ಏರ್‌ಟೆಲ್, ಜಿಯೋದಿಂದ ದೊಡ್ಡ ಸಾಧನೆ... 8000+ ನಗರದಲ್ಲಿ 5G ಲಭ್ಯ!
ಭಾರತದಲ್ಲಿ '5G' ದೊಡ್ಡ ಕ್ರಾಂತಿಯನ್ನೇ ಸೃಷ್ಟಿಸಿದೆ. ಅದರಂತೆ ಜಿಯೋ ಹಾಗೂ ಏರ್‌ಟೆಲ್ ತಮ್ಮ ಬಳಕೆದಾರರಿಗೆ 5G ಸೇವೆ ಕಲ್ಪಿಸಿಕೊಡುತ್ತಿದ್ದು, ಈ ವಿಭಾಗದಲ್ಲಿ ಈ ಎರಡೂ ಟೆಲಿಕಾಂ ಸಂಸ್ಥೆಗಳು ದಾಖಲೆ ಬರೆದಿವೆ. ಅಂದರೆ ಬರೋಬ್ಬರಿ 8,000ಕ್ಕೂ ಹೆಚ್ಚಿನ ನಗರಗಳಲ್ಲಿ ತಮ್ಮ 5G ಸೇವೆಯನ್ನು ವಿಸ್ತರಣೆ ಮಾಡಿಕೊಂಡಿವೆ.
ಹೌದು, ಅಕ್ಟೋಬರ್ 1, 2022 ರಂದು ಭಾರತದಲ್ಲಿ 5G ಸೇವೆಗಳನ್ನು ಅಧಿಕೃತವಾಗಿ ಆರಂಭಿಸಲಾಗಿದ್ದು, ಅಂದಿನಿಂದ ಈ ಕ್ಷಣದ ವರೆಗೂ ವಿವಿಧ ನಗರಗಳಲ್ಲಿ 5G ಸಂಪರ್ಕ ಕಲ್ಪಿಸುವ ಕೆಲಸ ಮಾಡಲಾಗುತ್ತಿದೆ. ಈ ಕಾರಣಕ್ಕಾಗಿಯೇ ಈಗ 8,000ಕ್ಕೂ ಅಧಿಕ ನಗರಗಳನ್ನು ತಲುಪಲು ಸಾಧ್ಯವಾಗಿದೆ. ಹಾಗಿದ್ರೆ, ಜಿಯೋ ಹಾಗೂ ಏರ್‌ಟೆಲ್ (Jio and Airtel) ಹೇಗೆಲ್ಲಾ ಈ ಸಂಬಂಧ ಕೆಲಸ ಮಾಡುತ್ತಿವೆ, ನಿಮ್ಮ ಫೋನ್‌ನಲ್ಲಿ 5G ಸಕ್ರಿಯಗೊಳಿಸುವುದು ಹೇಗೆ ಎಂಬ ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ ನೋಡಿ.

ಭಾರತದಲ್ಲಿ 5G : ಭಾರತದಲ್ಲಿ 5G ಸೇವೆಗಳನ್ನು ಪ್ರಾರಂಭಿಸಿದ ಮೊದಲ ಟೆಲಿಕಾಂ ಕಂಪನಿ(telecom company) ಎಂಬ ಹೆಗ್ಗಳಿಕೆಯನ್ನು ಏರ್‌ಟೆಲ್ ಪಡೆದುಕೊಂಡಿದೆ. ಇದು ಕಳೆದ ವರ್ಷ ಅಕ್ಟೋಬರ್ 5 ರಂದು ಭಾರತದ ನಾಲ್ಕು ಪ್ರಮುಖ ನಗರಗಳಲ್ಲಿ 5G ಅನ್ನು ಲಾಂಚ್ ಮಾಡಿ ಮಾಡಿತ್ತು. ತಕ್ಷಣವೇ ಪುಟಿದೆದ್ದ ಜಿಯೋ ಇದಕ್ಕೆ ಪ್ರತಿಸ್ಪರ್ಧಿಯಾಗಿ 5G ಯುದ್ಧವನ್ನು ಆರಂಭ ಮಾಡಿದೆ. ಈ ಮೂಲಕ ಒಂದಕ್ಕೊಂದು ನಾಮುಂದು ತಾಮುಂದು ಎಂಬಂತೆ ಎಲ್ಲಾ ಕಡೆ 5G ವಿಸ್ತರಣೆ ಮಾಡಿಕೊಂಡು ಬರುತ್ತಿವೆ.
5G ಸೇವೆ ನಿರೀಕ್ಷೆಗಿಂತ ವೇಗವಾಗಿ ದೇಶದ ಎಲ್ಲಾ ಪ್ರಮುಖ ಸ್ಥಳಗಳಲ್ಲಿ ಈಗ ಲಭ್ಯವಾಗುತ್ತಿದೆ. ಏರ್‌ಟೆಲ್ 10 ನಗರಗಳಲ್ಲಿ 5G ಅನ್ನು ಹೊರತಂದಿದ್ದರೆ, ಜಿಯೋ 30 ನಗರಗಳಲ್ಲಿ 5G ಅನ್ನು ಘೋಷಣೆ ಮಾಡಿದೆ. ಹಾಗೆಯೆ ಜಿಯೋ ಮತ್ತು ಏರ್‌ಟೆಲ್ ಕಂಪನಿಗಳು ಪರಿಚಯಿಸಿದ 5G ಅಸ್ತಿತ್ವದಲ್ಲಿರುವ 4G ನೆಟ್‌ವರ್ಕ್‌ಗಿಂತ 20 ರಿಂದ 30 ಪಟ್ಟು ವೇಗವಾಗಿ ಸೇವೆ ನೀಡುತ್ತಿದೆ.ಅದರಂತೆ ಜುಲೈ 2023 ರ ಹೊತ್ತಿಗೆ ಅಂದರೆ ಈವರೆಗೆ ಎರಡೂ ಕಂಪನಿಗಳ 5G ಭಾರತದಾದ್ಯಂತ 8,000 ನಗರಗಳಲ್ಲಿ ಲಭ್ಯವಿದೆ.
ಇನ್ನು ಸವಿವರವಾಗಿ ಹೇಳುವುದಾರೆ ಏರ್‌ಟೆಲ್ ಮತ್ತು ಜಿಯೋ ಎರಡೂ ಸಹ ದೆಹಲಿ, ಮುಂಬೈ, ವಾರಣಾಸಿ, ಕೋಲ್ಕತ್ತಾ, ನಾಥದ್ವಾರ, ಚೆನ್ನೈ, ಬೆಂಗಳೂರು, ಹೈದರಾಬಾದ್, ಗುರುಗ್ರಾಮ್, ನೋಯ್ಡಾ, ಗಾಜಿಯಾಬಾದ್, ಫರಿದಾಬಾದ್, ಪುಣೆ, ತಿರುಮಲ, ವಿಜಯವಾಡ, ವಿಶಾಖಪಟ್ಟಣಂ, ಗುಂಟೂರು, ಲಕ್ನೋ ಸೇರಿದಂತೆ ಸುಮಾರು 8,000 ನಗರಗಳಲ್ಲಿ ತಮ್ಮ 5G ಸೇವೆಗಳನ್ನು ಪ್ರಾರಂಭಿಸಿವೆ.
ಅದಾಗ್ಯೂ ಮುಖೇಶ್ ಅಂಬಾನಿಯವರ ಜಿಯೋ ಹೆಚ್ಚಿನ ಪ್ರದೇಶಗಳಲ್ಲಿ 5G ಅನ್ನು ಹೊರತಂದಿರುವ ಕಂಪನಿಯಾಗಿದೆ. ಯಾಕೆಂದರೆ ಇದು 7,500 ಕ್ಕೂ ಹೆಚ್ಚು ಪ್ರದೇಶಗಳು, ಜಿಲ್ಲೆಗಳು ಮತ್ತು ನಗರಗಳಲ್ಲಿ ಲಭ್ಯವಿದೆ. ಏರ್‌ಟೆಲ್ 5G ಭಾರತದಲ್ಲಿ 3,000 ಕ್ಕೂ ಹೆಚ್ಚು ನಗರಗಳಲ್ಲಿ ಮಾತ್ರ ಲಭ್ಯವಿದೆ. ಹಾಗಿದ್ರೆ, ಬನ್ನಿ ನಿಮ್ಮ ಪ್ರದೇಶದಲ್ಲಿ 5G ಸೇವೆ ಸಕ್ರಿಯವಾಗಿದ್ದು, ಫೋನ್‌ನಲ್ಲಿ ಅದನ್ನು ಹೇಗೆ ಬಳಕೆ ಮಾಡಬಹುದು ಎಂಬುದನ್ನು ನೋಡೋಣ.

5G ನೆಟ್‌ವರ್ಕ್ ಅನ್ನು ಆಂಡ್ರಾಯ್ಡ್ ಆಂಡ್ರಾಯ್ಡ್ ಮತ್ತು ಐಫೋನ್‌ನಲ್ಲಿ(Android and iPhone) ಬಹಳ ಸುಲಭವಾಗಿ ಸಕ್ರಿಯಗೊಳಿಸಬಹುದು. ಆಂಡ್ರಾಯ್ಡ್ ಫೋನ್‌ನಲ್ಲಿ ಬಳಕೆದಾರರು ಮೊದಲು ಸೆಟ್ಟಿಂಗ್ ವಿಭಾಗಕ್ಕೆ ಹೋಗಬೇಕು. ಅಲ್ಲಿ ನೆಟ್‌ವರ್ಕ್ ಮತ್ತು ಇಂಟರ್ನೆಟ್ ಎಂಬ ಆಯ್ಕೆ ಕಾಣಿಸಿಕೊಳ್ಳುತ್ತದೆ. ಅದರ ಮೇಲೆ ಟ್ಯಾಪ್ ಮಾಡಿದರೆ SIM ಆಯ್ಕೆ ಕಾಣಿಸಿಕೊಳ್ಳಲಿದ್ದು, ಅದನ್ನು ಕ್ಲಿಕ್ ಮಾಡುವ ಮೂಲಕ 5G ಸಕ್ರಿಯಗೊಳಿಸಿಕೊಳ್ಳಬಹುದು.
ಇನ್ನು ನಿಮ್ಮ ಬಳಿ ಐಫೋನ್(iPhone) ಇದ್ದರೆ ಮೊದಲು ಸೆಟ್ಟಿಂಗ್(setting) ವಿಭಾಗಕ್ಕೆ ಹೋಗಿ ಬಳಿಕ ಅಲ್ಲಿ ಮೊಬೈಲ್ ಡೇಟಾ(Mobile data) ಎಂಬ ಆಯ್ಕೆ ಕಾಣಿಸಿಕೊಳ್ಳುತ್ತದೆ ಅದರ ಮೇಲೆ ಟ್ಯಾಪ್ ಮಾಡುವ ಮೂಲಕ ವಾಯ್ಸ್ ಮತ್ತು ಡೇಟಾ ವಿಭಾಗಕ್ಕೆ ತಲುಪಿ. ಅಲ್ಲಿ ನಿಮಗೆ 5G ಆಯ್ಕೆ ಕಾಣಿಸಿಕೊಳ್ಳಲಿದ್ದು, ಅದನ್ನು ಸಕ್ರಿಯಗೊಳಿಸಿಕೊಳ್ಳಬಹುದು.
ಇದರಲ್ಲಿ ಗಮನಿಸಬೇಕಾದ ಮತ್ತೊಂದು ವಿಷಯ ಏನೆಂದರೆ ನೀವು 5G ಸೇವೆ ಪಡೆದುಕೊಳ್ಳಬೇಕು ಎಂದರೆ ನಿಮ್ಮ ಪ್ರಿಪೇಯ್ಡ್ ಪ್ಲ್ಯಾನ್ 239 ರೂ.ಗಳಿಗಿಂತ ಹೆಚ್ಚಾಗಿರಬೇಕು. ಇದರ ಒಳಗೆ ಇರುವ ರೀಚಾರ್ಜ್ ಪ್ಲ್ಯಾನ್‌ಗಳನ್ನು ಮಾಡಿಸಿಕೊಂಡರೆ ನಿಮಗೆ 5G ಸೇವೆ ಲಭ್ಯ ಇರುವುದಿಲ್ಲ ಎಂಬುದು ತಿಳಿದಿರಲಿ.


Click it and Unblock the Notifications








