Airtel: ಏರ್‌ಟೆಲ್ 5G ಪ್ಲಸ್ ಮೈ ವೈ-ಫೈ ಪೋರ್ಟಬಲ್ ರೂಟರ್ ಲಾಂಚ್: ಏನಿದು? ಇದರ ಉಪಯೋಗವೇನು?
ಏರ್‌ಟೆಲ್ (Airtel) ತನ್ನದೇ ಆದ ರೀತಿಯಲ್ಲಿ ಭಿನ್ನ ಸೇವೆಗಳನ್ನು ನೀಡುವ ಮೂಲಕ ಹೊಸ ಹೊಸ ಗ್ರಾಹಕರನ್ನು ತನ್ನತ್ತ ಸೆಳೆಯುತ್ತಿದೆ. ಈ ನಡುವೆ 5G ಪ್ಲಸ್ ಮೈ-ವೈ-ಫೈ ಪೋರ್ಟಬಲ್ ರೂಟರ್ ಅನ್ನು ಪರಿಚಯಿಸಿದ್ದು, ಈ ಮೂಲಕ ಬಳಕೆದಾರರಿಗೆ ಯಾವುದೇ ಮೂಲೆಯಲ್ಲಿದ್ದರೂ ಸಹ 5G ಸೌಲಭ್ಯ ಪಡೆದುಕೊಳ್ಳಬಹುದಾಗಿದೆ.
ಹೌದು, ಏರ್‌ಟೆಲ್ ಭಾರತದಲ್ಲಿ ಪ್ರಮುಖ 5G ಟೆಲಿಕಾಂ ಆಪರೇಟರ್‌ಗಳಲ್ಲಿ ಒಂದಾಗಿದೆ. ಇದು 5G ನೆಟ್‌ವರ್ಕ್ ಅನ್ನು ಮಾತ್ರವಲ್ಲದೆ ವಿವಿಧ ಹಾರ್ಡ್‌ವೇರ್ ಡಿವೈಸ್‌ಗಳನ್ನು ಲಾಂಚ್ ಮಾಡುವ ಮೂಲಕ ಬಳಕೆದಾರರಿಗೆ ಹೆಚ್ಚಿನ ವೇಗದ ಇಂಟರ್ನೆಟ್ ಸಂಪರ್ಕವನ್ನು ಪಡೆಯಲು ಸಹಾಯ ಮಾಡುತ್ತದೆ. ಅದರಂತೆ ಏರ್‌ಟೆಲ್ 5G ಪ್ಲಸ್ ಮೈ ವೈ-ಫೈ MF501 ಡೇಟಾ ಕಾರ್ಡ್ (airtel 5G Plus My-WiFi MF501 Data Card) ಅನ್ನು ಅನಾವರಣ ಮಾಡಿದ್ದು, ಇದು ಸಾಕಷ್ಟು ಪ್ರಯೋಜನ ನೀಡಲಿದೆ. ಹಾಗಿದ್ರೆ, ಇದರ ಬೆಲೆ ಎಷ್ಟು, ಫೀಚರ್ಸ್ ಏನು ಅನ್ನೋದನ್ನು ತಿಳಿಯೋಣ ಬನ್ನಿ.

ಏರ್‌ಟೆಲ್ 5G ಪ್ಲಸ್ ಮೈ ವೈ -ಫೈ MF501 ಡೇಟಾ ಕಾರ್ಡ್: ಈ ಡಿವೈಸ್ ಏರ್‌ಟೆಲ್ 5G ಪ್ಲಸ್ ಸಂಪರ್ಕವನ್ನು ತಲುಪಿಸುವ ಡಿವೈಸ್ ಆಗಿದೆ. ಇದು ಮೂಲಭೂತವಾಗಿ ಪೋರ್ಟಬಲ್ ವೈ-ಫೈ ರೂಟರ್ ಆಗಿದ್ದು, ಬ್ಯಾಗ್‌ನಲ್ಲಿ ಅಥವಾ ನಿಮ್ಮ ಜೇಬಿನಲ್ಲಿ ಸುಲಭವಾಗಿ ಸಾಗಿಸಬಹುದಾಗಿದೆ. ವಿಶ್ವಾಸಾರ್ಹ ವೈ-ಫೈ ನೆಟ್‌ವರ್ಕ್ ಪಡೆಯಲು ಕಷ್ಟಕರವಾದ ಅಥವಾ ಬಹುತೇಕ ಅಸಾಧ್ಯವಾಗಿರುವ ಪ್ರದೇಶಗಳಲ್ಲಿ ತಡೆರಹಿತ ಮತ್ತು ವೇಗವಾದ ಇಂಟರ್ನೆಟ್ ಸಂಪರ್ಕವನ್ನು ಈ ಮೂಲಕ ಪಡೆದುಕೊಳ್ಳಬಹುದಾಗಿದೆ.
ಇನ್ನು ಈ ಏರ್‌ಟೆಲ್ 5G ಪ್ಲಸ್ ಮೈ ವೈ-ಫೈ ಡೇಟಾ ಕಾರ್ಡ್ ಹಿಂಭಾಗದಲ್ಲಿ ಅದರ ಬ್ರ್ಯಾಂಡಿಂಗ್ ಅನ್ನು ಹೊಂದಿದ್ದು, ಮುಂಭಾಗವು ಸಂಬಂಧಿತ ಮಾಹಿತಿಯನ್ನು ತೋರಿಸಲು ಸಣ್ಣ ಡಿಸ್‌ಪ್ಲೇ ಆಯ್ಕೆ ಪಡೆದುಕೊಂಡಿದೆ. ಜೊತೆಗೆ ಮೇಲಿನ ಎಡ ಮತ್ತು ಬಲ ಮೂಲೆಯಲ್ಲಿ ಕ್ರಮವಾಗಿ 5G ಸಿಗ್ನಲ್ ಸಾಮರ್ಥ್ಯ ಮತ್ತು ಬ್ಯಾಟರಿ ಮಟ್ಟವನ್ನು ತೋರಿಸಲಿದ್ದು, ಇದರೊಂದಿಗೆ ಸಮಯ, ದಿನಾಂಕ, ದಿನ ಮತ್ತು ಸಂಪರ್ಕಿತ ಡಿವೈಸ್‌ಗಳ ಮಾಹಿತಿಯನ್ನೂ ಇದರಲ್ಲಿ ತೋರಿಸಲಾಗುತ್ತದೆ.

ಜೊತೆಗೆ ಕೆಳಗಿನ ಎಡ ಮೂಲೆಯಲ್ಲಿ ಬಳಕೆದಾರರು ಬಳಕೆ ಮಾಡಿದ ಡೇಟಾದ ಮೊತ್ತದೊಂದಿಗೆ ಲಭ್ಯವಿರುವ ಅವರ ಒಟ್ಟು ಡೇಟಾವನ್ನು ಪರಿಶೀಲಿಸಬಹುದು. ಇದು ಡಿವೈಸ್‌ನಿಂದ ನೇರವಾಗಿ 5G ಡೇಟಾದ ಬಳಕೆಯನ್ನು ನಿರ್ವಹಿಸುವುದನ್ನು ಸುಲಭಗೊಳಿಸುತ್ತದೆ. ಪರಿಣಾಮ ನೀವು ಡೇಟಾ ಬಳಕೆಗಾಗಿ ಏರ್‌ಟೆಲ್ ಆಪ್ ಅನ್ನು ಪರಿಶೀಲಿಸುವ ಅಗತ್ಯ ಇರುವುದಿಲ್ಲ. ಈ ಸ್ಕ್ರೀನ್ ಅನ್ನು ಲಾಕ್ ಮಾಡುವ ಆಯ್ಕೆ ಸಹ ಇದ್ದು, ಒಮ್ಮೆ ಅನ್‌ಲಾಕ್ ಮಾಡಿದ ನಂತರ ಅದು ಹೆಚ್ಚಿನ ವಿವರಗಳು ಮತ್ತು ಸೆಟ್ಟಿಂಗ್‌ಗಳ ಆಯ್ಕೆಯನ್ನು ನೀಡುತ್ತದೆ.
ಈ ಡೇಟಾ ಕಾರ್ಡ್ ಅನ್ನು 150Mbps ವರೆಗಿನ ಡಿವೈಸ್‌ನ ಥ್ರೋಪುಟ್‌ನೊಂದಿಗೆ ಲಿಸ್ಟ್ ಮಾಡಲಾಗಿದೆ. ಜೊತೆಗೆ 512MB ವರೆಗೆ ವಿಸ್ತರಿಸಬಹುದಾದ ಸ್ಟೋರೇಜ್ ಸಾಮರ್ಥ್ಯವನ್ನು ಹೊಂದಿದ್ದು, ಮೇಲ್ಭಾಗದಲ್ಲಿ ಪವರ್ ಬಟನ್ ಮತ್ತು ಸಿಮ್ ಕಾರ್ಡ್ ಸ್ಲಾಟ್ ಮತ್ತು ಕೆಳಭಾಗದಲ್ಲಿ ಯುಎಸ್‌ಬಿ ಟೈಪ್-ಸಿ ಪೋರ್ಟ್ ಆಯ್ಕೆ ಪಡೆದುಕೊಂಡಿದೆ.

ಏರ್‌ಟೆಲ್ 5G ಪ್ಲಸ್ ಮೈ ವೈ-ಫೈ ಡೇಟಾ ಕಾರ್ಡ್ ಬೆಲೆ ಹಾಗೂ ಲಭ್ಯತೆ: ಈ ಡೇಟಾ ಕಾರ್ಡ್ ಪ್ರಸ್ತುತ ಫ್ಲಿಪ್‌ಕಾರ್ಟ್‌ನಲ್ಲಿ (Flipkart) ಕಾಣಿಸಿಕೊಂಡಿದ್ದು, ಈ ಮೂಲಕ ಸುಲಭವಾಗಿ ಖರೀದಿ ಮಾಡಬಹುದಾಗಿದೆ. ಈ ಡಿವೈಸ್ ಡಾರ್ಕ್ ಬ್ಲೂ ಮತ್ತು ಬ್ಲ್ಯಾಕ್ ನ ಒಂದೇ ಬಣ್ಣದ ಸಂಯೋಜನೆಯಲ್ಲಿ ಲಭ್ಯ ಇದ್ದು, ಇದಕ್ಕೆ 29,990 ರೂ.ಗಳ ಗರಿಷ್ಠ ಬೆಲೆ ನಿಗದಿ ಮಾಡಲಾಗಿದೆ. ಅದಾಗ್ಯೂ ನೀವು 22,999 ರೂ.ಗಳ ಆಫರ್ ಬೆಲೆಗೆ ಖರೀದಿ ಮಾಡಬಹುದಾಗಿದೆ. ಜೊತೆಗೆ ಈ ಡಿವೈಸ್‌ಗೆ 6 ತಿಂಗಳ ವಾರಂಟಿ ಆಯ್ಕೆ ಸಹ ಇದೆ.


Click it and Unblock the Notifications








