ನವೆಂಬರ್ 2022 ರಿಂದ, ತಿಂಗಳಿನಿಂದ ತಿಂಗಳಿಗೆ 200-300% ಏರಿಕೆಯಾಗಿದೆ ಎಂದು ಕ್ಲೌಡ್‌ಸೆಕ್ ಎಚ್ಚರಿಕೆ ನೀಡಿದೆ.
ಈ ಹ್ಯಾಕರ್ಸ್‌ಗಳು ಯೂಟ್ಯೂಬ್ ಬಳಕೆದಾರರ ಪಾಸ್‌ವರ್ಡ್‌ಗಳು, ಕ್ರೆಡಿಟ್ ಕಾರ್ಡ್ ಮಾಹಿತಿ, ಬ್ಯಾಂಕ್ ಖಾತೆ ಸಂಖ್ಯೆಗಳು ಮತ್ತು ಇನ್ನಿತರೆ ಗೌಪ್ಯ ಡೇಟಾವನ್ನು ಈ ಮೂಲಕ ಸುಲಭವಾಗಿ ಕದಿಯಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ. ಈ ವೇಳೆ ಫೋಟೋಶಾಪ್, ಪ್ರೀಮಿಯರ್ ಪ್ರೊ, ಆಟೋಡೆಸ್ಕ್ 3ds ಮ್ಯಾಕ್ಸ್ ಸೇರಿದಂತೆ ಇನ್ನಿತರೆ ಕ್ರ್ಯಾಕ್ಡ್ ವರ್ಸನ್ ಅನ್ನು ಡೌನ್‌ಲೋಡ್ ಮಾಡುವುದು ಹೇಗೆ ಎಂದು ಹೇಳಿಕೊಡುವ ವಿಡಿಯೋಗಳು ಇವಾಗಿರಲಿವೆ.
ಇಲ್ಲಿ ಯೂಟ್ಯೂಬ್ ಬಳಕೆದಾರರು ಸಾಮಾನ್ಯವಾಗಿ ಗಮನಿಸಬೇಕಾದ ವಿಷಯ ಏನೆಂದರೆ ಈ ಎಲ್ಲಾ ಸಾಫ್ಟ್‌ವೇರ್‌ಗಳನ್ನು ಪಾವತಿ ಮಾಡಿಯೇ ಬಳಕೆ ಮಾಡಬೇಕು. ಆದರೆ ಇವು ಉಚಿತವಾಗಿ ಲಭ್ಯವಾಗುತ್ತದೆ ಎಂದು ಹೇಳುವ ಮೂಲಕ ವೀಕ್ಷಕರನ್ನು ಮರಳು ಮಾಡಿ ಅದನ್ನು ಇನ್‌ಸ್ಟಾಲ್ ಮಾಡಿಕೊಳ್ಳುವಂತೆ ಸೂಚಿಸುತ್ತಾರೆ. ಅವರು ನೀಡಿರುವ ಲಿಂಕ್ ಬಳಕೆ ಮಾಡಿಕೊಂಡು ಇನ್‌ಸ್ಟಾಲ್ ಮಾಡಿದ ನಂತರ ಕಂಪ್ಯೂಟರ್ ಅಥವಾ ಮೊಬೈಲ್‌ನಲ್ಲಿ ಇರುವ ನಿಮ್ಮ ಎಲ್ಲಾ ಮಾಹಿತಿಗಳು ಅವರ ಕೈ ಸೇರುತ್ತವೆ.

ಹಾಗೆಯೇ ಅವರು ಕಮಾಂಡ್ ಮತ್ತು ಕಂಟ್ರೋಲ್ ಸರ್ವರ್‌ಗೆ ಅವುಗಳನ್ನು ಅಪ್‌ಲೋಡ್ ಮಾಡಿಕೊಳ್ಳಲಿದ್ದು, ಬೇಕಾದಾಗ ಅವುಗಳನ್ನ ಬಳಕೆ ಮಾಡಿಕೊಂಡು ಅವರು ತೋಡಿದ ಖೆಡ್ಡಾಗೆ ನಿಮ್ಮನ್ನು ಬೀಳಿಸುತ್ತಾರೆ. ಹಾಗಿದ್ರೆ, ಈ ದೊಡ್ಡ ವಂಚನೆಯಿಂದ ಪಾರಾಗುವುದು ಹೇಗೆ ಎನ್ನುವುದನ್ನು ನಾವಿಲ್ಲಿ ತಿಳಿಸಿಕೊಟ್ಟಿದ್ದೇವೆ ಗಮನಿಸಿ.
- * ಸಾಮಾನ್ಯವಾಗಿ ಯಾರೇ ಆದರೂ ಉಚಿತವಾಗಿ ಲಭ್ಯ ಎಂದಾಗ ಸಾಮಾನ್ಯವಾಗಿ ಬಿಟ್ಟುಕೊಡುವುದಿಲ್ಲ. ಆದರೆ. ಈ ಉಚಿತವೇ ನಿಮಗೆ ಉರುಳಾಗಬಾರದು ಎಂದಾದರೆ ಪಾವತಿ ಮಾಡಿ ಬಳಕೆ ಮಾಡುವ ಸಾಫ್ಟ್‌ವೇರ್ ಅನ್ನು ಇನ್‌ಸ್ಟಾಲ್ ಮಾಡಿಕೊಳ್ಳಿ.ಉಚಿತವಾಗಿ ಸಿಕ್ಕಿತು ಎಂದು ಇನ್‌ಸ್ಟಾಲ್ ಮಾಡಲು ಮುಂದಾದರೆ ನೀವು ಇನ್‌ಸ್ಟಾಲ್ ಮಾಡುವುದು ಸಾಫ್ಟ್‌ವೇರ್ ಅಲ್ಲ, ಬದಲಿಗೆ ಮಾಲ್‌ವೇರ್ ಎಂಬುದು ನಿಮ್ಮ ಗಮನಕ್ಕಿರಲಿ.
- * ನೀವು ಯೂಟ್ಯೂಬ್‌ನಲ್ಲಿ ವಿಡಿಯೋ ವೀಕ್ಷಣೆ ಮಾಡುವಾಗ, ಕೆಳಗೆ ನೀಡಲಾದ ಲಿಂಕ್ ಕ್ಲಿಕ್ ಮಾಡುವ ಮೂಲಕ ಇನ್‌ಸ್ಟಾಲ್ ಮಾಡಿಕೊಳ್ಳಿ ಎಂದು ಹೇಳಿದರೆ ಯಾವುದೇ ಕಾರಣಕ್ಕೂ ಅದನ್ನು ಪರಿಶೀಲನೆ ಮಾಡದೆ ಡೌನ್‌ಲೋಡ್ ಮಾಡಲು ಮುಂದಾಗಬೇಡಿ. ಆ ಲಿಂಕ್ ಕ್ಲಿಕ್ ಮಾಡಿದರೂ ಸಹ ಮಾಲ್‌ವೇರ್ ನಿಮ್ಮ ಸಿಸ್ಟಂಗೆ ಬಂದು ಕೂರುತ್ತವೆ.
- * ಈಗಂತೂ ಗೂಗಲ್ ಕ್ರೋಮ್‌ನಲ್ಲಿ ಯಾವುದೇ ಸಮಸ್ಯೆ ಉಂಟು ಮಾಡುವ ಲಿಂಕ್ ಅನ್ನು ಹಾಕಿದರೆ ಅದು ತಕ್ಷಣವೇ ನಿಮಗೆ ಮಾಹಿತಿ ನೀಡುತ್ತದೆ. ಹಾಗೆಯೆ ನೀಡಲಾದ URL ನಲ್ಲಿ HTTP ಹಾಗೂ .com ಇದೆಯೇ ಎಂದು ಖಚಿತಪಡಿಸಿಕೊಳ್ಳಿ. ಇದು ಇಲ್ಲ ಎಂದಾದರೆ ತಕ್ಷಣವೇ ನಕಲಿ ಎಂದು ಅರಿತುಕೊಳ್ಳಿ.
- * ಯಾವುದೇ ಫೋನ್, ಲ್ಯಾಪ್‌ಟಾಪ್ ಹಾಗೂ ಡೆಸ್ಕ್‌ಟಾಪ್ ಅನ್ನು ಕಾಲಕಾಲಕ್ಕೆ ಅಪ್‌ಡೇಟ್ ಮಾಡುವುದನ್ನು ತಪ್ಪಿಸಬೇಡಿ. ಇದರಿಂದ ನಿಮ್ಮ ಡಿವೈಸ್‌ಗಳು ಭದ್ರತಾ ವಿಚಾರದಲ್ಲಿ ಇನ್ನಷ್ಟು ಭದ್ರತೆಯನ್ನು ಹೆಚ್ಚಿಗೆ ಮಾಡಿಕೊಳ್ಳಲಿದ್ದು, ಈ ಮೂಲಕ ಇಂತಹ ಮಾಲ್‌ವೇರ್‌ಗಳಿಂದ ನಿಮ್ಮನ್ನು ರಕ್ಷಿಸುತ್ತವೆ.

- * ಅದಾಗ್ಯೂ ನೀವು ಮಾಲ್‌ವೇರ್ ಇರುವ ಲಿಂಕ್ ಅನ್ನು ಡೌನ್‌ಲೋಡ್ ಮಾಡಿದ್ದೀರಾ ಎಂದಾದರೆ ಮೊದಲು ನಿಮ್ಮ ಡಿವೈಸ್‌ನಲ್ಲಿನ ಇಂಟರ್ನೆಟ್ ಕನೆಕ್ಟ್ ಅನ್ನು ನಿಸ್ಕ್ರಿಯಗೊಳಿಸಿ, ಹಾಗೆಯೇ ಸಾಧ್ಯವಾದರೆ ನಿಮ್ಮ ಡಿವೈಸ್ ಅನ್ನು ಫಾರ್ಮ್ಯಾಟ್ ಮಾಡಿ. ಅದಾಗ್ಯೂ ಈ ಲಿಂಕ್‌ನಿಂದ ಏನಾದರೂ ತೊಂದರೆ ನಿಮ್ಮನ್ನು ಕಾಡುತ್ತಿದೆ ಎಂದಾದರೆ ತಂತ್ರಜ್ಞರ ಬಳಿಗೆ ನಿಮ್ಮ ಡಿವೈಸ್ ತೆಗೆದುಕೊಂಡು ಹೋಗಿ ಪರಿಶೀಲಿಸಿಕೊಳ್ಳಿ.


Click it and Unblock the Notifications








