ರೀಚಾರ್ಜ್ ಪ್ಲ್ಯಾನ್‌ಗಳ ದರ ಏರಿಕೆಯ ಬರೆ ಎಳೆಯಲು ಮುಂದಾದ ಏರ್‌ಟೆಲ್, ಜಿಯೋ?: ಎಂದಿನಿಂದ ಜಾರಿ?
ಏರ್‌ಟೆಲ್ ಹಾಗೂ ಜಿಯೋ ಬಳಕೆದಾರರು ಈಗಾಗಲೇ ಸಾಕಷ್ಟು ವಿವಿಧ ರೀತಿಯ ರೀಚಾರ್ಜ್ ಪ್ಲ್ಯಾನ್‌ಗಳ ಮೂಲಕ ಹಲವು ಸೌಲಭ್ಯ ಪಡೆದುಕೊಳ್ಳುತ್ತಿದ್ದಾರೆ. ಈ ನಡುವೆ ಈ ಎರಡೂ ಟೆಲಿಕಾಂ ಸಂಸ್ಥೆಗಳು ಬಳಕೆದಾರರಿಗೆ ಶಾಕಿಂಗ್ ನ್ಯೂಸ್ ನೀಡಲು ಮುಂದಾಗಿವೆ. ಜೊತೆಗೆ ಬಳಕೆದಾರರು ಸಾಕಪ್ಪ ಈ ಕಂಪೆನಿಗಳ ಸಹವಾಸ ಎನ್ನುವ ಸಮಯ ಹತ್ತಿರಬರುತ್ತಿದೆ.
ಹೌದು, ನಿನ್ನೆಯಷ್ಟೇ ಈ ಎರಡೂ ಟೆಲಿಕಾಂ ದೈತ್ಯರ ವಿರುದ್ಧ ವಿ ಟೆಲಿಕಾಂ ಸರ್ಕಾರಕ್ಕೆ ಅರ್ಜಿ ಬರೆದಿದ್ದು, ಗ್ರಾಹಕರನ್ನು ಸೆಳೆಯುವ ಕ್ರಮವಾಗಿ ಉಚಿತ 5G ಸೇವೆಗಳನ್ನು ನೀಡುತ್ತಿವೆ ಎಂದು ದೂರಿತ್ತು. ಆದರೆ, ಈಗ ದೇಶದ ಪ್ರಮುಖ ಟೆಲಿಕಾಂ ಕಂಪೆನಿ ರಿಲಯನ್ಸ್ ಜಿಯೋ ಮತ್ತು ಏರ್‌ಟೆಲ್ ಶೀಘ್ರದಲ್ಲೇ ತಮ್ಮ ಗ್ರಾಹಕರಿಗೆ ದೊಡ್ಡ ಬೆಲೆ ಏರಿಕೆಯ ಹೊಡೆತವನ್ನು ನೀಡಲಿವೆ ಎನ್ನಲಾಗಿದೆ. ಹಾಗಿದ್ರೆ, ಈ ರೀಚಾರ್ಜ್ ಪ್ಲ್ಯಾನ್‌ಗಳಲ್ಲಿ ಎಷ್ಟು ದುಬಾರಿಯಾಗಲಿದೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳಿ.

ಪ್ಲ್ಯಾನ್ ಬೆಲೆ ಎಷ್ಟು ಹೆಚ್ಚಾಗುತ್ತದೆ?: ಅನೇಕ ವರದಿಗಳ ಪ್ರಕಾರ ಜಿಯೋ ಮತ್ತು ಏರ್‌ಟೆಲ್‌ನ ಯೋಜನೆಗಳಲ್ಲಿ ಶೇಕಡಾ 10 ರಷ್ಟು ಹೆಚ್ಚಳವಾಗಬಹುದು ಎಂದು ತಿಳಿದುಬಂದಿದೆ. ಉದಾಹರಣೆಗೆ ಪ್ಲ್ಯಾನ್ ದರ 300ರೂ ಆಗಿದ್ದರೆ ಅದರ ಹೊಸ ಬೆಲೆ 320ರೂ. ಆಗಿರಲಿದೆ. ಹೀಗಾಗಿ ಜಿಯೋ ಮತ್ತು ಏರ್‌ಟೆಲ್ 20 ರೂ. ಗಳ ಬೆಲೆ ಹೆಚ್ಚಳ ಮಾಡಲಿದೆ. ಆದರೆ, ಈ ಸಂಬಂಧ ಕಂಪೆನಿಗಳು ಯಾವುದೇ ಅಧಿಕೃತ ಮಾಹಿತಿಯನ್ನು ತಿಳಿಸಿಲ್ಲ.
ಎಂದಿನಿಂದ ಈ ಹೊಸ ದರ ಜಾರಿ?: ಜಿಯೋ ಹಾಗೂ ಏರ್‌ಟೆಲ್ ತಮ್ಮ ಪ್ಲ್ಯಾನ್‌ಗಳನ್ನು ಎಂದಿನಿಂದ ಹೆಚ್ಚಿನ ದರದಲ್ಲಿ ಪರಿಚಯಿಸಲಿವೆ ಎಂಬ ಬಗ್ಗೆಯೂ ನಿಖರ ಮಾಹಿತಿ ಲಭ್ಯವಾಗಿಲ್ಲ. ಆದರೆ, ಈ ವರ್ಷದ 2023ರ ಕೊನೆಯ ತ್ರೈಮಾಸಿಕದಲ್ಲಿ ಅಂದರೆ ಡಿಸೆಂಬರ್ ಮತ್ತು ಜನವರಿ ನಡುವೆ ಹೊಸ ಯೋಜನೆಗಳನ್ನು ಪರಿಚಯಿಸಬಹುದು ಎನ್ನಲಾಗಿದೆ. ಈ ಮೂಲಕ ಗ್ರಾಹಕರ ಜೇಬಿಗೆ ಕತ್ತರಿ ಬೀಳಲಿದೆ.

4G, 5G ರೀಚಾರ್ಜ್ ಪ್ಲ್ಯಾನ್‌ಗಳು ಇನ್ನೂ ದುಬಾರಿಯಾಗಲಿವೆ : ಸದ್ಯಕ್ಕೆ 4G ರೀಚಾರ್ಜ್ ಪ್ಲ್ಯಾನ್‌ಗಳಲ್ಲಿಯೇ ಗ್ರಾಹಕರು 5G ಡೇಟಾ ಸೌಲಭ್ಯ ಪಡೆದುಕೊಳ್ಳುತ್ತಿದ್ದಾರೆ. ಅದೂ ಸಹ ಉಚಿತವಾಗಿ. ಆದರೆ, ಈ ಹೊಸ ಪ್ಲ್ಯಾನ್‌ಗಳು ಘೋಷಣೆಯಾದ ನಂತರ ಈ 5G ಪ್ಲ್ಯಾನ್‌ಗಳು ಇನ್ನಷ್ಟು ದುಬಾರಿಯಾಗಲಿದೆ ಎಂದು ಹೇಳಲಾಗುತ್ತಿದೆ. ಹಾಗೆಯೇ ಇವರಿಬ್ಬರ ಬೆಳವಣಿಗೆ ಗಮನಿಸಿ ವಿ ಟೆಲಿಕಾಂ ಸಹ ತನ್ನ ರೀಚಾರ್ಜ್ ಪ್ಲ್ಯಾನ್‌ಗಳನ್ನು ಹೆಚ್ಚಿಗೆ ಮಾಡಲಿದೆ ಎಂದು ಹೇಳಲಾಗುತ್ತಿದೆ.
ಸದ್ಯಕ್ಕೆ ದೇಶದಲ್ಲಿ ಜಿಯೋ ಮತ್ತು ಏರ್‌ಟೆಲ್ ಮಾತ್ರ 5G ಸೇವೆಯನ್ನು ನೀಡುತ್ತಿವೆ. ಅದೂ ಸಹ ಸಂಪೂರ್ಣ ಉಚಿತವಾಗಿದೆ. ಈ ಮೂಲಕ 5G ಬಳಕೆದಾರರು ಉಚಿತ ಅನಿಯಮಿತ 5G ಡೇಟಾವನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇದರೊಂದಿಗೆ ಈ ವರ್ಷದ ಅಂತ್ಯದ ವೇಳೆಗೆ ಇಡೀ ದೇಶವು 5G ಸೇವೆಯ ಲಾಭವನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ನಿರೀಕ್ಷಿಸಲಾಗಿದೆ. ಇದರ ನಡುವೆ ವಿ ಟೆಲಿಕಾಂ ಸಹ 5G ಸೇವೆಗೆ ಚಾಲನೆ ನೀಡುತ್ತವೆ ಎಂದು ನಂಬಲಾಗಿದೆ.
ಇದೆಲ್ಲದರ ನಡುವೆ ಏರ್‌ಟೆಲ್ ಸದ್ದಿಲ್ಲದೆ ಎಕ್ಸ್‌ಸ್ಟ್ರೀಮ್ ಫೈಬರ್ ಬ್ರಾಡ್‌ಬ್ಯಾಂಡ್ ಲೈಟ್ ಪ್ಲಾನ್ ಪರಿಚಯಿಸಿದ್ದು, ಇದು 219ರೂ. ಮಾಸಿಕ ಬಾಡಿಗೆಯಲ್ಲಿ ಕಾಣಿಸಿಕೊಳ್ಳಲಿದೆ. ಹಾಗೆಯೇ ಇದು ಜಿಯೋದ 198ರೂ. ಬ್ಯಾಕಪ್ ಪ್ಲ್ಯಾನ್‌ಗೆ ಪೈಪೋಟಿ ನೀಡಲಿದೆ. ಈ ಪ್ಲಾನ್ ತನ್ನ ಬಳಕೆದಾರರಿಗೆ 10Mbps ವೇಗವನ್ನು ನೀಡಲಿದ್ದು, ಉಚಿತ ರೂಟರ್‌ನೊಂದಿಗೆ ಬರುತ್ತದೆ. ಆದ್ದರಿಂದ ಹೊಸ ಪ್ಲಾನ್‌ಗೆ ಸೈನ್ ಅಪ್ ಮಾಡಲು ಬಳಕೆದಾರರು ಒಟ್ಟು 3,101ರೂ. ಪಾವತಿಸಬೇಕಾಗುತ್ತದೆ.

ಇದರೊಂದಿಗೆ ಭಾರತ ಸಂಚಾರ ನಿಗಮ ಲಿಮಿಟೆಡ್ (BSNL) ತನ್ನ ರೀಚಾರ್ಜ್‌ಗಳ ಲಿಸ್ಟ್‌ನಲ್ಲಿದ್ದ 398ರೂ. ಗಳ ಪ್ಲ್ಯಾನ್‌ನಲ್ಲಿ ದೊಡ್ಡ ಬದಲಾವಣೆ ಮಾಡಿದ್ದು, ಈ ಮೂಲಕ ದೇಶದ ಬಿಎಸ್‌ಎನ್‌ಎಲ್ ಗ್ರಾಹಕರಿಗೆ ಶಾಕಿಂಗ್ ನೀಡಿದೆ. ಅಂದರೆ ಅನ್‌ಲಿಮಿಟೆಡ್ ಡೇಟಾ ಪ್ರಯೋಜನವನ್ನು ಮೊಟಕುಗೊಳಿಸಿ ಇದೀಗ 120GB ಡೇಟಾವನ್ನು FUP ಮಿತಿಯೊಂದಿಗೆ ನೀಡಿದೆ. ಹೀಗಾಗಿ ಗ್ರಾಹಕರು ಭಾರೀ ಬೇಸರ ಹೊರಹಾಕಿದ್ದಾರೆ.


Click it and Unblock the Notifications








